ಯಶಸ್ಸು ಕಾಯಿಸಿ, ಸತಾಯಿಸಿ ನಿಮ್ಮನ್ನು ಅಪ್ಪಿಕೊಂಡ ತಕ್ಷಣ ಸ್ವರ್ಗವೇ ಕೈಗೆ ಸಿಕ್ಕಷ್ಟು ಖುಷಿ, ಸಂಭ್ರಮ ಮನೆ ಮಾಡುತ್ತದೆ. ಆದರೆ, ಆ ಯಶಸ್ಸಿನ ಖುಷಿಯನ್ನು ಎಷ್ಟು ಕಾಲ ಅನುಭವಿಸಬಹುದು? ಒಂದು ದಿನ, ವಾರ, ತಿಂಗಳು, ವರ್ಷ? ಹೌದು, ಇದನ್ನು ಕೂಡ ನಿರ್ಧರಿಸುವುದು ಅಗತ್ಯ. ಇಲ್ಲವಾದರೆ ಮುಂದಿನ ಗುರಿಗಳು ಯಶಸ್ಸಿನ ಅಮಲಿನಲ್ಲಿ ಮುಳುಗಿ ಹೋಗುವ ಸಾಧ್ಯತೆಯಿದೆ. ಒಂದು ಯಶಸ್ಸು ಇನ್ನೊಂದು ಗುರಿಯನ್ನು ನೆಡಲು, ಅದರತ್ತ ಮುನ್ನುಗ್ಗಲು ಪ್ರೇರಣೆಯಾಗಬೇಕೇ ಹೊರತು ಅದೇ ಕೊನೆಯ ನಿಲ್ದಾಣವಾಗಬಾರದು.

ಯಶಸ್ಸು ಎನ್ನುವ ಹತ್ತು ಹಲವಾರು ತಂಗುದಾಣಗಳು ಸಿಗುತ್ತಲೇ ಹೋಗಬಹುದು. ಹಾಗಂತ ಆ ತಂಗುದಾಣವನ್ನೇ ಅಂತಿಮ ಗುರಿ ಎಂದು ಭಾವಿಸಿದರೆ ಬದುಕು ನಿಂತ ನೀರಾಗುತ್ತದೆ. ಆದಕಾರಣ ಪ್ರತಿ ಯಶಸ್ಸು ಸಿಕ್ಕಾಗಲೂ ಸಂಭ್ರಮಿಸಿ. ಆದರೆ, ಆ ಯಶಸ್ಸು ಅಹಂಕಾರಕ್ಕೆ ಕಾರಣವಾಗಿ ನಿಮ್ಮ ಬೆಳವಣಿಗೆಯನ್ನು ಅಲ್ಲಿಗೇ ಸ್ಥಗಿತಗೊಳಿಸದಂತೆ ಎಚ್ಚರ ವಹಿಸಿ.

ದೇಶದಲ್ಲೇ ಅತಿ ಹೆಚ್ಚು ಸಂಬಳ ನೀಡುವ ನಗರ ಬೆಂಗಳೂರು!

ಅಹಂಕಾರಕ್ಕೆ ಕಾರಣವಾಗದಿರಲಿ: ಯಶಸ್ಸು ಮನಸ್ಸಿಗೆ ಖುಷಿ ನೀಡುತ್ತದೆ ನಿಜ. ಅದನ್ನು ಸಂಭ್ರಮಿಸುವುದರಲ್ಲಿ ಕೂಡ ತಪ್ಪಿಲ್ಲ. ಆದರೆ, ಆ ಯಶಸ್ಸಿನ ಆಮಲಿನಲ್ಲಿ ಮೈ ಮರೆಯಬಾರದು. ಒಂದು ವೇಳೆ ಮೈ ಮರೆತು ಕುಳಿತರೆ ಮುಂದಿನ ಹಾದಿ ಮುಚ್ಚಿಕೊಳ್ಳಬಹುದು. ಇನ್ನು ಕೆಲವರಿಗೆ ಯಶಸ್ಸು ಸಿಕ್ಕ ಕೂಡಲೇ ಅಹಂಕಾರ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತದೆ. ಇದು ಅತ್ಯಂತ ಅಪಾಯಕಾರಿ. ಅಹಂಕಾರ ಪ್ರಗತಿಗೆ ಮಾರಕ. ಅಷ್ಟೇ ಅಲ್ಲ, ನಿಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ. ಆದಕಾರಣ ಅಹಂಕಾರ ನಿಮ್ಮನ್ನು ಆಕ್ರಮಿಸಿಕೊಳ್ಳದಂತೆ ಜಾಗ್ರತೆ ವಹಿಸಿ.

ಯಶಸ್ಸು ಸಿಕ್ಕಾಗ ಏನು ಮಾಡಬೇಕು?

ಮುಂದಿನ ಗುರಿ ಬಗ್ಗೆ ಯೋಚಿಸಿ: ಬಹುತೇಕ ಬಾರಿ ಯಶಸ್ಸು ಸಿಕ್ಕ ಕೂಡಲೇ ನಾವು ಮುಂದಿನ ಗುರಿ ಬಗ್ಗೆ ಯೋಚಿಸುವುದೇ ಇಲ್ಲ. ಇದು ತಪ್ಪು. ಒಂದು ಗುರಿ ತಲುಪಿದ ಬಳಿಕ ಮತ್ತೊಂದು ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು. ಇಲ್ಲವಾದರೆ ಬದುಕಿನಲ್ಲಿ ಯಾವುದೇ ಸ್ವಾರಸ್ಯ ಇರುವುದಿಲ್ಲ. ಹೀಗೆ ಒಂದರ ನಂತರ ಮತ್ತೊಂದು ಗುರಿಯನ್ನು ನಿಗದಿಪಡಿಸಿಕೊಂಡು ಮುಂದೆ ಸಾಗುವುದರಿಂದ ಬದುಕಿನಲ್ಲಿ ಎತ್ತರಕ್ಕೇರಲು ಸಾಧ್ಯ. ಅಲ್ಲದೆ, ನಿರಂತರವಾಗಿ ಗುರಿಗಳನ್ನು ನಿಗದಿಪಡಿಸಿಕೊಳ್ಳುವುದರಿಂದ ಮನಸ್ಸಿಗೆ ಬೇಸರ ಮೂಡುವುದಿಲ್ಲ. ಸದಾ ಉತ್ಸಾಹದಿಂದಿರಲು ಕೂಡ ಸಾಧ್ಯವಾಗುತ್ತದೆ. ಸದಾ ಚಟುವಟಿಕೆಯಿಂದಿದ್ದರೆ ಮನಸ್ಸಿಗೆ ಆಲಸ್ಯ ಮೂಡುವುದಿಲ್ಲ.

ಈ ರೆಸಲ್ಯೂಶನ್‌ಗಳು ನಿಮ್ಮ ವೃತ್ತಿಬದುಕಿಗೆ ಸಹಕಾರಿ!

ನಾಳೆ ಬಗ್ಗೆ ಕನಸು ಕಾಣಿ: ಯಶಸ್ಸು ಸಿಕ್ಕಿತು ಎಂಬ ಖುಷಿಯಲ್ಲಿ ನಾಳೆಯ ಬಗ್ಗೆ ಯೋಚಿಸುವುದನ್ನು ಬಿಟ್ಟು ಬಿಡಬೇಡಿ. ಬದಲಿಗೆ ಮುಂದೆ ಏನು ಮಾಡಬೇಕು? ಮುಂದಿನ ಗುರಿಯ ಸಿದ್ಧತೆ ಹೇಗಿರಬೇಕು? ಎಂಬುದನ್ನು ಯೋಚಿಸಿ. ನಿಮ್ಮ ಕಾರ್ಯಯೋಜನೆಗಳ ಕುರಿತು ವೇಳಾಪಟ್ಟಿ ಸಿದ್ಧಪಡಿಸಿ. ಆ ವೇಳಾಪಟ್ಟಿಗೆ ಅನುಗುಣವಾಗಿ ಒಂದೊಂದೇ ಕಾರ್ಯವನ್ನು ಮಾಡಿ ಮುಗಿಸಿ. ಇಂದಿನ ಖುಷಿಯಲ್ಲಿ ನಾಳೆಯ ಕುರಿತು ಕನಸು ಕಾಣುವುದನ್ನು ನಿಲ್ಲಿಸಬೇಡಿ.

ಇನ್ನಷ್ಟು ಸಾಧಿಸುವ ಹಂಬಲ ಇರಲಿ: ಸಾಧನೆಯ ಪರಿಧಿ ಅಪರಿಮಿತವಾಗಿರಬೇಕು. ಇನ್ನಷ್ಟು ಸಾಧಿಸು ಹಂಬಲ ಇರಬೇಕು. ಯಾವುದೋ ಒಂದು ಯಶಸ್ಸಿನಲ್ಲಿ ಮೈ ಮರೆತು ಇನ್ನಷ್ಟು ಗೆಲುವುಗಳನ್ನು ಕಳೆದುಕೊಳ್ಳಬಾರದು. ಯಶಸ್ವಿ ವ್ಯಕ್ತಿಗಳೆಲ್ಲರೂ ಇನ್ನಷ್ಟು ಸಾಧಿಸುವ ಹಂಬಲದಿಂದಲೇ ಉನ್ನತ ಸಾಧನೆ ಮಾಡಿದ್ದಾರೆ. ಆದಕಾರಣ ಪ್ರತಿ ಯಶಸ್ಸು ಕೂಡ ನಮ್ಮಲ್ಲಿ ಇನ್ನಷ್ಟು ಸಾಧನೆ ಮಾಡುವ ಉತ್ಸಾಹವನ್ನು ತುಂಬುವಂತಾಗಬೇಕು.

ಕಲಿಕೆ ಹುಮ್ಮಸ್ಸು ಬತ್ತದಿರಲಿ: ಬದುಕಿನಲ್ಲಿ ಕಲಿಕೆ ನಿತ್ಯ ನಿರಂತರವಾಗಿರಬೇಕು. ಈ ಜಗತ್ತಿನಲ್ಲಿ ಎಷ್ಟು ಕಲಿತರೂ ಕಡಿಮೆಯೇ. ಕಲಿಕೆಗೆ ಯಾವುದೇ ಪರಿಧಿಯಿಲ್ಲ. ಆದಕಾರಣ ಹೊಸ ವಿಚಾರಗಳನ್ನು ಕಲಿಯಲು ಹಿಂಜರಿಯಬೇಡಿ. ಯಶಸ್ಸು ಕೆಲವೊಮ್ಮೆ ನನಗೆಲ್ಲ ತಿಳಿದಿದೆ ಎಂಬ ಭಾವನೆಯನ್ನು ಮೂಡಿಸುತ್ತದೆ. ಇಂಥ ಭಾವನೆಯ ಕಾರಣಕ್ಕೆ ನಾವು ಎಷ್ಟೋ ಬಾರಿ ಹೊಸ ವಿಚಾರಗಳನ್ನು ಕಲಿಯಲು ಮುಂದಾಗುವುದೇ ಇಲ್ಲ. ಇಂಥ ಮನಸ್ಥಿತಿ ನಮ್ಮ ಅಭಿವೃದ್ಧಿಗೇ ಅಡ್ಡಿಯುಂಟು ಮಾಡುತ್ತದೆ. ಆದಕಾರಣ ಹೊಸ ವಿಚಾರಗಳನ್ನು ಕಲಿಯಲು ಹಿಂದೇಟು ಹಾಕಬೇಡಿ.

ಲೇಆಫ್‌ ಯುಗದಲ್ಲಿ ಕೆಲಸ ಉಳಿಸಿಕೊಳ್ಳುವುದು ಹೇಗೆ?

ಪ್ರತಿ ಯಶಸ್ಸು ಪ್ರೇರಣೆ ಆಗಲಿ: ಯಶಸ್ಸು ಒಂದು ರೀತಿಯಲ್ಲಿ ಇಂಧನವಿದ್ದಂತೆ. ಕಾರಿಗೆ ಪೆಟ್ರೋಲ್ ಹಾಕಿದಾಗ ಅದು ಹೇಗೆ ಮುಂದೆ ಓಡುತ್ತದೆಯೋ ಹಾಗೆಯೇ ಮನಸ್ಸೆಂಬ ಇಂಜಿನ್‍ಗೆ ಯಶಸ್ಸು ಎಂಬ ಇಂಧನ ಸಿಕ್ಕಿದಾಗ ಅದು ಇನ್ನೂ ಮುಂದಕ್ಕೆ ಸಾಗುವ ಸಾಮಥ್ರ್ಯವನ್ನು ಗಳಿಸಿಕೊಳ್ಳುತ್ತದೆ. ಹೀಗಾಗಿ ಪ್ರತಿ ಯಶಸ್ಸಿನಿಂದ ಮುಂದಿನ ಗುರಿಯತ್ತ ಸಾಗಲು ಪ್ರೇರಣೆ ಪಡೆಯಿರಿ. ಈ ಸ್ವಯಂಪ್ರೇರಣೆ ಉನ್ನತ ಸಾಧನೆ ಮಾಡಲು ನೆರವು ನೀಡುತ್ತದೆ. ಯಶಸ್ಸು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆತ್ಮವಿಶ್ವಾಸ ಮುಂದಿನ ಗುರಿಯೆಡೆಗೆ ಸಾಗಲು ನಮಗೆ ಶಕ್ತಿ ನೀಡುತ್ತದೆ.