ರಾಜ್ಯ ಬಿಜೆಪಿ ಟಿಕೆಟ್ ಘೋಷಣೆ ಮಾಡುವ ಮುನ್ನವೇ ದೊಡ್ಡ ಆಘಾತ ಎದುರಾಗಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ನಕಲಿ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರು (ಏ.11): ಹೈಕಮಾಂಡ್ ಟಿಕೆಟ್ ನಿರಾಕರಿಸಿದ ಬೆನ್ನಲ್ಲಿಯೇ ಜಗದೀಶ್ ಶೆಟ್ಟರ್ ಹೆಸರಲ್ಲಿ ನಕಲಿ ರಾಜೀನಾಮೆ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಹೈಕಮಾಂಡ್ ನಿರ್ಧಾರದಿಂದ ಮನಸ್ಸಿಗೆ ಬಹಳ ನೋವಾಗಿದ್ದು ಇದರಿಂದ ಪಕ್ಷದಲ್ಲಿ ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿಯಲ್ಲಿ ಈ ಕುರಿತಾಗಿ ಸ್ವತಃ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ. 'ನಾನು ಬಿಜೆಪಿಗೆ ರಾಜೀನಾಮೆ ಕೊಟ್ಟಿಲ್ಲ. ನನಗೆ ಈಗಲೂ ಟಿಕೆಟ್ ಸಿಗುವ ಭರವಸೆ ಇದೆ. ವರಿಷ್ಠರ ಜೊತೆ ನಾನು ಮಾತುಕತೆ ನಡೆಸಿದ್ದೇನೆ. ಆದರೆ, ಚುನಾವಣೆಗೆ ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಾನು ರಾಜೀನಾಮೆ ಪತ್ರ ಬರೆದಲ್ಲಿ ಅದು ಇಂಗ್ಲೀಷ್‌ನಲ್ಲಿ ಇರುತ್ತದೆ. ಕನ್ನಡದಲ್ಲಿ ಜೆಪಿ ನಡ್ಡಾಗೆ ಪತ್ರ ಬರೆಯಲು ಸಾಧ್ಯವೇ? ಅದು ನಾನು ಬರೆದ ಪತ್ರವಲ್ಲ ಎಂದು ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ ಎಂದು ಸೂಚಿಸುವ ಮೂಲಕ ಇತರರಿಗೆ ದಾರಿ ಮಾಡಿಕೊಡುವಂತೆ ಬಿಜೆಪಿ ಕೇಂದ್ರ ನಾಯಕತ್ವವು ತನಗೆ ಹೇಳಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಗಳವಾರ ಹೇಳಿದ್ದಾರೆ.
ಈ ನಿರ್ಧಾರದಿಂದ ತನಗೆ ನೋವಾಗಿದೆ. ಆದರೆ, ವರಿಷ್ಠರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ. ಹೈಕಮಾಂಡ್ ಮಾಡಿರುವ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.ಈ ಬಗ್ಗೆ ಮರುಪರಿಶೀಲನೆ ನಡೆಸುವಂತೆ ನಾಯಕತ್ವವನ್ನು ಒತ್ತಾಯಿಸಿದ್ದು, ಈ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಲಾಗುವುದು ಎಂದು ಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಇದ್ದೇ ಇದೆ: ಜಗದೀಶ್ ಶೆಟ್ಟರ್
ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಈ ಸಲ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ: ಜಗದೀಶ್ ಶೆಟ್ಟರ್ ಅಭಿಮತ

