ಇತ್ತೀಚಿನ ದಿನಗಳಲ್ಲಿ ವೈರಾಗ್ಯ, ಅಧ್ಯಾತ್ಮದ ಮಾತುಗಳನ್ನು ಆಡುತ್ತಾ ಬಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಮತ್ತೆ ‘ದೀಪದ ಹಿಂದೆ ಎಣ್ಣೆ ಇದೆ. ಕಷ್ಟ ಏನು ಎಂದು ಬತ್ತಿಗೆ ಗೊತ್ತಿದೆ. ಬತ್ತಿಯ ಸಂಕಷ್ಟ ಯಾರಿಗೂ ಕಾಣುವುದಿಲ್ಲ’ ಎಂದು ವೇದಾಂತಿಯಂತೆ ಮಾತನಾಡಿದ್ದಾರೆ.
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ವೈರಾಗ್ಯ, ಅಧ್ಯಾತ್ಮದ ಮಾತುಗಳನ್ನು ಆಡುತ್ತಾ ಬಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಮತ್ತೆ ‘ದೀಪದ ಹಿಂದೆ ಎಣ್ಣೆ ಇದೆ. ಕಷ್ಟ ಏನು ಎಂದು ಬತ್ತಿಗೆ ಗೊತ್ತಿದೆ. ಬತ್ತಿಯ ಸಂಕಷ್ಟ ಯಾರಿಗೂ ಕಾಣುವುದಿಲ್ಲ’ ಎಂದು ವೇದಾಂತಿಯಂತೆ ಮಾತನಾಡಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹೆಬ್ಬಾಳದ ಜಿಕೆವಿಕೆಯಲ್ಲಿ ಶನಿವಾರ ಆಯೋಜಿಸಿದ್ದ ರೈತರ ದಿನಾಚರಣೆ ಮತ್ತು ರೈತ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಸ್ತುವೊಂದರ ಮೂಲ ಎಲ್ಲಿಯೋ ಇರುತ್ತದೆ. ಆದರೆ ಅದಕ್ಕೆ ಅಲಂಕಾರ ನೀಡಿದ ನಂತರ ಹೊಸ ರೂಪ ಪಡೆಯುತ್ತದೆ. ಬಳಿಕ ಮೂಲವನ್ನು ಮರೆಯಲಾಗುತ್ತದೆ. ಬದುಕಿನಲ್ಲಿ ಶ್ರಮ ಬಹಳ ದೊಡ್ಡದು. ದೀಪದ ಬೆಳಕು ಮಾತ್ರ ಕಾಣಿಸುತ್ತದೆಯೇ ಹೊರತು ಬತ್ತಿಯ ಸಂಕಷ್ಟ ಯಾರಿಗೂ ಕಾಣಿಸುವುದಿಲ್ಲ’ ಎಂದು ಹೇಳಿದರು.
‘ಬಿದಿರಿನ ಬೊಂಬಿನಲ್ಲಿ ಕೊಳಲು ತಯಾರು ಮಾಡುತ್ತಾರೆ. ಆ ಕೊಳಲಿನಿಂದ ಎಂತಹ ನಾದ ಬರುತ್ತದೆ ಎಂದು ಆ ಬೊಂಬಿಗೇ ತಿಳಿದಿರುವುದಿಲ್ಲ. ಕೃಷ್ಣನ ಕೊಳಲಿನ ನಾದ ಪ್ರಪಂಚದಲ್ಲಿಯೇ ಹೆಸರುವಾಸಿಯಾಗಿದೆ. ಕುರಿ, ಕೋಣ, ಮೇಕೆಯ ಚರ್ಮದಲ್ಲಿ ತಮಟೆ ಮಾಡುತ್ತೇವೆ. ನಾನು ಇಲ್ಲಿಗೆ ಆಗಮಿಸಿದಾಗ ಚೆನ್ನಾಗಿ ಡೋಲು ಬಾರಿಸಿದರು. ಆದರೆ ಈಗ ಕೆಲವರು ಪ್ಲಾಸ್ಟಿಕ್‌ನಲ್ಲಿ ಡೋಲು ತಯಾರಿಸುತ್ತಾರೆ. ಆದರೆ ಡೋಲಿನ ಮೂಲ ಎಲ್ಲಿಯದು? ಕುರಿ, ಕೋಣ, ಮೇಕೆಯ ಚರ್ಮದಿಂದ ಬಂದಿದ್ದು ತಾನೇ’ ಎಂದು ಅವರು ಪ್ರಶ್ನಿಸಿದರು.
ಸಗಣಿ ಮತ್ತು ಹುಲ್ಲಿನ ಎರಡು ಗರಿಕೆ ಸೇರಿದರೆ ಪಿಳ್ಳಾರತಿ ಆಗುತ್ತದೆ
‘ಹಾಗೆಯೇ ಸಗಣಿ ಎಂದು ನಾವು ಬಿಸಾಡುತ್ತೇವೆ. ಆದರೆ ಸಗಣಿ ಮತ್ತು ಹುಲ್ಲಿನ ಎರಡು ಗರಿಕೆ ಸೇರಿದರೆ ಪಿಳ್ಳಾರತಿ ಆಗುತ್ತದೆ. ಅದನ್ನು ಗಣೇಶ ಎಂದು ನಾವು ಮಾಡುತ್ತೇವೆ. ಯಾವುದೂ ವೇಸ್ಟ್ ಅಲ್ಲ. ಇದಕ್ಕೆ ನಮ್ಮದೇ ಆದ ಧರ್ಮ, ಇತಿಹಾಸವಿದೆ’ ಎಂದರು.
ಅಧಿಕಾರ ಹಸ್ತಾಂತರದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವಾಗಲೇ ಶಿವಕುಮಾರ್ ಅವರು ಈ ರೀತಿ ಒಗಟಾಗಿ ಮಾತನಾಡಿರುವುದು ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಡಿಕೆಶಿ ಹೇಳಿದ್ದೇನು?
- ಇತ್ತೀಚೆಗೆ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡುವೆ ಶೀತಲ ಸಮರ
- ಇದರ ನಡುವೆ ಇತ್ತೀಚಿನ ದಿನಗಳಲ್ಲಿ ವೈರಾಗ್ಯ, ಅಧ್ಯಾತ್ಮದ ಮಾತುಗಳ ಆಡುತ್ತಿರುವ ಡಿಕೆಶಿ
- ನಿನ್ನೆ ಬೆಂಗಳೂರು ಕೃಷಿ ವಿವಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಕೂಡ ಇಂಥದ್ದೇ ಮಾತು
- ತಮ್ಮ ಕಷ್ಟದ ಕೆಲಸಗಳನ್ನು ಗುರುತಿಸುತ್ತಿಲ್ಲ ಎಂಬ ಅರ್ಥ ಬರುವ ಮಾತು ಆಡಿದ ಡಿಸಿಎಂ
- ಗಣೇಶ, ದೀಪ, ಬತ್ತಿ, ಡೋಲು, ತಮಟೆ ಮುಂತಾದ ಉದಾಹರಣೆಗಳನ್ನು ನೀಡಿ ಭಾಷಣ
- ಡಿಕೆಶಿ ಈ ರೀತಿ ಒಗಟಾಗಿ ಮಾತನಾಡಿರುವುದು ಹಲವು ರಾಜಕೀಯ ವ್ಯಾಖ್ಯಾನಗಳಿಗೆ ಕಾರಣ


