ನವದೆಹಲಿ (ನ. 06): 2014 ರ ನಂತರ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಅಮಿತ್‌ ಶಾ ಒಂದು ತಿಂಗಳು ಹೋಗಿ ಠಿಕಾಣಿ ಹೂಡುವುದು ವಾಡಿಕೆಯಾಗಿತ್ತು. ಈ ಬಾರಿ ಅಮಿತ್‌ ಶಾ ಅವರ ಆರೋಗ್ಯ ಸರಿ ಇರಲಿಲ್ಲ, ಹೌದು. ಆದರೆ ಬಿಹಾರಕ್ಕೆ ಹೋಗದೆ ಪಶ್ಚಿಮ ಬಂಗಾಳಕ್ಕೆ ಹೋಗಿರುವುದು ಸೋಜಿಗದ ಸಂಗತಿ.

ಟಿಕೆಟ್‌ ಹಂಚಿಕೆ, ಮಿತ್ರರ ಜೊತೆ ಮಾತುಕತೆ, ಪ್ರಚಾರ ಯಾವುದರಲ್ಲೂ ಅಮಿತ್‌ ಭಾಯಿ ಆಸಕ್ತಿಯನ್ನೇ ತೋರಿಸಲಿಲ್ಲ. ಬಿಹಾರದ ಚುನಾವಣಾ ಪ್ರಚಾರದ ಕೊನೆಯ ದಿನವೂ ಬಿಹಾರಕ್ಕೆ ಹೋಗದ ಅಮಿತ್‌ ಶಾ ಬಂಗಾಳಕ್ಕೆ ಹೋಗಿ ಓಡಾಡುತ್ತಿದ್ದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಬಿಹಾರದಲ್ಲಿ ಓಡಾಡಿದರಾದರೂ ಅವರ ಬಗ್ಗೆ ಎಲ್ಲಿಯೂ ಉತ್ಸಾಹ ಕಾಣಸಿಗುತ್ತಿಲ್ಲ. ಅಮಿತ್‌ ಶಾ ಅವರಿಗೆ ಬಿಹಾರದ ಚುನಾವಣಾ ರಾಜಕೀಯದ ಗಾಳಿ ಮೊದಲೇ ತಿಳಿದಿತ್ತೋ ಏನೋ.

ಮೋದಿ ಹೆಸರಿಲ್ಲದೇ ಬಿಹಾರ ಚುನಾವಣೆ ಎದುರಿಸೋದು ನಿತೀಶ್‌ಗೆ ಕಷ್ಟಸಾಧ್ಯ

ಕಾಂಗ್ರೆಸ್‌ನ ಸ್ಥಿತಿ ಇನ್ನೂ ಕಷ್ಟ

ಎನ್‌ಡಿಎದಲ್ಲಿ ನಿತೀಶ್‌ ಕುಮಾರ್‌ ಹೇಗೆ ದುರ್ಬಲ ಕೊಂಡಿಯಾಗಿ ಕಾಣಿಸುತ್ತಿದ್ದಾರೋ ಮಹಾಗಠಬಂಧನದ ದುರ್ಬಲ ಕೊಂಡಿಯಾಗಿ ಕಾಂಗ್ರೆಸ್‌ ಕಾಣುತ್ತಿದೆ. ತೇಜಸ್ವಿ ಯಾದವ್‌ ಜೊತೆ ರಂಪಾಟ ಮಾಡಿ 70 ಸೀಟ್‌ ತೆಗೆದುಕೊಂಡಿರುವ ಕಾಂಗ್ರೆಸ್‌ ಎಷ್ಟು ಗೆಲ್ಲುತ್ತದೆ ಎನ್ನುವುದು ಸರ್ಕಾರ ರಚನೆಯ ದೃಷ್ಟಿಯಿಂದ ಮುಖ್ಯ.

ಕಾಂಗ್ರೆಸ್‌ ಬಹುತೇಕ ಮುಸ್ಲಿಂ ಬಾಹುಳ್ಯವಿರುವ ಸೀಟುಗಳಲ್ಲಿ ಸ್ಪಧಿ​ರ್‍ಸುತ್ತಿದೆ. ತೇಜಸ್ವಿ ಯಾದವ್‌ ಸರ್ಕಾರ ಆಗಬೇಕೆಂದರೆ ಕಾಂಗ್ರೆಸ್‌ ಕನಿಷ್ಠ 70ರಲ್ಲಿ 40 ಗೆಲ್ಲಬೇಕು. ಕಳೆದ ಬಾರಿ 27 ಗೆದ್ದಿತ್ತು. ಬಿಹಾರದಲ್ಲಿ ಮಂಡಲ ರಾಜಕಾರಣ ಶುರು ಆದ ನಂತರ ಕಾಂಗ್ರೆಸ್‌ಗೆ ಸ್ವತಂತ್ರ ಅಸ್ತಿತ್ವವೂ ಇಲ್ಲ, ನಾಯಕತ್ವವೂ ಇಲ್ಲ. ಯಾದವರ ಬೆನ್ನೇರಿ ಬರಬೇಕು ಅಷ್ಟೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

'ಇಂಡಿಯಾ ಗೇಟ್' ದೆಹಲಿಯಿಂದ ಕಂಡ ರಾಜಕಾರಣ