ಪಿನಾಕಿನಿ ಟ್ರಿಬ್ಯುನಲ್ ರಾಜ್ಯಕ್ಕೆ ಮರಣ ಶಾಸನ: ಎಚ್.ಡಿ.ಕುಮಾರಸ್ವಾಮಿ
ದಕ್ಷಿಣ ಪಿನಾಕಿನಿ (ಪೆನಾರ್) ನದಿ ನೀರಿನ ವಿಷಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಕನ್ನಡಿಗರ ಹಕ್ಕು ಕಸಿದು ಕಿರುಕುಳ ನೀಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು (ನ.19): ದಕ್ಷಿಣ ಪಿನಾಕಿನಿ (ಪೆನಾರ್) ನದಿ ನೀರಿನ ವಿಷಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಕನ್ನಡಿಗರ ಹಕ್ಕು ಕಸಿದು ಕಿರುಕುಳ ನೀಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಶುಕ್ರವಾರ ಟ್ವೀಟ್ ಮಾಡಿರುವ ಅವರು, ‘ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯಕ್ಕೆ ಹೊಸ ನ್ಯಾಯಾಧಿಕರಣ ರಚನೆ ಮಾಡುವ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರ ಅಕ್ಷರಶಃ ರಾಜ್ಯದ ಪಾಲಿಕಗೆ ಮರಣ ಶಾಸನ. ಇದನ್ನು ರಾಜ್ಯ ಬಿಜೆಪಿ ಸರ್ಕಾರ ಮುಲಾಜಿಲ್ಲದೇ ವಿರೋಧಿಸಬೇಕು. ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಪಾಲಿಗೆ ಮಾರಕ ಎನ್ನುವುದು ಪದೇ ಪದೇ ರುಜುವಾತಾಗುತ್ತಿದೆ. ನೆಲ, ಜಲ,ಭಾಷೆ ವಿಚಾರದಲ್ಲಿ ಅವು ಕನ್ನಡಿಗರನ್ನು ಕಾಡುತ್ತಲೇ ಇದೆ’ ಎಂದು ಹೇಳಿದ್ದಾರೆ.
‘ಕಾವೇರಿ ವಿವಾದದಲ್ಲಿ ಕರ್ನಾಟಕವು ಒಂದು ಶತಮಾನ ಕಾಲ ಸಂಘರ್ಷ ನಡೆಸಿದ್ದಾಯಿತು. ಮೇಕೆದಾಟು ವಿವಾದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇನ್ನೂ ತುಪ್ಪ ಸುರಿಯುತ್ತಾ, ಆ ಯೋಜನೆಗೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದೆ. ಆಗಲೇ, ಪಿನಾಕಿನಿ ನದಿ ವಿಷಯದಲ್ಲಿ ರಾಜ್ಯಕ್ಕೆ ಕಾನೂನು ಕುಣಿಕೆ ಬಿಗಿಯಲು ಬಿಜೆಪಿ ಸರ್ಕಾರ ಹುನ್ನಾರ ನಡೆಸಿದೆ. ರಾಜಕೀಯ ಕಾರಣಕ್ಕಾಗಿ ದಕ್ಷಿಣ ಪಿನಾಕಿನಿ ನದಿ ನೀರಿನ ಹಕ್ಕನ್ನು ಕರ್ನಾಟಕದಿಂದ ಕಸಿಯಲು ಕೇಂದ್ರ ಹವಣಿಸುತ್ತಿದೆ. ಕಾವೇರಿ, ಕೃಷ್ಣಾ, ಮಹದಾಯಿ ಸೇರಿ ವಿವಿಧ ಜಲವಿವಾದಗಳಲ್ಲಿ ಕರ್ನಾಟಕವನ್ನು ಕಾಡಿದಂತೆ, ವಿವಾದವೇ ಅಲ್ಲದ ದಕ್ಷಿಣ ಪಿನಾಕಿನಿಯನ್ನೂ ವಿವಾದದ ಕೂಪಕ್ಕೆ ಕನ್ನಡಿಗರನ್ನು ಕಾಡುವ ಹವಣಿಕೆ ಇದೆಯಷ್ಟೇ’ ಎಂದು ಕಿಡಿಕಾರಿದ್ದಾರೆ.
ಒಳ್ಳೇ ಟೈಂ ಅಲ್ಲವೆಂದು ನಿನ್ನೆ ಜೆಡಿಎಸ್ ಪಟ್ಟಿ ಬಿಡುಗಡೆಗೆ ರೇವಣ್ಣ ಬ್ರೇಕ್: ಎಚ್‌ಡಿಕೆ
ಸುಪ್ರೀಂ ವಿಚಾರಣೆ ಡಿ.14ಕ್ಕೆ ಮುಂದೂಡಿಕೆ: ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ಕಣಿವೆಯಲ್ಲಿ ಕರ್ನಾಟಕ ಕೈಗೊಂಡಿರುವ ಕಾಮಗಾರಿಗಳಿಗೆ ತಡೆ ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಚ್, ಪ್ರಕರಣದ ವಿಚಾರಣೆಯನ್ನು ಡಿ.14ಕ್ಕೆ ಮುಂದೂಡಿದೆ. ನ್ಯಾಯಮೂರ್ತಿ ಎಂ.ಆರ್.ಷಾ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದ್ದು, ಆ ಸಮಿತಿಗೆ ಈ ಕುರಿತು ಒಮ್ಮತಕ್ಕೆ ಬರಲು ಸೂಚಿಸಲಾಗಿದೆ. ಜೊತೆಗೆ, ಈ ಸಂಬಂಧ ನ್ಯಾಯಾಧಿಕರಣ ರಚನೆ ಕುರಿತಾಗಿ ಕೇಂದ್ರ ಸರ್ಕಾರ ಅಂತಿಮ ನಿರ್ಣಯ ಕೈಗೊಳ್ಳಬೇಕಾಗಿದೆ. ಹೀಗಾಗಿ, ನಾಲ್ಕು ವಾರಗಳ ಕಾಲಾವಕಾಶ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಟ್ ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಸಮ್ಮತಿ ಸೂಚಿಸಿದ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.14ಕ್ಕೆ ಮುಂದೂಡಿತು.
JDS Pancharatna Rathayatra: ಮೈತ್ರಿ ಸರ್ಕಾರ ಬೀಳಿಸಿದ್ದೇ ಸಿದ್ದರಾಮಯ್ಯ: ಎಚ್‌ಡಿಕೆ
ಪ್ರಕರಣವೇನು?: ಮಾಲೂರು ತಾಲೂಕಿನ ಯರಗೋಳು ಬಳಿ ಪೆನ್ನಾರ್ ಉಪನದಿ ಮಾರ್ಕಾಂಡೇಯ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಾಣ, ಜಲಾನಯನ ಪ್ರದೇಶ ವ್ಯಾಪ್ತಿಯ ಯಲ್ಲಮಲ್ಲಪ್ಪ ಚೆಟ್ಟಿಕೆರೆಯಿಂದ ಹೊಸಕೋಟೆ ಕೆರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಸಮೀಪ ಪೊನ್ನೆಯಾರ್ ನದಿಯಿಂದ ನೀರು ಹರಿಸುವ ಕಾಮಗಾರಿ ಸೇರಿದಂತೆ ಪೆನ್ನಾರ್ ನದಿ ಕಣಿವೆಯಲ್ಲಿ ಕರ್ನಾಟಕ ಕೈಗೊಂಡಿರುವ ಕಾಮಗಾರಿಗಳಿಗೆ ಆಕ್ಷೇಪ ವ್ಯಕ್ತಪಡಿಸಿ ತಮಿಳುನಾಡು ಸರ್ಕಾರ ನ್ಯಾಯಾಲಯದ ಮೊರೆ ಹೋಗಿದೆ. ಪರಸ್ಪರ ಮಾತುಕತೆ ಮೂಲಕ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.