ರಾಜ್ಯದಲ್ಲಿ ಯಡಿಯೂರಪ್ಪರನ್ನು ಬಿಟ್ಟು ಬಿಜೆಪಿಯನ್ನು ಗೆಲ್ಲಿಸುವ ಎದೆಗಾರಿಕೆ ಯಾರಿಗೆ ಇದೆ?: ಬಿ.ವೈ.ವಿಜಯೇಂದ್ರ
ಇಂದು ಕೆಲವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಯಡಿಯೂರಪ್ಪ ಅವರಿಗೆ ನಾಳೆ ಸಿಎಂ ಆಗಬೇಕೆಂಬ ಕನಸಿಲ್ಲ. ಮಕ್ಕಳನ್ನು ಎಂಎಲ್‌ಎ ಮಾಡಿ ಮಂತ್ರಿಯಾಗಿಸುವ ಗುರಿಯೂ ಇಲ್ಲ.
ಹಾವೇರಿ (ಮಾ.16): ‘ಇಂದು ಕೆಲವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಯಡಿಯೂರಪ್ಪ ಅವರಿಗೆ ನಾಳೆ ಸಿಎಂ ಆಗಬೇಕೆಂಬ ಕನಸಿಲ್ಲ. ಮಕ್ಕಳನ್ನು ಎಂಎಲ್‌ಎ ಮಾಡಿ ಮಂತ್ರಿಯಾಗಿಸುವ ಗುರಿಯೂ ಇಲ್ಲ. ಮತ್ತೊಮ್ಮೆ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ತಂದು ಪ್ರಧಾನಿ ಮೋದಿ ಅವರ ಕೈ ಬಲಪಡಿಸುವುದಷ್ಟೇ ಅವರ ಉದ್ದೇಶ. ಅವರನ್ನು ಬಿಟ್ಟು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಎದೆಗಾರಿಕೆ ಯಾರಿಗಾದರೂ ಇದೆಯಾ?’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುಡುಗಿದ್ದಾರೆ.
ರಾಣಿಬೆನ್ನೂರಿನಲ್ಲಿ ಆಯೋಜಿಸಿದ್ದ ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿ ಯಡಿಯೂರಪ್ಪ ಅವರ ಬಗ್ಗೆ ಟೀಕಿಸುವವರಿಗೆ ತಿರುಗೇಟು ನೀಡಿದರು. ಇಂದು ಯಾರು ಬಿಜೆಪಿ ನೋಡುತ್ತಿದ್ದಾರೋ ಅವರು ಭವ್ಯ ಭವನವನ್ನಷ್ಟೇ ನೋಡುತ್ತಿದ್ದಾರೆ. ಆ ಭವನದ ಅಡಿಪಾಯ ಯಾರಿಗೂ ಕಾಣುವುದಿಲ್ಲ. ಬಿಜೆಪಿ ರಾಜ್ಯದಲ್ಲಿ ಇಷ್ಟುಸುಭದ್ರವಾಗಿ ನಿಂತಿದೆ ಎಂದರೆ ಅದಕ್ಕೆ ಅಡಿಪಾಯ ಹಾಕಿದವರು ಯಡಿಯೂರಪ್ಪ. ಯಡಿಯೂರಪ್ಪನವರು ರಾಜ್ಯದಲ್ಲಿ 30-40 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿಕೊಂಡು ನಾಡಿನಲ್ಲಿರುವ ರೈತರು, ಬಡವರು, ದೀನದಲಿತರ ಬಗ್ಗೆ ಕಾಳಜಿ ಇಟ್ಟುಕೊಂಡು ಸೈಕಲ್ ಜಾಥಾ, ಪಾದಯಾತ್ರೆ ಮಾಡಿದರು. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಯಡಿಯೂರಪ್ಪ ಮಾಡಿದಷ್ಟುಹೋರಾಟವನ್ನು ಮತ್ತೊಬ್ಬ ಯಾವ ರಾಜಕಾರಣಿಯೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅವರ ಬಗ್ಗೆ ಟೀಕೆ ಮಾಡುವವರು ಹುಷಾರಾಗಿರಿ. ನೇರವಾಗಿ ಹೇಳುತ್ತಿದ್ದೇನೆ. ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿ ಮನೆಗೂ ಮೋದಿ ಸರ್ಕಾರದ ಸವಲತ್ತು ತಲುಪಿದೆ: ಬಿ.ಎಸ್.ಯಡಿಯೂರಪ್ಪ
ಸುಮ್ಮನಿರುವುದು ವೀಕ್ನೆಸ್ ಅಲ್ಲ: ಯಾವುದೋ ಒಂದು ನಗರಕ್ಕೆ ಸೀಮಿತವಾಗಿದ್ದ ಬಿಜೆಪಿ ಇಂದು ಹಳ್ಳಿ ಹಳ್ಳಿಗೆ ತಲುಪಿದೆ ಎಂದರೆ ಯಡಿಯೂರಪ್ಪ ಕಾರಣ. ಪಕ್ಷದ ಅನೇಕ ನಾಯಕರೊಂದಿಗೆ ಹೋರಾಟ ಮಾಡಿ, ಸಂಘಟನೆ ಮಾಡಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಯಡಿಯೂರಪ್ಪ ಬಗ್ಗೆ ಟೀಕೆ ಮಾಡುವವರನ್ನು ನೋಡುತ್ತಿದ್ದೇವೆ. ಆದರೂ ಯಡಿಯೂರಪ್ಪ ಸುಮ್ಮನಿದ್ದಾರೆ ಎಂದರೆ ವೀಕ್‌ನೆಸ್ ಅಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಮೌನವಾಗಿದ್ದಾರೆ ಎಂದರೆ ಉದ್ದೇಶವಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ದಿನ ಕೂಡ ನಾನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುತ್ತೇನೆ ಎಂದು ಅವರು ಹೇಳಿದ್ದರು. ಮೌನವಾಗಿದ್ದಾರೆ ಎಂದರೆ ಅದು ಅವರ ದೌರ್ಬಲ್ಯ ಎಂದು ಭಾವಿಸಿದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಯಡಿಯೂರಪ್ಪ ತಮ್ಮ ಕುಟುಂಬ ಬೆಳೆಸಲು, ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರಲೆಂದು ಪಕ್ಷ ಸಂಘಟನೆ ಮಾಡಿಲ್ಲ ಎಂದು ಹೇಳಿದರು.
20 ವರ್ಷಗಳ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಯಾರೂ ಕನಸು ಕಾಣುತ್ತಿರಲಿಲ್ಲ. ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದಾಗ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ? ಹಗಲುಗನಸು ಕಾಣುತ್ತಿದ್ದೀರಿ ಎಂದಿದ್ದರು. ಅದನ್ನೇ ಸವಾಲಾಗಿ ಸ್ವೀಕರಿಸಿದ ಯಡಿಯೂರಪ್ಪನವರು ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕ ಎಂದು ರಾಷ್ಟ್ರೀಯ ನಾಯಕರು ಹೆಮ್ಮೆಯಿಂದ ಮಾತನಾಡುವಂತಾಗಿದೆ ಎಂದರೆ ಯಡಿಯೂರಪ್ಪ ಪರಿಶ್ರಮ ಕಾರಣ ಎಂದು ಹೇಳಿದರು.
ಯಡಿಯೂರಪ್ಪ ಎಂದಿಗೂ ಕುಟುಂಬದ ಬಗ್ಗೆ ಚಿಂತನೆ ಮಾಡಲಿಲ್ಲ. ಅವರು ಸಿಎಂ ಆಗಿದ್ದಾಗ ಬಡವರು, ದೀನ ದಲಿತರು, ಪರಿಶಿಷ್ಟಜಾತಿ, ಪಂಗಡದವರನ್ನು ಕುಟುಂಬದವರು ಎಂದು ಭಾವಿಸಿ ಎಲ್ಲ ಸಮಾಜದ ಕಣ್ಣೀರು ಒರೆಸುವ ಕೆಲಸ ಮಾಡಿದರು. ಟೀಕೆ ಮಾಡುವಾಗ ಎಚ್ಚರಿಕೆ ಇರಬೇಕು. ಅವರು ಸಿಎಂ ಸ್ಥಾನದಲ್ಲಿಲ್ಲ. ಯಾವುದೇ ರಾಜಕೀಯ ಸ್ಥಾನಮಾನದಲ್ಲಿಲ್ಲ. ಆದರೂ ರಾಜ್ಯದ ಆರೂವರೆ ಕೋಟಿ ಕನ್ನಡಿಗರು ತಮ್ಮ ಹೃದಯದಲ್ಲಿ ಶಾಶ್ವತ ಸ್ಥಾನಮಾನ ನೀಡಿದ್ದಾರೆ. ಎಷ್ಟುದಿನ ಅಧಿಕಾರ ನಡೆಸಿದ್ದೀರಿ ಎನ್ನುವುದು ಮುಖ್ಯವಲ್ಲ. ಕೆಲವರು ಯಡಿಯೂರಪ್ಪರಿಗಿಂತ ಹೆಚ್ಚಿನ ಅಧಿಕಾರ ಅನುಭವಿಸಿರಬಹುದು. ಅಧಿಕಾರ ಸಿಕ್ಕಾಗ ಎಲ್ಲ ವರ್ಗದ ಜನರು ಯಡಿಯೂರಪ್ಪನವರನ್ನು ನೆನಪಿಸುವ ರೀತಿ ಕೆಲಸ ಮಾಡಿದ್ದಾರೆ. ಯಡಿಯೂರಪ್ಪನವರ ವಯಸ್ಸಿನ ಬಗ್ಗೆಯೂ ಕೆಲವರು ಮಾತನಾಡುತ್ತಾರೆ. ಅವರಿಗೆ 80 ವರ್ಷವಾದರೂ ಸರಿಸಮನಾಗಿ ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ತರುವ ಎದೆಗಾರಿಕೆ ಯಾರಿಗಾದರೂ ಇದೆಯಾ ಎಂದು ಪ್ರಶ್ನಿಸಿದರು.
5-6 ಹಾಲಿ ಶಾಸಕರಿಗೆ ಟಿಕೆಟ್ ಸಿಗೋಲ್ಲ ಎಂದಿಲ್ಲ: ಬಿ.ಎಸ್.ಯಡಿಯೂರಪ್ಪ
ಯಡಿಯೂರಪ್ಪ ಯಾವತ್ತೂ ಕುಟುಂಬದ ಬಗ್ಗೆ ಯೋಚನೆ ಮಾಡಲಿಲ್ಲ. ಶಿಕಾರಿಪುರದಲ್ಲಿ ಪುರಸಭೆ ಸದಸ್ಯರಿದ್ದಾಗ ಅವರ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ಅಂದು ಅವರನ್ನು ಎತ್ತಲು ಯಾರೂ ಇರಲಿಲ್ಲ. ನಮ್ಮ ತಾಯಿ ಹಾಗೂ ಒಂದಿಬ್ಬರು ಕಾರ್ಯಕರ್ತರು ಅವರನ್ನು ಸೇರಿ ಆಸ್ಪತ್ರೆಗೆ ಸೇರಿಸಿದ್ದರು. ವಾರದ ನಂತರ, ಮೈತ್ರಮ್ಮ ಇಂದು ನಾನು ಬದುಕುಳಿದಿದ್ದೇನೆ ಎಂದರೆ ದೇವರ ಆಶೀರ್ವಾದ, ರಾಜ್ಯದ ಕಾರ್ಯಕರ್ತರ ಪುಣ್ಯದಿಂದ. ಜೀವ ಇರುವವರೆಗೂ ಕೂಡ ಬಿಜೆಪಿ ಕಟ್ಟುವ ಕೆಲಸ ಮಾಡುತ್ತೇನೆ ಎಂದಿದ್ದರು. ಅವರ ಬಗ್ಗೆ ಟೀಕೆ ಮಾಡುವವರು ಹುಷಾರಾಗಿರಿ. ನೇರವಾಗಿ ಹೇಳುತ್ತಿದ್ದೇನೆ. ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ. ಅವರು ನಾಳೆ ಸಿಎಂ ಆಗಬೇಕೆಂಬ ಕನಸಿಲ್ಲ. ಪ್ರಧಾನಿ ಮೋದಿ ಕೈ ಬಲಪಡಿಸಬೇಕು ಎಂಬ ಉದ್ದೇಶ ಇಟ್ಟುಕೊಂಡು ಪ್ರವಾಸ ಮಾಡುತ್ತಿದ್ದಾರೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.