ಬಿಹಾರ ಚುನಾವಣಾ ಕಣದಲ್ಲಿ ಬಿಗ್ ಟ್ವಿಸ್ಟ್, ಬಂಡೆದ್ದ ಚಿರಾಗ್‌ಗೆ ಮುಖಭಂಗ!
ಜೆಡಿಯು 122, ಬಿಜೆಪಿಗೆ 121 ಕಡೆ ಸ್ಪರ್ಧೆ| ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ| ನಿತೀಶ್ ಸಿಎಂ ಅಭ್ಯರ್ಥಿ
ಪಟನಾ(ಅ.07): ಬಿಹಾರ ವಿಧಾನಸಭೆ ಚುನಾವಣೆಗೆ ಎನ್‌ಡಿಎ ಅಂಗಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ತಮ್ಮ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದು, ರಾಜ್ಯದಲ್ಲಿರುವ 243 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ 121 ಕ್ಷೇತ್ರಗಳಲ್ಲಿ ಹಾಗೂ ಜೆಡಿಯು 122 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ.
ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುವುದಾಗಿಯೂ, ಮೈತ್ರಿಕೂಟ ಗೆದ್ದರೆ ಮತ್ತೆ ಅವರೇ ಮುಖ್ಯಮಂತ್ರಿಯೆಂದೂ ಎರಡೂ ಪಕ್ಷಗಳು ಪುನರುಚ್ಚರಿಸಿವೆ. ಅದರೊಂದಿಗೆ, ನಿತೀಶ್‌ರ ವಿರುದ್ಧ ಬಂಡೆದ್ದು ಎನ್‌ಡಿಎದಿಂದ ಹೊರಗೆ ಹೋಗಿರುವ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಹಾಗೂ ಅದರ ಅಧ್ಯಕ್ಷ ಚಿರಾಗ್ ಪಾಸ್ವಾನ್‌ಗೆ ಮುಖಭಂಗವಾಗಿದೆ.
ಮಂಗಳವಾರ ಸ್ವತಃ ನಿತೀಶ್, ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸೀಟು ಹಂಚಿಕೆ ವಿಚಾರ ಪ್ರಕಟಿಸಿದರು. ಜೆಡಿಯು ಕೋಟಾದಲ್ಲಿ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ಅವರ ಹಿಂದುಸ್ತಾನಿ ಅವಾಂ ಮೋರ್ಚಾಗೆ ಏಳು ಸೀಟು ಬಿಟ್ಟುಕೊಡಲಾಗುವುದು. ಬಿಜೆಪಿ ಕೋಟಾದಲ್ಲಿ ಎನ್‌ಡಿಎಯ ನೂತನ ಅಂಗಪಕ್ಷ ವಿಕಾಸಶೀಲ್ ಇನ್ಸಾನ್ ಪಾರ್ಟಿಗೆ ಸೀಟು ಬಿಟ್ಟುಕೊಡಲಾಗುವುದು ಎಂದು ತಿಳಿಸಿದರು.
ಚುನಾವಣೆಯಲ್ಲಿ ಎನ್‌ಡಿಎಯ ಯಾವ ಪಕ್ಷ ಎಷ್ಟುಸೀಟು ಗೆದ್ದರೂ ಮೈತ್ರಿಕೂಟಕ್ಕೆ ಬಹುಮತ ಬಂದರೆ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಎಂದು ಸುಶೀಲ್ ಮೋದಿ ಹೇಳಿದರು. ಕೇಂದ್ರದಲ್ಲಿ ಎಲ್‌ಜೆಪಿ ನಮ್ಮ ಮೈತ್ರಿ ಪಕ್ಷವಾಗಿದ್ದು, ಬಿಹಾರದಲ್ಲಿ ನಿತೀಶ್ ಕುಮಾರ್ ಅವರೇ ಎನ್‌ಡಿಎ ನಾಯಕ ಎಂದು ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಸ್ಪಷ್ಟಪಡಿಸಿದರು.