Kodagu: ಕಾಂಗ್ರೆಸ್ ವಿರುದ್ಧ ಯಾರಿಗೆ ಬಿಜೆಪಿ ಟಿಕೆಟ್? ಜೆಡಿಎಸ್ ಅತೃಪ್ತರಿಗೆ ಗಾಳ!
ಕೊಡಗು ಜಿಲ್ಲೆಯಲ್ಲಿ ಇರುವುದೇ ಎರಡು ಕ್ಷೇತ್ರಗಳಾದರೂ ಈ ಬಾರಿಯ ಚುನಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ, ಬಿಜೆಪಿ ಅಳೆದು ತೂಗುವುದರಲ್ಲೇ ಇದೆ. ಆದರೆ ಜೆಡಿಎಸ್ ಮಾತ್ರ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.11): ಕೊಡಗು ಜಿಲ್ಲೆಯಲ್ಲಿ ಇರುವುದೇ ಎರಡು ವಿಧಾನಸಭಾ ಕ್ಷೇತ್ರಗಳಾದರೂ ಈ ಬಾರಿಯ ಚುನಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ಈಗಾಗಲೇ ಎರಡು ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರೆ, ಬಿಜೆಪಿಯ ರಾಷ್ಟ್ರೀಯ ನಾಯಕರು ಅಳೆದು ತೂಗುವುದರಲ್ಲೇ ಇದ್ದಾರೆ. ಆದರೆ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ವರಿಷ್ಠರು ಮಾತ್ರ ಕಾದು ನೋಡುವ ತಂತ್ರ ಅನುಸರಿಸುತಿದ್ದಾರೆ. ಇದು ಜಿಲ್ಲೆಯ ಎರಡು ಕ್ಷೇತ್ರಗಳ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ ಅಚ್ಚರಿ ಎನ್ನುವಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಆಗದಿದ್ದರೂ ಎರಡು ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿ ಆಗಿರುವವರು ಈಗಾಗಲೇ ವ್ಯಾಪಕ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಮಡಿಕೇರಿ ಕ್ಷೇತ್ರದ ಹಾಲಿ ಶಾಸಕ ಅಪ್ಪಚ್ಚು ರಂಜನ್ ಅವರು ತಮಗೆ ಟಿಕೆಟ್ ಖಚಿತ ಎಂದು ಈಗಾಗಲೇ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಸುತ್ತಿನ ಮನೆ ಮನೆ ಪ್ರಚಾರವನ್ನು ಮುಗಿಸಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಕ್ಷೇತ್ರದ ಅಭ್ಯರ್ಥಿಗಳು ಯಾರು ಎಂದು ಅಂತಿಮಗೊಳಿಸಿಲ್ಲ. ಇದು ಕಾರ್ಯಕರ್ತರಿಗೆ ಸಾಕಷ್ಟು ಗೊಂದಲಕ್ಕೂ ಕಾರಣವಾಗಿದೆ.
ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ಕೊಡುವುದು ಖಚಿತ ಎನ್ನುವ ಅಪಾರ ನಂಬಿಕೆಯ ಮೇಲೆ ಮನೆ, ಮನೆ ಪ್ರಚಾರ, ಸಭೆ ಸಮಾರಂಭಗಳನ್ನು ಮಾಡಿದ್ದೇವೆ. ಹೊಸಬರಿಗೆ ಅವಕಾಶ ನೀಡುವುದಾದರೆ ಕನಿಷ್ಠ ಆರು ತಿಂಗಳ ಮೊದಲೇ ಅದನ್ನು ಹೇಳಬೇಕಾಗಿತ್ತು. ಆದರೆ ಚುನಾವಣೆಗೆ ಇನ್ನು 28 ದಿನಗಳಷ್ಟೇ ಬಾಕಿ ಇರುವಾಗ ಹೊಸಬರಿಗೆ ಟಿಕೆಟ್ ನೀಡುತ್ತೇವೆ ಎಂದರೆ ಹೇಗೆ. ಹೀಗೆ ಮಾಡಿದರೆ ಗೆಲ್ಲುವ ವಿಶ್ವಾಸದಲ್ಲಿರುವ ಪಕ್ಷಕ್ಕೆ ಪೆಟ್ಟು ಬೀಳಲಿದೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದು ಒಂದೆಡೆಯಾದರೆ ಜೆಡಿಎಸ್ ಕೂಡ ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಬದಲಾಗಿ ಬಿಜೆಪಿಯಲ್ಲಿ ಟಿಕೆಟ್ ಘೋಷಣೆ ಆದ ಬಳಿಕ ಅಲ್ಲಿ ಅತೃಪ್ತಗೊಳ್ಳುವವರಿಗೆ ಗಾಳ ಹಾಕಿ ಸೆಳೆದು ಜೆಡಿಎಸ್ ನಿಂದ ಟಿಕೆಟ್ ಕೊಟ್ಟು ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.ಹೀಗಾಗಿ ಬಿಜೆಪಿಯ ಕೆಲವರು ಜೆಡಿಎಸ್ ನ ಬಾಗಿಲು ತಟ್ಟಿದ್ದಾರೆ ಎನ್ನುವ ಗುಸು ಗುಸು ಆರಂಭವಾಗಿದೆ.
ಆದರೆ ಕಾಂಗ್ರೆಸ್ ಬಿಟ್ಟು ಈಗಾಗಲೇ ತೆನೆ ಹೊತ್ತ ಮಹಿಳೆಯ ಕೈ ಹಿಡಿದಿರುವ ಎನ್.ಎಂ. ಮುತ್ತಪ್ಪ ತನಗೆ ಜೆಡಿಎಸ್ ಟಿಕೆಟ್ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಓಡಾಡಿ ಪ್ರಚಾರ ಮಾಡುತ್ತಿದ್ದಾರೆ. ಪಕ್ಷದಿಂದ ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ ಎನ್ನುವ ವಿಷಯಕ್ಕೆ ಪ್ರತಿಕ್ರಿಯಿಸಿರುವ ಅವರು ಈಗಾಗಲೇ ಕುಮಾರಸ್ವಾಮಿ ಅವರು ಮತ್ತು ಸಾ.ರಾ. ಮಹೇಶ್ ಅವರು ನೀವು ಎಲ್ಲಾ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಹೀಗಾಗಿ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಇನ್ನೆರಡು ದಿನಗಳಲ್ಲಿ ಟಿಕೆಟ್ ಸಿಗುವುದು ಖಚಿತ. ಹೀಗಾಗಿ ಇದೇ ಹದಿನೇಳರಂದು ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ.
ಬಚ್ಚೇಗೌಡ ಬಿಜೆಪಿ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಕಾಂಗ್ರೆಸ್ ನಾಯಕರ ಪ್ಲಾನ್
ಒಂದು ವೇಳೆ ಟಿಕೆಟ್ ಸಿಗದಿದ್ದರೆ ಏನು ಮಾಡಬೇಕು ಎಂದು ನನ್ನ ಹಿತೈಷಿಗಳು ಮತ್ತು ಕಾರ್ಯಕರ್ತರೊಂದಿಗೆ ಕುಳಿತು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ. ಏನೇ ಆಗಲಿ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಟಿಕೆಟ್ ಇನ್ನೂ ಘೋಷಣೆ ಆಗದಿರುವುದು ಸಾಕಷ್ಟು ಗೊಂದಲ, ಊಹಪೋಹಗಳಿಗೆ ಕಾರಣವಾಗಿದ್ದು ಟಿಕೆಟ್ ಘೋಷಣೆ ಬಳಿಕ ಎಲ್ಲದಕ್ಕೂ ತೆರೆ ಬೀಳಲಿದೆ.
ಬಿಜೆಪಿಗೆ ಜಗದೀಶ್ ಶೆಟ್ಟರ್ ರಾಜೀನಾಮೆ, ನಕಲಿ ಪತ್ರ ವೈರಲ್!
ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.