ಯಾವುದೇ ಕಾರಣಕ್ಕೂ ಯುವನಿಧಿ ಹಣ ಬಂದ್ ಆಗುವುದಿಲ್ಲ. ಈ ಬಗ್ಗೆ ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ. ನೋಂದಣಿ ಆದವರಿಗೆ ಮುಂದಿನ 2 ವರ್ಷ ಅಥವಾ ಉದ್ಯೋಗ ಸಿಗುವವರೆಗೂ ಹಣ ಸಿಗಲಿದೆ ಎಂದು ಸಚಿವ ಡಾ। ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಮೈಸೂರು (ಅ.15): ಯಾವುದೇ ಕಾರಣಕ್ಕೂ ಯುವನಿಧಿ ಹಣ ಬಂದ್ ಆಗುವುದಿಲ್ಲ. ಈ ಬಗ್ಗೆ ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ. ನೋಂದಣಿ ಆದವರಿಗೆ ಮುಂದಿನ 2 ವರ್ಷ ಅಥವಾ ಉದ್ಯೋಗ ಸಿಗುವವರೆಗೂ ಹಣ ಸಿಗಲಿದೆ ಎಂದು ಸಚಿವ ಡಾ। ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುವನಿಧಿಗೆ ನೋಂದಣಿಯಾಗಿರುವ ಅಭ್ಯರ್ಥಿಗಳಿಗೆ ಯುವನಿಧಿ ಪ್ಲಸ್ ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದ್ದು, ಬಹಳಷ್ಟು ಮಂದಿಯಲ್ಲಿ ತರಬೇತಿಗೆ ಹೆಸರು ನೋಂದಾಯಿಸಿಕೊಂಡರೆ ಯುವನಿಧಿ ಹಣ ನಿಂತು ಹೋಗುತ್ತದೆ ಎಂಬ ತಪ್ಪು ಕಲ್ಪನೆಯಿದೆ.

ಯುವನಿಧಿ ಯೋಜನೆಯಡಿ ತಿಳಿಸಿರುವಂತೆ 2 ವರ್ಷ ಅಥವಾ ಕೆಲಸ ಸಿಗುವವರೆಗೆ ನಿರುದ್ಯೋಗ ಭತ್ಯೆ ನೀಡಲಾಗುವುದು. ಹಾಗಾಗಿ ಯುವನಿಧಿ ಪ್ಲಸ್ ಯೋಜನೆಯಡಿ ನೀಡಲಾಗುವ ಕೌಶಲ್ಯ ತರಬೇತಿಗೆ ಹೆಚ್ಚು ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಳ್ಳಿ ಎಂದು ತಿಳಿಸಿದರು. ಯುವನಿಧಿಯಲ್ಲಿ ರಾಜ್ಯಾದ್ಯಂತ 3 ಲಕ್ಷ ಹಾಗೂ ಮೈಸೂರು ವಿಭಾಗದಲ್ಲಿ 43,500 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಅವರಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಾಗುತ್ತಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವುದರಿಂದ ಪರೋಕ್ಷವಾಗಿ ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು, ನೇರ ಸಂಪರ್ಕ ಸಾಧಿಸಬಹುದು.

ಯಾವ ತಂತ್ರಜ್ಞಾನ, ಕೌಶಲ್ಯಗಳಿಗೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ತಿಳಿದುಕೊಂಡು, ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದು ಎಂದರು. ಯುವಕರಿಗೆ ಕೌಶಲ ತರಬೇತಿ ನೀಡಲು ಇಲಾಖೆಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಯುವನಿಧಿ ಪ್ಲಸ್ ಯೋಜನೆ ಅವುಗಳಲ್ಲಿ ಒಂದು. ಈ ಸಾಲಿನಲ್ಲಿ 25 ಸಾವಿರ ಜನರಿಗೆ ಕೌಶಲ ತರಬೇತಿ ನೀಡುವ ಗುರಿ ಇದ್ದು, ಕಲಬುರಗಿ, ಕೊಪ್ಪಳ ಹಾಗೂ ಮೈಸೂರಿನ ವರುಣದಲ್ಲಿ ಬಹುಕೌಶಲ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

6 ವೈದ್ಯಕೀಯ ಕಾಲೇಜು ಸ್ಥಾಪನೆ

ಪ್ರತಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ, ಟ್ರಾಮಾ ಕೇರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬುದು ರಾಜ್ಯ ಸರ್ಕಾರದ ಗುರಿ. ಇದಕ್ಕಾಗಿ ಪಿಪಿಪಿ ಮಾದರಿಯಲ್ಲಿ 6 ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದು, 3900 ಮೆರಿಟ್ ಸೀಟುಗಳು ಲಭ್ಯವಿವೆ. ಪ್ರತಿ ಜಿಲ್ಲೆಯಲ್ಲೂ ರಾಜ್ಯ ಕೋಟಾ ಅಡಿಯಲ್ಲೇ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ ಪ್ರಯತ್ನಿಸುತ್ತಿದ್ದು, ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೀಟುಗಳು ಸಿಗಲಿವೆ ಎಂದು ಸಚಿವರು ತಿಳಿಸಿದರು.