ರಾಮನಗರ: ಡಿಕೆಶಿಯೇ ಅಭ್ಯರ್ಥಿಯೆಂದು ಭಾವಿಸಿ ಕಾಂಗ್ರೆಸ್ ಗೆಲ್ಲಿಸಿ: ಡಿಕೆಶಿ ಕರೆ
ರಾಮನಗರ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಇಲ್ಲಿ ಯಾರೇ ಅಭ್ಯರ್ಥಿಯಾದರು ಡಿಕೆಶಿಯೇ ಅಭ್ಯರ್ಥಿ ಎಂದು ಭಾವಿಸಿ ಕಾಂಗ್ರೆಸ್ ಅನ್ನು ಗೆಲ್ಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ರಾಮನಗರ (ಮಾ.15) : ರಾಮನಗರ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಇಲ್ಲಿ ಯಾರೇ ಅಭ್ಯರ್ಥಿಯಾದರು ಡಿಕೆಶಿಯೇ ಅಭ್ಯರ್ಥಿ ಎಂದು ಭಾವಿಸಿ ಕಾಂಗ್ರೆಸ್ ಅನ್ನು ಗೆಲ್ಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಸುಗ್ಗನಹಳ್ಳಿ ಗ್ರಾಮ(Sugganahalli village)ದಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್(Congress Guarantee Card) ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಇಕ್ಬಾಲ್ ಅಥವಾ ಬೇರೆ ಯಾರೂ ಅಭ್ಯರ್ಥಿ ಅಲ್ಲ. ಡಿಕೆಶಿಯೇ ಅಭ್ಯರ್ಥಿಯೆಂದು ತಿಳಿದು ಕೆಲಸ ಮಾಡಬೇಕು ಎಂದರು.
ಸೋಮಣ್ಣ ಕಾಂಗ್ರೆಸ್‌ಗೆ ಬರ್ತೀನಿ ಅಂದಿಲ್ಲ, ನಾನೂ ಕರೆದಿಲ್ಲ: ಡಿಕೆಶಿ...
ಜೆಡಿಎಸ್ ನಾಯಕರಾದ ದೇವೇಗೌಡರು(HD Devegowda) ಪ್ರಧಾನಿ ಹಾಗೂ ಕುಮಾರಸ್ವಾಮಿ(HD Kumaraswamy) ಮುಖ್ಯಮಂತ್ರಿ ಆಗಿದ್ದರು. ಅನಿತಾ ಕುಮಾರಸ್ವಾಮಿ ಅವರಿಗೆ ಶಾಸಕರಾಗುವ ಅವಕಾಶ ನೀಡಿದ್ದೀರಿ. ನಿಖಿಲ್ ಬಗ್ಗೆ ನಾನು ಮಾತನಾಡುವುದಿಲ್ಲ. ಇವರು ರಾಮನಗರ(Ramanagara) ಜಿಲ್ಲೆ ಘೋಷಣೆ ಮಾಡಿದ್ದನ್ನು ಹೊರತು ಪಡಿಸಿದರೆ ನೆನೆಯುವಂತಹ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಜಿಲ್ಲೆ ಕ್ಲೀನ್ ಆಗಿದೆಯಾ?:
ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಜಿಲ್ಲೆಯನ್ನು ಕ್ಲೀನ್ ಮಾಡುತ್ತೇನೆ ಎಂದು ಬಂದಿದ್ದರು. ಜಿಲ್ಲೆಯಲ್ಲಿ ಏನಾದರು ಕ್ಲೀನ್ ಆಯಿತಾ, ಸರ್ಕಾರಿ ಕಚೇರಿಗಳಲ್ಲಿ ಲಂಚ ನಿಂತು ಹೋಯಿತಾ. ಇವರೆಲ್ಲರು ಏನು ಬದಲಾವಣೆ ತಂದಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಕೊರೋನಾ ಸಂಕಷ್ಟದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಜನರಿಗಾಗಿ ಏನನ್ನು ಮಾಡಲಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಶಕ್ತಿ ಮೀರಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿತು. ಸೋಂಕಿತರಿಗೆ ಪೌಷ್ಠಿಕ ಆಹಾರ, ಜನರ ಮನೆ ಬಾಗಿಲಿಗೆ ಔಷಧಿ ಹಾಗೂ ಮೃತರ ಅಂತ್ಯ ಸಂಸ್ಕಾರ ನೆರವೇರಿಸಲು ಸಹಾಯ ಮಾಡಿದೇವು. ಈ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ನವರು ಏಕೆ ಮಾಡಲಿಲ್ಲ ಎಂದು ಕೇಳಿದರು.
ಶಾಸಕರು ಯಾಕೆ ಕೆಲಸ ಮಾಡಿಲ್ಲ:
ವಸತಿ ಸಚಿವ ಸೋಮಣ್ಣ ಅವರ ಕಾಲು-ಕೈ ಹಿಡಿದು ನಿವೇಶನ ರಹಿತರಿಗೆ ನಿವೇಶನ ಕೊಡಿಸಿದ್ದೇನೆ. ಕನಕಪುರದಲ್ಲಿ ನರೇಗಾ ಯೋಜನೆ ಉಪಯೋಗ ಪಡೆದು 4 ಕೋಟಿ ರು. ವೆಚ್ಚದ ಕಾಮಗಾರಿಗಳನ್ನು ಮಾಡಿಸಿದ್ದೇವೆ. ಇಲ್ಲಿನ ಶಾಸಕರು ಆ ಕೆಲಸಗಳನ್ನು ಏಕೆ ಮಾಡಲಿಲ್ಲ . ಕಾಂಗ್ರೆಸ್ ಸರ್ಕಾರ ಇಲ್ಲದಿದ್ದರೂ ಕನಕಪುರದಲ್ಲಿ ಅಭಿವೃದ್ಧಿ ಮಾಡಿದ್ದೇವೆ. ದೇವರು ವರ ಕೊಡಲ್ಲ, ಅವಕಾಶ ಕೊಡುತ್ತಾನೆ. ಆಗಲೂ ಜನರಿಗೆ ಸಹಾಯ ಮಾಡದಿದ್ದರೆ ಇನ್ಯಾರಿಗೆ ಸಹಾಯ ಮಾಡುತ್ತಾರೆ ಎಂದರು.
ರಾಮನಗರದಲ್ಲಿ ರಾಮ ಮಂದಿರ ನಿರ್ಮಣದ ವಿಚಾರದಲ್ಲಿ ಬಿಜೆಪಿ ಪಕ್ಷದ ವಿರುದ್ಧ ಕಿಡಿಕಾರಿದ ಶಿವಕುಮಾರ್, ತಮಗೆ ಜನರ ಸೇವೆ ಮಾಡಲು ಅಧಿಕಾರ ಬೇಕು. ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಒಂದು ಅವಕಾಶ ಮಾಡಿಕೊಡಿ. ಅಭಿವೃದ್ಧಿ ಮಾಡದಿದ್ದರೆ ನನ್ನ ಕುತ್ತಿಗೆ ಪಟ್ಟಿಹಿಡಿದು ಕೇಳಿ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಮಾತನಾಡಿ, ಈ ಜಿಲ್ಲೆ ಅಭಿವೃದ್ಧಿ ಹೊಂದಿ ಹೊಸ ಚರಿತ್ರೆ ಬರೆಯಲು ಡಿಕೆ ಸಹೋದರರಿಂದ ಮಾತ್ರ ಸಾಧ್ಯ. ಜಿಲ್ಲೆಯಲ್ಲಿ ಯಾರ್ಯಾರಿಗೊ ಅವಕಾಶ ನೀಡಿದ್ದೀರಿ. ಒಂದು ಬಾರಿ ಈ ಮಣ್ಣಿನ ಮಗ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ, ಎಸ್ .ರವಿ, ಗ್ರಾಪಂ ಅಧ್ಯಕ್ಷೆ ಪ್ರೇಮಾ ಗೋವಿಂದಯ್ಯ, ನಗರಸಭೆ ಅಧ್ಯಕ್ಷೆ ಪವಿತ್ರ, ಮಾಜಿ ಅಧ್ಯಕ್ಷೆ ಪಾರ್ವತಮ್ಮ, ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಮುನಿರಾಜು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್ .ರಾಜು, ಮುಖಂಡರಾದ ಡಿ.ಎಂ.ವಿಶ್ವನಾಥ್ , ಚೇತನ್ ಕುಮಾರ್ , ದೊಡ್ಡ ವೀರೇಗೌಡ, ತೇಜ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
ರಾಮನಗರ ಉತ್ತುಂಗಕ್ಕೆ ಏರುತ್ತದೆ
ಇದು ರಾಮನಗರ ಅಲ್ಲ, ಇದು ಬೆಂಗಳೂರು. ವಿಧಾನ ಸೌಧ ಕಟ್ಟಿದ ಜಿಲ್ಲೆಯಾಗಿದೆ. ಇದು ಹೆಸರು ಮಾತ್ರ ರಾಮನಗರ ಅಷ್ಟೇ. ಇದು ಬೆಂಗಳೂರು ದಕ್ಷಿಣ ಅಂತ ಹೆಸರಿಡಬೇಕಿತ್ತು. ಇನ್ನೆರಡು ವರ್ಷ ಆದ ಮೇಲೆ ರಾಮನಗರ ಎತ್ತರಕ್ಕೆ ಹೋಗುತ್ತದೆ. ಇಲ್ಲ ಅಂದ್ರೆ ನನ್ನ ಹೆಸರು ಡಿ.ಕೆ.ಶಿವಕುಮಾರ್ ಅಂತ ಕರೆಯಬೇಡಿ ಎಂದು ಹೇಳಿದರು