ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಗ್ಯಾರಂಟಿ ಕಾರ್ಡ್ ಏಕೆ ಜಾರಿಯಾಗಿಲ್ಲ?: ಎಂಪಿ ಸಿಎಂ ಚೌಹಾಣ್
ಸುಳ್ಳು ಭರವಸೆಗಳನ್ನು ನೀಡುತ್ತಿರುವ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ಗಳನ್ನು ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಏಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್.
ಗೋಕಾಕ(ಏ.27): ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಹಾಗೂ ಪರಿವಾರದ ಪಕ್ಷವಾಗಿದ್ದು, ಜನತೆ ಸರ್ವಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸುತ್ತಿರುವ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಹೇಳಿದರು. ನಗರದ ಹೊರವಲಯದ ಬಸವೇಶ್ವರ ಸಭಾ ಭವನದಲ್ಲಿ ಬುಧವಾರ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಂಡ ಗೋಕಾಕ ಮತಕ್ಷೇತ್ರದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸುಳ್ಳು ಭರವಸೆಗಳನ್ನು ನೀಡುತ್ತಿರುವ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ಗಳನ್ನು ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಏಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ದೇಶ ಅರಾಜಕತೆ ಹಾಗೂ ಆತಂಕವಾದಿಗಳಿಂದ ಜನ ಭಯ ಭೀತಿಯಿಂದ ಬದುಕುತ್ತಿದ್ದರು. ಇಂದು ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಆಡಳಿತದಿಂದ ಜನ ಶಾಂತಿ ಹಾಗೂ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಯುದ್ಧ ಕಾಲದಲ್ಲೂ ಹೊರ ದೇಶದಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ. ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಕೈಗಾರಿಕೆ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತ ಜಾಗತಿಕ ಮನ್ನಣೆ ಪಡೆಯುತ್ತಿದೆ. ದೇಶದ ಉಜ್ವಲ ಭವಿಷ್ಯಕ್ಕಾಗಿ ಪಕ್ಷಕ್ಕೆ ಆಶೀರ್ವದಿಸಬೇಕು. ಕರ್ನಾಟಕ ರಾಜ್ಯದ ವಿಕಾಸ ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯವೆಂದು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಜನತೆ ಗೆಲ್ಲಿಸಬೇಕು ಎಂದು ಕೋರಿದರು.
'ಸೋತಿದ್ದ ಸವದಿಯನ್ನು ಡಿಸಿಎಂ ಮಾಡಿದ್ದು ಬಿಜೆಪಿ, ಈಗ ತಿರುಗಿ ಬಿದ್ದಿರೋದು ಹಾಸ್ಯಾಸ್ಪದ'
ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮ, ಸಂಗೋಳ್ಳಿ ರಾಯಣ್ಣ ಹಾಗೂ ಶಿವಾಜಿಯವರ ಹೆಸರಿನೊಂದಿಗೆ ಭಾಷಣವನ್ನು ಪ್ರಾರಂಭಿಸಿ ಗೋಕಾಕ ಕಲೆ, ಸಾಹಿತ್ಯ, ಧಾರ್ಮಿಕ ಹಾಗೂ ಕರದಂಟಿನ ಸಿಹಿಯೊಂದಿಗೆ ಪುಣ್ಯಭೂಮಿಯಾಗಿದೆ ಎಂದು ತಿಳಿಸಿದರು.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ ಅವರು 1999ರಿಂದ ಇಲ್ಲಿಯವರೆಗೆ ಶಾಲೆಗಳು, ವಸತಿ ಶಾಲೆಗಳು, ನೀರಾವರಿ, ಆರೋಗ್ಯ ಕೇಂದ್ರಗಳು, ರಸ್ತೆಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟುಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಚುನಾವಣಾ ದೃಷ್ಟಿಯಿಂದ ವಿರೋಧಿಗಳು ಸುಳ್ಳು ಅಪಪ್ರಚಾರ ಮಾಡದೇ ಅಭಿವೃದ್ಧಿಪರ ಚರ್ಚೆಗೆ ಒಂದೇ ವೇದಿಕೆಗೆ ಬರುವಂತೆ ಆಹ್ವಾನ ನೀಡಿದರು.
ಚುನಾವಣಾ ಪ್ರಚಾರ ಮಾಡಿ ಮತ ನೀಡುವಂತೆ ಕೇಳಿ. ಆದರೆ, ಜನತೆಗೆ ಸುಳ್ಳು ಹೇಳದಿರಿ. ಜನತೆ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಚುನಾವಣಾ ದೃಷ್ಟಿಯಿಂದ ಸುಳ್ಳು ಆಪಾದನೆ ಮಾಡುತ್ತಿರುವ ವಿರೋಧಿಗಳ ಅಪಪ್ರಚಾರಕ್ಕೆ
ಕಿವಿಗೊಡದೇ ರಮೇಶ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡುವುದರೊಂದಿಗೆ ವಿರೋಧಿಗಳಿಗೆ ತಕ್ಕ ಉತ್ತರ ಕೋಡುವಂತೆ ಮನವಿ ಮಾಡಿದರು.
ಬಿಜೆಪಿ ಪಕ್ಷದ ಬೆನ್ನಿಗೆ ಚೂರಿ ಹಾಕಿದ ಶೆಟ್ಟರ್, ಸವದಿ: ಯಡಿಯೂರಪ್ಪ
ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು. ವೇದಿಕೆ ಮೇಲೆ ಮಾಜಿ ಶಾಸಕ ಎಂ.ಎಲ್.ಮುತ್ತೇನ್ನವರ, ಯುವನಾಯಕ ಅಮರನಾಥ ಜಾರಕಿಹೊಳಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಕ್ಷೇತ್ರ ಪ್ರಭಾರಿ ಗುರುಪಾದ ಕಳ್ಳಿ, ಮಾಜಿ ಜಿಪಂ ಸದಸ್ಯ ಎಂ.ಎಲ್.ತೋಳಿನವರ, ಬಿಜೆಪಿ ಪದಾಧಿಕಾರಿಗಳಾದ ಪುಂಡಲೀಕ ವಣ್ಣೂರ, ಬಸವರಾಜ ಹಿರೇಮಠ, ಶಫಿ ಜಮಾದಾರ, ಶಕೀಲ ಧಾರವಾಡಕರ, ರಾಜೇಶ್ವರಿ ಒಡೆಯರ, ಬಾಳೇಶ ಗಿಡ್ಡನವರ, ಲಕ್ಕಪ್ಪ ತಹಶೀಲ್ದಾರ, ಕಿರಣ ಡಮಾಮಗರ ಉಪಸ್ಥಿತರಿದ್ದರು.
ರಾಜ್ಯವನ್ನು ಅವನತಿಯತ್ತ ಕೊಂಡೊಯ್ಯುತ್ತಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬಿಳಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಮಹತ್ತರ ಪಾತ್ರವಹಿಸಿದ್ದ ರಮೇಶ ಜಾರಕಿಹೊಳಿ ಅವರನ್ನು ನಾನು ಅಭಿನಂದಿಸುತ್ತೇನೆ. ಅವರ ನಿರ್ಧಾರದಿಂದಲೇ ರಾಜ್ಯ ಡಬ್ಬಲ್ ಇಂಜಿನ್ ಸರ್ಕಾರದೊಂದಿಗೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇಂತಹ ಮಹಾನ್ ಕಾರ್ಯ ಮಾಡಿದ ರಮೇಶ ಜಾರಕಿಹೊಳಿ ಅವರನ್ನು ಅತೀ ಹೆಚ್ಚು ಮತಗಳ ಅಂತರದಿಂದ ಆರಿಸಿ ತರಬೇಕು ಅಂತ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ತಿಳಿಸಿದ್ದಾರೆ.