Asianet Suvarna News Asianet Suvarna News

ಪದ್ಮನಾಭನಗರದಲ್ಲಿ ‘ಹ್ಯಾಟ್ರಿಕ್‌ ಹೀರೋ’ ಆರ್‌. ಅಶೋಕ್‌ರನ್ನು ಮಣಿಸೋರು ಯಾರು?

ಪದ್ಮನಾಭನಗರದಲ್ಲಿ 3 ಬಾರಿ ಗೆದ್ದು 4ನೇ ಜಯಕ್ಕೆ ಬಿಜೆಪಿಯ ಅಶೋಕ್‌ ಸಜ್ಜು, ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಅಭ್ಯರ್ಥಿ ಲೆಕ್ಕಾಚಾರ. 

Who Will Defeat R Ashok at Padmanabhanagar in Bengaluru grg
Author
First Published Mar 29, 2023, 6:59 AM IST

ಬೆಂಗಳೂರು(ಮಾ.29): ಕ್ಷೇತ್ರ ಪುನರ್‌ವಿಂಗಡಣೆ ಬಳಿಕ 2008ರಲ್ಲಿ ರಚನೆಗೊಂಡ ಪದ್ಮನಾಭನಗರಕ್ಕೆ ಇದುವರೆಗೆ ಮೂರು ಸಾರ್ವತ್ರಿಕ ಚುನಾವಣೆ ನಡೆದಿದ್ದು, ಹಾಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರೇ ಸಾಮ್ರಾಟ್‌ ಆಗಿ ಮೆರೆದಿದ್ದಾರೆ.

ಈಗ ನಾಲ್ಕನೇ ಬಾರಿಯೂ ಅವರೇ ಮೆರೆಯುವ ಸಾಧ್ಯತೆ ಕಂಡು ಬರುತ್ತಿದ್ದು, ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಯಾರನ್ನು ಕಣಕ್ಕಿಳಿಸುತ್ತಾರೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಮೇಲಾಗಿ, ಅಶೋಕ್‌ ಅವರನ್ನು ಮಣಿಸುವಂಥ ಪ್ರಬಲ ಅಭ್ಯರ್ಥಿಗಳ ಕೊರತೆ ಉಭಯ ಪಕ್ಷಗಳಲ್ಲೂ ಕಂಡು ಬರುತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಪ್ರಕಟಿಸಿದ್ದರೂ ಪದ್ಮನಾಭನಗರಕ್ಕೆ ಯಾರು ಎಂಬುದನ್ನು ಅಖೈರುಗೊಳಿಸಲು ಸಾಧ್ಯವಾಗಿಲ್ಲ.

ಕೋಲಾರ ಟಿಕೆಟ್‌ ಕೂಡ ಕೇಳಿದ್ದೇನೆ, ಒಪ್ಪಿದ್ರೆ 2 ಕಡೆಯಿಂದಲೂ ಕಣಕ್ಕೆ: ಸಿದ್ದರಾಮಯ್ಯ

ಈ ನಡುವೆ ಅಶೋಕ್‌ ಅವರು ಸತತವಾಗಿ ಮೂರು ಬಾರಿ ಈ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿರುವುದರಿಂದ ಮತ್ತು ಈ ಬಾರಿಯೂ ಗೆಲ್ಲುವ ವಿಶ್ವಾಸ ಇರುವುದಿಂದ ಅವರನ್ನು ಪಕ್ಷ ದುರ್ಬಲವಾಗಿರುವ ಬೇರೆ ಕ್ಷೇತ್ರಕ್ಕೆ ಕಳುಹಿಸಬೇಕು ಎಂಬ ಅಭಿಪ್ರಾಯ ಪಕ್ಷದಲ್ಲಿ ಬಲವಾಗಿ ಕೇಳಿಬರುತ್ತಿದೆ. ಇದು ಅಶೋಕ್‌ ಅವರ ಹೆಗ್ಗಳಿಕೆಯೂ ಹೌದು. ಸದ್ಯದ ಪರಿಸ್ಥಿತಿಯಲ್ಲಿ ಪದ್ಮನಾಭನಗರ ಕ್ಷೇತ್ರದಲ್ಲಿ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಗೆಲ್ಲುವ ವಾತಾವರಣವಿದೆ. ಅಷ್ಟರಮಟ್ಟಿಗೆ ಅಭಿವೃದ್ಧಿ ಕೆಲಸಗಳೂ ಆಗಿವೆ. ಪಕ್ಷ ಸಂಘಟನೆಯೂ ಬಲವಾಗಿದೆ ಎಂಬ ಅನಿಸಿಕೆ ಬಿಜೆಪಿ ಪಾಳೆಯದಲ್ಲಿ ವ್ಯಕ್ತವಾಗಿದೆ.

ಹೀಗಾಗಿ ಅಶೋಕ್‌ ಅವರು ಬೇರೆ ಕ್ಷೇತ್ರಕ್ಕೆ ವಲಸೆ ಹೋಗಿ ಸ್ಪರ್ಧಿಸಿ ಗೆಲ್ಲುವುದರಿಂದ ಪಕ್ಷಕ್ಕೆ ಒಂದು ಸ್ಥಾನ ಹೆಚ್ಚು ಲಭಿಸಿದಂತಾಗುತ್ತದೆ. ಜತೆಗೆ ಪಕ್ಷ ಸಂಘಟನೆಯೂ ಬಲಗೊಂಡಂತಾಗುತ್ತದೆ. ಪದ್ಮನಾಭನಗರ ಕ್ಷೇತ್ರದಿಂದ ಹಿರಿಯ ಕಾರ್ಯಕರ್ತರು ಅಥವಾ ಎರಡನೇ ಹಂತದ ಮುಖಂಡರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಬಹುದು ಎಂಬ ಅಭಿಪ್ರಾಯವಿದೆ. ಆದರೆ, ಅಶೋಕ್‌ ಅವರು ಈ ಕ್ಷೇತ್ರ ಬಿಟ್ಟುಕೊಟ್ಟು ಬೇರೆಡೆ ವಲಸೆ ಹೋಗುವ ಬಗ್ಗೆ ಆಸಕ್ತಿ ತೋರಿಲ್ಲ ಎನ್ನುವುದು ಗಮನಾರ್ಹ.

ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಳೆದ ಮೂರು ಚುನಾವಣೆಗಳಿಂದಲೂ ಈ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಯಾವುದೇ ಪ್ರಬಲ ಪ್ರಯತ್ನವನ್ನೂ ನಡೆಸಿಲ್ಲ. ಇದಕ್ಕೆ ‘ಹೊಂದಾಣಿಕೆ ರಾಜಕಾರಣ’ ಮುಖ್ಯ ಕಾರಣ ಎನ್ನಲಾಗುತ್ತಿದೆ. ಪ್ರತಿಪಕ್ಷಗಳು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದೇ ಪದ್ಮನಾಭನಗರ ಬಿಜೆಪಿ ಭದ್ರಕೋಟೆಯಾಗಿ ಪರಿವರ್ತನೆಯಾಗಿದೆ. ಪ್ರತಿಪಕ್ಷಗಳ ಅಭ್ಯರ್ಥಿಗಳು ಪ್ರತಿ ಚುನಾವಣೆಯಲ್ಲೂ ಬದಲಾವಣೆಗೊಂಡಿದ್ದಾರೆ. ಒಂದು ಚುನಾವಣೆಯಲ್ಲಿ ಅಭ್ಯರ್ಥಿಯಾದವರು ಫಲಿತಾಂಶದ ಬಳಿಕ ಕಾಣೆಯಾಗಿ ಬಿಡುತ್ತಾರೆ. ಕ್ಷೇತ್ರದ ಜನರೊಂದಿಗೆ ಸಂಪರ್ಕವನ್ನೇ ಇಟ್ಟುಕೊಳ್ಳುವುದಿಲ್ಲ. ಮತ್ತೆ ಮುಂದಿನ ಚುನಾವಣೆಗೆ ಹೊಸ ಅಭ್ಯರ್ಥಿ ಪ್ರತ್ಯಕ್ಷವಾಗುತ್ತಾರೆ. ಇದನ್ನೇ ಅಶೋಕ್‌ ಅವರು ಬಂಡವಾಳವಾಗಿ ಮಾಡಿಕೊಂಡು ಸುಲಭವಾಗಿ ಗೆಲುವು ಸಾಧಿಸುತ್ತಾರೆ ಎಂಬುದು ಮೇಲ್ನೋಟಕ್ಕೇ ಕಂಡು ಬರುತ್ತಿರುವ ಅಂಶ.

ಪ್ರತಿಪಕ್ಷಗಳಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿದರೆ ಮಾತ್ರ ಅಶೋಕ್‌ ಅವರ ಗೆಲುವಿಗೆ ಅಡ್ಡಿ ಒಡ್ಡಬಹುದು. ಕಾಂಗ್ರೆಸ್‌ನಿಂದ ರಘುನಾಥಗೌಡ, ಸಂಜಯಗೌಡ ಹಾಗೂ ಗುರಪ್ಪನಾಯ್ಡು ಅವರ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ. ಇನ್ನು ಜೆಡಿಎಸ್‌ನಿಂದ ಮಂಜುನಾಥಗೌಡ ಅವರ ಹೆಸರು ಪ್ರಸ್ತಾಪವಾಗಿದೆ.

ಕಾಂಗ್ರೆಸ್‌ ಹೈಕಮಾಂಡ್‌ ಜೊತೆ ಯಾರೂ ಮಾತನಾಡಿಲ್ಲ: ಎಚ್‌ಡಿಕೆಗೆ ಸಿದ್ದರಾಮಯ್ಯ ತಿರುಗೇಟು

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಇತಿಹಾಸ

ಕ್ಷೇತ್ರ ಪುನರ್‌ವಿಂಗಡಣೆಯಾದ ಬಳಿಕ 2008ರಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ರಚನೆಯಾಯಿತು. 2008ರಿಂದ ಕಂದಾಯ ಸಚಿವ ಆರ್‌.ಅಶೋಕ್‌ ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. 2008ರಿಂದಲೂ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಕ್ಷೇತ್ರ ವಶಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹರಸಾಹಸ ಪಡುತ್ತಿವೆ. 2008ರಲ್ಲಿ ಜೆಡಿಎಸ್‌ನ ಎಂ.ವಿ.ಪ್ರಸಾದ್‌ ಬಾಬು ಅವರನ್ನು ಅಶೋಕ್‌ ಮಣಿಸಿದರೆ, 2013ರಲ್ಲಿ ಕಾಂಗ್ರೆಸ್‌ನ ಎಲ್‌.ಎಸ್‌.ಚೇತನ್‌ಗೌಡ ಅವರನ್ನು ಸೋಲಿಸಿದ್ದರು. ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್‌ನ ವಿ.ಕೆ.ಗೋಪಾಲ್‌ ಅವರನ್ನು ಸೋಲಿಸಿ ಅಶೋಕ್‌ ಹ್ಯಾಟ್ರಿಕ್‌ ಸಾಧಿಸಿದ್ದಾರೆ.

ಜಾತಿ ಲೆಕ್ಕಾಚಾರ

ಕ್ಷೇತ್ರದಲ್ಲಿ 2.70 ಲಕ್ಷಕ್ಕಿಂತ ಹೆಚ್ಚು ಮತದಾರರಿದ್ದು, ಬ್ರಾಹ್ಮಣರು, ಒಕ್ಕಲಿಗರ ಪ್ರಾಬಲ್ಯ ಹೊಂದಿದೆ. ನಾಯ್ಡು ಸಮುದಾಯವು ಸಹ ಮೂರನೇ ಸ್ಥಾನದಲ್ಲಿ ಅಭ್ಯರ್ಥಿಯನ್ನು ತೀರ್ಮಾನಿಸುತ್ತಾರೆ. ಜಾತಿ ಆಧಾರಿತ ಪ್ರಭಾವವು ಇಲ್ಲಿ ಹೆಚ್ಚಿದೆ.

Follow Us:
Download App:
  • android
  • ios