ಬೆಂಗಳೂರು, (ಸೆ. 25): ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ನಿನ್ನೆ (ಗುರುವಾರ) ಅವಿಶ್ವಾಸ ನಿರ್ಣಯ ಮಂಡಿಸಿದೆ. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, 6 ತಿಂಗಳಿಗೊಮ್ಮೆ ಕಾಂಗ್ರೆಸ್ ನವರು ಹೀಗೇ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತಿರಲಿ.  ಹೀಗೆ ಮಾಡುವುದರಿಂದ ನನಗೆ 6 ತಿಂಗಳ ಕಾಲ ವಿಶ್ವಾಸ ಬರುತ್ತದೆ ಎಂದು ತಿರುಗೇಟು ನೀಡಿದರು.

‘ಸಿಎಂ ಬದಲಾವಣೆ’ ಎಲ್ಲಿಗೆ ಬಂತು? ಇನ್ನೂ 15 ದಿನ ಶಾ ಸಿಗೋದಿಲ್ಲ..!

ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಅಲ್ಲದೇ ಕೆಲ ಅವರ ಶಾಸಕರು ಸಹ ಸಿಟ್ಟಾಗಿದ್ದಾರೆ ಎಂದುಆರೋಪಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಗುರುವಾರ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. 

 ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆಗೆ ಬರಬಹುದೇನೋ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅನುಮಾನದ ಧ್ವನಿಯಲ್ಲಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ ಸದನದ ಕಾರ್ಯಸೂಚಿಯಲ್ಲಿ ಆ ಬಗ್ಗೆ ನಮೂದಾಗಿಲ್ಲ. ಯಾವಾಗ ಚರ್ಚಯೆಂದು ಹೇಳಿಲ್ಲ. ಸ್ಪೀಕರ್ ಯಾವಾಗ ಕರೆದರೂ ಚರ್ಚೆ ಮಾಡಲು ಸಿದ್ಧ. ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಕಂಡು ಜವಾಬ್ದಾರಿ ವಿರೋಧ ಪಕ್ಷವಾಗಿದ್ದು ಸುಮ್ಮನೆ ಇದ್ದರೆ ಜನ ಏನನ್ನುತ್ತಾರೆ? ಎಂದು ಮಾರ್ಮಿಕವಾಗಿ ನುಡಿದರು.

ಒಟ್ಟಿನಲ್ಲಿ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯ ಭಾರೀ ಚರ್ಚೆಗೆ ಗ್ರಾಸವಾಗಿದೆ.