ಸಿದ್ದುಗೆ ಅಧಿಕಾರಕ್ಕಾಗಿ ನಮಾಜ್ ಆದ ಬಳಿಕ ಪ್ರಾರ್ಥಿಸಿ: ಜಮೀರ್ ಅಹಮ್ಮದ್
ಮುಸ್ಲಿಮರು ಪ್ರಾಬಲ್ಯವಿರುವ ರಾಜ್ಯದ 105 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಪರ ನಿಲ್ಲಲು ಮನವಿ: ಮಾಜಿ ಸಚಿವ ಜಮೀರ್ ಅಹಮ್ಮದ್
ದಾವಣಗೆರೆ/ಬೆಂಗಳೂರು(ಜು.27): ರಾಜ್ಯದ 105 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಮುಸ್ಲಿಮರು ಆ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಪರ ನಿಲ್ಲಬೇಕು, ನಮ್ಮ ಸಮುದಾಯದ ಪರ ಧ್ವನಿ ಎತ್ತುವ ಸಿದ್ದರಾಮಯ್ಯ ಸೇರಿದಂತೆ ಎಲ್ಲರಿಗೂ ಒಳ್ಳೆಯದಾಗಲಿ, ಅಧಿಕಾರ ಸಿಗಲಿ ಎಂಬುದಾಗಿ ಮುಸ್ಲಿಮರು ನಮಾಜ್ ನಂತರ ದುವಾ (ಬೇಡಿಕೆ) ಮಾಡಿ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ಕರೆ ನೀಡಿದರು. ನಗರದ ತಾಜ್ ಪ್ಯಾಲೇಸ್‌ನಲ್ಲಿ ಮಂಗಳವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ, ಟಿಪ್ಪು ಜಯಂತಿ ಬ್ಯಾನ್ ಮಾಡಿ ಅಂತಾ ಬಿಜೆಪಿ ಒತ್ತಾಯಿಸಿದಾಗ ಅದರ ವಿರುದ್ಧ ನಿಂತವರು ಸಿದ್ದರಾಮಯ್ಯ. ನೀವು ಏನು ಮಾಡುತ್ತೀರಾ, ಮಾಡಿಕೊಳ್ಳಿ. ನಾನು ಟಿಪ್ಪು ಜಯಂತಿ ಮಾಡೇ ಮಾಡ್ತೀನಿ ಎಂದಿದ್ದು ಇದೇ ಸಿದ್ದರಾಮಯ್ಯ. ಮುಸ್ಲಿಮರು ನಮಾಜ್ ಮಾಡಿದ ಬಳಿಕ, ಸಿದ್ದರಾಮಯ್ಯನವರಿಗೆ ಅಧಿಕಾರ ಸಿಗಲಿ ಅಂತಾ ದುವಾ ಮಾಡಬೇಕು ಎಂದು ಉರ್ದು ಭಾಷೆಯಲ್ಲಿ ತಿಳಿಸಿದರು.
ಸಚಿವ ಸ್ಥಾನ ಆಶ್ಚರ್ಯ ತಂದಿತ್ತು:
ಮುಸ್ಲಿಮರು ತಲೆ ತಗ್ಗಿಸಿ ನಡೆಯದೇ, ತಲೆ ಎತ್ತಿ ಮುಂದೆ ಸಾಗಬೇಕು. 2008ರಲ್ಲಿ ನಾನು ಜೆಡಿಎಸ್ ತೊರೆದು, ಕಾಂಗ್ರೆಸ್ಸಿಗೆ ಬಂದಿದ್ದೆ. ನನಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿದ್ದು ಆಶ್ಚರ್ಯ ತಂದಿತ್ತು. ನನಗಿಂತ ಹಿರಿಯರಾದ ತನ್ವೀರ್ ಸೇಠ್, ಹ್ಯಾರಿಸ್‌ನಂತಹವರು ಕಾಂಗ್ರೆಸ್ಸಿನಲ್ಲಿದ್ದರು. ಪಕ್ಷದಲ್ಲಿ ಹಿರಿಯರು ಅನೇಕರಿದ್ದರೂ, ನನ್ನನ್ನು ಮಂತ್ರಿ ಮಾಡಿದರು. ಆಗ ರಣದೀಪ್ ಸುರ್ಜೇವಾಲ ಕರೆ ಮಾಡಿ ಮಾತನಾಡಿದ್ದರು. ಸುರ್ಜೇವಾಲ ಕರೆ ಮಾಡಿದ್ದು ನನ್ನ ಬಳಿ ಹಣ ಇದೆ ಅಂತಾ ಅಲ್ಲ, ನನ್ನ ಹಿಂದೆ ಮುಸ್ಲಿಂ ಸಮಾಜ ಇದೆಯೆಂದು ಕರೆ ಮಾಡಿ, ಮಾತನಾಡುತ್ತಾರೆ ಎಂದು ಹೇಳಿದರು.
ಆ ಜಮೀರ್‌ಗೆಲ್ಲ ಉತ್ತರಿಸಲು ನಾನು ತಯಾರಿಲ್ಲ: ಡಿಕೆಶಿ ಕಿಡಿ
ರಾಜ್ಯ ಉಸ್ತುವಾರಿ ವೇಣುಗೋಪಾಲ, ರಾಹುಲ್ ಗಾಂಧಿ ಕರೆ ಮಾಡಿ, ಯಾವ ಖಾತೆ ಬೇಕೆಂದು ಕೇಳಿದ್ದರು. ಮುಸ್ಲಿಮರ ಸೇವೆ ಮಾಡಲು ವಕ್ಫ್ ಖಾತೆ ಕೇಳಿದ್ದೆ. ಅದರಂತೆ ಒತ್ತುವರಿಯಾಗಿದ್ದ ವಕ್ಫ್ ಆಸ್ತಿಯನ್ನು ಗುರುತಿಸಿ, ಖಾತೆ ಮಾಡಿಸಿ, ಉಳಿಸಿದೆ. ಆದರೆ, ನಮ್ಮ ಹಣೆಬರಹ ಸರಿ ಇದ್ದಿಲ್ಲ. ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು. ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಳಿ ಒತ್ತುವರಿಯಾದ ವಕ್ಫ್ ಆಸ್ತಿಯಲ್ಲಿ ಬಡವರಿಗೆ ಮನೆ ನಿರ್ಮಿಸೋಣ ಅಂದಿದ್ದೆ. ಇದರ ಉದ್ದೇಶ ಇಷ್ಟೇ ವಕ್ಫ್ ಆಸ್ತಿ ಒತ್ತುವರಿ ಮಾಡುವುದು ಕಡಿಮೆಯಾಗುತ್ತದೆ ಅಂತಾ. ಆದರೆ, ಕುಮಾರಸ್ವಾಮಿ ಮನೆ ಬೇಡ, ರೈತರ ಸಾಲ ಮನ್ನಾಗೆ ಹಣ ಇಲ್ಲ ಅಂದರು ಎಂದು ವಿವರಿಸಿದರು.
ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ:
ಇದೇ ವಿಚಾರವಾಗಿ ಸಿದ್ದರಾಮಯ್ಯನವರಿಗೆ ಭೇಟಿ ಮಾಡಿದ್ದೆ. ಆಗ ಸಿದ್ದರಾಮಯ್ಯ ನಾನು ಮುಖ್ಯಮಂತ್ರಿ ಆಗಿದ್ದಾಗ ತಂದು ಕೊಟ್ಟಿದ್ದರೆ, 5 ಸಾವಿರ ಕೋಟಿ ರು. ಅನುದಾನ ನೀಡುತ್ತಿದ್ದೆನೆಂದರು. ಸಿದ್ದರಾಮಯ್ಯನವರು ಕೊಟ್ಟಷ್ಟು ಭಾಗ್ಯಗಳನ್ನು ರಾಜ್ಯದ ಜನತೆಗೆ ಈವರೆಗೆ ಯಾವುದೇ ಮುಖ್ಯಮಂತ್ರಿಯಾಗಲೀ, ಸರ್ಕಾರವಾಗಲೀ ಕೊಟ್ಟಿಲ್ಲ. ಎಲ್ಲಿ ಅಲ್ಪಸಂಖ್ಯಾತರನ್ನು ಅಭಿವೃದ್ಧಿಪಡಿಸಲು, ಮುಖ್ಯವಾಹಿನಿಗೆ ತರಲು ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಅನುದಾನ ನೀಡಿ, ಸ್ಪಂದಿಸಿದ್ದಾರೆ. ಎಲ್ಲಾ ಸಮುದಾಯಕ್ಕೆ ಸಿದ್ದರಾಮಯ್ಯ ಅವಧಿಯಲ್ಲಿ ಸೌಲಭ್ಯ ಸಿಕ್ಕಿವೆ. ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.
ಎಂಎಲ್‌ಸಿ ಕೆ.ಅಬ್ದುಲ್ ಜಬ್ಬಾರ್, ಮುಖಂಡರಾದ ಸೈಯದ್ ಸೈಫುಲ್ಲಾ, ಎಂ.ಟಿ.ಸುಭಾಶ್ಚಂದ್ರ, ಬಿ.ವೀರಣ್ಣ, ಕೆ.ಎಸ್.ಬಸವಂತಪ್ಪ, ಪಾಲಿಕೆ ಸದಸ್ಯರಾದ ಮಾಜಿ ಉಪ ಮೇಯರ್ ಅಬ್ದುಲ್ ಲತೀಫ್, ಸೈಯದ್ ಚಾರ್ಲಿ, ಅಯೂಬ್ ಪೈಲ್ವಾನ್, ಸಾಧಿಕ್ ಪೈಲ್ವಾನ್, ಎಚ್.ಮಹಮ್ಮದ್ ಇಕ್ಬಾಲ್, ಟಾರ್ಗೆಟ್ ಅಸ್ಲಂ, ಎ.ಬಿ.ರಹೀಂ, ಸಿರಾಜ್ ಅಹಮ್ಮದ್, ತಾಜ್ ಪ್ಯಾಲೇಸ್ ಮಾಲೀಕ ಬಿ.ದಾದಾಪೀರ್, ಮುಸ್ಲಿಂ ಸಮಾಜದ ಧರ್ಮಗುರುಗಳು, ಮುಸ್ಲಿಂ ಮುಖಂಡರು ಇತರರಿದ್ದರು.
ಬೆಂಬಲಿಗರ ಒತ್ತಡದಿಂದ ಜನ್ಮದಿನಕ್ಕೆ ಸಿದ್ದು ಸಮ್ಮತಿ
ದಾವಣಗೆರೆ: ಸಿದ್ದರಾಮಯ್ಯನವರಿಗೆ 75 ವರ್ಷವಾಗುತ್ತಿದ್ದು, ರಾಜಕೀಯ ಜೀವನದಲ್ಲಿ ಎಂದಿಗೂ ಜನ್ಮದಿನ ಆಚರಿಸಿಕೊಂಡವರಲ್ಲ. ಆದರೆ, 75ನೇ ಜನ್ಮದಿನವನ್ನು ಅಮೃತೋತ್ಸವ ಆಚರಣೆಯಾಗಿ ಆಚರಿಸಲು ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗಲು ತೀರ್ಮಾನಿಸಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ತಿಳಿಸಿದರು.
ನಗರದ ತಾಜ್ ಪ್ಯಾಲೇಸ್‌ನಲ್ಲಿ ಮುಸ್ಲಿಂ ಸಮುದಾಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಿದ್ದರಾಮಯ್ಯ ನಾನು ದೆಹಲಿಗೆ ಹೋಗಿದ್ದೆವು. ಆಗ ಸುಮಾರು 200 ಫೋನ್ ಕರೆ ಬಂದವು. ಎಲ್ಲರೂ ಸಿದ್ದರಾಮಯ್ಯ ಜನ್ಮದಿನ ಆಚರಿಸುವ ಬಗ್ಗೆ ಹೇಳಿದ್ದಕ್ಕೆ ಎಲ್ಲರ ಬಲವಂತಕ್ಕೆ ಸಿದ್ದರಾಮಯ್ಯ ಸಮ್ಮತಿಸಿದರು ಎಂದರು. ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರ ಸಭೆ ಮಾಡಿದ್ದೇನೆ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದಾಗ 3 ಸಾವಿರ ಕೊಟ್ಟರು. ಕೇವಲ 280 ಕೋಟಿ ಹಣ ಇದ್ದುದನ್ನು 3,300 ಕೋಟಿಗೆ ಹೆಚ್ಚಿಸಿದರು. ಅದನ್ನು 10 ಸಾವಿರ ರು.ಗೆ ಹೆಚ್ಚಿಸಲು ಸಿದ್ದರಾಮಯ್ಯ ಆಲೋಚಿಸಿದ್ದರು. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಬೇಕೆಂಬುದು ನಮ್ಮ ನಾಯಕ ಸಿದ್ದರಾಮಯ್ಯನವರ ಉದ್ದೇಶ. ಕೇವಲ ಅಲ್ಪಸಂಖ್ಯಾತರಷ್ಟೇ ಅಲ್ಲ, ಎಲ್ಲಾ ಸಮುದಾಯಕ್ಕೂ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಜಮೀರ್ ಜೊತೆ ಸೆಲ್ಫೀ, ಗಾಜು ಪುಡಿಪುಡಿ!
ಮಾಜಿ ಸಚಿವ ಜಮೀರ್ ಅಹಮ್ಮದ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವ ವೇಳೆ ಉಂಟಾದ ತಳ್ಳಾಟದಲ್ಲಿ ಇಲ್ಲಿನ ತಾಜ್ ಪ್ಯಾಲೇಸ್‌ನ ಪ್ರವೇಶ ದ್ವಾರದ ಗಾಜುಗಳು ಪುಡಿಪುಡಿಯಾಗಿವೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯವಾಗಲೀ, ಅಪಾಯವಾಗಲೀ ಆಗಿಲ್ಲ. ಜಮೀರ್ ಜೊತೆಗೆ ಸೆಲ್ಫೀ ತೆಗೆದುಕೊಂಡು, ಸಂಭ್ರಮಿಸುವ ಮುಸ್ಲಿಂ ಯುವಕರ ತಳ್ಳಾಟದ ವೇಳೆ ಈ ಅವಘಡ ನಡೆದಿದೆ. ತಾಜ್ ಪ್ಯಾಲೇಸ್‌ನಿಂದ ಜಮೀರ್ ಅಹಮ್ಮದ್ ಚಿತ್ರದುರ್ಗ ಕಡೆಗೆ ಪ್ರಯಾಣ ಬೆಳೆಸಿದರು.
‘ಮುಂದಿನ ಸಿಎಂ’ ಹೇಳಿಕೆ: ಜಮೀರ್ ಬಗ್ಗೆ ಸಿದ್ದು ಗರಂ
ಬೆಂಗಳೂರು: ‘ಯಾರೋ ಒಬ್ಬ ಮಾತನಾಡಿದ್ದಾನೆ ಎಂದು ಅದರ ಬಗ್ಗೆಯೇ ಮಾತನಾಡಲು ಆಗುವುದಿಲ್ಲ. ಪಕ್ಷದಲ್ಲಿ ಆಂತರಿಕವಾಗಿ ಈ ವಿಷಯ ಚರ್ಚೆ ಮಾಡುತ್ತೇವೆ.’ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿಕೆ ನೀಡಿ ಕೆಲವರ ಕೆಂಗಣ್ಣಿಗೆ ಗುರಿಯಾಗಿರುವ ಶಾಸಕ ಜಮೀರ್ ಅಹಮದ್ ಅವರ ವಿಚಾರವನ್ನು ಸುದ್ದಿಗಾರರು ಮಂಗಳವಾರ ಪ್ರಸ್ತಾಪಿಸುತ್ತಿದ್ದಂತೆ ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗರಂ ಆಗಿ ಮೇಲಿನಂತೆ ಪ್ರತಿಕ್ರಿಯಿಸಿದರು.
ಡಿಕೆಶಿ ಸಿಎಂ ಹುದ್ದೆ ಆಸೆಗೆ ಶಾಸಕ ಜಮೀರ್ ಟಾಂಗ್
‘ಯಾರೋ ಒಬ್ಬ ಮಾತನಾಡಿದ್ದಾನೆ ಎಂದು ಅದರ ಬಗ್ಗೆಯೇ ಚರ್ಚೆ ಮಾಡಬೇಕಾಗಿಲ್ಲ. ಈ ವಿಷಯವನ್ನು ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ಮಾಡಲಾಗುವುದು. ಇಲ್ಲಿ ಅದನ್ನು ಚರ್ಚೆ ಮಾಡುವ ಅಗತ್ಯವಿಲ್ಲ. ಮುಖ್ಯಮಂತ್ರಿ ಆಯ್ಕೆಗೆ ಒಂದು ವ್ಯವಸ್ಥೆ ಇರುತ್ತದೆ. ಅದರಂತೆ ನಡೆದುಕೊಳ್ಳಬೇಕಾಗುತ್ತದೆ’ ಎಂದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಆಯ್ಕೆಯಾದ ಶಾಸಕರು, ಹೈಕಮಾಂಡ್ ನಿರ್ಧಾರದಂತೆ ಮುಖ್ಯಮಂತ್ರಿ ಆಯ್ಕೆ ಮಾಡಲಾಗುತ್ತದೆ. ಬಿಜೆಪಿ ಸರ್ಕಾರದ ಭ್ರಷ್ಟೋತ್ಸವದ ಬಗ್ಗೆ ಮಾತನಾಡಲು ಪ್ರತಿಕಾಗೋಷ್ಠಿ ಕರೆಯಲಾಗಿದೆ. ಇದರ ಬಗ್ಗೆ ಮಾತನಾಡೋಣ. ಆ ವಿಷಯವನ್ನು ಬಿಟ್ಟುಬಿಡಿ. ನಾನು ಹೇಳುವುದನ್ನು ಕೇಳಿ’ ಎಂದು ಸಿಡಿಮಿಡಿಗೊಂಡರು.
‘ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿದಾಗ ಮಾಧ್ಯಮಗಳು ಪ್ರಶ್ನೆ ಮಾಡುವುದಿಲ್ಲ. ಬಿಜೆಪಿಯವರೂ ಕ್ರಮ ಕೈಗೊಂಡಿಲ್ಲ. ಎಚ್.ವಿಶ್ವನಾಥ್ ವಿಷಯದಲ್ಲಿ ನೀವು ಪ್ರಶ್ನೆ ಮಾಡಿಲ್ಲ. ಅವರೆಲ್ಲರನ್ನೂ ಬಿಟ್ಟು ನಮ್ಮನ್ನು ಮಾತ್ರ ಪ್ರಶ್ನಿಸುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.