ಸಿದ್ದರಾಮಯ್ಯ ಅವರು ಮುಖಮಂತ್ರಿ ಸ್ಥಾನದಿಂದ ಇಳಿದಿರಬಹುದು. ಆದರೆ ಮೈಸೂರು ಜಿಲ್ಲೆಯ ಪ್ರತಿನಿಧಿಯಾಗಿ ಅವರ ಪುತ್ರ ಡಾ.ಎಸ್, ಯತೀಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಸಿದ್ದರಾಮಯ್ಯ ಅವರ ಹಿರಿಯ..
ಅಂಶಿ ಪ್ರಸನ್ನಕುಮಾರ್
ಮೈಸೂರು (ಜೂ.04): ಸಿದ್ದರಾಮಯ್ಯ ಅವರು ಮುಖಮಂತ್ರಿ ಸ್ಥಾನದಿಂದ ಇಳಿದಿರಬಹುದು. ಆದರೆ ಮೈಸೂರು ಜಿಲ್ಲೆಯ ಪ್ರತಿನಿಧಿಯಾಗಿ ಅವರ ಪುತ್ರ ಡಾ.ಎಸ್, ಯತೀಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ 2008 ರಿಂದಲೂ ವರುಣ ಕ್ಷೇತ್ರದಲ್ಲಿ ಅಪ್ಪನ ಪ್ರಚಾರ ಮಾಡುತ್ತಾ, ಭವಿಷ್ಯದ ಉತ್ತರಾಧಿಕಾರಿಯಾಗಲು ಬಯಸಿದ್ದರು.ಸಿದ್ದರಾಮಯ್ಯ ಅವರು ಆಸೆ ಕೂಡ ಅದೇ ಆಗಿತ್ತು.
ಆದರೆ ರಾಕೇಶ್ ಒಂಭತ್ತು ವರ್ಷಗಳ ಹಿಂದೆ ವಿದೇಶಕ್ಕೆ ಹೋದಾಗ ನಿಧನರಾದರು. ಇದಾದ ನಂತರವೇ ಯತೀಂದ್ರ ರಾಜಕೀಯ ಪ್ರವೇಶ ಮಾಡಿದ್ದು. ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದ ಯತೀಂದ್ರ ಎಂಬಿಬಿಎಸ್ ಓದಿ ಡಾಕ್ಟರ್ ಆಗಿದ್ದರು. ರಾಕೇಶ್ ನಿಧನಾನಂತರ ತಾಯಿ ಪಾರ್ವತಿ ಅವರ ಒತ್ತಾಸೆಯ ಮೇರೆಗೆ ಯತೀಂದ್ರ ರಾಜಕಾರಣ ಪ್ರವೇಶ ಮಾಡಿದರು.
ಇದರಿಂದಾಗಿಯೇ ಸಿದ್ದರಾಮಯ್ಯ ಅವರು 2018 ರಲ್ಲಿ ವರುಣದಿಂದ ಯತೀಂದ್ರ ಅವರಿಗೆ ಅವಕಾಶ ನೀಡಿ, ತಾವು ಹಳೆಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಆ ಚುನಾವಣೆಯಲ್ಲಿ ಯತೀಂದ್ರ ಗೆದ್ದರೆ ಸಿದ್ದರಾಮಯ್ಯ ಅವರು ಜೆಡಿಎಸ್‌ನ ಜಿ.ಟಿ. ದೇವೇಗೌಡರ ಎದುರು 36 ಸಾವಿರ ಮತಗಳ ಅಂತರದಿಂದ ಸೋತರು. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ಪದಿಂದಲೂ ಕಣಕ್ಕಿಳಿದಿದ್ದ ಸಿದ್ದರಾಮಯ್ಯ ಅಲ್ಲಿ ಅಲ್ಪ ಮತಗಳ ಅಂತರದಿಂದ ಗೆದ್ದು, ರಾಜಕೀಯವಾಗಿ ಬಚಾವ್ ಆಗಿದ್ದರು.
2023ರ ವಿಧಾನಸಭಾ ಚುನಾವಣೆ ಬಂದಾಗ ವರುಣದಲ್ಲಿ ಯತೀಂದ್ರಗೆ ತೊಂದರೆ ಮಾಡುವುದು ಬೇಡ ಎಂದು ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯಲು ಬಯಸಿದ್ದರು. ಆದರೆ ಹೈಕಮಾಂಡ್ ಅದು ಸುರಕ್ಷಿತವಲ್ಲ, ವರುಣದಿಂದಲೇ ಸ್ಪರ್ಧಿಸಿ ಎಂದು ಸೂಚಿಸಿತ್ತು. ಹೀಗಾಗಿ ಹಾಲಿ ಶಾಸಕರಾಗಿದ್ದ ಯತೀಂದ್ರ ಅವರು ತಂದೆ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ತ್ಯಾಗ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆದರು. ಯತೀಂದ್ರ ಅವರನ್ನು ಆಶ್ರಯ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು.
ಯತೀಂದ್ರ ಅವರನ್ನು ಮೈಸೂರಿನಿಂದ ಲೋಕಸಭೆಗೂ ಕಾಂಗ್ರೆಸ್ ಅಭ್ಯರ್ಥಿ ಮಾಡುವ ಮಾತುಗಳು ಕೇಳಿ ಬಂದಿದ್ದವು. ಆದರೆ ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡ ನಂತರ ಸೋತರೆ ಕಷ್ಟ ಎಂಬ ಕಾರಣದಿಂದ ಸಿದ್ದರಾಮಯ್ಯ ಅವರೇ ಸ್ಪರ್ಧೆ ಬೇಡಿ ಎಂದು ಸೂಚಿಸಿದ್ದರು. ಹೀಗಾಗಿ 2024ರ ಜೂನ್‌ನಲ್ಲಿ ಅವರನ್ನು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆ ಮಾಡಲಾಯಿತು.
ಒಂದು ವೇಳೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕಾದ ಪರಿಸ್ಥಿತಿ ಬಂದಲ್ಲಿ ಆಗ ಯತೀಂದ್ರ ಅವರನ್ನು ಮಂತ್ರಿಯಾಗಿ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಈಗ ಅದರಂತೆ ಯತೀಂದ್ರ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಮಂತ್ರಿಯಾಗಿದ್ದಾರೆ.
ಮಹದೇವಪ್ಪ, ಕೆ. ವೆಂಕಟೇಶ್‌ಗೆ ಸಿಗದ ಅವಕಾಶ
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಹಾಗೂ ಆರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಅವರಿಗೆ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಮೊದಲ ಕಂತಿನಲ್ಲಿ ಅವಕಾಶ ಸಿಕ್ಕಿಲ್ಲ. ಈ ಇಬ್ಬರು ಕ್ರಮವಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
ಈ ಇಬ್ಬರೂ 1985 ರಿಂದಲೂ ಚುನಾವಣಾ ರಾಜಕಾರಣದಲ್ಲಿದ್ದು, ಸಿದ್ದರಾಮಯ್ಯ ಅವರನ್ನು ಹಿಂಬಾಲಿಸಿ ಜನತಾ ಪರಿವಾರದಿಂದ ಕಾಂಗ್ರೆಸ್‌ಗೆ ಬಂದವರು. ಇಬ್ಬರೂ ಸೋಲು- ಗೆಲುವಿನಲ್ಲಿ, ಸಿದ್ದರಾಮಯ್ಯ ಜೊತೆಗೆಯಾಗಿ ನಿಂತವರು. ಮಹದೇವಪ್ಪ ಅವರು ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎನ್. ಧರಂಸಿಂಗ್ ಹಾಗೂ ಸಿದ್ದರಾಯ್ಯ ಅವರ ಸಂಪುಟದಲ್ಲಿ ಎರಡೂ ಬಾರಿಯೂ ಸಚಿವರಾಗಿದ್ದರು. ವೆಂಕಟೇಶ್ ಪಟೇಲರ ಸಂಪುಟದ ನಂತರ ಈ ಬಾರಿ ಸಿದ್ದರಾಮಯ್ಯ ಸಂಪುಟದಲ್ಲಿದ್ದರು.


