"ಅಧಿಕಾರಕ್ಕಾಗಿ ಭಾಳಾ ಠಾಕ್ರೆ ತತ್ವಗಳಿಗೆ ಮೋಸ ಮಾಡುವುದಿಲ್ಲ": ಬಂಡಾಯ ನಾಯಕ ಏಕನಾಥ ಶಿಂಧೆ 

Maharashtra Political Crisis: ಅಧಿಕಾರದ ಆಸೆಯಿಂದ ಭಾಳಾ ಸಾಹೇಬ್‌ ಠಾಕ್ರೆ ಮತ್ತು ಆನಂದ್‌ ದಿಘೆ ಅವರ ಸಿದ್ಧಾಂತಗಳಿಗೆ ಮೋಸ ಮಾಡುವುದಿಲ್ಲ ಎಂದು ಮಹಾರಾಷ್ಟ್ರ ಶಿವಸೇನೆಯ ಬಂಡಾಯ ಶಾಸಕ ಏಕನಾಥ್‌ ಶಿಂಧೆ ಹೇಳಿದ್ದಾರೆ. ಭಾಳಾ ಸಾಹೇಬರು ನಮಗೆ ಹಿಂದುತ್ವ ಪಾಲಿಸುವಂತೆ ಹೇಳಿದ್ದಾರೆ. ಅದನ್ನು ಎಂದಿಗೂ ಪಾಲಿಸುತ್ತೇವೆ ಎಂದವರು ಹೇಳಿದ್ದಾರೆ. 

will not cheat bhalasaheb thackeray's values for power says eknath shinde

ಮುಂಬೈ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್‌ ಅಗಾಢಿ (Maha Vikas Agadhi) ಸರ್ಕಾರ ಅಸ್ಥಿರವಾದ ಸಂದರ್ಭದಲ್ಲಿ ಇದಕ್ಕೆ ಮೂಲ ಕಾರಣವಾದ ಸಚಿವ, ಶಿವಸೇನೆ ನಾಯಕ ಏಕನಾಥ ಶಿಂಧೆ (Eknath Shinde) ಅವರಿಗೆ ವಿಪ್‌ ಜಾರಿಗೊಳಿಸಲಾಗಿದೆ. ಜತೆಗೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದಲೂ ಶಿಂಧೆ ಅವರನ್ನು ಕೆಳಗಿಳಿಸಲಾಗಿದೆ. ಶಿಂಧೆ ನೇತೃತ್ವದಲ್ಲಿ ಒಟ್ಟೂ 26 ಶಿವಸೇನೆ ಶಾಸಕರು ಗುಜರಾತಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ವಿಧಾನ ಪರಿಷತ್‌ ಚುನಾವಣೆಯಲ್ಲಿನ ಅಡ್ಡ ಮತದಾನ ಮಾಡಿದ ಬೆನ್ನಲ್ಲೇ ಸರ್ಕಾರವನ್ನು ಉರುಳಿಸಲು ಶಿಂಧೆ ಮತ್ತು ಬೆಂಬಲಿಗ ಶಾಸಕರು ಸೂರತ್‌ನ ಹೋಟೆಲ್‌ಗೆ ತೆರಳಿದ್ದಾರೆ. 

ಶಿವಸೇನೆಯ ಸೆವ್ರಿ ವಿಧಾನಸಭಾ ಕ್ಷೇತ್ರದ ಸದಸ್ಯ ಅಜಯ್‌ ಚೌಧರಿಯನ್ನು (Ajay Choudhary) ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಏಕನಾಥ ಶಿಂಧೆ, ಅಧಿಕಾರಕ್ಕೋಸ್ಕರ ನಂಬಿದ ತತ್ವಗಳಿಗೆ ಎಂದೂ ಮೋಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದು ಪರೋಕ್ಷವಾಗಿ ಉದ್ಧವ್‌ ಠಾಕ್ರೆಗೆ (Shiv Sena chief Uddhav Thackeray) ಹೇಳಿರುವ ಮಾತು. ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸಿದ್ಧಾಂತ ಶಿವಸೇನೆಯ ಸಿದ್ಧಾಂತಕ್ಕೆ ವಿರುದ್ಧವಾಗಿದ್ದರೂ ಅವರ ಜತೆಗೂಡಿ ಸರ್ಕಾರ ರಚಿಸಿದ್ದನ್ನು ಈ ಮೂಲಕ ಶಿಂಧೆ ಖಂಡಿಸಿದ್ದಾರೆ. 

ಇದನ್ನೂ ಓದಿ: Maharashtra Political Crisis: ಶಾಸಕಾಂಗ ನಾಯಕ ಸ್ಥಾನದಿಂದ ರೆಬೆಲ್‌ ಶಿಂಧೆ ವಜಾ

"ಬಾಳಾ ಸಾಹೇಬ್‌ ಠಾಕ್ರೆ ನಮಗೆ ಹಿಂದುತ್ವ ಪಾಲಿಸುವಂತೆ ಹೇಳಿದ್ದಾರೆ. ನಾವೆಂದೂ ಅಧಿಕಾರಕ್ಕಾಗಿ ಬಾಳಾ ಸಾಹೇಬ್‌ ಠಾಕ್ರೆಯವರು ನಂಬಿದ ಸಿದ್ಧಾಂತಗಳಿಗೆ ದ್ರೋಹ ಬಗೆದವರಲ್ಲ, ಮತ್ತು ಬಗೆಯುವುದೂ ಇಲ್ಲ. ಧರ್ಮವೀರ್‌ ಆನಂದ್‌ ದಿಘೆ ಸಾಹೇಬರ ಪಾಠವನ್ನು ಮರೆಯುವುದಿಲ್ಲ," ಎಂದು ಶಿಂಧೆ ತಿಳಿಸಿದ್ದಾರೆ. 
ಮಹಾರಾಷ್ಟ್ರ ರಾಜಕೀಯದ ಬಿಕ್ಕಟ್ಟು, ಸೋಮವಾರದ ವಿಧಾನ ಪರಿಷತ್‌ ಫಲಿತಾಂಶದ ನಂತರ ಆರಂಭವಾಗಿದೆ. ಸೋಮವಾರ ಸಂಜೆಯೇ ಶಿಂಧೆ ಬೆಂಬಲಿಗರನ್ನು ಕರೆದುಕೊಂಡು ಗುಜರಾತ್‌ ತಲುಪಿದ್ದಾರೆ. ಎನ್‌ಸಿಪಿ, ಕಾಂಗ್ರೆಸ್‌ ಮತ್ತು ಶಿವಸೇನೆ ಜಂಟಿಯಾಗಿ ನಿಲ್ಲಿಸಿದ್ದ ಅಭ್ಯರ್ಥಿ ಅಡ್ಡ ಮತದಾನದಿಂದ ಸೋಲು ಕಂಡಿದ್ದರು. ಇದು ಉದ್ಧವ್‌ ಠಾಕ್ರೆ ಸಿಟ್ಟಿಗೆ ಕಾರಣವಾಗಿತ್ತು. ಇದೀಗ ಮುಂದುವರೆದ ಭಾಗವಾಗಿ ಸರ್ಕಾರವನ್ನೇ ಉರುಳಿಸಲು ಶಿಂಧೆ ನಿಂತಿದ್ದಾರೆ. 

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಆಪರೇಷನ್‌ ಕಮಲ?: ತೂಗುಯ್ಯಾಲೆಯಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ

ಮೂಲಗಳ ಪ್ರಕಾರ ಏಕನಾಥ ಶಿಂಧೆ ಅವರಿಗೆ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ವಿರುದ್ಧ ಬೇಸರವಿದೆ. ಇದೇ ಕಾರಣಕ್ಕೆ ಬೆಂಬಲಿಗರನ್ನು ಕರೆದುಕೊಂಡು ಸೂರತ್‌ನ ಲಿ ಮರಿಡಿಯನ್‌ ಹೋಟೆಲ್‌ನಲ್ಲಿ ಕ್ಯಾಂಪ್‌ ಹಾಕಿದ್ದಾರೆ. ಶಿವಸೇನೆ ಸಂಸದ ಸಂಜಯ್ ರಾವತ್‌ ಇಂದು ಬೆಳಗ್ಗೆ ಮಾಧ್ಯಮದೊಂದಿಗೆ ಮಾತನಾಡಿ, ಮಹಾರಾಷ್ಟ್ರ ಸರ್ಕಾರ ಉರುಳಿಸಲು ಬಿಜೆಪಿ ಷಡ್ಯಂತ್ರ ಮಾಡುತ್ತಿದೆ ಎಂದು ಹೇಳಿದ್ದರು. "ಮಧ್ಯಪ್ರದೇಶದಲ್ಲಿ ಆಪರೇಷನ್‌ ಕಮಲದ ಮೂಲಕ ಹೇಗೆ ಸರ್ಕಾರವನ್ನು ಉರುಳಿಸಲಾಯಿತೋ ಅದೇ ರೀತಿ ಉದ್ಧವ್‌ ಠಾಕ್ರೆ ಸರ್ಕಾರವನ್ನು ಬೀಳಿಸಲು ಷಡ್ಯಂತ್ರ ನಡೆಯುತ್ತಿದೆ.ಆದರೆ ನಾವು ಹಾಗಾಗಲು ಬಿಡುವುದಿಲ್ಲ," ಎಂದು ರಾವತ್‌ ಹೇಳಿದ್ದರು. 

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲ, ಪತನದ ಅಂಚಿಗೆ ಉದ್ಧವ್ ಠಾಕ್ರೆ ಸರ್ಕಾರ?

ಆದರೆ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಆರೋಪವನ್ನು ಅಲ್ಲಗಳೆದಿದ್ದಾರೆ. ಬಿಜೆಪಿಗೂ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವೇ ಇಲ್ಲ ಎಂದು ಕಡ್ಡಿ ಮುರಿದಂತೆ ಉತ್ತರಿಸಿದ್ದಾರೆ.

ಏಕನಾಥ ಶಿಂಧೆಯಿಂದ ಹೊಸ ಪ್ರಾದೇಶಿಕ ಪಕ್ಷ?:
ಏಕನಾಥ ಶಿಂಧೆ ಬಿಜೆಪಿಗೆ ಬೆಂಬಲ ನೀಡಿ ಸರ್ಕಾರದ ಭಾಗವಾಗುತ್ತಾರೆಯೇ ಹೊರತು, ಬಿಜೆಪಿ ಪಕ್ಷ ಸೇರುವುದಿಲ್ಲ ಎನ್ನುತ್ತವೆ ಮೂಲಗಳು. ಮೂಲಗಳ ಮಾಹಿತಿ ಪ್ರಕಾರ ಶಿಂಧೆ ದಿವಂಗತ ಶಿವಸೇನೆ ಹಿರಿಯ ನಾಯಕ ಆನಂದ್‌ ದಿಘೆ ಅವರ ಹೆಸರಿನಲ್ಲಿ ಆನಂದ್‌ ಸೇನೆ ಎಂಬ ಹೊಸ ರಾಜಕೀಯ ಪಕ್ಷ ರಚಿಸಲಿದ್ದಾರೆ. ಆನಂದ್‌ ದಿಘೆ 2003ರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಭಾಳಾ ಸಾಹೇಬ್‌ ಠಾಕ್ರೆ ಅವರಿಗೆ ದಿಘೆ ಆಪ್ತರಾಗಿದ್ದರು. ಅವರ ಹೆಸರಿನಲ್ಲಿ ಈಗಾಗಲೇ ಒಂದು ರಾಜಕೀಯ ಪಕ್ಷವನ್ನು ಶಿಂಧೆ ನೊಂದಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೂರನೇ ಎರಡು ಭಾಗದ ಶಾಸಕರ ಬೆಂಬಲದೊಂದಿಗೆ ಹೊಸ ರಾಜಕೀಯ ಪಕ್ಷದ ಘೋಷಣೆ ಮಾಡುತ್ತಾರೆ ಶಿಂಧೆ ಎಂಬುದು ಉನ್ನತ ಮೂಲಗಳ ಮಾಹಿತಿ. 

Latest Videos
Follow Us:
Download App:
  • android
  • ios