ಮೈಸೂರು, (ಮಾ.16): ಮಾಜಿ ಸಿಎಂ ಕುಮಾರಸ್ವಾಮಿಯ ಪ್ರತಿಷ್ಠೆಗೆ ಕಾರಣವಾಗಿದ್ದ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟ (ಮೈಮುಲ್) ಚುನಾವಣೆಯಲ್ಲಿ ಜೆಡಿಎಸ್ ರೆಬೆಲ್ ಶಾಸಕ ಜಿ.ಟಿ.ದೇವೇಗೌಡ ಬಣ ಭರ್ಜರಿ ಜಯ ಸಾಧಿಸಿದೆ. 

ಮೈಮುಲ್ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಇಂದು (ಮಂಗಳವಾರ) ಚುನಾವಣೆ ನಡೆದಿದ್ದು, ಈ ಪೈಕಿ 12 ಸ್ಥಾನಗಳಲ್ಲಿ ಶಾಸಕ.ಜಿ.ಟಿ.ದೇವೇಗೌಡ ಬಣ ವಿಜಯಪತಾಕೆ ಹಾರಿಸಿದೆ. ಇನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಬಣಕ್ಕೆ ಕೇವಲ ಮೂರು ಸ್ಥಾನಗಳಲ್ಲಿ ಗೆಲುವು ಸಿಕ್ಕಿದೆ.

ಪ್ರತಿಷ್ಠೆಯ ಕಣವಾಗಿ ಜೆಡಿಎಸ್‌ನೊಳಗೆ ಜಿದ್ದಾಜಿದ್ದು : ಸಾ ರಾ ವಿರುದ್ಧ ಅಸಮಾಧಾನ

ಈ ಮೂಲಕ ಸಹಕಾರಿ ಕ್ಷೇತ್ರದಲ್ಲಿ ನಾನೇ ಕಿಂಗ್ ಮೇಕರ್ ಎಂಬ ಸಂದೇಶವನ್ನು  ಜಿಟಿಡಿ ಕೊಟ್ಟರು, ಇದರೊಂದಿಗೆ ಮೈಸೂರಿನಲ್ಲಿ ಠಿಕಾಣಿಹೂಡಿದ್ದ ಕುಮಾರಸ್ವಾಮಿ ಮುಖಭಂಗವಾಗಿದೆ.

ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರು ಇರುವ ಜಿಟಿಡಿ, ಮೈಸೂರು ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿದ್ದಾರೆ. ಇದನ್ನು ಅಂತ್ಯಗೊಳಿಸಲು ಸ್ವತಃ ಎಚ್‌ಡಿ ಕುಮಾರಸ್ವಾಮಿಯೇ ತಾಲೂಕು ಕೇಂದ್ರಗಳಿಗೆ ತೆರಳಿ ಪ್ರಚಾರ ಮಾಡಿದ್ದರು. ಅಲ್ಲದೇ ಮೈಸೂರಿನಲ್ಲೇ ಮೊಕ್ಕಾಂ ಹೂಡಿ ಜಿ.ಟಿ.ದೇವೇಗೌಡ್ರನ್ನ ಬಗ್ಗುಬಡಿಯಲು ನಾನಾ ರಣತಂತ್ರ ರೂಪಿಸಿದ್ದರು. ಆದ್ರೆ, ಜಿ.ಟಿ. ಪ್ರತಿತಂತ್ರಕ್ಕೆ ಎಚ್‌ಡಿಕೆ ಮಕಾಡೆ ಮಲಗಬೇಕಾಯ್ತು.

ಜಿಟಿಡಿ ಟೀಂ ಕ್ಲೀನ್ ಸ್ವೀಪ್
ಹುಣಸೂರು ಉಪವಿಭಾಗದ ಎಲ್ಲಾ 8 ಸ್ಥಾನಗಳಲ್ಲಿ ಜಿ.ಟಿ.ದೇವೇಗೌಡರ ಬಣ ಗೆಲುವು ಸಾಧಿಸಿದೆ.  8ಕ್ಕೆ 8 ಸ್ಥಾನಗಳನ್ನು ಜಿ. ಟಿ. ದೇವೇಗೌಡರ ಬಣದ ಅಭ್ಯರ್ಥಿಗಳು ಗೆದ್ದಿದ್ದಾರೆ. ಹೀಗಾಗಿ, ಹುಣಸೂರು ಉಪ ವಿಭಾಗದಲ್ಲಿ ಜಿಟಿಡಿ ಟೀಂ ಕ್ಲೀನ್ ಸ್ವೀಪ್ ಮಾಡಿದೆ. 

ರೇವಣ್ಣ ಸಂಬಂಧಿಗೆ ಸೋಲು
ಹೌದು....ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ್ರ ಪುತ್ರ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸಂಬಂಧಿ ಎಸ್‌.ಕೆ. ಮಧುಚಂದ್ರ ಸೋಲುಕಂಡಿರುವುದು ದಳಪತಿಗಳಿಗೆ ಅಚ್ಚರಿಯಾಗಿದೆ. ಮಧುಚಂದ್ರ  ಅವರು ಜೆಡಿಎಸ್ ಶಾಸಕ. ಸಾರಾ ಮಹೇಶ್ ಬೆಂಬಲದೊಂದಿಗೆ ಚುನಾವಣಾ ಅಖಾಡಕ್ಕಿಳಿದ್ದರು. ಆದ್ರೆ, ಜಿಟಿಡಿ ಪ್ರಾಬಲ್ಯಕ್ಕೆ ಕುಮಾರಸ್ವಾಮಿ ಹಾಗೂ ಸಾರಾ ಮಹೇಶ್ ಪ್ಲಾನ್‌ಗಳೆಲ್ಲ ತಲೆಕೆಳಗಾಗಿವೆ.