ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್‌ ನಾಯ್ಕ್‌ ಮಂಗಳವಾರ ವಿಧಾನಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಅವರ ಭಿಮಾನಿಗಳು ದೇವಿಯ ಬಳಿ ಗೆಲುವಿನ ಭವಿಷ್ಯ ಕೇಳಿದ ಘಟನೆ ನಡೆದಿದೆ.

ಭಟ್ಕಳ (ಏ.18): ಚುನಾವಣೆಗಳೆಂದರೆ ಹಾಗೆ ಇಲ್ಲಿ ಎಲ್ಲವೂ ಲೆಕ್ಕಾಚಾರವೇ. ಸೋಲು-ಗೆಲುವು ಎಲ್ಲವನ್ನೂ ಕೊನೆ ನಿರ್ಧರಿಸೋದ ಮತದಾರರ. ಆದರೆ, ಭಟ್ಕಳ ಶಾಸಕ ಸುನೀಲ್‌ ನಾಯ್ಕ್‌ ಮತದಾರರ ಬಳಿ ಹೋಗುವ ಮುನ್ನವೇ ದೇವಿಯ ಬಳಿ ಹೋಗಿ ಗೆಲುವಿನ ಭವಿಷ್ಯ ಕೇಳಿದ್ದಾರೆ. ಹೌದು.. ಈ ವಿಚಾರ ನಡೆದಿದ್ದು ಭಟ್ಕಳ ತಾಲೂಕಿನ ಬಳ್ಕೂರಿನ ಶ್ರೀ ಕ್ಷೇತ್ರ ನೀಲಗೋಡು ಯಕ್ಷಿ ಚೌಡೇಶ್ವರಿ ದೇವಸ್ಥಾನ ಗುಡಿಯಲ್ಲಿ. ಮಂಗಳವಾರ ಅಪಾರ ಜನಸ್ತೋಮದ ಬೆಂಬಲದೊಂದಿಗೆ ಸುನೀಲ್‌ ನಾಯ್ಕ್, ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದರ ಬೆನ್ನಲ್ಲಿಯೇ ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನೂ ಆರಂಭಿಸಿದ ಸುನೀಲ್‌ ನಾಯ್ಕ್‌ಗೆ ದೇವರ ಬಲ ಎಷ್ಟಿದೆ ಎನ್ನುವುದನ್ನು ಅವರ ಅಭಿಮಾನಿಗಳು ಪರೀಕ್ಷೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಯಾದ ಬೆನ್ನಲ್ಲಿಯೇ ಸುನೀಲ್‌ ನಾಯ್ಕ್‌ ಅಭಿಮಾನಿ ಭಾಸ್ಕರ್‌ ನಾಯ್ಕ್‌ ಎನ್ನುವವರು ಯಕ್ಷಿ ಚೌಡೇಶ್ವರಿಯಲ್ಲಿ, ಚುನಾವಣೆಯಲ್ಲಿ ಸುನೀಲ್‌ ನಾಯ್ಕ್‌ ಗೆಲ್ತಾರೋ? ಇಲ್ವೋ? ಎಂದು ಪ್ರಸಾದ ಕೇಳಿದ್ದಾರೆ. ಇನ್ನು ದೇವಿ ತಲೆಯ ಮೇಲಿನ ಹೂವು ಬಿದ್ದಿದ್ದು, ಸುನೀಲ್‌ ನಾಯ್ಕ್‌ ಗೆಲ್ಲುತ್ತಾರೆ ಎನ್ನುವ ಭವಿಷ್ಯ ದೇವಿಯೇ ನುಡಿದಿದ್ದಾಳೆ ಎನ್ನುವ ಸಂಭ್ರಮ ಊರಿನೆಲ್ಲೆಡೆ ವ್ಯಕ್ತವಾಗಿದೆ.

ಚೌಡೇಶ್ವರಿ ದೇವಿ ಸುನೀಲ್‌ ನಾಯ್ಕ್‌ ಗೆಲುವಿನ ಭವಿಷ್ಯ ನುಡಿದಿದ್ದಾಳೆ ಅನ್ನೋ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಎಲ್ಲರ ವಾಟ್ಸ್‌ಆಪ್‌ಗಳನ್ನೂ ಶೇರ್‌ ಆಗುತ್ತಿದೆ. ಕರಾವಳಿ ಭಾಗದಲ್ಲಿ ಯಾವುದೇ ಉತ್ತಮ ಕಾರ್ಯ ಆರಂಭವಿಸುವ ಮುನ್ನ ದೇವರ ಪ್ರಸಾದ ಕೇಳುವುದು ವಾಡಿಕೆ. ಅದರಂತೆ ಸುನೀಲ್‌ ನಾಯ್ಕ್‌ ಅವರ ಅಭಿಮಾನಿಗಳು ದೇವರ ಪ್ರಸಾದ ಕೇಳಿದ್ದಾರೆ. ಮತದಾರರ ಬಳಿ ಹೋಗಿ ಭವಿಷ್ಯ ಕೇಳೋದಕ್ಕಿಂತ ಮುನ್ನ ದೇವರ ಬಳಿ ಹೋಗಿ ಸುನೀಲ್‌ ನಾಯ್ಕ್‌ ಭವಿಷ್ಯ ಕೇಳಿದ್ದು ಕ್ಷೇತ್ರದಲ್ಲಿನ ಜಿದ್ದಾಜಿದ್ದಿಯನ್ನು ತೋರಿಸುತ್ತದೆ.
ಭಟ್ಕಳದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಇದ್ದು, ಬಿಜೆಪಿಯಿಂದ ಸುನೀಲ್‌ ನಾಯ್ಕ್‌, ಕಾಂಗ್ರೆಸ್‌ನಿಂದ ಮಂಕಾಳ ವೈದ್ಯ ಹಾಗೂ ಜೆಡಿಎಸ್‌ನಿಂದ ಹಿರಿಯ ವಕೀಲ ನಾಗೇಂದ್ರ ನಾಯ್ಕ್‌ ಸ್ಪರ್ಧೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಯಾರು ಗೆಲ್ಲಲಿದ್ದಾರೆ ಅನ್ನೋದೇ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಸುನೀಲ್‌ ನಾಯ್ಕ್‌ ಹಾಗೂ ಮಂಕಾಳ ವೈದ್ಯ ನಡುವೆ ನೇರಾನೇರಾ ಹಣಾಹಣಿ ಏರ್ಪಟ್ಟಿತ್ತು. ಇದರಲ್ಲಿ ಸುನೀಲ್‌ ನಾಯ್ಕ್‌ 6 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು.

ಆದರೆ, ಈ ಬಾರಿ ಸುನೀಲ್‌ ನಾಯ್ಕ್‌ ಪಾಲಿಗೆ ಗೆಲುವು ಸುಲಭವಿಲ್ಲ. ಆದರೆ, ನಾಮಪತ್ರ ಸಲ್ಲಿಕೆಯ ವೇಳೆ ಸುನೀಲ್‌ ನಾಯ್ಕ್‌ ತಮ್ಮ ಬಲಪ್ರದರ್ಶನ ಮಾಡಿದ್ದಾರೆ. ಅಪಾರ ಅಭಿಮಾನಿಗಳು ನಾಮಪತ್ರ ಸಲ್ಲಿಕೆಯ ವೇಳೆ ಆಗಮಿಸಿದ್ದರು ಎನ್ನಲಾಗಿದೆ. ಇನ್ನು ಕಾಂಗ್ರೆಸ್‌ನ ಮಂಕಾಳ ವೈದ್ಯ ಕೂಡ ಸೋಮವಾರ ಅಭಿಮಾನಿಗಳ ಭರ್ಜರಿ ಜಯಘೋಷದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಭಟ್ಕಳದಲ್ಲಿ ಶುರುವಾಯ್ತು ತಳಮಳ, ಜೆಡಿಎಸ್‌ನಿಂದ ಹಿರಿಯ ವಕೀಲ ನಾಗೇಂದ್ರ ನಾಯ್ಕ್‌ ಅಭ್ಯರ್ಥಿ!

ತಮ್ಮ ನಾಮಪತ್ರದಲ್ಲಿ ಮಂಕಾಳ ವೈದ್ಯ ತಾವು 16 ಕೋಟಿ ರೂಪಾಯಿ ಸ್ಥಿರಾಸ್ಥಿ ಹೊಂದಿದ್ದು, 13 ಕೋಟಿ ರೂಪಾಯಿ ಸಾಲ ಹೊಂದಿರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ತಮ್ಮ ಬಳಿ ನಗದು ರೂಪದಲ್ಲಿ 10 ಲಕ್ಷ ರೂಪಾಯಿ ಮಾತ್ರವೇ ಇದೆ ಎಂದು ತಿಳಿಸಿದ್ದಾರೆ. ಇನ್ನು ಪತ್ನಿ ಪುಷ್ಪಲತಾ ಅವರ ಬಳಿ 2 ಲಕ್ಷ ರೂಪಾಯಿ ಹಾಗೂ ಮಗಳು ಬೀನಾ ಬಳಿ 1.5 ಲಕ್ಷ ರೂಪಾಯಿ ನಗದು ಹೊಂದಿರುವುದಾಗಿ ತಮ್ಮ ಅಫಡವಿಟ್‌ನಲ್ಲಿ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ್ದ ಮಂಕಾಳ ವೈದ್ಯ ಕಳೆದ ಬಾರಿ ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ನನ್ನನ್ನು ಸೋಲಿಸಲಾಯಿತು. ಈ ಬಾರಿ ಹಾಗಾಗಲು ಬಿಡೋದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯಿಂದ ಟಿಕೆಟ್ ದೊರೆತ ಸಂತೋಷದ ಹೊತ್ತಲ್ಲೇ ಭಟ್ಕಳ ಶಾಸಕ ಸುನೀಲ್ ನಾಯ್ಕ್‌ಗೆ ಪಿತೃ ವಿಯೋಗ!

ಕಳೆದ ಬಾರಿ ಪರೇಶ್‌ ಮೆಸ್ತ ಹೆಸರನ್ನು ಇಟ್ಟುಕೊಂಡು, ಆ ಕೊಲೆಯನ್ನು ನಾನೇ ಮಾಡಿದೆ ಎನ್ನುವ ಅರ್ಥದಲ್ಲಿ ಬಿಂಬಿಸಲಾಯಿತು. ಭಟ್ಕಳದಲ್ಲಿ ಮಂಕಾಳ ವೈದ್ಯ ಮುಸ್ಲಿಮರಿಗಾಗಿ ಕಸಾಯಿ ಖಾನೆ ನಿರ್ಮಿಸಿದ್ದಾನೆ ಎನ್ನುವ ಸುಳ್ಳನ್ನು ಹಬ್ಬಿಸಲಾಗಿತ್ತು. ಈ ಬಾರಿಯೂ ಇದೇ ರೀತಿ ಸುಳ್ಳು ಹೇಳುತ್ತಾ ಹೋದರೆ ಜನರು ನಂಬೋದಿಲ್ಲ ಎಂದು ಹೇಳಿದ್ದಾರೆ.