Asianet Suvarna News Asianet Suvarna News

ಸರ್ಕಾರದ ಯೋಜನೆ ಜನರಿಗೆ ತಲುಪಿಸಲು ಶ್ರಮಿಸಿ: ಶಾಸಕ ಆರ್‌.ವಿ.ದೇಶಪಾಂಡೆ

ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಅಧಿಕಾರಿಗಳಿಗೆ ಗೌರವ ನೀಡಲಾಗುವುದು. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳಲ್ಲಿ ಇರುವ ನೌಕರರ ಕೊರತೆ ನೀಗಿಸುವ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು.

Work hard to deliver the governments plan to the people Says MLA RV Deshpande gvd
Author
First Published Jun 3, 2023, 1:00 AM IST

ಹಳಿಯಾಳ (ಜೂ.03): ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಅಧಿಕಾರಿಗಳಿಗೆ ಗೌರವ ನೀಡಲಾಗುವುದು. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳಲ್ಲಿ ಇರುವ ನೌಕರರ ಕೊರತೆ ನೀಗಿಸುವ ಪ್ರಯತ್ನ ನಡೆಸಲಾಗುವುದು. ಸರ್ಕಾರದ ಯೋಜನೆಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪುವಂತೆ ಮಾಡಲು ಅಧಿಕಾರಿಗಳು ಶ್ರಮಿಸಬೇಕಾಗಿದೆ ಎಂದು ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು. ಶುಕ್ರವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕುಗಳ ಕೆಡಿಪಿ ಸಭೆಯನ್ನು ಕರೆದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. 

ಕಾಳಿ ಏತ ನೀರಾವರಿ, ಬಹುಗ್ರಾಮ ಕುಡಿಯುವ ನೀರು ಪೂರೈಕೆ ಮತ್ತು ಜಲ ಜೀವನ ಮಿಷನ್‌ ಇನ್ನಿತರ ಯೋಜನೆಗಳ ಕಾಮಗಾರಿ ಆರಂಭಿಸಿ ಹಲವು ವರುಷಗಳು ಕಳೆದರೂ ಇನ್ನೂವರೆಗೂ ಪ್ರಗತಿ ಕಾಣದಿರುವುದು ಬೇಸರ ತಂದಿದೆ. ತಕ್ಷಣ ಕಾಮಗಾರಿಗಳನ್ನು ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಮನೆಗಳ ಹಂಚಿಕೆಯಲ್ಲಿ ಪಿಡಿಒ ಇನ್ನಿತರ ಅಧಿಕಾರಿಗಳು ಶಾಮೀಲಾಗಿ ಬಡವರಿಗೆ ಮನೆಗಳನ್ನು ನೀಡಲು ಸಾವಿರಾರು ರು. ಲಂಚ ಪಡೆಯುತ್ತಿರುವ ವಿಷಯ ತಿಳಿದು ಬಂದಿದೆ. 2000 ಮನೆಗಳ ಹಂಚಿಕೆಯಲ್ಲಿ ಭಾರಿ ಭ್ರಷ್ಟಾಚಾರ ಕಂಡು ಬಂದಿದ್ದು, ಅಧಿಕಾರಿಗಳು ಪಾರದರ್ಶಕವಾಗಿ ಸೇವೆ ಸಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದರೆ ನಿರ್ದಾಕ್ಷಿಣ್ಯ ಕ್ರಮ: ಶಾಸಕ ಜಿ.ಎಸ್‌.ಪಾಟೀಲ್‌ ಎಚ್ಚರಿಕೆ

ಹಳಿಯಾಳ ಪಟ್ಟಣದಲ್ಲಿ ಈಗಾಗಲೇ 6 ಎಕರೆ ಸರ್ಕಾರಿ ಜಮೀನು ಪುರಸಭೆಗೆ ನೀಡಲಾಗಿದೆ. ಇದರ ಹಸ್ತಾಂತರ ಮತ್ತು ಸರ್ವೆಯನ್ನು ಮುಗಿಸಲು ಆದೇಶಿಸಿದರು. ಜಿ ಪ್ಲಸ್‌ 2 ಮನೆಗಳ ನಿರ್ಮಾಣ ಕಾರ್ಯವು ಮಂದಗತಿಯಲ್ಲಿ ಸಾಗಿದ್ದು, ತಕ್ಷಣವೇ ಗುತ್ತಿಗೆದಾರರಿಗೆ ನೋಟಿಸ್‌ ಜಾರಿ ಮಾಡಿ, ಕಾಮಗಾರಿ ಪೂರ್ಣಗೊಳಿಸಿ ಬಡವರಿಗೆ ಮನೆಗಳನ್ನು ಹಸ್ತಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಡಾ. ಬಿ.ಆರ್‌. ಅಂಬೇಡ್ಕರ್‌ ವಸತಿ ಶಾಲೆಯ ದುಸ್ಥಿತಿ, ಇಂದಿರಾ ಕ್ಯಾಂಟೀನ್‌ಗಳ ಪರಿಸ್ಥಿತಿ, ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಪೂರೈಕೆ, ಶಿಕ್ಷಕರ ಕೊರತೆ ಇನ್ನಿತರ ವಿಷಯಗಳ ಕುರಿತು ಶಾಸಕರು ಮಾಹಿತಿ ಪಡೆದರು. ಎಸಿ ಜಯಲಕ್ಷ್ಮೀ ರಾಯಕೋಡ, ತಹಸೀಲ್ದಾರ್‌ಗಳಾದ ಡಾ.ಲೋಕೇಶ, ಅಶೋಕ ಶಿಗ್ಗಾಂವಿ, ಇಒಗಳಾದ ಪರಶುರಾಮ ಘಸ್ತೆ, ಪ್ರಕಾಶ ಹಾಲಮ್ಮನ್ನವರ ಮತ್ತು ಡಿವೈಎಸ್ಪಿ ಶಿವಾನಂದ ಕಟಗಿ ಹಾಜರಿದ್ದರು.

ಗ್ಯಾರಂಟಿ ಜಾರಿಗೆ ಸಮಯಾವಕಾಶ ಬೇಕು: ಕಾಂಗ್ರೆಸ್‌ ಬಹುಮತದ ಸರ್ಕಾರವು ಅಸ್ತಿತ್ವಕ್ಕೆ ಬಂದಿದೆ. ಸಚಿವ ಸಂಪುಟವನ್ನು ಸಹ ಪೂರ್ಣ ಪ್ರಮಾಣದಲ್ಲಿ ರಚಿಸಲಾಗಿದೆ. ರಾಜ್ಯದ ಜನತೆಗೆ ನೀಡಿರುವ ಉಚಿತ ವಿದ್ಯುತ್‌, ಗೃಹಲಕ್ಷ್ಮೇ, ಮಹಿಳೆಯರಿಗೆ ಬಸ್‌ ಪ್ರಯಾಣ ಸೇರಿದಂತೆ ಇತರ ಗ್ಯಾರಂಟಿಗಳ ಚಾಲನೆಗೆ ಪ್ರತಿ ವರ್ಷ ಸುಮಾರು 60 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಈ ಕುರಿತು ಈಗಾಗಲೇ ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸುತ್ತಿದ್ದು, ಜಾರಿಗೆ ಸ್ವಲ್ಪ ಸಮಯಾವಕಾಶ ಬೇಕಾಗಿದೆ ಎಂದು ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಯ ಆರ್ಶೀವಾದದಿಂದ ಕಾಂಗ್ರೆಸ್‌ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಬಹುಮತವನ್ನು ಗಳಿಸುವುದರ ಜೊತೆಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹಿರಿಯರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು, ರಾಜ್ಯದ ಜನತೆಗೆ ಕಾಂಗ್ರೆಸ್‌ ನೀಡಿರುವ ಐದು ಗ್ಯಾರಂಟಿಗಳನ್ನು ಶೀಘ್ರದಲ್ಲಿಯೇ ಜಾರಿಗೆ ತರಲಿದೆ ಎಂದರು.

ಮಳೆ ಅನಾಹುತ ಎದುರಿಸಲು ಸನ್ನದ್ಧರಾಗಿ: ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ರಾಜೇಗೌಡ

ಗ್ಯಾರಂಟಿಗಳಿಗೆ ಚಾಲನೆ ನೀಡಲು ನಿಯಮಗಳನ್ನು ರೂಪಿಸಲಾಗುತ್ತಿದೆ. ಇದರ ಜೊತೆಗೆ ಗ್ಯಾರಂಟಿಗಳಿಗೆ ಬೇಕಾಗುವ ಹಣಕ್ಕಾಗಿ ಸಂಪನ್ಮೂಲಗಳ ಕ್ರೂಡಿಕರಣಕ್ಕಾಗಿ ಶ್ರಮಿಸಲಾಗುತ್ತಿದೆ. ಕಾಂಗ್ರೆಸ ನೀಡಿರುವ ಗ್ಯಾರಂಟಿಗಳನ್ನು ಜನರಿಗೆ ನೀಡುವುದು ಶೇ. 100ರಷ್ಟುಗ್ಯಾರಂಟಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದವರು ತಕ್ಷಣ ಗ್ಯಾರಂಟಿಗಳನ್ನು ಜಾರಿಗೆ ಮಾಡಲು ಒತ್ತಾಯ ಮಾಡುವುದರ ಜೊತೆಗೆ ಜನರಿಗೆ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಕಾಂಗ್ರಸ್‌ ಶಾಂತಿ ಮತ್ತು ಸೌಹಾರ್ದತೆಗೆ ಹೆಚ್ಚಿನ ಆದ್ಯತೆ ನೀಡಲಿದ್ದು, ಪಕ್ಷವು ನೀಡಿರುವ ಮಾತನ್ನು ಉಳಿಸಿಕೊಳ್ಳಲಿದೆ ಎಂದು ದೇಶಪಾಂಡೆ ತಿಳಿಸಿದರು.

Follow Us:
Download App:
  • android
  • ios