ಬಿಜೆಪಿಯಿಂದ ಉಚ್ಛಾಟಿತ ನಾಯಕರ ಮರುಸೇರ್ಪಡೆಗೆ ತಮ್ಮ ಬೆಂಬಲವಿದೆ, ಆದರೆ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ. ತಮ್ಮ ಸಹೋದರ ಸತೀಶ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದಿರುವುದೇ ಒಳ್ಳೆಯದಾಯಿತು, ಇಲ್ಲದಿದ್ದರೆ ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ದಾವಣಗೆರೆ: ಬಿಜೆಪಿಯಿಂದ ಉಚ್ಛಾಟಿತ ನಾಯಕರ ಮರುಸೇರ್ಪಡೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ಉಚ್ಛಾಟಿತರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಆರಂಭದಿಂದಲೇ ನಮ್ಮ ಬೆಂಬಲ ಇತ್ತು ಎಂದು ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ದಕ್ಷಿಣ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಉಚ್ಛಾಟಿತ ನಾಯಕರನ್ನು ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬೇಕೆಂದು ಮೊದಲ ದಿನದಿಂದಲೇ ನಮ್ಮ ಅಭಿಪ್ರಾಯವೂ ಆಗಿತ್ತು ಎಂದರು.

ಉಚ್ಛಾಟಿತರ ಮರುಸೇರ್ಪಡೆ ಹೈಮಾಂಡ್‌ಗೆ ಬಿಟ್ಟಿದ್ದು

ಉಚ್ಛಾಟಿತ ನಾಯಕರನ್ನು ಹೈಕಮಾಂಡ್ ಈಗ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ ಎಂದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸರ್ಕಾರ ಈಗಷ್ಟೇ ಕಾರ್ಯಾರಂಭ ಮಾಡಿದೆ. ಈ ಸರ್ಕಾರದ ಕಾರ್ಯವೈಖರಿ ಬಗ್ಗೆ ಮೂರು ತಿಂಗಳ ನಂತರ ಪ್ರತಿಕ್ರಿಯೆ ನೀಡುತ್ತೇನೆ. 2 ತಿಂಗಳಾದರೂ ಅವಕಾಶ ಕೊಡಬೇಕಲ್ಲವಾ ಸರ್ಕಾರಕ್ಕೆ? ಇನ್ನೂ ಹೊಸ ಸರ್ಕಾರದ ಸಂಪುಟ ವಿಸ್ತರಣೆಗೆ ತಿಂಗಳಾಗುತ್ತದೆ. ಆ ಮೇಲೆ ಅದರ ಬಗ್ಗೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.

ನಮ್ಮ ಸಮುದಾಯಕ್ಕೆ ಮೀಸಲಾತಿ ದೊರಕಿಸುವ ಹೋರಾಟವೇ ಪ್ರಮುಖ ಗುರಿಯಾಗಿದೆ. ಆ ದಿಕ್ಕಿನಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ರಮೇಶ ಜಾರಕಿಹೊಳಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸೋದರನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿದ್ದೇ ಒಳ್ಳೆದಾಯ್ತು: ರಮೇಶ ಜಾರಕಿಹೊಳಿ

ದಾವಣಗೆರೆ: ತಮ್ಮ ಸಹೋದರ, ಸಚಿವ ಸತೀಶ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದೇ ಇರುವುದು ಒಳ್ಳೆಯದಾಗಿದ್ದು, 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಒಂದುವೇಳೆ ಅಧ್ಯಕ್ಷರಾಗಿದ್ದರೆ ನಾಯಕ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತಿತ್ತು ಎಂದು ಬಿಜೆಪಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಭಾನುವಾರ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ವೇಳೆ ಸಹೋದರ ಅಧ್ಯಕ್ಷರಾಗಿದ್ದರೆ ಇಡೀ ನಮ್ಮ ಸಮುದಾಯ ಕೆಡುತ್ತಿತ್ತು. ಲಿಂಗಾಯತರು, ಒಕ್ಕಲಿಗರು, ಕುರುಬರು ಎಲ್ಲರೂ ಇದ್ದಾರೆ. ಆದರೆ, ನಮ್ಮ ಸಮಾಜ ಬಂದಾಗ ಕಾಂಗ್ರೆಸ್ ಸೋತರೆ ನಾಯಕ ಸಮಾಜದ ಲೀಡರ್ ಶಿಪ್‌ನಿಂದಾಗಿಯೇ ಸೋತರು ಅಂತಾ ನಮ್ಮ ಮೇಲೆಯೇ ಕಾಂಗ್ರೆಸ್ಸಿನವರು ಅಪವಾದ ಹೊರಿಸುತ್ತಿದ್ದರು ಎಂದರು.

ಕಾಂಗ್ರೆಸ್‌ ನಾಯಕರು 9ನೇ ಷೆಡ್ಯೂಲ್ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. 9ನೇ ಷೆಡ್ಯೂಲ್ ಮಾಡಲು ಕೇಂದ್ರದಲ್ಲಿ ಮೋದಿ ಸರ್ಕಾರವಿದ್ದು, ಅದರಿಂದ ತೊಂದರೆ ಎನ್ನುವುದೇ ತಪ್ಪು. 9ನೇ ಶೆಡ್ಯೂಲ್‌ಗೂ ನಮ್ಮ ಮೀಸಲಾತಿಗೂ ಯಾವುದೇ ಸಂಬಂಧವೂ ಇಲ್ಲ. ದೇಶದ ಹಿತದೃಷ್ಟಿಯಿಂದ ಕಾನೂನು ಮಾಡುವಾಗ ಮಾತ್ರ 9ನೇ ಶೆಡ್ಯೂಲ್ ಬರುತ್ತದೆ. ಮೀಸಲಾತಿ ಅದಕ್ಕೆ ಒಳಪಡುವುದಿಲ್ಲ. ಕಾಂಗ್ರೆಸ್ ನಾಯಕರು ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡುತ್ತಿರುವುದನ್ನು ಪ್ರತಿ ಹಂತದಲ್ಲೂ ನಾವು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.