ಮೈಸೂರು, (ಮಾ.17):  ಪ್ರತಿಷ್ಠೆಗೆ ಕಾರಣವಾಗಿದ್ದ ಮೈಸೂರು ಹಾಲು ಒಕ್ಕೂಟ (ಮೈಮುಲ್)​ ಚುನಾವಣೆಯಲ್ಲಿ ಅಂತಿಮವಾಗಿ ಜಿ.ಟಿ.ದೇವೇಗೌಡ ಮೇಲುಗೈ ಸಾಧಿಸಿದ್ದಾರೆ. ಇದರಿಂದ ಜೆಡಿಎಸ್ ಮೊದಲ ಹಂತದ ನಾಯಕರಾದ ಎಚ್‌ಡಿ ಕುಮಾರಸ್ವಾಮಿ ಹಾಗೂ ಸಾರಾ ಮಹೇಶ್‌ಗೆ ಭಾರೀ ಮುಖಭಂಗವಾಗಿದೆ.

ಮೈಮುಲ್ ಚುನಾವಣೆ ಜೆಡಿಎಸ್​ ಶಾಸಕರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್​ ನಡುವೆ ಪ್ರತಿಷ್ಠೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ಕುಮಾರಸ್ವಾಮಿ ಅವರೇ ಅಖಾಡಕ್ಕಿಳಿದಿದ್ದರು. ಆದ್ರೆ, ದಳಪತಿಗಳ ಪ್ಲಾನ್‌ ಯಾವುದೂ ವರ್ಕೌಟ್ ಆಗಿಲ್ಲ.

ಸ್ವ ಪಕ್ಷದ ಶಾಸಕ ಜಿಟಿಡಿ ಪ್ರಾಬಲ್ಯ ಅಂತ್ಯಗೊಳಿಸಲು ಹೋಗಿ ಮಕಾಡೆ ಮಲಗಿದ ಕುಮಾರಸ್ವಾಮಿ

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾ.ರಾ.ಮಹೇಶ್​ ಮಾತನಾಡುವ ವೇಳೆ ಗದ್ಗದಿತರಾಗಿ, ನಾನು 2 ವರ್ಷದ ಬಳಿಕ ಸಾರ್ವಜನಿಕ ಜೀವನದಿಂದಲೇ ನಿವೃತ್ತಿಯಾಗುತ್ತೇನೆ. ಯಾರ ವಿಚಾರವನ್ನೂ ಮಾತನಾಡಲು ಹೋಗುವುದಿಲ್ಲ ಎಂದು ಹೇಳಿರುವುದು ಮೈಸೂರಿನ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

 ನನ್ನಿಂದ ಜಿ.ಟಿ.ದೇವೇಗೌಡರಿಗೆ ತೊಂದರೆ ಆಗಿದೆ ಎಂದು ಚಾಮುಂಡೇಶ್ವರಿ ತಾಯಿ ಮೇಲೆ ಪ್ರಮಾಣ ಮಾಡಲಿ. ಅವರು ಪ್ರಮಾಣ ಮಾಡಿದ್ದೇ ಆದಲ್ಲಿ ನಾನು ರಾಜಕೀಯದಲ್ಲೇ ಇರುವುದಿಲ್ಲ. ಅವರ ಬಗ್ಗೆ ನನಗೆ ಸಾಕಷ್ಟು ಗೌರವ ಇದೆ. ನಾನು ಅವರಿಗೆ ಏನು ಅನ್ಯಾಯ ಮಾಡಿದ್ದೀನಿ? ನನ್ನನ್ನು ಏಕೆ‌ ಪದೇಪದೆ ದೂಷಣೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಬಿಎಸ್‌ವೈ - ಸಿದ್ದರಾಮಯ್ಯ ಸಹಕಾರ ಎಂದ ಜಿಟಿಡಿ : ಬಣಕ್ಕೆ ಭರ್ಜರಿ ಗೆಲುವು

ಈ ಹಿಂದೆ ಜಿ.ಟಿ.ದೇವೇಗೌಡ ಅವರು ಹೇಳಿದ್ದ 'ಶಕುನಿ, ಮಂಥರೆ..' ಹೇಳಿಕೆಗೆ ತಿರುಗೇಟು ನೀಡಿ, ಶಕುನಿ ಇಲ್ಲದಿದ್ದರೆ ಮಹಾಭಾರತ ನಡೆಯುತ್ತಿರಲಿಲ್ಲ, ಮಂಥರೆ ಇರಲಿಲ್ಲ ಅಂದಿದ್ರೆ ರಾಮಾಯಣ ನಡೆಯುತ್ತಿರಲಿಲ್ಲ. ಅವರಿಬ್ಬರೂ ಧರ್ಮ ರಾಜ್ಯ ಸ್ಥಾಪನೆಗೆ ಕಾರಣಕರ್ತರು ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

'ಕಾಂಗ್ರೆಸ್‌ಗೆ ಮಣೆ'
ಜಿ.ಟಿ.ದೇವೇಗೌಡ ಹುಣಸೂರು, ಪಿರಿಯಾಪಟ್ಟಣದಲ್ಲಿ ಜೆಡಿಎಸ್​ ಪಕ್ಷವನ್ನು ಬೆಂಬಲಿಸಿದ್ದಾರಾ? ಅವರು ಕಾಂಗ್ರೆಸ್​ ಕಾರ್ಯಕತರಿಗೇ ಮಣೆ ಹಾಕುತ್ತಾರೆ. ಹೆಚ್.ಡಿ.ಕೋಟೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮಣೆ ಹಾಕಿದ್ದಾರೆ. ಮೈಸೂರು ತಾಲೂಕಿನಲ್ಲಿಯೂ ಅದೇ ರೀತಿ‌ ಮಾಡಿದ್ದಾರೆ. 4 ವಿಭಾಗದಲ್ಲಿ ಒಂದೇ ಒಂದು ಸೀಟು ಜೆಡಿಎಸ್‌ಗೆ ನೀಡಿಲ್ಲ. 2 ಕಡೆ ಬಿಜೆಪಿ, ಕಾಂಗ್ರೆಸ್, ಜಿ.ಟಿ.ದೇವೇಗೌಡ ಒಂದಾದರು. ಇಷ್ಟೆಲ್ಲಾ ಮಾಡಿ, ಈ ಚುನಾವಣೆಯಲ್ಲಿ ಪಕ್ಷವನ್ನು ತರಬಾರದೆಂದು ಹೇಳುತ್ತಾರೆ. ಇಷ್ಟಕ್ಕೂ ಪಕ್ಷವನ್ನು ತಂದವರು ಯಾರು ಎಂದರು.

ಜಿಟಿಡಿಯನ್ನು ಕಟುವಾಗಿ ಪ್ರಶ್ನಿಸಿದ ಸಾರಾ
ಎಂ​ಎಲ್​ಸಿ ಚುನಾವಣೆಯಲ್ಲಿ ಲಕ್ಷ್ಮಣ ಸವದಿಗೆ ಮತ ಹಾಕಿದ್ರಿ, ಮೈಸೂರು ಮೇಯರ್ ಚುನಾವಣೆಗೆ ಬರ್ತೀನೆಂದು ಬರಲಿಲ್ಲ. ಹುಣಸೂರು ಉಪಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಿದ್ರಿ? ಹೀಗೆಲ್ಲಾ ಮಾಡುವ ನಿಮ್ಮ ನಿಲುವು ಏನು? ಎಂದು ಜಿ.ಟಿ.ದೇವೇಗೌಡರನ್ನು ಕಟುವಾಗಿ ಪ್ರಶ್ನಿಸಿದರು. ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷ, ಜೆಡಿಎಸ್ ಕಾರ್ಯಕರ್ತರು ಹಾಗೂ ಸಾ.ರಾ.ಮಹೇಶ್ ಬೆಂಬಲಿಗರನ್ನು ನಿರ್ನಾಮ ಮಾಡುವ ಯತ್ನವಾಗುತ್ತಿದೆ ಎಂಬ ಧಾಟಿಯಲ್ಲಿ ಆರೋಪಿಸಿರುವ ಸಾ.ರಾ.ಮಹೇಶ್​, ಜಿ.ಟಿ.ದೇವೇಗೌಡ ಎಂಬ ಮರಕ್ಕೆ ಜೆಡಿಎಸ್​ ಕಾರ್ಯಕರ್ತರು  ನೀರು ಹಾಕಿದ್ದಾರೆ. ಆದರೆ, ಅವರು ಯಾರನ್ನೂ ಬೆಳೆಯಲಿಕ್ಕೆ ಬಿಟ್ಟಿಲ್ಲ. ಹೀಗಾಗಿ ನಾವು ಬೇರೆ ಸಸಿ ನೆಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.