ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಾಲ ಮನ್ನಾ: ಎಚ್‌ಡಿಕೆ ಭರವಸೆ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಆರೂವರೆ ಕೋಟಿ ಜನ ಜೆಡಿಎಸ್‌ಗೆ 123 ಸ್ಥಾನಗಳ ಅರ್ಶೀವಾದ ಮಾಡಿದರೆ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿದ್ಧಾರೆ.
ಟೇಕಲ್ (ನ.21): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಆರೂವರೆ ಕೋಟಿ ಜನ ಜೆಡಿಎಸ್‌ಗೆ 123 ಸ್ಥಾನಗಳ ಅರ್ಶೀವಾದ ಮಾಡಿದರೆ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿದ್ಧಾರೆ. ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆಯ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು. ಜೆಡಿಎಸ್ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದರೆ ಪಂಚರತ್ನ ರಥಯಾತ್ರೆಯ ಐದು ಯೋಜನೆಗಳನ್ನು ಅನುಷ್ಠಾನ ಮಾಡುತ್ತೇನೆ. ಜೆಡಿಎಸ್ ಅಧಿಕಾರಕ್ಕೆ ಬಂದ 24 ತಾಸಿನಲ್ಲಿಯೇ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುತ್ತೇವೆ.
ಪಂಚರತ್ನ ಯೋಜನೆಗಳಾದ ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯವೇ ಸಂಪತ್ತು, ರೈತ ಚೈತನ್ಯ, ವಸತಿ ಆಸರೆ ಮತ್ತು ಮಹಿಳಾ ಸಬಲೀಕರಣ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದರು. ಟೇಕಲ್‌ನ ಕೆಂಪಸಂದ್ರದಲ್ಲಿ ಕುಮಾರಸ್ವಾಮಿ ಅವರನ್ನು ಮಾಲೂರು ಅಭ್ಯರ್ಥಿ ಜಿ.ಇ.ರಾಮೇಗೌಡ ಹಾಗೂ ರಶ್ಮಿ ರಾಮೇಗೌಡ ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ತಾಯಿ ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಕನ್ನಡದ ಬಾವುಟವನ್ನು ಹಾರಿಸಿದರು. ಕಳಶ ಹೊತ್ತ ಸುಮಂಗಲಿಯರು ಎಚ್‌ಡಿಕೆ ಬಳಿ ಫೋಟೋಗೆ ಮುಗಿಬಿದ್ದರು. ಹಳೇಪಾಳ್ಯ, ಕದೀರೆನಹಳ್ಳಿ, ಬಲ್ಲೇರಿ, ಪಟಾಲಮ್ಮನಗುಡಿ ಕ್ರಾಸ್, ಟೇಕಲ್ ಸರ್ಕಲ್ ಹಾಗೂ ಕೆ.ಜಿ.ಹಳ್ಳಿಯಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು.
JDS Pancharatna Rathayatra: ಪಂಚರತ್ನ ಜಾರಿ ಮಾಡದಿದ್ರೆ ಜೆಡಿಎಸ್ ವಿಸರ್ಜನೆ: ಎಚ್‌ಡಿಕೆ
ಅಧಿಕಾರಕ್ಕೆ ಬಂದರೆ ಪಂಚರತ್ನ ಜಾರಿ: ಪಂಚರತ್ನ ಯೋಜನೆಯಲ್ಲಿನ ಭರವಸೆಗಳು ಈಡೇರಿದರೆ ರಾಜ್ಯ ಸ್ವರ್ಗವಾಗುತ್ತದೆ. ದಳ ಹಳೆ ಕರ್ನಾಟಕ ಭಾಗದಲ್ಲಿ ಮಾತ್ರವಿದೆ ಎಂಬ ಭಾವನೆ ಕೆಲವರಿಗಿದ್ದು, 123 ಸ್ಥಾನಗಳನ್ನು ನೀಡಿ ದಳವನ್ನು ಸಂಪೂರ್ಣ ಬಹುಮತದೊದಂದಿಗೆ ಗೆಲ್ಲಿಸಿದರೆ ಪಂಚರತ್ನ ಯೋಜನೆ ಸಂಪೂರ್ಣ ರಾಜ್ಯದಲ್ಲಿ ಅನುಷ್ಠಾನಗೊಳಿಸಿ ನಂಬಿಕೆ ಉಳಿಸಿಕೊಳ್ಳವೆ ಎಂದು ಭರವಸೆ ನೀಡಿದರು. ಶಿಕ್ಷಣ ಕ್ಷೇತ್ರಕ್ಕೆ ಎಲ್‌ಕೆಜಿಯಿಂದ ಪಿಯುಸಿಯವರೆಗೆ ಯಾವುದೇ ಶುಲ್ಕವಿಲ್ಲದೆ, ಸಾಲ ಮಾಡದೆ, ಖಾಸಗಿ ಶಾಲೆ ನೀಡುವಂತಹ ಶಿಕ್ಷಣ ನೀಡುವುದೇ ಜೆಡಿಎಸ್ ಗುರಿ. ರೈತರಿಗೆ ಸಾಲ ಮನ್ನಾ ಮಾಡುವುದು ದೊಡ್ಡ ವಿಚಾರವಲ್ಲ, ಸಾಲ ಮನ್ನಾ ತಮ್ಮ ಅವಧಿಯಲ್ಲಿ ಮಾಡಲಾಗಿದ್ದರು ಸಹ ಪ್ರಸ್ತುತ ರೈತ ಸಾಲಗಾರನಾಗಿದ್ದಾನೆ. ರೈತನನ್ನು ಸಾಲಮುಕ್ತ ಮಾಡಲು ಚಿಂತಿಸಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಿದ್ದೇನೆ ಎಂದು ತಿಳಿಸಿದರು.
ಮಹಿಳೆಯರಿಗೆ ಕೌಶಲ ತರಬೇತಿ: ಪ್ರತಿಯೊಬ್ಬ ಮಹಿಳೆಯರಿಗೂ ಸರ್ಕಾರಿ ಅಥವಾ ಖಾಸಗಿ ಕೆಲಸ ನೀಡಲು ಸಾಧ್ಯವಿಲ್ಲ, ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವುಂತೆ ಕೆಲವರು ಒತ್ತಾಯಿಸುತ್ತಿದ್ದು, ದಳದ ಸರ್ಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು. ನಗರ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕೌಶಲ ತರಬೇತಿ ಕೇಂದ್ರಗಳನ್ನು ತೆರೆಯಲಾಗುವುದು. 25ಸಾವಿರ ಕೋಟಿ ಹಣವನ್ನು ಮೀಸಲಿಟ್ಟು, ತಾವು ತರಭೇತಿಯಲ್ಲಿ ಪರಿಣತರಾಗಿ ಉತ್ಪಾದಿಸಿದ ವಸ್ತುಗಳನ್ನು ಸರ್ಕಾರವೇ ಆರ್ಥಿಕ ಸಹಾಯ ಮಾಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಪಿನಾಕಿನಿ ಟ್ರಿಬ್ಯುನಲ್ ರಾಜ್ಯಕ್ಕೆ ಮರಣ ಶಾಸನ: ಎಚ್.ಡಿ.ಕುಮಾರಸ್ವಾಮಿ
ಬಡವರಿಗೆ ಇನ್ನೂ ಸೂರು ಸಿಕ್ಕಿಲ್ಲ: ಸಮಾಜದಲ್ಲಿ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನಕ್ಕೆ ದಳ ಕೈ ಹಾಕಿ ಸಾಗುತ್ತಿದೆ. ಸ್ವಾತಂತ್ರ್ಯ ಬಂದು 75ವರ್ಷ ಕಳೆದರು ಸಹ, ಸ್ವಂತ ಮನೆಗಳಿಲ್ಲದೆ, ಮೂಲಸೌಲಭ್ಯಗಳಿಲ್ಲದೆ ರಾಜ್ಯದಲ್ಲಿ ಲಕ್ಷಾತರ ಕುಟುಂಬಗಳಿವೆ. ತಮ್ಮ ಬಳಿ ಬರುವ ವಯೋವೃದ್ಧರು, ವಿಧವಾ ಮಹಿಳೆಯರು, ಮಕ್ಕಳು ತ್ಯಜಿಸಿದ ಪೋಷಕರು ಸೂರು ಕಲ್ಪಿಸುವಂತೆ ಹೇಳಿಕೊಳ್ಳುತ್ತಿದ್ದಾರೆ ಎಂದರು. ಕೊರೋನಾ ಸಮಯದಲ್ಲಿ ಸಂಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ, ಪ್ರತಿ ವರ್ಷ 40ಸಾವಿರ ವಿದ್ಯಾರ್ಥಿಗಳಿಗೆ 18ವರ್ಷದಿಂದ ಉಚಿತ ಪಠ್ಯ, ನೋಟ್‌ಪುಸಕ್ತ, ಬ್ಯಾಗ್ ವಿತರಿಸಿರುವ ಜಿ.ಇ.ರಾಮೇಗೌಡ ಮಾಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುವುದಿಲ್ಲವೆಂದು ಭಾವಿಸಿ, ಸಾಲ ಮಾಡಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಮಾಡುವ ಮೂಲಕ ಸಾಲಗಾರರಾಗಿದ್ದಾರೆ ಎಂದು ಹೇಳಿದರು.