ಮೂರೂ ಕ್ಷೇತ್ರದಲ್ಲಿ ಗೆದ್ದು ವಿಪಕ್ಷಗಳಿಗೆ ಬುದ್ದಿ ಕಲಿಸಿ: ಕೆ.ಸಿ.ವೇಣುಗೋಪಾಲ್
ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ, ಮೂರೂ ಕ್ಷೇತ್ರಗಳ ಸಂಭಾವ್ಯರ ಪಟ್ಟಿಯನ್ನು ಶೀಘ್ರ ಸಿದ್ಧಪಡಿಸಿ ದೆಹಲಿಗೆ ಶೀಘ್ರ ಕಳುಹಿಸಿ. ಉಪ ಚುನಾವಣೆ ಹೊರತುಪಡಿಸಿ ಮತ್ಯಾವ ಅನಗತ್ಯ ವಿಚಾರಗಳಿಗೂ ಆಸ್ಪದ ಬೇಡ.
ಬೆಂಗಳೂರು (ಅ.17): 'ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ, ಮೂರೂ ಕ್ಷೇತ್ರಗಳ ಸಂಭಾವ್ಯರ ಪಟ್ಟಿಯನ್ನು ಶೀಘ್ರ ಸಿದ್ಧಪಡಿಸಿ ದೆಹಲಿಗೆ ಶೀಘ್ರ ಕಳುಹಿಸಿ. ಉಪ ಚುನಾವಣೆ ಹೊರತುಪಡಿಸಿ ಮತ್ಯಾವ ಅನಗತ್ಯ ವಿಚಾರಗಳಿಗೂ ಆಸ್ಪದ ಬೇಡ. ಈ ಬಗ್ಗೆ ಹಿರಿಯ ಸಚಿವರಿಗೂ ಎಚ್ಚರಿಕೆ ನೀಡಿ.' ಹೀಗಂತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ರಾಜ್ಯ ನಾಯಕತ್ವಕ್ಕೆ ನೇರ ನಿರ್ದೇಶನ ನೀಡಿದ್ದಾರೆ. ಬುಧವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆ ಸುಮಾರು ಒಂದೂವರೆ ತಾಸು ಚರ್ಚೆ ನಡೆಸಿದ ಅವರು ಈ ಸಂದೇಶ ನೀಡಿದರೆಂದು ಮೂಲಗಳು ಹೇಳಿವೆ.
ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಭೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿರುವ ವೇಣುಗೋಪಾಲ್ ಅವರು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಬುಧವಾರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜತೆ ಸಭೆ ನಡೆಸಿದರು. ಈ ವೇಳೆ ಪಕ್ಷ ಹಾಗೂ ಸರ್ಕಾರದ ವತಿಯಿಂದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರೀತಿಯ ಸಿದ್ಧತೆ ನಡೆಸಿ, ಕೂಡಲೇ ಮೂರೂ ಕ್ಷೇತ್ರಗಳ ಸಂಭಾವ್ಯರ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿ, ತನ್ಮೂಲಕ ಶೀಘ್ರವಾಗಿ ಚುನಾವಣೆ ಸಿದ್ಧತೆ ಅಭ್ಯರ್ಥಿಗಳನ್ನು ಪ್ರಕಟಿಸಿ ಮಾಡಿಕೊಳ್ಳೋಣ. ಮೂರೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಶಕ್ತಿಗಳಿಗೆ ಬುದ್ದಿ ಕಲಿಸೋಣ ಎಂದು ಸಲಹೆ ನೀಡಿದರು ಎಂದು ತಿಳಿದುಬಂದಿದೆ.
ಅಶಿಸ್ತು ವರ್ತನೆ ಬಗ್ಗೆ ಹೈಕಮಾಂಡ್ ಕ್ರಮ: ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಗೊಂದಲ ಮೂಡಿಸುವಂತಹ ಮುಖ್ಯಮಂತ್ರಿ ಬದಲಾವಣೆ, ದಲಿತ ಮುಖ್ಯಮಂತ್ರಿ ಹೇಳಿಕೆಗಳು, ಪ್ರತ್ಯೇಕ ಸಭೆಗಳು ಸೇರಿದಂತೆ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಒಂದೊಮ್ಮೆ ಯಾರೇ ಈ ರೀತಿ ಚಟುವಟಿಕೆಯಲ್ಲಿ ತೊಡಗಿದರೂ ನೇರವಾಗಿ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ ಎಂದು ವೇಣುಗೋಪಾಲ್ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ. ಮೂರೂ ಕ್ಷೇತ್ರಗಳ ನಾಯಕರೊಂದಿಗೆ ಚರ್ಚೆ: ಇದೇ ವೇಳೆ ಉಪ ಚುನಾವಣೆ ಎದುರಿಸುತ್ತಿರುವ ಮೂರೂ ಕ್ಷೇತ್ರಗಳ ಮೂಲಕ ಸ್ಥಳೀಯ ನಾಯಕರೊಂದಿಗೆ ವೇಣುಗೋಪಾಲ್ ಚರ್ಚಿಸಿದರು.
ಕಾವೇರಿ 6ನೇ ಹಂತದ ಕುಡಿಯುವ ನೀರು ಯೋಜನೆಗೆ ಸೂಚನೆ: ಸಿಎಂ ಸಿದ್ದರಾಮಯ್ಯ
ಸಂಡೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಸದ ಇ.ತುಕಾರಾಂ, ಶಿಗ್ಗಾಂವ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ದೂರವಾಣಿ ಮಾತನಾಡಿದರು. ಚನ್ನಪಟ್ಟಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲೇ ಇದ್ದ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರ ಎಲೆಕ್ಷನ್ ತನಕ ಸಚಿವ ಸಂಪುಟ ಪುನಾರಚನೆ ಇಲ್ಲ ಸಭೆಯಲ್ಲಿ ಸಚಿವ ಸಂಪುಟ ಪುನರ್ ರಚನೆ ವಿಚಾರವೂ ಪ್ರಮುಖವಾಗಿ ಪ್ರಸ್ತಾಪವಾಗಿದೆ. ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ ನಂತರ ಈ ವಿಚಾರ ಪರಿಗಣಿಸೋಣ. ಅಲ್ಲಿವರೆಗೆ ಈ ಬಗ್ಗೆ ಚರ್ಚೆ ಬೇಡ ಎಂದು ವೇಣುಗೋ ಪಾಲ್ ಹೇಳಿದರೆನ್ನಲಾಗಿದೆ. ಹೀಗಾಗಿ ಮಹಾರಾಷ್ಟ್ರ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಸಾಧ್ಯತೆಯಿದೆ ಎನ್ನಲಾಗುತ್ತಿದೆ.