ಬೆಂಗಳೂರು (ಸೆ. 25): ಯಡಿಯೂರಪ್ಪ ಬದಲಾವಣೆ ಕೆಲ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ಕೆಲ ಬಿಜೆಪಿ ಶಾಸಕರು ಕೂಡ ಖಾಸಗಿಯಾಗಿ ಮಾತನಾಡುತ್ತಾರೆ. ಆದರೆ ಈ ವಿಷಯ ದಿಲ್ಲಿ ನಾಯಕರ ಮಧ್ಯೆ ಮಾತ್ರ ಇನ್ನೂ ಚರ್ಚೆಗೆ ಬಂದೇ ಇಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾಡಬೇಕು ಎಂದರೆ ಒಂದೋ ಮೋದಿ-ಶಾ ಖುದ್ದಾಗಿ ನಿರ್ಣಯ ತೆಗೆದುಕೊಳ್ಳಬೇಕು ಇಲ್ಲವೇ ಸ್ಥಳೀಯ ಆರ್‌ಎಸ್‌ಎಸ್‌ ಪಟ್ಟು ಹಿಡಿಯಬೇಕು.

ಯಡಿಯೂರಪ್ಪನವರ ವಿಷಯದಲ್ಲಿ ಇವೆರಡೂ ಆಗಿಲ್ಲ. ಕೆಲ ಬಿಜೆಪಿ ಶಾಸಕರು ದಿಲ್ಲಿಗೆ ಬಂದು ಇಂಥ ಸುದ್ದಿ ಗಳಿಗೆ ಇಂಬು ಕೊಡುತ್ತಾರಾದರೂ ದಿಲ್ಲಿ ನಾಯಕರು ಸದ್ಯಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಯಡಿಯೂರಪ್ಪ ಬೇಡ ಎಂದು ಓಡಾಡುವ ಕೆಲ ಶಾಸಕರಿಗೆ ಇಲ್ಲಿಯವರೆಗೆ ಶಾ ಆಗಲಿ ಜೆ.ಪಿ. ನಡ್ಡಾ ಆಗಲಿ ಭೇಟಿಗೆ ಸಮಯ ಕೊಟ್ಟಿಲ್ಲ. ಅಷ್ಟೇ ಅಲ್ಲ ಸ್ವಯಂ ಶಾಸಕರೇ ಹೇಳುತ್ತಿರುವ ಪ್ರಕಾರ ಯಡಿಯೂರಪ್ಪ ವಿರುದ್ಧ ದೂರು ನೀಡಲು ಬರುವ ಶಾಸಕರಿಗೆ ದಿಲ್ಲಿಯಲ್ಲಿ ಸಂತೋಷ್‌ ಮತ್ತು ಪ್ರಹ್ಲಾದ ಜೋಶಿ ಕೂಡ ಸೊಪ್ಪು ಹಾಕುತ್ತಿಲ್ಲ.

ಇದರ ರಾಜಕೀಯ ಅರ್ಥ ಏನೆಂದರೆ ಇಲ್ಲಿಯವರೆಗೆ ಮೋದಿ ಮತ್ತು ಶಾ ಅವರು ಸಿಎಂ ಬದಲಾವಣೆ ಬಗ್ಗೆ ಚರ್ಚೆಯೇ ನಡೆಸಿಲ್ಲ. ಅಂದಹಾಗೆ ಬೆಂಗಳೂರಿನ ಬಿಜೆಪಿ ಕಾರ್ಯಾಲಯದ ಮೂಲಗಳು ಹೇಳುವ ಪ್ರಕಾರ ಸಂತೋಷ್‌ ಅವರು ದಿಲ್ಲಿಯಿಂದ ಕರೆ ಮಾಡಿ ನಾಯಕತ್ವ ಬದಲಾವಣೆ ಸುಳ್ಳು ಸುದ್ದಿ ಎಂದು ಮಾಧ್ಯಮಗಳಿಗೆ ಹೇಳಿ ಎಂದ ನಂತರ ವಕ್ತಾರ ಗಣೇಶ ಕಾರ್ಣಿಕ್‌ ಹೇಳಿಕೆ ಹೊರಡಿಸಿದ್ದಾರೆ. ಕೆಲ ಶಾಸಕರು ಯಡಿಯೂರಪ್ಪ ಬೇಡ ಎಂದು ದಿಲ್ಲಿಯಲ್ಲಿ ಓಡಾಡುತ್ತಾರಾದರೂ ಬಹಿರಂಗವಾಗಿ ಹೊರಗೆ ಬರಲು ತಯಾರಾಗುವುದಿಲ್ಲ.

ತ. ನಾ. ನಲ್ಲಿ ಕರುಣಾನಿಧಿ, ಜಯಲಲಿತಾ ಇಲ್ಲದ ಮೊದಲ ಚುನಾವಣೆ ; ರಜನಿಗಾಗಿ ಕಾದು ಕಾದು ಬಿಜೆಪಿ ಸುಸ್ತು!

ಇನ್ನೂ 15 ದಿನ ಶಾ ಸಿಗೋದಿಲ್ಲ

ಹೆಚ್ಚುಕಡಿಮೆ ಒಂದೂವರೆ ತಿಂಗಳಿನಿಂದ ಗೃಹ ಸಚಿವ ಅಮಿತ್‌ ಭಾಯಿ ಶಾ ಆಸ್ಪತ್ರೆಗೆ ಓಡಾಡುತ್ತಿದ್ದಾರೆ. ಹೀಗಾಗಿ ಬಿಜೆಪಿ ಪದಾಧಿಕಾರಿಗಳ ಪಟ್ಟಿತಯಾರಾಗಿದ್ದರೂ ಬಿಡುಗಡೆ ಆಗುತ್ತಿಲ್ಲ. ಜೆ.ಪಿ.ನಡ್ಡಾ ಬಿಜೆಪಿ ಅಧ್ಯಕ್ಷರಾದರೂ ಕೂಡ ಪಕ್ಷದ ನಿರ್ಣಯಗಳನ್ನು ಶಾ ಇಲ್ಲದೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿಯೇ ಯಡಿಯೂರಪ್ಪನವರು ನಾಲ್ವರನ್ನು ಸಂಪುಟಕ್ಕೆ ತೆಗೆದು ಕೊಳ್ಳುತ್ತೇನೆ ಅನುಮತಿ ಕೊಡಿ ಎಂದು ಕೇಳಿದರೂ ನಡ್ಡಾ ಇದಕ್ಕೆ ಒಪ್ಪಿಗೆ ನೀಡಿಲ್ಲ. ಬಿಹಾರದ ಎನ್‌ಡಿಎ ಸೀಟು ಹಂಚಿಕೆ ಪ್ರಕ್ರಿಯೆಗಾಗಿ ಕೂಡ ಅಮಿತ್‌ ಶಾ ಗುಣಮುಖರಾಗಿ ವಾಪಸ್‌ ಬರುವುದನ್ನೇ ಕಾಯಲಾಗುತ್ತಿದೆ. ಶಾ ಏಮ್ಸ… ಆಸ್ಪತ್ರೆಯಿಂದ ಕೃಷ್ಣ ಮೆನನ್‌ ಮಾರ್ಗದ ಸರ್ಕಾರಿ ನಿವಾಸಕ್ಕೆ ಬಂದಿದ್ದಾರಾದರೂ ಹೊರಗೆ ಓಡಾಡಲು ಇನ್ನೂ ಕನಿಷ್ಠ 15 ದಿನ ಬೇಕು ಎಂದು ಆಪ್ತರು ಹೇಳುತ್ತಿದ್ದರು.

ಸಂಸತ್ತಲ್ಲಿ ಮೊಬೈಲ್‌ ಶೂಟಿಂಗ್‌

ರಾಜ್ಯಸಭೆಯಲ್ಲಿ ಕೃಷಿ ವಿಧೇಯಕ ಮತಕ್ಕೆ ಹಾಕುವಾಗ ಗದ್ದಲ ಶುರುವಾದಾಗ ರಾಜ್ಯಸಭಾ ಟೀವಿಯ ನೇರ ಪ್ರಸಾರದ ಆಡಿಯೋ ಕೂಡಲೇ ನಿಲ್ಲಿಸಲಾಯಿತು. ವಿಡಿಯೋದಲ್ಲಿ ಕೂಡ ಉಪಸಭಾಪತಿ ಹರಿವಂಶರಾಯ…ರನ್ನು ಮಾತ್ರ ತೋರಿಸಲಾಗುತ್ತಿತ್ತು. ಇದನ್ನು ನೋಡಿದ ಕೆಲ ಕಾಂಗ್ರೆಸ್‌ ಸಂಸದರು ತಮ್ಮ ಮೊಬೈಲ… ತೆಗೆದು ದೃಶ್ಯ ಚಿತ್ರೀಕರಿಸತೊಡಗಿದರು. ಇದು ನಿಯಮದ ಪ್ರಕಾರ ನಿಷಿದ್ಧ. ಆದರೆ ಮೊಬೈಲ… ನೋಡಿದ ಕೂಡಲೇ ಮೈಯೊಳಗೆ ಬಂದಂತೆ ಆಪ್‌ ಸಂಸದ ಸಂಜಯ ಸಿಂಗ್‌ ಭದ್ರತಾ ಸಿಬ್ಬಂದಿಯೊಬ್ಬರಿಗೆ ಹೊಡೆಯುವ ಪ್ರಯತ್ನ ಮಾಡಿ ಓಡಿ ಹೋಗಿ ಟೇಬಲ… ಮೇಲೆ ಹತ್ತಿ ಚಪ್ಪಾಳೆ ಹೊಡೆಯತೊಡಗಿದರು. ಸಂಸದರಾಗಿ ಆಯ್ಕೆ ಆದವರಿಗೆ ಜಂತರ್‌ ಮಂತರ್‌ ಮತ್ತು ಸಂಸತ್ತಿನ ಒಳಗಡೆ ನಡೆದುಕೊಳ್ಳುವ ಅಂತರ ಗೊತ್ತಿರಬೇಕು. ಪ್ರತಿಭಟನೆ ಪ್ರತಿಯೊಬ್ಬನ ಹಕ್ಕು, ಆದರೆ ಅದರ ವಿಧಾನಕ್ಕೆ ಸದನದೊಳಗೆ ಮಿತಿ ಇದ್ದೇ ಇರುತ್ತದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ