ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದರೆ ನಿರ್ದಾಕ್ಷಿಣ್ಯ ಕ್ರಮ: ಶಾಸಕ ಜಿ.ಎಸ್.ಪಾಟೀಲ್ ಎಚ್ಚರಿಕೆ
ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಬಾರದು. ಅಧಿಕಾರಿಗಳು ನೀಡಿರುವ ಮಾಹಿತಿ ಸುಳ್ಳೆಂದು ಗೊತ್ತಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೋಣ ಶಾಸಕ ಜಿ.ಎಸ್.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಮುಂಡರಗಿ (ಜೂ.02): ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಬಾರದು. ಅಧಿಕಾರಿಗಳು ನೀಡಿರುವ ಮಾಹಿತಿ ಸುಳ್ಳೆಂದು ಗೊತ್ತಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೋಣ ಶಾಸಕ ಜಿ.ಎಸ್.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಇಲ್ಲಿಯ ತಾಪಂ ಸಾಮರ್ಥ್ಯ ಸೌಧದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿ ಕುರಿತು ಸರಿಯಾದ ಮಾಹಿತಿ ನೀಡಬೇಕು. ಜನರ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಅದಕ್ಕೆ ಅಧಿಕಾರಿಗಳು ಸ್ಪಂದಿಸುವುದು ಸಹ ಅಷ್ಟೇ ಅವಶ್ಯ. ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿ ಎಲ್ಲ ಅಧಿಕಾರಿಗಳದ್ದಾಗಿರುತ್ತದೆ ಎಂದರು.
ಸಹ ಅಧ್ಯಕ್ಷತೆ ವಹಿಸಿದ್ದ ಶಿರಹಟ್ಟಿಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಶಿರಹಟ್ಟಿಹಾಗೂ ರೋಣ ಮತಕ್ಷೇತ್ರಗಳನ್ನು ಮಾದರಿ ಮಾಡಲು ಅಧಿಕಾರಿಗಳು ಪಣ ತೊಡಬೇಕು. ಕ್ಷೇತ್ರದ ಇನ್ನೂ ಅನೇಕ ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಅಂತಹ ಗ್ರಾಮಗಳನ್ನು ಗುರುತಿಸಿ ಅಲ್ಲಿಗೆ ಭೇಟಿ ನೀಡಿ ಅವುಗಳ ಅಭಿವೃದ್ಧಿಗೆ ಹಾಗೂ ಅಲ್ಲಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳ ಮುಂದಾಗಬೇಕು. ಸಮಸ್ಯೆ ಇರುವ ಸಾರ್ವಜನಿಕರಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದರು.
ಸಾರ್ವಜನಿಕ ಸೇವೆಯಲ್ಲಿ ಉದಾಸೀನತೆ ಬೇಡ: ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ
ಆನಂತರ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಈರ್ವರೂ ಶಾಸಕರು ಮುಂಡರಗಿ ಹಾಗೂ ಡಂಬಳ ಹೋಬಳಿಯಲ್ಲಿ ಡಿಬಿಒಟಿ ನೀರು ಸರಬರಾಜು ಆಗುತ್ತಿರುವ ಕುರಿತು ಮಾಹಿತಿ ಕೇಳಿದರು. ಈ ಸಂದರ್ಭದಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ ಹಾಗೂ ಡಿಬಿಒಟಿ ಅಭಿಯಂತರರು ಮಾಹಿತಿ ನೀಡುವಲ್ಲಿ ವಿಫಲರಾದರು. ಡಿಬಿಒಟಿ ಯೋಜನೆಯಿಂದ ಯಾವ ಗ್ರಾಮಕ್ಕೆ ಎಷ್ಟುನೀರು ಸರಬರಾಜು ಆಗುತ್ತಿದೆ? ಎಲ್ಲ ಗ್ರಾಮಗಳಿಗೂ ಸಾಕಾಗುವಷ್ಟುನೀರು ಪೊರೈಕೆಯಾಗುತ್ತಿದೆಯಾ ಎನ್ನುವ ಶಾಸಕರ ಪ್ರಶ್ನೆಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರಲಿಲ್ಲ.
ಆಗ ಶಿರಹಟ್ಟಿಶಾಸಕ ಡಾ. ಚಂದ್ರು ಲಮಾಣಿ, ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಈಗಾಗಲೇ ಡಿಬಿಒಟಿ ಯೋಜನೆ ಸಂಪೂರ್ಣವಾಗಿ ವಿಫಲವಾಗಿದ್ದು, ಎಲ್ಲ ಗ್ರಾಮಗಳಿಗೂ ನೀರು ಕೊಡುವಲ್ಲಿ ಸಾಧ್ಯವಾಗಿಲ್ಲ. ಇದು ರಾಜ್ಯದಲ್ಲಿಯೇ ಪ್ರಾಯೋಗಿಕ ಯೋಜನೆಯಾಗಿದ್ದು, ಇಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅದೇ ರೀತಿ ಜಲಜೀವನ ಯೋಜನೆಯಡಿಯಲ್ಲಿ ಮನೆ ಮನೆಗೆ ನೀರು ಸರಬರಾಜು ಯೋಜನೆಯೂ ನಮ್ಮ ಕ್ಷೇತ್ರದಲ್ಲಿ ವಿಫಲವಾಗಿದೆ. ಆದ್ದರಿಂದ ತಾಪಂ ಇಒ ಈ ಕೂಡಲೇ ಇವೆರಡೂ ಯೋಜನೆಗಳ ಪರಿಶೀಲನೆಗಾಗಿ ಪ್ರತ್ಯೇಕವಾಗಿ ಹಿರಿಯ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿ ಅದರ ಸಂಪೂರ್ಣ ವರದಿ ನೀಡಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆ ಅಧಿಕಾರಿ ತಮ್ಮ ಇಲಾಖೆ ಮಾಹಿತಿ ನೀಡಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾದ ಹಿನ್ನೆಲೆಯಲ್ಲಿ ಇನ್ನೂ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ವಿತರಿಸಿಲ್ಲ. ಈಗಾಗಲೇ ಮುಂಗಾರಿಗೆ ಬೇಕಾಗುವಷ್ಟುಬೀಜ, ಗೊಬ್ಬರ ಸರಬರಾಜು ಆಗಿರುವ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈ ಕೂಡಲೇ ರೈತರಿಗೆ ಬೀಜ, ಗೊಬ್ಬರ ನೀಡುವ ಮೂಲಕ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಬೇಕು. ತಕ್ಷಣವೇ ರೈತರಿಗೆ ತಾಡಪತ್ರಿಗಳನ್ನು ಸಹ ಸರಬರಾಜು ಮಾಡಬೇಕು ಎಂದರು. ಸಭೆಯಲ್ಲಿ ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡರ, ತಾಪಂ ಆಡಳಿತಾಧಿಕಾರಿ ತಾರಾಮಣಿ, ತಾಪಂ ಇಒ ಡಾ. ಯುವರಾಜ ಹನಗುಂಡಿ, ಸಿಪಿಐ ವೀರಣ್ಣ ಹಳ್ಳಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಪಕ್ಷಗಳಿಗೆ ಗ್ಯಾರಂಟಿ ಬಗ್ಗೆ ಅನವಸರ ಗೊಂದಲ: ಸಂಸದ ಡಿ.ಕೆ.ಸುರೇಶ್
ಸಿಟ್ಟಿಗೆದ್ದ ಶಾಸಕರು: ಗ್ರಾಪಂ ಹಂತದಲ್ಲಿ ಜರುಗುವ ಗ್ರಾಮಸಭೆಗಳಿಗೆ ಯಾವ ಇಲಾಖೆ ಅಧಿಕಾರಿಗಳೂ ಬರುವುದಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗ್ರಾಪಂ ಅಧ್ಯಕ್ಷರು ತಾಪಂ ಇಒ ಅವರಿಗೆ ಸೂಚಿಸಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಿಡಿಒ ಒಬ್ಬರು ಹೇಳಿದರು. ಆಗ ಎಚ್ಚೆತ್ತ ರೋಣ ಶಾಸಕ ಜಿ.ಎಸ್. ಪಾಟೀಲ ಅವರು, ಗ್ರಾಪಂ ಹಂತದ ಗ್ರಾಮಸಭೆಗಳಿಗೆ ಯಾವ ಇಲಾಖೆ ಅಧಿಕಾರಿಗಳು ಹಾಜರಾಗಿದ್ದೀರಿ ಅಥವಾ ನಿಮ್ಮ ಇಲಾಖೆ ಪರವಾಗಿ ನಿಮ್ಮ ಸಿಬ್ಬಂದಿಯನ್ನು ಕಳುಹಿಸಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಶಿಕ್ಷಣ ಇಲಾಖೆ ಹೊರತುಪಡಿಸಿ ಉಳಿದ ಎಲ್ಲ ಇಲಾಖೆ ಅಧಿಕಾರಿಗಳೂ ಸುಮ್ಮನೆ ಇದ್ದರು. ಆಗ ಸಿಟ್ಟಿಗೆದ್ದ ಜಿ.ಎಸ್. ಪಾಟೀಲ್ ಅವರು ಎಲ್ಲರೂ ಸುಮ್ಮನಿದ್ದರೆ ನಾವು ಯಾರನ್ನು ಕೇಳೋಣ ಎಂದರು. ಇನ್ನು ಮುಂದೆ ಸಭೆಗೆ ಹಾಜರಾಗುವುದಾಗಿ ಅಧಿಕಾರಿಗಳು ಹೇಳಿದರು.