'ಸೋತಿದ್ದ ಸವದಿಯನ್ನು ಡಿಸಿಎಂ ಮಾಡಿದ್ದು ಬಿಜೆಪಿ, ಈಗ ತಿರುಗಿ ಬಿದ್ದಿರೋದು ಹಾಸ್ಯಾಸ್ಪದ'
ಮೂಲೆಗುಂಪಾದವರನ್ನು ಡಿಸಿಎಂ ಮಾಡಿದ್ದು ಬಿಜೆಪಿ, ಸವದಿ ಸ್ವಾರ್ಥಕ್ಕಾಗಿ ಬಿಜೆಪಿ ಪಕ್ಷ ತೊರೆದಿದ್ದು, ಇದು ಅತ್ಯಂತ ಸಂತಸವನ್ನುಂಟು ಮಾಡಿದೆ: ಶ್ರೀಮಂತ ಪಾಟೀಲ
ಕಾಗವಾಡ(ಏ.27): ಚುನಾವಣೆಯಲ್ಲಿ ಸೋತು ಮೂಲೆಗುಂಪಾಗಿದ್ದ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಬಿಜೆಪಿ. ಆದರೆ, ಈಗ ಬಿಜೆಪಿ ವಿರುದ್ಧವೇ ತಿರುಗಿ ಬಿದ್ದಿರುವುದು ಹಾಸ್ಯಾಸ್ಪದವಾಗಿದೆ ಎಂದು ಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭ್ಯರ್ಥಿ ಹಾಗೂ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಕೆಂಪವಾಡದಲ್ಲಿ ನಡೆದ ಬೃಹತ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿಕೆಟ್ ನೀಡದೇ ಬಿಜೆಪಿ ಅನ್ಯಾಯ ಮಾಡಿದೆ ಎಂದು ಹೇಳುತ್ತ ಹೊರಟಿದ್ದಾರೆ. ನಿಜವಾಗಿಯೂ ಬಿಜೆಪಿಗೆ ಅನ್ಯಾಯ ಮಾಡುತ್ತಿರುವುದು ಇವರು. ಲಕ್ಷ್ಮಣ ಸವದಿ ಸ್ವಾರ್ಥಕ್ಕಾಗಿ ಬಿಜೆಪಿ ಪಕ್ಷ ತೊರೆದಿದ್ದಾರೆ. ಅವರು ಹೋಗುವುದಕ್ಕೆ ಪಕ್ಷವೇನು ಹಾನಿಯಿಲ್ಲ. ನಮಗೆ ಇದು ಅತ್ಯಂತ ಸಂತಸವನ್ನುಂಟು ಮಾಡಿದೆ ಎಂದರು.
ಬಿಜೆಪಿ ಪಕ್ಷದ ಬೆನ್ನಿಗೆ ಚೂರಿ ಹಾಕಿದ ಶೆಟ್ಟರ್, ಸವದಿ: ಯಡಿಯೂರಪ್ಪ
ನಿನ್ನೆ ಉಗಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಾನು ಭ್ರಷ್ಟಾಚಾರ ಮಾಡಿದ್ದೇನೆ ಎಂದು ಲಕ್ಷ್ಮಣ ಸವದಿ ಆರೋಪ ಮಾಡಿದ್ದಾರೆ. ಆದರೆ, ನಾನು ಅವರಿಗೆ ಸವಾಲ ಹಾಕುತ್ತೇನೆ. ನನ್ನ ಇಪ್ಪತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ಮಾಡಿರುವ ಬಗ್ಗೆ ದಾಖಲೆ ನೀಡಿದರೇ ನಾನು ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುವುದಾಗಿ ಸವಾಲ ಹಾಕಿದರು.
ನಾನು ಯಾವತ್ತೂ ಜಾತಿ, ಧರ್ಮ, ಪಂಥ, ಬಡವ, ಶ್ರೀಮಂತ ಎಂದೂ ನೋಡದೇ ಎಲ್ಲರನ್ನು ಸಮಾನತೆಯಿಂದ ಕಂಡಿದ್ದೇನೆ. ಕಳೆಡೆರಡು ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿದ್ದಿರಿ. ನಿಮ್ಮ ಸೇವೆ ಮಾಡಲು ಅವಕಾಶ ಕೊಟ್ಟಿದ್ದಿರಿ. ನಿಮ್ಮ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಿದ್ದೇನೆ. ಹೀಗಾಗಿ ಈ ಬಾರಿಯೂ ನನಗೆ ಆಶೀರ್ವಾದ ಮಾಡಿ ಅಭಿವೃದ್ಧಿ ಮಾಡಲು ಅನುವು ಮಾಡಿಕೊಡಬೇಕಾಗಿ ಮನವಿ ಮಾಡಿದರು.
ಲಿಂಗಾಯತರಿಗೆ ಕಳಂಕ ತಂದ ಸಿಎಂ ಬೊಮ್ಮಾಯಿ: ಸಿದ್ದರಾಮಯ್ಯ ಕಿಡಿ
ಈ ವೇಳೆ ಮುಖಂಡ ಶೀತಲಗೌಡ ಪಾಟೀಲ, ಉತ್ತಮ ಪಾಟೀಲ,ಅಭಯಕುಮಾರ ಅಕಿವಾಟೆ, ಆರ್.ಎಂ.ಪಾಟೀಲ, ಮಹಾದೇವ ಕೋರೆ, ಸಂಜಯ ತೆಲಸಂಗ, ಗ್ರಾಮ ಪಂಚಾಯತಿ ಅಧ್ಯಕ್ಷ ಭೂತಾಳಿ ಥರಥರೆ, ಶ್ರೀನಿವಾಸ ಪಾಟೀಲ, ಸುಶಾಂತ ಪಾಟೀಲ, ಕೆಎಂಎಫ್ ನಿರ್ದೇಶಕ ಅಪ್ಪಾಸಾಹೇಬ್ ಅವತಾಡೆ, ಅಪ್ಪಾಸಾಬ್ ಮಳಮಳಸಿ, ನಾನಾಸಾಹೇಬ್ ಅವತಾಡೆ ಸೇರಿದಂತೆ ಅನೇಕರು ಇದ್ದರು.
ನನಗೆ ಚುನಾವಣೆಗಿಂತ ರೈತರ ಹಿತ ಕಾಪಾಡುವುದು ಮುಖ್ಯವಾಗಿ ಆ ನಿಟ್ಟಿನಲ್ಲಿ ನಾನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಭೇಟಿಯಾಗಿ ಕೃಷ್ಣಾ ನದಿಗೆ ನೀರು ಬಿಡಿಸಲು ಮನವಿ ಮಾಡಿಕೊಂಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂಬೈಗೆ ಹೋಗಿ ಕೃಷ್ಣಾ ನದಿಗೆ ನೀರು ಬಿಡುಸುತ್ತೇನೆ ಎಂದು ಹೇಳಿದ್ದಾರೆ. ನನಗೆ ಚುನಾವಣೆಗಿಂತ ರೈತರ ಹಿತ ಕಾಪಾಡುವುದು ಮುಖ್ಯ. ಈ ಭಾಗದ ಮಹತ್ವಾಕಾಂಕ್ಷಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಂಡಿದೆ ಬಟನ್ ಹೊಡೆಯುವುದೊಂದೆ ಬಾಕಿ ಇದೆ. ಚುನಾವಣೆ ಮುಗಿದ ನಂತರ ಕಾಲುವೆಗೆ ನೀರು ಹರಿಸಲಾಗುವುದು ಅಂತ ಶಾಸಕ ಶ್ರೀಮಂತ ಪಾಟೀಲ ತಿಳಿಸಿದ್ದಾರೆ.