ರಾಷ್ಟ್ರೀಯ ಚುನಾವಣಾ ಆಯೋಗದ ಆಯುಕ್ತರು ರಾಜಕೀಯ ಪುಡಾರಿ ತರ ಮಾತನಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೈಸೂರು (ಅ.29): ರಾಷ್ಟ್ರೀಯ ಚುನಾವಣಾ ಆಯೋಗದ ಆಯುಕ್ತರು ರಾಜಕೀಯ ಪುಡಾರಿ ತರ ಮಾತನಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಿಲ್ಲೆಯ ತಗಡೂರು ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೋಟ್‌ಚೋರಿ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿ, ಈ ಹಿಂದೆ ಚುನಾವಣಾ ಆಯುಕ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿತ್ತಿದ್ದರು. ಈಗಿನ ಚುನಾವಣಾ ಆಯುಕ್ತರು ರಾಜಕೀಯ ಪುಡಾರಿ ರೀತಿ ವರ್ತನೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಮತ ಕಳ್ಳತನ ಕುರಿತು 6 ತಿಂಗಳ ಅಧ್ಯಯನ ಮಾಡಿದ್ದಾರೆ. ಈ ಬಗ್ಗೆ ಎಲ್ಲಾ ಸಾಕ್ಷಿ ಕೊಟ್ಟರೂ ಚುನಾವಣಾ ಆಯುಕ್ತರು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ದೇಶಕ್ಕೆ ಅಪಾಯ: ಬಿಜೆಪಿ ನಾಯಕರು ಕಳೆದ ಬಾರಿ 400 ಸ್ಥಾನವನ್ನು ಗೆಲ್ಲುತ್ತೇವೆ ಅಂದಿದ್ದರು. ವೋಟ್‌ಚೋರಿ ಕೇವಲ 240 ಸ್ಥಾನ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಮತಗಳ್ಳತನವನ್ನ ಹೀಗೆ ಬಿಟ್ಟರೆ ದೇಶಕ್ಕೆ ಅಪಾಯ ಆಗಲಿದ್ದು, ರಾಜಕೀಯ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಇದನ್ನೆಲ್ಲ ನಾವು ಗಂಭೀರವಾಗಿ ಪರಿಗಣಿಸಬೇಕು. ಸಿಎಂ ಕ್ಷೇತ್ರದಲ್ಲಿ ಕನಿಷ್ಠ 75 ಸಾವಿರ ಜನರರಾದರೂ ವೋಟ್‌ಚೋರಿ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.
5 ವರ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ
ನಮ್ಮ ತಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 5 ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ನಾನು ಬೆಳಗಾವಿಯಲ್ಲಿ ಮಾತನಾಡಿದ ಹೇಳಿಕೆಗೆ ಈಗಲೂ ಬದ್ಧವಾಗಿದ್ದು, ಪಕ್ಷ ನೋಟಿಸ್ ಕೊಟ್ಟರೆ ಉತ್ತರ ನೀಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ತಮ್ಮ ಹೇಳಿಕೆಗೆ ಪಕ್ಷದ ವಲಯದಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದ್ದರೂ ತಮ್ಮ ಹೇಳಿಕೆಗೆ ಈಗಲೂ ತಾವು ಬದ್ಧ ಎಂದು ಪುನರುಚ್ಚರಿಸಿದ್ದಾರೆ. ಇತ್ತೀಚೆಗೆ ಬೆಳಗಾವಿಯಲ್ಲಿ ಸಿದ್ದರಾಮಯ್ಯ ನಂತರ ಸಚಿವ ಸತೀಶ್ ಜಾರಕಿಹೊಳಿ ಉತ್ತರಾಧಿಕಾರಿ ಎಂಬರ್ಥದಲ್ಲಿ ಸಿಎಂ ಪುತ್ರ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಈ ಬಗ್ಗೆ ಮೈಸೂರಲ್ಲಿ ಸ್ಪಷ್ಟನೆ ನೀಡಿದ ಡಾ.ಯತೀಂದ್ರ, ನಾನು ಅಂದು ಬೆಳಗಾವಿಯಲ್ಲಿ ನೀಡಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ನಾನು ಏನೂ ಹೇಳಬೇಕೋ ಹೇಳಿದ್ದೇನೆ. ಅನಗತ್ಯವಾಗಿ ಮತ್ತೆ ಅದನ್ನು ಮಾತನಾಡಿ ವಿವಾದ ಸೃಷ್ಟಿಸುವುದಿಲ್ಲ. ನನ್ನ ಹೇಳಿಕೆ ವಿವಾದ ಪಡೆದ ಕೂಡಲೇ ನಾನು ಅದಕ್ಕೆ ಸ್ಪಷ್ಟೀಕರಣ ನೀಡಿದ್ದೇನೆ. ಈ ಬಗ್ಗೆ ಮಾಧ್ಯಮದ ಮುಂದೆ ಏನೂ ಮಾತನಾಡುವುದಿಲ್ಲ ಎಂದರು. ನನ್ನ ಹೇಳಿಕೆಯನ್ನು ಬೇರೆ ಬೇರೆ ರೀತಿ ಬಿಂಬಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದಿರುವ ಯತೀಂದ್ರ ಅವರು, ಕಾಂಗ್ರೆಸ್ ಆಂತರಿಕ ವಿಚಾರವನ್ನು ಪಕ್ಷದ ಒಳಗೆ ಮಾತಾಡುತ್ತೇನೆ. ಪಕ್ಷದಿಂದ ನೋಟಿಸ್ ಬಂದಾಗ ನೋಡಿಕೊಳ್ಳೋಣ ಬಿಡಿ. ಅದಕ್ಕೆ ನಾನು ಉತ್ತರ ನೀಡುತ್ತೇನೆ ಎಂದು ಟಾಂಗ್ ನೀಡಿದರು.
