ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ 1 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾ ಮಾಡಲು ಯೋಜನೆ ರೂಪಿಸುತ್ತಿದೆ. ನಷ್ಟ ಸರಿದೂಗಿಸಲು ಮತ್ತು ಕಾರ್ಯಾಚರಣೆಗಳನ್ನು ಪುನರ್ರಚಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಮುಂಬೈ (ಮಾ.3): ಸಾಲು ಸಾಲು ನಷ್ಟಗಳ ಬೆನ್ನಲ್ಲಿಯೇ, ಹೆಚ್ಚುತ್ತಿರುವ ನಷ್ಟವನ್ನು ಸರಿದೂಗಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ 1 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಹಾಗೂ ಗುತ್ತಿಗೆ ಆಧಾರಿತ ನೌಕರರನ್ನು ವಜಾ ಮಾಡಲು ಯೋಜನೆ ರೂಪಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಉದ್ಯೋಗ ಕಡಿತವು ಸಂಗ್ರಹಣೆ, ಪೂರೈಕೆ, ಗ್ರಾಹಕ ಸಂಬಂಧಗಳು ಮತ್ತು ಚಾರ್ಜಿಂಗ್ ಮೂಲಸೌಕರ್ಯ ಸೇರಿದಂತೆ ಹಲವು ಇಲಾಖೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ವಿಷಯದ ಬಗ್ಗೆ ತಿಳಿದಿರುವ ಜನರು, ಓಲಾ ಎಲೆಕ್ಟ್ರಿಕ್‌ನ ವೆಚ್ಚವನ್ನು ನಿಯಂತ್ರಿಸುವ ಪ್ರಯತ್ನಗಳ ಭಾಗವಾಗಿ ವಜಾಗೊಳಿಸಲಾಗಿದೆ ಎಂದು ಹೇಳಿದರು. ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪ್ ಬೆಂಬಲಿತ ಕಂಪನಿಯು ಹಣಕಾಸಿನ ನಷ್ಟ ಮತ್ತು ನಿಯಂತ್ರಕ ಪರಿಶೀಲನೆಯೊಂದಿಗೆ ಹೋರಾಟ ಮಾಡುತ್ತಿದೆ. ಉದ್ಯೋಗಿಗಳ ವಜಾ ಸುದ್ದಿಯ ಬೆನ್ನಲ್ಲಿಯೇ ಓಲಾ ಎಲೆಕ್ಟ್ರಿಕ್ ಶೇರುಗಳು ಶೇ. 5ರಷ್ಟು ಕುಸಿದಿದ್ದು, 52 ವಾರಗಳ ಕನಿಷ್ಠ ಮಟ್ಟವಾದ 54 ರೂಪಾಯಿಗೆ ಇಳಿದಿದೆ.
ಕಳೆದ ಐದು ತಿಂಗಳಲ್ಲಿ ಓಲಾ ಎಲೆಕ್ಟ್ರಿಕ್‌ನ 2ನೇ ಉದ್ಯೋಗಳ ವಜಾ ಸುದ್ದಿ ಇದಾಗಿದೆ. 2022ರ ನವೆಂಬರ್‌ನಲ್ಲಿ ಓಲಾ ಇಲೆಕ್ಟ್ರಿಕ್ ಅಂದಾಜು 500 ಉದ್ಯೋಗಿಗಳನ್ನು ವಜಾ ಮಾಡಿತ್ತು. ಮಾರ್ಚ್ 2024 ರ ಹೊತ್ತಿಗೆ ಓಲಾ ಎಲೆಕ್ಟ್ರಿಕ್‌ನ 4,000 ಉದ್ಯೋಗಿಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚಿನವರು ಇತ್ತೀಚಿನ ಉದ್ಯೋಗ ಕಡಿತಕ್ಕೆ ಕಾರಣರಾಗಿದ್ದಾರೆ. ಆದರೆ, ಸಾರ್ವಜನಿಕವಾಗಿ ತಿಳಿಸಿದ ಮಾಹಿತಿಯಲ್ಲಿ ಗುತ್ತಿಗೆ ಆಧಾರಿತ ಕಾರ್ಮಿಕರ ಹೆಸರನ್ನು ಸೇರಿಸಿರದ ಕಾರಣ, ಎಷ್ಟು ಮಂದಿ ಉದ್ಯೋಗಿಗಳ ವಜಾ ಆಗಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಪುನರ್ರಚನೆಯ ಭಾಗವಾಗಿ, ಓಲಾ ಎಲೆಕ್ಟ್ರಿಕ್ ತನ್ನ ಗ್ರಾಹಕ ಸೇವಾ ಕಾರ್ಯಾಚರಣೆಗಳ ಕೆಲವು ಭಾಗಗಳನ್ನು ಸ್ವಯಂಚಾಲಿತಗೊಳಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಕ್ರಮವು ದಕ್ಷತೆಯನ್ನು ಸುಧಾರಿಸುವುದು, ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಗ್ರಾಹಕರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ವರದಿಗೆ ಪ್ರತಿಕ್ರಿಯೆಯಾಗಿ, ಓಲಾ ವಕ್ತಾರರು, "ನಾವು ನಮ್ಮ ಕಾರ್ಯಾಚರಣೆಗಳನ್ನು ಪುನರ್ರಚಿಸಿದ್ದೇವೆ ಮತ್ತು ಸ್ವಯಂಚಾಲಿತಗೊಳಿಸಿದ್ದೇವೆ, ಸುಧಾರಿತ ಲಾಭ, ಕಡಿಮೆ ವೆಚ್ಚ ಮತ್ತು ವರ್ಧಿತ ಗ್ರಾಹಕ ಅನುಭವವನ್ನು ನೀಡುತ್ತಿದ್ದೇವೆ ಮತ್ತು ಉತ್ತಮ ಉತ್ಪಾದಕತೆಗಾಗಿ ಅನಗತ್ಯ ಪಾತ್ರಗಳನ್ನು ತೆಗೆದುಹಾಕುತ್ತಿದ್ದೇವೆ" ಎಂದು ಹೇಳಿದರು. ಆದರೆ, ಎಷ್ಟು ಮಂದಿ ವಜಾ ಆಗಲಿದ್ದಾರೆ ಎನ್ನುವ ಮಾಹಿತಿಯನ್ನು ಕಂಪನಿ ದೃಢೀಕರಿಸಿಲ್ಲ.
ಕಂಪನಿಯು ತನ್ನ ಶೋ ರೂಂಗಳು ಮತ್ತು ಸೇವಾ ಕೇಂದ್ರಗಳಲ್ಲಿ ಮಾರಾಟ, ಸೇವೆ ಮತ್ತು ಗೋದಾಮಿನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಬೆಂಗಳೂರು ಮೂಲದ ಸಂಸ್ಥೆಯು ವೆಚ್ಚವನ್ನು ಕಡಿತಗೊಳಿಸಲು ತನ್ನ ಲಾಜಿಸ್ಟಿಕ್ಸ್ ಮತ್ತು ವಿತರಣಾ ತಂತ್ರಗಳನ್ನು ಬದಲಾಯಿಸುತ್ತಿದೆ.
ಓಲಾ ಎಲೆಕ್ಟ್ರಿಕ್ ಆಗಸ್ಟ್ 2023 ರಲ್ಲಿ ಷೇರು ಮಾರುಕಟ್ಟೆಗೆ ಲಿಸ್ಟಿಂಗ್ ಆಗಿತ್ತು. ಅಂದಿನಿಂದ ಹಲವಾರು ಸವಾಲುಗಳನ್ನು ಎದುರಿಸಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ನಷ್ಟದಲ್ಲಿ ಶೇ. 50 ರಷ್ಟು ಏರಿಕೆಯಾಗಿದ್ದು, ಅದರ ಹಣಕಾಸಿನ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಕಂಪನಿ ವರದಿ ಮಾಡಿದೆ ಓಲಾ ಎಲೆಕ್ಟ್ರಿಕ್‌ನ ಷೇರುಗಳು ಐಪಿಓಗೆ ಭರ್ಜರಿಯಾಗಿ ಲಿಸ್ಟಿಂಗ್ ಆಗಿತ್ತು. ಅಂದಿನಿಂದ ಅದರ ಷೇರುಗಳ ಬೆಲೆಯಲ್ಲಿ ಶೇ. 60ರಷ್ಟು ಕುಸಿತವಾಗಿದೆ. ಕಂಪನಿಯು ಗ್ರಾಹಕರಿಂದ ಟೀಕೆ, ಸಾಮಾಜಿಕ ಮಾಧ್ಯಮಗಳ ಪ್ರತಿಕ್ರಿಯೆ ಮತ್ತು ಪ್ರತಿಸ್ಪರ್ಧಿ ಕಂಪನಿಗಳಿಂದ ಹೆಚ್ಚುತ್ತಿರುವ ಸ್ಪರ್ಧೆಯನ್ನು ಸಹ ಎದುರಿಸಿದೆ.
S1 ಸಿರೀಸ್ ಸ್ಕೂಟರ್‌ನ ಮತ್ತೊಂದು ದರ್ಜೆಗೇರಿಸಿದ ಓಲಾ ಎಲೆಕ್ಟ್ರಿಕ್; Gen 3 ಫ್ಲಾಟ್‌ಫಾರ್ಮ್‌ನ ಹೊಸ 8 ಸ್ಕೂಟರ್‌ಗಳು ಲಾಂಚ್!
ಮಾರ್ಚ್ 1 ರಂದು, ಓಲಾ ಎಲೆಕ್ಟ್ರಿಕ್ ಭಾರತೀಯ ಷೇರು ವಿನಿಮಯ ಕೇಂದ್ರಗಳಿಗೆ ನೀಡಿದ ಮಾಹಿತಿಯಲ್ಲಿ ಫೆಬ್ರವರಿಯಲ್ಲಿ 25,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿತು, ಇದು 28% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ.
ದೇಶದ ಅತೀ ಕಡಿಮೆ ಬೆಲೆಯ ಓಲಾ ರೋಡ್‌ಸ್ಟರ್ X ಎಲೆಕ್ಟ್ರಿಕ್ ಬೈಕ್ ಲಾಂಚ್, 501KM ಮೈಲೇಜ್
ಡಿಸೆಂಬರ್‌ನಲ್ಲಿ, ಬಜಾಜ್ ಆಟೋ ಲಿಮಿಟೆಡ್ ಓಲಾ ಎಲೆಕ್ಟ್ರಿಕ್ ಅನ್ನು ಹಿಂದಿಕ್ಕಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಬ್ರಾಂಡ್ ಆಗಿ ಹೊರಹೊಮ್ಮಿತು, ಅದಲ್ಲದೆ ಟಿವಿಎಸ್ ಮೋಟಾರ್ ಕಂಪನಿಯ ನಂತರ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ವಾಹನ ನೋಂದಣಿ ಕುರಿತಾದ ಸರ್ಕಾರಿ ದತ್ತಾಂಶವು 2023 ರ ಅಂತ್ಯದ ವೇಳೆಗೆ ಭಾರತದ ಟಾಪ್ 10 ಇವಿ ಮಾರುಕಟ್ಟೆಗಳಲ್ಲಿ ಒಂಬತ್ತು ಮಾರುಕಟ್ಟೆಗಳಲ್ಲಿ ಓಲಾ ಎಲೆಕ್ಟ್ರಿಕ್ ತನ್ನ ನಾಯಕತ್ವದ ಸ್ಥಾನವನ್ನು ಕಳೆದುಕೊಂಡಿದೆ ಎಂದು ತೋರಿಸಿದೆ.
