Asianet Suvarna News Asianet Suvarna News

Maharashtra Political Crisis: ಶಾಸಕಾಂಗ ನಾಯಕ ಸ್ಥಾನದಿಂದ ರೆಬೆಲ್‌ ಶಿಂಧೆ ವಜಾ

Maharashtra Political Crisis Live Updates: ಶಿವಸೇನೆಯಲ್ಲಿ ಬಂಡಾಯದ ಬಿರುಗಾಳಿ ಎದ್ದಿದ್ದು, ಏಕನಾಥ ಶಿಂಧೆ ಶಿವಸೇನೆಯ ಅರ್ಧಕ್ಕೂ ಹೆಚ್ಚು ಶಾಸಕರೊಂದಿಗೆ ಗುಜರಾತಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೂಲಗಳ ಪ್ರಕಾರ ಶಿಂಧೆ, ಶಿವಸೇನೆಯ ವಿರುದ್ಧ ಆನಂದ ಸೇನೆ ಎಂಬ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಲಿದ್ದಾರೆ. ಈಗಾಗಲೇ ಈ ಹೆಸರಿನಲ್ಲಿ ರಾಜಕೀಯ ಪಕ್ಷವನ್ನೂ ನೊಂದಾಯಿಸಲಾಗಿದೆ. 

maharashtra political crisis rebel eknath shinde to float new political party in anand dighe's name
Author
First Published Jun 21, 2022, 1:34 PM IST

ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಬಿರುಸಿನ ಬೆಳವಣಿಗೆ ಆರಂಭವಾಗಿದ್ದು, ಶಿವಸೇನೆಯ ಅತೃಪ್ತ ಶಾಸಕರು ಬಂಡಾಯವೆದ್ದಿದ್ದಾರೆ. ಶಿವಸೇನೆಯ ಹಿರಿಯ ಮುಖಂಡ ಏಕನಾಥ ಶಿಂಧೆ ನೇತೃತ್ವದಲ್ಲಿ ಸುಮಾರು 25ಕ್ಕೂ ಹೆಚ್ಚು ರೆಬೆಲ್‌ ಶಾಸಕರು ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ಗೆ ತೆರಳಿದ್ದಾರೆ. ಸೋಮವಾರ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಶಿವಸೇನೆಯ ಬಂಡಾಯ ಶಾಸಕರು ಅಡ್ಡ ಮತದಾನ ಮಾಡಿದ್ದರು. ಈ ಮೂಲಕ ಬಿಜೆಪಿ ಶಾಸಕರ ಸಂಖ್ಯಾಬಲ ಇಲ್ಲದಿದ್ದರೂ, ಐದು ಅಭ್ಯರ್ಥಿಗಳನ್ನು ಗೆದ್ದುಕೊಂಡಿತು. ಇದರ ಬೆನ್ನಲ್ಲೇ ಬಂಡಾಯ ಶಾಸಕರ ದಂಡು ಗುಜರಾತಿಗೆ ತೆರಳಿರುವುದರಿಂದ ರಾಜಕೀಯ ಅನಿಶ್ಚಿತತೆ ಆರಂಭವಾಗಿದೆ. ಜತೆಗೆ ಮಂಗಳವಾರ ಏಕನಾಥ ಶಿಂಧೆಯನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಶಿವಸೇನೆ ವಜಾಗೊಳಿಸಿದೆ. ಅದರ ನಡುವೆಯೂ ಉದ್ಧವ್‌ ಠಾಕ್ರೆ, ಮುಖ್ಯಮಂತ್ರಿ ಸ್ಥಾನವನ್ನೇ ಬಿಟ್ಟುಕೊಡುವುದಾಗಿ ಶಿಂಧೆಗೆ ತಿಳಿಸಿದ್ದಾರೆ. ಇದಕ್ಕೆ ಉತ್ತಿರಿಸಿರುವ ಶಿಂಧೆ, ಅಧಿಕಾರಕ್ಕಾಗಿ ಬದಲಾಗುವವರಲ್ಲ, ಭಾಳಾ ಠಾಕ್ರೆ ನಮಗೆ ಹಿಂದುತ್ವ ಪಾಲಿಸುವಂತೆ ಹೇಳಿಕೊಟ್ಟಿದ್ದಾರೆ, ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ - ಎನ್‌ಸಿಪಿ ಜತೆ ಕೈಜೋಡಿಸಿ ಶಿವಸೇನೆ ತನ್ನ ಮೂಲ ಆದರ್ಶವನ್ನು ಬದಿಗಿಟ್ಟಿದೆ ಎಂಬುದನ್ನು ಶಿಂಧೆ ತಿಳಿಸಿದ್ದಾರೆ.

ಯಾರು ಏಕನಾಥ ಶಿಂಧೆ?:
ಏಕನಾಥ ಶಿಂಧೆ ಸತತ ನಾಲ್ಕು ಬಾರಿ ಶಿವಸೇನೆಯಿಂದ ವಿಧಾನ ಸಭೆಗೆ ಆಯ್ಕೆಯಾದವರು. ಶಿಂಧೆ ಪುತ್ರ ಕೂಡ ಶಿವಸೇನೆ ಸಂಸದ. ಈ ಹಿಂದೆ ಶಿವಸೇನೆ ವಿರೋಧ ಪಕ್ಷದಲ್ಲಿದ್ದಾಗ ವಿರೋಧ ಪಕ್ಷದ ಶಾಸಕಾಂಗ ನಾಯಕರಾಗಿ ಶಿಂಧೆ ಅವರನ್ನು ಆಯ್ಕೆ ಮಾಡಲಾಗಿತ್ತು. ಅದಾದ ಬಳಿಕ, ಮಹಾ ಘಟ ಬಂಧನ ಸರ್ಕಾರದಲ್ಲಿ ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಸಚಿವರಾದರು. ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ವೇಳೆ ಲೋಕೋಪಯೋಗಿ ಇಲಾಖೆ ಅವರ ಕೈತಪ್ಪಿತು. ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ಮೂಲೆಗುಂಪಾಗುತ್ತಿದ್ದಾರೆ ಎಂಬ ಭಾವನೆ ಅವರಲ್ಲಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಂದಲೂ ಕೊಂಚ ದೂರವೇ ಉಳಿದಿದ್ದರು. 

ಅವಕಾಶಕ್ಕಾಗಿ ಕಾಯುತ್ತಿದ್ದ ಏಕನಾಥ ಶಿಂಧೆ, ತಮ್ಮ ಸಿಟ್ಟನ್ನು ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವ ಮೂಲಕ ಹೊರ ಹಾಕಿದ್ದಲ್ಲದೇ, ಇತರ ಶಾಸಕರನ್ನೂ ಕರೆದುಕೊಂಡು ಸೂರತ್‌ಗೆ ಹೋಗಿದ್ದಾರೆ. ಎನ್‌ಸಿಪಿ ಮುಖಂಡ ಅಜಿತ್‌ ಪವಾರ್‌ ಎಲ್ಲಾ ಶಾಸಕರೂ ವಾಪಸ್‌ ಬರುತ್ತಾರೆ ಎಂಬ ಮಾತನ್ನು ಹೇಳುತ್ತಿದ್ದಾರಾದರೂ ಅರ್ಧಕ್ಕಿಂತ ಹೆಚ್ಚು ಶಾಸಕರು ಶಿಂಧೆ ಜೊತೆಗಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಮೂರನೇ ಎರಡು ಭಾಗಕ್ಕಿಂತ ಹೆಚ್ಚು ಶಾಸಕರೇನಾದರೂ ಶಿಂಧೆ ಜತೆ ನಡೆದರೆ, ಶಾಸಕರು ರಾಜೀನಾಮೆ ನೀಡುವ ಪ್ರಮೇಯವೂ ಬರುವುದಿಲ್ಲ. ಪಕ್ಷಾಂತರ ಕಾಯ್ದೆ ಕೇವಲ ಮೂರನೇ ಎರಡು ಭಾಗಕ್ಕಿಂತ ಕಡಿಮೆ ಶಾಸಕರು ಪಕ್ಷಾಂತರ ಮಾಡಿದಾಗ ಮಾತ್ರ ಅನ್ವಯವಾಗುತ್ತದೆ. 

ಏಕನಾಥ ಶಿಂಧೆಯಿಂದ ಹೊಸ ಪ್ರಾದೇಶಿಕ ಪಕ್ಷ?:
ಏಕನಾಥ ಶಿಂಧೆ ಬಿಜೆಪಿಗೆ ಬೆಂಬಲ ನೀಡಿ ಸರ್ಕಾರದ ಭಾಗವಾಗುತ್ತಾರೆಯೇ ಹೊರತು, ಬಿಜೆಪಿ ಪಕ್ಷ ಸೇರುವುದಿಲ್ಲ ಎನ್ನುತ್ತವೆ ಮೂಲಗಳು. ಮೂಲಗಳ ಮಾಹಿತಿ ಪ್ರಕಾರ ಶಿಂಧೆ ದಿವಂಗತ ಶಿವಸೇನೆ ಹಿರಿಯ ನಾಯಕ ಆನಂದ್‌ ದಿಘೆ ಅವರ ಹೆಸರಿನಲ್ಲಿ ಆನಂದ್‌ ಸೇನೆ ಎಂಬ ಹೊಸ ರಾಜಕೀಯ ಪಕ್ಷ ರಚಿಸಲಿದ್ದಾರೆ. ಆನಂದ್‌ ದಿಘೆ 2003ರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಭಾಳಾ ಸಾಹೇಬ್‌ ಠಾಕ್ರೆ ಅವರಿಗೆ ದಿಘೆ ಆಪ್ತರಾಗಿದ್ದರು. ಅವರ ಹೆಸರಿನಲ್ಲಿ ಈಗಾಗಲೇ ಒಂದು ರಾಜಕೀಯ ಪಕ್ಷವನ್ನು ಶಿಂಧೆ ನೊಂದಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೂರನೇ ಎರಡು ಭಾಗದ ಶಾಸಕರ ಬೆಂಬಲದೊಂದಿಗೆ ಹೊಸ ರಾಜಕೀಯ ಪಕ್ಷದ ಘೋಷಣೆ ಮಾಡುತ್ತಾರೆ ಶಿಂಧೆ ಎಂಬುದು ಉನ್ನತ ಮೂಲಗಳ ಮಾಹಿತಿ. 

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಆಪರೇಷನ್‌ ಕಮಲ?: ತೂಗುಯ್ಯಾಲೆಯಲ್ಲಿ ಮಹಾ ಘಟಬಂಧನ ಸರ್ಕಾರ

ಸೂರತ್‌ನಿಂದ ಇಂದು ಮಧ್ಯಾಹ್ನ ಏಕನಾಥ ಶಿಂಧೆ ಪತ್ರಿಕಾಗೋಷ್ಠಿ ನಡೆಸುತ್ತಾರೆ ಎನ್ನಲಾಗಿದೆ. ಹೋಟೆಲ್‌ ಸುತ್ತಮುತ್ತ ಭದ್ರತೆ ಒದಗಿಸಲಾಗಿದ್ದು, ಪ್ರವೇಶ ನಿರ್ಬಂಧ ಹೇರಲಾಗಿದೆ. ಏಕನಾಥ ಶಿಂಧೆ ನಿಕಟವರ್ತಿಗಳ ಮಾಹಿತಿ ಪ್ರಕಾರ ಶಿಂಧೆಗೆ 20 ಶಾಸಕರ ಬೆಂಬಲವಿದೆ. ಪಶ್ಚಿಮ ಮಹಾರಾಷ್ಟ್ರ, ಮರಾಠಾವಾಡ ಮತ್ತು ವಿದರ್ಭ ಭಾಗದ ಶಾಸಕರು ಶಿಂಧೆ ಜೊತೆಗಿದ್ದಾರೆ ಎನ್ನಲಾಗಿದೆ. 

ಪರಿಷತ್‌ ಚುನಾವಣೆಯ ಫಲಿತಾಂಶ:
ನಿನ್ನೆಯ ಪರಿಷತ್‌ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಐದು, ಶಿವಸೇನೆ ಮತ್ತು ಎನ್‌ಸಿಪಿ ತಲಾ ಎರಡು ಸೀಟ್‌ಗಳನ್ನು ಗೆದ್ದುಕೊಂಡಿತ್ತು. ಶಿವಸೇನೆ ಶಾಸಕರ ಅಡ್ಡ ಮತದಾನದಿಂದ ಬಿಜೆಪಿಯ ಐದು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಒಟ್ಟೂ 106 ಶಾಸಕರನ್ನು ಹೊಂದಿದೆ. ಶಿವಸೇನೆ 50, ಎನ್‌ಸಿಪಿ 51 ಮತ್ತು ಕಾಂಗ್ರೆಸ್‌ 44 ಶಾಸಕ ಬಲ ಹೊಂದಿದೆ. ಒಂದು ವೇಳೆ ಏಕನಾಥ ಶಿಂಧೆ 20 ಶಾಸಕರ ಜೊತೆ ಬಿಜೆಪಿಗೆ ಬೆಂಬಲ ನೀಡಿದಲ್ಲಿ, ಮಹಾಘಟಬಂಧನದ ಶಕ್ತಿ ಕುಗ್ಗಲಿದೆ. ಜತೆಗೆ ಚಿಕ್ಕಪುಟ್ಟ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯೂ ಇದೆ. 

ಇದನ್ನೂ ಓದಿ: ಕರ್ನಾಟಕದಲ್ಲಿ ಪ್ರವಾಹ ಬಂದಾಗ ಬಾರದ ಮೋದಿ, ಈಗ ಯೋಗ ಮಾಡಲು ಬಂದಿದ್ದಾರೆ- ಸಿದ್ದು

ಈ ಎಲ್ಲಾ ಲೆಕ್ಕಾಚಾರಗಳು ನಡೆದಲ್ಲಿ ಉದ್ಧವ್‌ ಠಾಕ್ರೆ ಸದನದಲ್ಲಿ ವಿಶ್ವಾಸ ಮತ ಸಾಬೀತುಪಡಿಸಬೇಕಾಗಲಿದೆ. ಒಂದೆಡೆ ಬಿಜೆಪಿ ಏಕನಾಥ ಶಿಂಧೆ ಮೂಲಕ ಆಪರೇಷನ್‌ ನಡೆಸುತ್ತಿದ್ದರೆ, ಇತ್ತ ಎನ್‌ಸಿಪಿ, ಕಾಂಗ್ರೆಸ್‌ ಮತ್ತು ಶಿವಸೇನೆ ಮೂರು ಪಕ್ಷಗಳು ಶಿಂಧೆ ಸಂಪರ್ಕಿಸಿ ಮನವೊಲಿಸಲು ಯತ್ನಿಸುತ್ತಿದೆ. ಅಜಿತ್‌ ಪವಾರ್‌ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಬಂಡಾಯ ಶಾಸಕರು ವಾಪಸ್‌ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಸದ್ಯ ಪರಿಸ್ಥಿತಿ ಮಹಾಘಟಬಂಧನ ಸರ್ಕಾರದ ಕೈಯಲ್ಲಿಲ್ಲ ಎನ್ನಲಾಗುತ್ತಿದೆ. ಯಾಕೆಂದರೆ ಪರಿಷತ್‌ ಚುನಾವಣೆಯಲ್ಲಿ ಘಟ ಬಂಧನದ ಮೂರೂ ಪಕ್ಷಗಳ ಶಾಸಕರು ಬಿಜೆಪಿ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿರುವ ಸಾಧ್ಯತೆಯಿದೆ. 

ಶಿಂಧೆಗೆ ಉಪ ಮುಖ್ಯಮಂತ್ರಿ ಆಫರ್‌:
ಮೂಲಗಳ ಪ್ರಕಾರ ಬಂಡಾಯ ಸಚಿವ ಏಕನಾಥ ಶಿಂಧೆಗೆ ಉಪ ಮುಖ್ಯಮಂತ್ರಿ ಸ್ಥಾನದ ಆಫರ್‌ ಮಾಡಲಾಗಿದೆ. ಬಿಜೆಪಿ ಸರ್ಕಾರ ರಚನೆ ಮಾಡಿದಲ್ಲಿ ಏಕನಾಥ ಶಿಂಧೆ ಅವರನ್ನು ಡಿಸಿಎಂ ಮಾಡಲಾಗುವುದು ಎಂದು ದೇವೇಂದ್ರ ಫಡ್ನವಿಸ್‌ ಭರವಸೆ ನೀಡಿದ್ದಾರೆ, ಇದೇ ಕಾರಣಕ್ಕೆ ಶಿಂಧೆ ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. 

ಇದನ್ನೂ ಓದಿ: ಮುಂಬರುವ ಎಲೆಕ್ಷನ್‌ನಲ್ಲಿ ಕುಮಾರಸ್ವಾಮಿ ಯಾವ ಕ್ಷೇತ್ರದಿಂದ ಸ್ಪರ್ಧೆ?: ಎಚ್‌ಡಿಕೆ ಹೇಳಿದ್ದಿಷ್ಟು

ದೆಹಲಿ ತಲುಪಿದ ಫಡ್ನವಿಸ್‌:
ಮಹಾರಾಷ್ಟ್ರ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ದೆಹಲಿಗೆ ಹೋಗಿದ್ದಾರೆ. ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಪಕ್ಷ ರಚನೆಯ ಸಾಧ್ಯಾಸಾಧ್ಯತೆಯನ್ನು ಚರ್ಚಿಸುವ ಸಲುವಾಗಿ ಅವರು ದೆಹಲಿಗೆ ಹೋಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಆಪರೇಷನ್‌ ಕಮಲದ ಚಟುವಟಿಕೆ ಆರಂಭವಾಗಿರುವುದಂತೂ ಸತ್ಯ. ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಈ ಬಾರಿಯೂ ಏನಾದರು ಮ್ಯಾಜಿಕ್‌ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳುತ್ತಾರ ಅಥವಾ ಈ ಬಾರಿ ಅವರ ಕೈಮೀರಿ ಹೋಗಲಿದೆಯಾ ಎಂಬುದನ್ನು ಕಾದುನೋಡಬೇಕು.

Follow Us:
Download App:
  • android
  • ios