ಪ್ರತಿ ದಿನ ಜಯನಗರದಿಂದ ಮಾರತ್‌ಹಳ್ಳಿಯಲ್ಲಿರುವ ಕಚೇರಿಗೆ ಓಡಾಡುತ್ತೀರಾ? 9 ಗಂಟೆಗೆ ಶುರುವಾಗುವ ಕಚೇರಿಗೆ 6 ಗಂಟೆಗೇ ಆಫೀಸ್ ಕ್ಯಾಬಿನಲ್ಲಿ ಕುಳಿತು ಹೊರಡುತ್ತೀರಾ? ಮತ್ತೆ ಸಂಜೆ 5ಕ್ಕೇ ಕಚೇರಿ ಬಿಟ್ಟರೂ ಮನೆ ತಲುಪುವಾಗ 9 ಗಂಟೆ ದಾಟಿರುತ್ತದೆ. ಅಲ್ಲಿಗೆ ದಿನವೆಲ್ಲ ಉದ್ಯೋಗದ ಬದುಕಲ್ಲೇ ಮುಗಿದುಹೋಯ್ತು. ವೈಯಕ್ತಿಕ ಬದುಕೆಂಬುದೇ ಇಲ್ಲವಾಗಿದೆ. ಸಾಕಪ್ಪಾ ಸಾಕು ಈ ಕೆಲಸ ಎನಿಸುತ್ತಿದೆಯೇ? ಈ ಫೀಲಿಂಗ್ ಖಂಡಿತಾ ತಪ್ಪಲ್ಲ. ಏಕೆಂದರೆ ಕಚೇರಿಗೆ ತಲುಪುವ ಸಮಯ 20 ನಿಮಿಷದಷ್ಟಿದ್ದರೇ ಜನ ಫ್ರಸ್ಟ್ರೇಟ್ ಆಗುತ್ತಾರೆ. ಅವರಿಗೆ ಉದ್ಯೋಗದಲ್ಲಿ ತೃಪ್ತಿಎಂಬುದು ಮರೀಚಿಕೆಯಾಗುತ್ತದೆಯಂತೆ. ಅಂಥದರಲ್ಲಿ ನೀವು, ಗ್ರೇಟಪ್ಪಾ ಗ್ರೇಟು.

ಯಶಸ್ಸು ಸಿಕ್ಕಿತೆಂದು ಅಟ್ಟಹತ್ತಿ ಬೀಗುತ್ತ ಕುಳಿತರೆ ಕೆಳಗೆ ಬಿದ್ದೀರಿ, ಜೋಕೆ !

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ಬಹುತೇಕರ ಅನುಭವವಿದು. ದೊಡ್ಡ ದೊಡ್ಡ ಕಂಪನಿಗಳಿರುವುದೇ ಕೋರಮಂಗಲ, ಮಾರತ್‌ಹಳ್ಳಿ, ಬೆಳ್ಳಂದೂರು ಬದಿಗೆ. ವಸತಿ ಯೋಗ್ಯ ಪ್ರದೇಶವಿರುವುದು ದಕ್ಷಿಣ ಬೆಂಗಳೂರಿನಲ್ಲಿ. ಅದರಲ್ಲೂ ಹೆಂಡತಿಮಕ್ಕಳ ಕುಟುಂಬವಿದ್ದರಂತೂ ಅಂಥವರು ಸುರಕ್ಷೆ, ಸಂಸ್ಕೃತಿ ಹಾಗೂ ಪ್ರಕೃತಿಯ ದೃಷ್ಟಿಯಿಂದ ಬೆಂಗಳೂರಿನ ದಕ್ಷಿಣ ಭಾಗದಲ್ಲೇ ಮನೆ ಮಾಡುತ್ತಾರೆ. ಇದರಿಂದ ತಾವು ಮಾತ್ರ ದಿನದ ಎರಡು-ಮೂರು ಗಂಟೆಗಳನ್ನು ಟ್ರಾಫಿಕ್ಕಿನಲ್ಲಿ ಸವೆಸುತ್ತಾರೆ. ನಿಜವಾಗಿಯೂ ಇದು ಇವರು ಮಾಡುವ ತ್ಯಾಗವಲ್ಲವೇ? 

ಇದು ಬಿಡಿ, ವಿಷಯ ಇದಲ್ಲ.

ವಿಷಯ ಏನೆಂದರೆ, ನಿಮ್ಮ ಈ ಗೋಳಿಗೆ ಕೆಲ ಸಂಶೋಧಕರು ಕಿವಿಗೊಟ್ಟಿದ್ದಾರೆ. ಹೌದು, ಪ್ರತಿದಿನ ಹುಚ್ಚು ಟ್ರಾಫಿಕ್ಕಿನಲ್ಲಿ ಕಾದು, ನುಗ್ಗಿಸಿಕೊಂಡು ಕಚೇರಿಗೆ ಹೋಗುವವರಿಗಿಂತ, ಆಫೀಸ್ ಬಳಿಯೇ ಇದ್ದು ನಡೆದು ಹೋಗುವವರು ಹೆಚ್ಚು ಜಾಬ್ ಸ್ಯಾಟಿಸ್‌ಫ್ಯಾಕ್ಷನ್ ಹೊಂದಿರುತ್ತಾರೆ ಎಂದು ಇವರು ಹೇಳಿದ್ದಾರೆ. 

ಕೆಲಸ ಹಾಗೂ ತಿರುಗಾಟ

ವೆಸ್ಟ್ ಆಫ್ ಇಂಗ್ಲೆಂಡ್ ಯೂನಿವರ್ಸಿಟಿಯ ಸಂಶೋಧಕರ ತಂಡವು ಕೆಲಸ ಹಾಗೂ ಅದಕ್ಕಾಗಿ ಕ್ರಮಿಸಬೇಕಾದ ದೂರದ ನಡುವೆ ಇರುವ ಲಿಂಕನ್ನು ಬೇಧಿಸಿದೆ. ಅಧ್ಯಯನದ ಪ್ರಕಾರ, ಕಚೇರಿಗೆ ಪ್ರಯಾಣಿಸಬೇಕಾದ ಒಂದೊಂದು ಎಕ್ಸ್ಟ್ರಾ ನಿಮಿಷವೂ ಜಾಬ್ ಹಾಗೂ ಫ್ರೀ ಟೈಂ ತೃಪ್ತಿಯನ್ನು ಹಾಳು ಮಾಡುತ್ತದೆ. ಜೊತೆಗೆ, ಉದ್ಯೋಗಿಗಳ ಮಾನಸಿಕ ಆರೋಗ್ಯ ಹದಗೆಡಿಸುತ್ತದೆ. 

ದೇಶದಲ್ಲೇ ಅತಿ ಹೆಚ್ಚು ಸಂಬಳ ನೀಡುವ ನಗರ ಬೆಂಗಳೂರು!

ಸಂಬಳ ಮುರಿದುಕೊಂಡ ಭಾವ

ವ್ಯಕ್ತಿಯು 20 ನಿಮಿಷಗಳಿಗಿಂತ ಹೆಚ್ಚು ಸಮಯ ಕಚೇರಿಗೆ ಹೋಗಲೇ ಬೇಕಾದರೆ, ಆತನಿಗೆ ತನ್ನ ಸಂಬಳದಲ್ಲಿ ಶೇ.19ರಷ್ಟನ್ನು ಮುರಿದುಕೊಂಡರೆ ಹೇಗಾಗುವುದೋ ಅಷ್ಟೇ ದುಃಖ, ಹಿಂಸೆಯಾಗುತ್ತದಂತೆ. ಅಂದರೆ, ಅವರು ಉದ್ಯೋಗದಲ್ಲಿ ತೃಪ್ತಿ ಹೊಂದಲು ಈಗ ಬರುವ ಸಂಬಳಕ್ಕಿಂತಾ ಶೇ.19ರಷ್ಟು ಎಕ್ಸ್ಟ್ರಾ ಬರಬೇಕಾಗುತ್ತದೆ. 

ಕೆಲಸಕ್ಕಿಂತ ಪ್ರಯಾಣದಿಂದಲೇ ಹೈರಾಣ

ಹಾರ್ವರ್ಡ್ ಬಿಸ್ನೆಸ್ ರಿವ್ಯೂನಲ್ಲಿ ಪ್ರಕಟವಾದ ವರದಿಯ ಪ್ರಕಾರ, "ಯೂರೋಪಿನ ಆರು ನಗರಗಳ 5500 ಉದ್ಯೋಗಿಗಳನ್ನು ಫೋರ್ಡ್ ಮೋಟಾರ್ ಕಂಪನಿ ಸರ್ವೆಗೊಳಪಡಿಸಿದಾಗ, ಅವರಲ್ಲಿ ಬಹುತೇಕರು ಮನೆ ಬದಲಿಸುವುದಕ್ಕಿಂತ, ದಂತವೈದ್ಯರ ಬಳಿ ಹೋಗುವುದಕ್ಕಿಂತ, ತಮ್ಮ ಕೆಲಸಕ್ಕಿಂತ ಅದಕ್ಕಾಗಿ ಪ್ರಯಾಣಿಸುವುದೇ ಹೆಚ್ಚು ಒತ್ತಡಕಾರಕ ಎಂದಿದ್ದರು. ಟೆಕ್ಸಾಸ್‌ನಲ್ಲಿ ವರ್ಕಿಂಗ್ ವಿಮೆನ್ ಮೇಲೆ ನಡೆಸಿದ  ಮತ್ತೊಂದು ಸರ್ವೆಯಲ್ಲಿ ಬೆಳಗ್ಗೆ ಮನೆಯಿಂದ ಕಚೇರಿಗೆ ಹೋಗುವುದು ತಮ್ಮ  ದಿನಚರಿಯ ಅತಿ ತ್ರಾಸದಾಯಕ ಕೆಲಸ. ಸಂಜೆ ಕಚೇರಿಯಿಂದ ಮನೆಗೆ ಬರುವುದು ಮೂರನೇ ಅತಿ ತ್ರಾಸದಾಯಕ ಕೆಲಸವಾಗಿ ಗುರುತಿಸಿದ್ದರು."

ಮೋಡ್ ಬದಲಿಸುವುದೇ ಕಷ್ಟ

ತಜ್ಞರ ಪ್ರಕಾರ ಮನೆಯಿಂದ ಕಚೇರಿಗೆ ಹೋಗುವುದಾಗಿರಲಿ, ಕಚೇರಿಯಿಂದ ಮನೆಗೆ ಮರಳುವುದಾಗಿರಲಿ- ಈ ಸಂದರ್ಭದಲ್ಲಿ ವ್ಯಕ್ತಿಯ ರೋಲ್ ಬದಲಾಗುತ್ತದೆ. ವೈಯಕ್ತಿಕ ಬದುಕು ಪ್ರೊಫೆಷನಲ್ ಬದುಕಾಗಿ ಬದಲಾಗಬೇಕು. ಉದಾಹರಣೆಗೆ ಮಗುವನ್ನು ಮಾತನಾಡಿಸುವ ಬಗೆಯಿಂದ ಮಾರ್ಕೆಟಿಂಗ್ ಮ್ಯಾನೇಜರ್ ಬಳಿ ಮಾತನಾಡುವ ಬಗೆಗೆ ಜಂಪ್ ಆಗಬೇಕು. ಮತ್ತೆ ರಾತ್ರಿ ಈ ರೋಲ್ ಉಲ್ಟಾ ಆಗಬೇಕು.

ಹೀಗೆ ರೋಲ್ ಬದಲಾಗಲು ಮೈಂಡ್‌ಸೆಟ್ ಸಜ್ಜಾಗಬೇಕು. ಈ ಬದಲಾವಣೆಯ ಹಂತ ಮನಸ್ಸಿಗೆ ಒತ್ತಡ ತರುತ್ತದೆ. ಅಲ್ಲದೆ ಹೆಚ್ಚು ಸಮಯ ಟ್ರಾವೆಲ್ ಮಾಡುವುದು ದೈಹಿಕವಾಗಿಯೂ ಸುಸ್ತಾಗಿಸುತ್ತದೆ. ಎನರ್ಜಿಯೇ ಇಲ್ಲದೆ ಮನೆಗೆ ಮರಳಿದ ಮೇಲೆ ಆ ಬದುಕನ್ನು ಎಂಜಾಯ್ ಮಾಡಲಾದರೂ ಹೇಗೆ ಸಾಧ್ಯ? ಪರ್ಸನಲ್ ಲೈಫ್‌ಗೆ ಸಮಯವಿಲ್ಲ ಎಂಬ ಒತ್ತಡವೂ ಸೇರಿಕೊಳ್ಳುತ್ತದೆ. ಹಾಗಾಗಿ, ಹೆಚ್ಚು ಟ್ರಾವೆಲ್ ಮಾಡುವವರು ಕೆಲಸವನ್ನು ಎಂಜಾಯ್ ಮಾಡುವುದು ಕಷ್ಟವಾಗುತ್ತದೆ. 

ಲೇಆಫ್‌ ಯುಗದಲ್ಲಿ ಕೆಲಸ ಉಳಿಸಿಕೊಳ್ಳುವುದು ಹೇಗೆ?

ಈ ಕಚೇರಿಯ ಪ್ರಯಾಣ ಹೆಚ್ಚು ಸುಸ್ತಾಗದಂತೆ ನೋಡಿಕೊಳ್ಳುವುದು ಹೇಗೆ?

ವರದಿಗಳ ಪ್ರಕಾರ, ಪ್ರಯಾಣವನ್ನು ಸಾಧ್ಯವಾದಷ್ಟು ಸುಖಕರವಾಗಿಸಲು ಆಫೀಸಿಗೆ ಹೋಗುವವರು ಪ್ರತಿದಿನ ಕೆಲವೊಂದು ದಿನಚರಿ ಅಳವಡಿಸಿಕೊಳ್ಳಬೇಕು. ರೈಲು ಅಥವಾ ಬಸ್ಸಿನಲ್ಲಿ ಹೋಗುತ್ತಾ ನ್ಯೂಸ್ ಚೆಕ್ ಮಾಡುವುದು, ಕ್ಯಾಲೆಂಡರ್ ನೋಡಿ ಆ ದಿನ ಏನೇನು ಮಾಡಬೇಕೆಂದು ಯೋಜಿಸುತ್ತಾ ಸಾಗುವುದು- ಮುಂತಾದ ಚಿಕ್ಕಪುಟ್ಟ ಚಟುವಟಿಕೆಗಳು ಪ್ರಯಾಣವನ್ನು ಹೆಚ್ಚು ಸುಸ್ತಾಗಿಸದಂತೆ ನೋಡಿಕೊಳ್ಳುತ್ತವೆ.