ಉತ್ತರಕನ್ನಡ: ಚುನಾವಣೆ ಪೂರ್ವದಲ್ಲೇ ಬಲಪ್ರದರ್ಶಿಸಿದ ಹೆಬ್ಬಾರ್..!
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್, ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಭಟ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ್, ಕಾರವಾರದಲ್ಲಿ ಜೆಡಿಎಸ್ ಅಭ್ಯರ್ಥಿ ಚೈತ್ರಾ ಕೊಠಾರ್‌ಕರ್, ಶಿರಸಿ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ, ಭಟ್ಕಳ ಜೆಡಿಎಸ್ ಅಭ್ಯರ್ಥಿ ನಾಗೇಂದ್ರ ನಾಯ್ಕ್ ಇಂದು ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ಏ.19): ಉತ್ತರಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಾಕಷ್ಟು ಅಭ್ಯರ್ಥಿಗಳು ಭರ್ಜರಿ ಶಕ್ತಿ ಪ್ರದರ್ಶನ ನಡೆಸಿ ನಾಮಪತ್ರ ಸಲ್ಲಿಸಿದ್ದರು. ಎರಡನೇ ದಿನವಾದ ಮಂಗಳವಾರ ಕೂಡಾ ರಾಜಕೀಯ ಪಕ್ಷಗಳ ಹಿರಿಯ ಹಾಗೂ ಯುವ ಮುಖಂಡರು ತಾವೂ ಕೂಡಾ ಯಾರಿಗಿಂತಲೂ ಕಮ್ಮಿಯಿಲ್ಲ ಅಂತಾ ಸಾವಿರಾರು ಕಾರ್ಯಕರ್ತರ ದಂಡಿನೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಕಾಲಿಟ್ಟು ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಸರಕಾರ ತರಲು ಕಾರಣವಾದವರಲ್ಲಿ ಒಬ್ಬರಾದ ಶಿವರಾಮ ಹೆಬ್ಬಾರ್ ಕೂಡಾ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದು, ಈ ಬಾರಿಯೂ ವಿಜಯ ನನ್ನದೇ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ...
ಹೌದು, ಉತ್ತರಕನ್ನಡ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆಯ ಎರಡನೇ ದಿನ ಜಿಲ್ಲೆಯ ಘಟಾನುಘಟಿ ಅಭ್ಯರ್ಥಿಗಳು ಸಕತ್ತ್ ಬಲಪ್ರದರ್ಶನ ನಡೆಸಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್, ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಭಟ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ್, ಕಾರವಾರದಲ್ಲಿ ಜೆಡಿಎಸ್ ಅಭ್ಯರ್ಥಿ ಚೈತ್ರಾ ಕೊಠಾರ್‌ಕರ್, ಶಿರಸಿ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ, ಭಟ್ಕಳ ಜೆಡಿಎಸ್ ಅಭ್ಯರ್ಥಿ ನಾಗೇಂದ್ರ ನಾಯ್ಕ್ ಇಂದು ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಕಾರವಾರದಲ್ಲಿ ಚೈತ್ರಾ ಒಂದೆರಡು ಸಾವಿರ ಕಾರ್ಯಕರ್ತರನ್ನು ಸೇರಿಸಿದ್ರೆ, ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಮೂರರಿಂದ ನಾಲ್ಕು ಸಾವಿರ ಕಾರ್ಯಕರ್ತರ ಜತೆ ತೆರಳಿ ಉಮೇದುವಾರಿಕೆ ಸಲ್ಲಿಸಿದ್ದರು. ಆದ್ರೆ, ಇವರೆಲ್ಲರ ನಡುವೆ ಜಾತ್ರೆಯಂತೆ ಸುಮಾರು 7-8 ಸಾವಿರ ಕಾರ್ಯಕರ್ತರನ್ನು ಒಟ್ಟುಗೂಡಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದು ಮಾತ್ರ ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ್ ಹಾಗೂ ಭಟ್ಕಳದಲ್ಲಿ ಸುನೀಲ್ ನಾಯ್ಕ್. 2019ರಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಶಿವರಾಮ ಹೆಬ್ಬಾರ್, ಬೈ ಎಲೆಕ್ಷನ್ ಮೂಲಕ ಮತ್ತೆ ಗೆದ್ದು ಬಂದಿದ್ದರು. ಇದೀಗ ಬಿಜೆಪಿಯಿಂದ ಎರಡನೇ ಬಾರಿ ಹೆಬ್ಬಾರ್ ಚುನಾವಣೆ ಎದುರಿಸುತ್ತಿದ್ದಾರೆ.
ದೇವಿ ನುಡೀತಂತೆ ಭವಿಷ್ಯ, ಭಟ್ಕಳದಲ್ಲಿ ಸುನೀಲ್ ನಾಯ್ಕ್ ಗೆದ್ದೇ ಗೆಲ್ತಾರಂತೆ!
2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಿವರಾಮ ಹೆಬ್ಬಾರ್, ಬಿಜೆಪಿಯ ಅಭ್ಯರ್ಥಿಯಾಗಿದ್ದ ವಿ.ಎಸ್.ಪಾಟೀಲ್ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ, ಆಪರೇಷನ್ ಕಮಲದ ಮೂಲಕ ಬಿಜೆಪಿಯನ್ನು ಹಿಡಿದ ಹೆಬ್ಬಾರ್, ಯಲ್ಲಾಪುರ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ವಿರುದ್ಧ ಸ್ಪರ್ಧಿಸಿ ಗೆಲುವು ಕಂಡಿದ್ದರು. ಹೆಬ್ಬಾರ್ ಬಿಜೆಪಿಗೆ ಬಂದ ಮೇಲೆ ಬಿಜೆಪಿಯಲ್ಲಿದ್ದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಜತೆ ಕೊಂಚ ಅಸಾಮಾಧಾನಕ್ಕೆ ಕಾರಣವಾಗಿದ್ದು, ಮೂಲ ಬಿಜೆಪಿಗರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಬಿಜೆಪಿಯಲ್ಲಿದ್ದರೆ ತನ್ನ ರಾಜಕೀಯ ಜೀವನ ಮೂಲೆ ಗುಂಪಾಗುತ್ತದೆ ಎಂದು ಅರಿತ ವಿ.ಎಸ್.ಪಾಟೀಲ್, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಇದೀಗ ಶಿವರಾಮ ಹೆಬ್ಬಾರ್ ಅವರಿಗೆ ವಿ.ಎಸ್.ಪಾಟೀಲ್ ಎದುರಾಳಿಯಾಗಿದ್ದು, ಮೇ 10ರಂದು ಇಬ್ಬರು ಸೆಣೆಸಾಡಲಿದ್ದಾರೆ. ಈ ಬಾರಿಯ ಚುನಾವಣೆ ಸಲಭದ ಗೆಲುವಲ್ಲ ಎಂದು ಹೆಬ್ಬಾರ್ ತಿಳಿದಿದ್ರೂ, ಕಳೆದ ಚುನಾವಣೆಯಂತೆ ಈ ಬಾರಿಯೂ ಹೆಚ್ಚು ಅಂತರದಲ್ಲಿ ಸುಲಭದ ಜಯ ಪಡೆಯುತ್ತೇನೆ ಎಂದು ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಘಟಾನುಘಟಿಗಳು ಎರಡನೇ ದಿನ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದು, ಗೆಲುವಿನ ಹಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಮುಂಬರುವ ಚುನಾವಣಾ ದಿನ ಮತದಾರ ಮಾತ್ರ ಯಾರ ಪರವಾಗಿ ಮತಗಳನ್ನು ಹಾಕ್ತಾನೆ ಅನ್ನೋದು ಕಾದು ನೋಡಬೇಕಷ್ಟೇ.
ಕಾಗೇರಿಯ ಸ್ಥಿರ, ಚರ ಆಸ್ತಿ ಮೌಲ್ಯ 10.07ಕೋಟಿ ರೂ.
ವಿಧಾನಸಭಾಧ್ಯಕ್ಷ, ಶಿರಸಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 10.07 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ. ಕಾಗೇರಿ 5 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಹಾಗೂ 5.07 ಕೋಟಿ ರೂ. ಮೌಲ್ಯದ ಚರ ಆಸ್ತಿ ಘೋಷಣೆ ಮಾಡಿದ್ದಾರೆ. ಇವರಲ್ಲಿ 1,250 ಗ್ರಾಂ ಚಿನ್ನಾಭರಣ ಇದ್ದು, ಇದರ ಮೌಲ್ಯ 70 ಲಕ್ಷ ರೂ.ಗಳಾಗಿವೆ. ಕಾಗೇರಿ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿರುವುದರಿಂದ ಕುಟುಂಬದ ಎಲ್ಲ ಸದಸ್ಯರ ಹೆಸರಿನಲ್ಲಿ ಇರುವ ಠೇವಣಿ, ಆಸ್ತಿಯನ್ನೂ ಘೋಷಣೆ ಮಾಡಿದ್ದಾರೆ. ಕಾಗೇರಿ ಅವರ ಸ್ವಂತ ಹೆಸರಿನಲ್ಲಿ ಇರುವ ಆಸ್ತಿಯ ಒಟ್ಟು ಮೌಲ್ಯ 10.07 ಕೋಟಿ ರೂ. ಆಗಿದೆ. ಕಾಗೇರಿ ಬಿಕಾಂ ಓದಿದ್ದು, ಸರ್ಕಾರಕ್ಕೆ ಯಾವುದೇ ಬಾಕಿ ಉಳಿಸಿಕೊಂಡಿಲ್ಲ.
ವಿ.ಎಸ್. ಪಾಟೀಲ್ ಕುಟುಂಬದ ಒಟ್ಟು ಆಸ್ತಿ 3.62 ಕೋಟಿ
ಪಾಟೀಲ್ ಕುಟುಂಬದ ಒಟ್ಟು ಆಸ್ತಿ 3.62 ಕೋಟಿ ರೂ. ಯಾವುದೇ ಅಪರಾಧ ಹಿನ್ನೆಲೆ ಹೊಂದದ ಪಾಟೀಲ್ ಅವರ ಕೃಷಿ ಆದಾಯ 31,20,818. ರೂ., ಬ್ಯಾಂಕ್ ಖಾತೆಗಳಲ್ಲಿ ಠೇವಣಿ 4,08,293 ರೂ., ಕೈ ಶಿಲ್ಕು 60,000 ರೂ. 8 ಮತ್ತು 10 ಲಕ್ಷ ರೂ. ಮೌಲ್ಯದ ಎರಡು ಕಾರು, 6 ಲಕ್ಷ ರೂ. ಮೌಲ್ಯದ ಒಂದು ಟ್ರಾಕ್ಟರ್ ಹೊಂದಿದ್ದಾರೆ. ಇನ್ನು ಪಾಟೀಲ್ ಕುಟುಂಬ 7 ಲಕ್ಷ ರೂ. ಮೌಲ್ಯದ 145 ಗ್ರಾಂ ಚಿನ್ನ, 1.11 ಕೋಟಿ ರೂ. ಮೌಲ್ಯದ 12.66 ಎಕರೆ ಕೃಷಿ ಭೂಮಿ ಹೊಂದಿದ್ದು, ಒಟ್ಟು 18.01 ಲಕ್ಷ ರೂ. ಸಾಲ ಹೊಂದಿದ್ದಾರೆ. ಇವರ ಪತ್ನಿ ಶಶಿಕಲಾ ಹೆಸರಿನಲ್ಲಿ 4,41,594 ರೂ. ಠೇವಣಿಯಿದ್ದು,
ಪತ್ನಿ ಬಳಿ 23 ಲಕ್ಷ ರೂ. ಮೌಲ್ಯದ ಚಿನ್ನ, 1.35 ಲಕ್ಷ ರೂ. ಮೌಲ್ಯದ ಬೆಳ್ಳಿ, 5 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್ ಹಾಗೂ 27.39 ಲಕ್ಷ ರೂ. ಮೌಲ್ಯದ 3.13 ಎಕರೆ ಕೃಷಿ ಭೂಮಿ ಹೊಂದಿದ್ದು, 11,87 ಲಕ್ಷ ರೂ. ಸಾಲ ಹೊಂದಿದ್ದಾರೆ. ಅಲ್ಲದೇ, ಎಸ್‌ಬಿಐ ಹಾಗೂ ಎಲ್‌ಐಸಿ ವಿಮೆಯಲ್ಲಿ 1,63,399ರೂ. ಹೂಡಿಕೆ ಮಾಡಿದ್ದಾರೆ.
ಚೈತ್ರಾ ಬಳಿಯಿದೆ 1.05 ಕೋಟಿ ರೂ. ಮೌಲ್ಯದ ಆಸ್ತಿ
ಕಾರವಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೈತ್ರಾ ಕೊಠಾರಕರ್ ಒಟ್ಟು 1.05 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಇವರ ಸ್ಥಿರಾಸ್ತಿ - 50 ಲಕ್ಷ ರೂ. ಚರಾಸ್ತಿ- 9,75,591ರೂ., 7.60 ಲಕ್ಷ ರೂ. ಮೌಲ್ಯದ ಚಿನ್ನ, 30 ಲಕ್ಷ ರೂ. ಮೌಲ್ಯದ ವಾಹನ ಹೊಂದಿದ್ದಾರೆ. ಇವರ ಪತಿ 45.94 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿದ್ದು, 39.32 ಲಕ್ಷ ರೂ. ಸಾಲ ಹೊಂದಿದ್ದಾರೆ. ಮಕ್ಕಳ ಆಸ್ತಿ - 96,601 ಸಾವಿರ ರೂ. ಆಗಿದ್ದು, .99 ಲಕ್ಷ ರೂ. ಮೌಲ್ಯದ ವಿಮೆ, 60 ಲಕ್ಷ ರೂ.ಮೌಲ್ಯದ ಭೂಮಿ ಹೊಂದಿದ್ದಾರೆ.
ಭೀಮಣ್ಣನ ಬಳಿ 24 ಕೋಟಿ ರೂ. ಮೌಲ್ಯದ ಆಸ್ತಿ
ಶಿರಸಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಹಾಗೂ ಕುಟುಂಬ ಸ್ಥಿರಾಸ್ತಿ ಮತ್ತು ಚರಾಸ್ತಿ ಸೇರಿ ಒಟ್ಟು 24 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದೆ. ಕೃಷಿಕರು, ಹೊಟೆಲ್ ಉದ್ಯಮಿ ಆಗಿರುವ ಭೀಮಣ್ಣ ನಾಯ್ಕ ಅವರ ಹೆಸರಿನಲ್ಲಿ 15 ಕೋಟಿ ರೂ. ಮೌಲ್ಯದ ಆಸ್ತಿಯಿದ್ದರೆ, ಮಗ ಅಶ್ವಿನ್ ಹೆಸರಿನಲ್ಲಿ 6 ಕೋಟಿ ರೂ. ಮೌಲ್ಯದ ಆಸ್ತಿ, ಪತ್ನಿ ಗೀತಾ ಹೆಸರಿನಲ್ಲಿ 3 ಕೋಟಿ ರೂ. ಮೌಲ್ಯದ ಆಸ್ತಿಯಿದೆ. ಭೀಮಣ್ಣ ಅವರು 57ಲಕ್ಷ ರೂ., ಮಗ ಅಶ್ವಿನ್ 28 ಲಕ್ಷ ರೂ., ಪತ್ನಿ ಗೀತಾ 38 ಲಕ್ಷ ರೂ. ಆದಾಯ ತೆರಿಗೆ ತುಂಬಿದ್ದಾರೆ. ಯಾವುದೇ ಅಪರಾಧ ಹಿನ್ನೆಲೆ ಹೊಂದಿರದ ಭೀಮಣ್ಣ 33 ಲಕ್ಷ ರೂ. ಮತ್ತು 9 ಲಕ್ಷ ರೂ. ಬೆಲೆಯ ಕಾರು ಹೊಂದಿದ್ದಾರೆ. ಪತಿ ಪತ್ನಿ ತಲಾ ಐದು ಕಡೆಗಳಲ್ಲಿ ಕೃಷಿ ಭೂಮಿ ಹೊಂದಿದ್ದರೆ, ಮಗ ನಾಲ್ಕು ಕಡೆಗಳಲ್ಲಿ ಭೂಮಿ ಹೊಂದಿದ್ದಾರೆ. ಅಲ್ಲದೇ, ನಗರದ ಪ್ರಮುಖ ಬ್ಯಾಂಕ್ ಗಳಲ್ಲಿ ಸಾಲವನ್ನೂ ಹೊಂದಿದ್ದಾರೆ.
ಜೆಡಿಎಸ್‌ನ ಉಪೇಂದ್ರ ಪೈ ಬಳಿ 13.95 ಕೋಟಿ ರೂ. ಮೌಲ್ಯದ ಆಸ್ತಿ
ಶಿರಸಿಯ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ಕುಟುಂಬ ಒಟ್ಟು 13.95 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದರಲ್ಲಿ 52.55 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದು, ಮಗ ಅಭಿಷೇಕ್ 19 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪೈ ಸ್ವಯಾರ್ಜಿತ ಸ್ಥಿರಾಸ್ತಿಯಾಗಿ 1.58 ಕೋಟಿ ರೂ. ಖರೀದಿ ನಂತರ ಅಭಿವೃದ್ಧಿ 78 ಲಕ್ಷ ರೂ., ಸ್ವಯಾರ್ಜಿತ ಸ್ವತ್ತಿನ ಒಟ್ಟು ಮೌಲ್ಯವಾಗಿ 10 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಮಗ ಅಭಿಷೇಕ 60 ಲಕ್ಷ ರೂ. ಮೌಲ್ಯದ ಪಿರ್ತಾರ್ಜಿತ ಆಸ್ತಿ ಹೊಂದಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ ಕುಟುಂಬದ ಆಸ್ತಿ ಮೌಲ್ಯ 12ಕೋಟಿ ರೂ.-10 ಕೋಟಿ ರೂ. ಸಾಲ
ಭಟ್ಕಳ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಅವರ ಕುಟುಂಬದ ಬಳಿ ಒಟ್ಟು 12.74 ಕೋಟಿ ರೂ. ಆಸ್ತಿಯಿದೆ ಎಂದು ಅವರು ಅಫಿಡವಿಟ್ ಸಲ್ಲಿಸಿದ್ದಾರೆ. ಅವರ ಹೆಸರಿನಲ್ಲಿ 2 ಕಾರು, ಹಿಟಾಚಿ ಎಲ್ಲ ಸೇರಿ 2.10 ಕೋಟಿ ರೂ. ಚರ ಆಸ್ತಿಗಳಿವೆ. 7.97 ಕೋಟಿ ರೂ. ಸ್ಥಿರ ಆಸ್ತಿಯಿದೆ. ಪತ್ನಿ ಕ್ಷಮಾ ಹೆಸರಿನಲ್ಲಿ 1.09 ಕೋಟಿ ರೂ. ಚರ, 1.39 ಕೋಟಿ ರೂ. ಸ್ಥಿರ ಆಸ್ತಿಗಳಿವೆ ಎಂದು ವಿವರ ನೀಡಿದ್ದಾರೆ. ಅವರ ಹೆಸರಿನಲ್ಲಿ 5.05 ಕೋಟಿ ರೂ. ಹಾಗೂ ಪತ್ನಿಯ ಹೆಸರಿನಲ್ಲಿ 5 ಕೋಟಿ ರೂ. ಸೇರಿ ಒಟ್ಟು 10.05 ಕೋಟಿ ರೂ. ಸಾಲವಿದೆ ಎಂದು ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. 2018 ರಲ್ಲಿ ಅವರು 8.83 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಂಡಿದ್ದರು. 7.07 ಕೋಟಿ ರೂ. ಸಾಲ ಇದೆ ಎಂದಿದ್ದರು. ಅವರ ಆಸ್ತಿಯ ಮೌಲ್ಯದ ಜತೆಗೆ ಸಾಲವೂ ಹೆಚ್ಚಿದೆ.
ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ, ಸುಳ್ಳು ದಾಖಲೆ ಹಾಜರುಪಡಿಸಿದ ಬಗ್ಗೆ ಕುಂದಾಪುರ ಕಾಪುದ ಅಶ್ವಿನಿ ಎಂಬ ಮಹಿಳೆ ಉಡುಪಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯದ ಸೂಚನೆಯಂತೆ ಉಡುಪಿ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಜೆಎಂಎಫ್‌ಸಿ ನ್ಯಾಯಾಲಯದ ಸೂಚನೆಗೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ ಎಂದು ಸುನೀಲ ನಾಯ್ಕ ವಿವರ ನೀಡಿದ್ದಾರೆ. 2003 ರ ಗಲಾಟೆಯ ಪ್ರಕರಣವೊಂದರಲ್ಲಿ ಸುನೀಲ ನಾಯ್ಕ ಅವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಭಟ್ಕಳ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿತ್ತು. ಮೇಲ್ಮನವಿ ವಿಚಾರಣೆ ನಂತರ ಕಾರವಾರ ಜಿಲ್ಲಾ ನ್ಯಾಯಾಲಯ ಪ್ರಕರಣವನ್ನು ಬದಿಗಿರಿಸಿದೆ ಎಂದು ಸುನೀಲ ನಾಯ್ಕ ಆಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಜೆಡಿಎಸ್ ಶಿರಸಿ ಅಭ್ಯರ್ಥಿ ಉಪೇಂದ್ರ ಪೈ 10.97 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಅವರ ಹೆಸರಿನಲ್ಲಿ 53.55 ಲಕ್ಷ ರೂ. ಚರ ಆಸ್ತಿಗಳು, ಪುತ್ರ ಅಭಿಷೇಕ ಹೆಸರಿನಲ್ಲಿ 19.32 ಲಕ್ಷ ರೂ. ಚರ ಆಸ್ತಿಗಳಿವೆ. ಉಪೇಂದ್ರ ಅವರ ಹೆಸರಿನಲ್ಲಿ ಯಲ್ಲಾಪುರ ತಾಲೂಕು, ಬೆಂಗಳೂರು ಸೇರಿ ವಿವಿದೆಡೆ 10.25 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳಿವೆ. 78.18 ಲಕ್ಷ ರೂ. ಸಾಲವಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.