Asianet Suvarna News Asianet Suvarna News

ಅಧಿವೇಶನ ಯಾವ ಪುರುಷಾರ್ಥಕ್ಕೆ?: ಸಿದ್ದರಾಮಯ್ಯ ಆಕ್ರೋಶ

ಸದನದಲ್ಲಿ ಪ್ರತಿಪಕ್ಷದವರು ಚರ್ಚಿಸಿದ ವಿಷಯಗಳಿಗೆ ಉತ್ತರ ನೀಡಲಾಗುವುದಿಲ್ಲ ಎನ್ನುವುದಾದರೆ, ನಾವು ನೋಟಿಸ್‌ ನೀಡಿದ ವಿಚಾರಗಳ ಚರ್ಚೆಗೆ ಅವಕಾಶವನ್ನೇ ನೀಡುವುದಿಲ್ಲವಾದರೆ ಸರ್ಕಾರ ಮತ್ತು ಸ್ಪೀಕರ್‌ ಅಧಿವೇಶನವನ್ನು ಯಾವ ಪುರುಷಾರ್ಥಕ್ಕೆ ಕರೆಯುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.

What is the purpose of the belagavi winter session says siddaramaiah gvd
Author
First Published Dec 30, 2022, 2:30 AM IST

ಸುವರ್ಣಸೌಧ (ಡಿ.30): ಸದನದಲ್ಲಿ ಪ್ರತಿಪಕ್ಷದವರು ಚರ್ಚಿಸಿದ ವಿಷಯಗಳಿಗೆ ಉತ್ತರ ನೀಡಲಾಗುವುದಿಲ್ಲ ಎನ್ನುವುದಾದರೆ, ನಾವು ನೋಟಿಸ್‌ ನೀಡಿದ ವಿಚಾರಗಳ ಚರ್ಚೆಗೆ ಅವಕಾಶವನ್ನೇ ನೀಡುವುದಿಲ್ಲವಾದರೆ ಸರ್ಕಾರ ಮತ್ತು ಸ್ಪೀಕರ್‌ ಅಧಿವೇಶನವನ್ನು ಯಾವ ಪುರುಷಾರ್ಥಕ್ಕೆ ಕರೆಯುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ. ಗುರುವಾರ ಉಭಯ ಸದನಗಳ ಕಾರ್ಯಕಲಾಪಗಳು ಅನಿರ್ದಿಷ್ಟಾವದಿಗೆ ಮುಂದೂಡಿಕೆಯಾದ ಬಳಿಕ ಹೊರಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಚರ್ಚೆಗೆ ಅವಕಾಶ ಕೋರಿ ನಾವು ಮೂರು ಬಾರಿ ನೋಟಿಸ್‌ ಕೊಟ್ಟಿದ್ದೇವೆ. 

ಆದರೆ, ಚರ್ಚೆಗೆ ಅವಕಾಶ ಕೊಡಲಿಲ್ಲ. ರೈತರ ಸಮಸ್ಯೆಗಳ ಬಗ್ಗೆ ನಿಯಮ 69ರಡಿ ಸುದೀರ್ಘವಾಗಿ ಮಾತನಾಡಿದ್ದೇನೆ. ಆದರೆ, ಯಾವುದಕ್ಕೂ ಸರ್ಕಾರ ಉತ್ತರ ಕೊಟ್ಟಿಲ್ಲ. ಹೀಗಾದರೆ ಯಾವ ಪುರುಷಾರ್ಥಕ್ಕೆ ಇವರು ಅಧಿವೇಶನ ನಡೆಸುತ್ತಾರೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿ ಮೀರಿ ಹೋಗಿದೆ. ಶೇ.40ರಷ್ಟು ಭ್ರಷ್ಟಾಚಾರ ಎನ್ನುತ್ತೇವೆ. ಆದರೆ, ಕೆಲವೊಂದು ಇಲಾಖೆಗಳಲ್ಲಿ ಹೇಳೋಕೆ ಆಗದಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಕೆಲಸ ಮಾಡದಿದ್ದರೂ ಬಿಲ್‌ ಮೊತ್ತ ಬಿಡುಗಡೆ ಮಾಡಲಾಗಿದೆ. 

ಎಸ್ಸಿ-ಎಸ್ಟಿ ಮೀಸಲು ಕಣ್ಣೊರೆಸೋ ತಂತ್ರವೇ?: ಸಿದ್ದರಾಮಯ್ಯ

ಸರ್ಕಾರದ ಕುಮ್ಮಕ್ಕು ಇಲ್ಲದೆ ಇಂತಹ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ. ಹಾಗಾಗಿ ಈ ಬಗ್ಗೆ ಚರ್ಚೆಗೆ ನೋಟಿಸ್‌ ನೀಡಿದರೆ ಅವಕಾಶ ನೀಡಲಿಲ್ಲ. ಸ್ಪೀಕರ್‌ ಕೂಡ ಪಕ್ಷಾತೀತವಾಗಿ ನಿಲುವು ತೆಗೆದುಕೊಳ್ಳದೆ ಸರ್ಕಾರದ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಆರೋಪಿಸಿದರು. ‘ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳೂ ಸೇರಿದಂತೆ ಮಳೆ, ರೋಗ ಮತ್ತಿತರ ಕಾರಣದಿಂದ ತೊಗರಿ, ಭತ್ತ, ರಾಗಿ ಸಾಕಷ್ಟು ಬೆಳೆ ಹಾನಿಯಾಗಿದೆ. ಕೊಬ್ಬರಿ ಮತ್ತಿತರೆ ಬೆಳೆಗಳ ಕುಸಿತವಾಗಿ ರೈತರಿಗೆ ನಷ್ಟವಾಗುತ್ತಿದೆ. ಬೆಳೆ ಪರಿಹಾರ ಸಿಕ್ಕಿಲ್ಲ ಎಂದರು.

ಉ.ಕ. ಕುರಿತ ಚರ್ಚೆಗೆ ಸರ್ಕಾರಕ್ಕೆ ನಿರಾಸಕ್ತಿ: ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ. ಆದರೆ, ಸರ್ಕಾರಕ್ಕೆ ಆಸಕ್ತಿಯೇ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರ್ಕಾರ ಆಸಕ್ತಿ ತೋರಬೇಕಿತ್ತು. ಆದರೆ, ಅವರಿಗೆ ಆಸಕ್ತಿ ಇಲ್ಲ. ಯಾವ ಶಾಸಕರೂ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ನೋಟಿಸ್‌ ಕೊಟ್ಟಿಲ್ಲ. ರೈತರ ಸಮಸ್ಯೆ, ನೀರಾವರಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಿತ್ತು. ಸಭಾಧ್ಯಕ್ಷರು ಉತ್ತರ ಕರ್ನಾಟಕದ ಬಗ್ಗೆ ಸಮಗ್ರ ಚರ್ಚೆಗೆ ಎರಡು ದಿನ ಸಮಯ ನೀಡುವುದಾಗಿ ಹೇಳಿದ್ದರು. ಇದೀಗ ಅವರು ಅದರಂತೆ ನಡೆದುಕೊಳ್ಳಲೇ ಇಲ್ಲ ಎಂದು ಆರೋಪಿಸಿದರು.

ಧರಂಸಿಂಗ್‌ ಬಡವರ ಪರ ಬದ್ಧತೆ ಇದ್ದಂತಹ ರಾಜಕಾರಣಿ: ಸಿದ್ದರಾಮಯ್ಯ

ಬಿಜೆಪಿಯವರು ಉತ್ತರ ಕರ್ನಾಟಕದ ಬಗ್ಗೆ ಬಹಳ ಮಾತನಾಡುತ್ತಾರೆ. ಉತ್ತರ ಕರ್ನಾಟಕಕ್ಕೆ ಅವರು ಏನು ಮಾಡಿದ್ದಾರೆ. ನೀರಾವರಿ ಯೋಜನೆಗೆ ಒಂದೂವರೆ ಲಕ್ಷ ಕೋಟಿ ರು. ಖರ್ಚು ಮಾಡುವುದಾಗಿ ಹೇಳಿದ್ದರು. ಎಲ್ಲಿ ಖರ್ಚು ಮಾಡಿದ್ದಾರೆ. ಕೇವಲ ಭಾಷಣ ಮಾಡಿ ಹೇಳಿಕೆ ನೀಡಿದರೆ ಸಾಲದು, ಹೇಳಿದಂತೆ ಮಾಡಬೇಕು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು. ರೈತರ ಬಗ್ಗೆ ಚರ್ಚೆಗೆ ಸಮಯವಿಲ್ಲ. ಸಿ.ಟಿ.ರವಿಗೆ ಮಾತನಾಡಲು ಹೆಚ್ಚಿನ ಸಮಯ ಕೊಡುತ್ತಾರೆ. ಅಖಂಡ ಕರ್ನಾಟಕದ ರೈತರ ಸಮಸ್ಯೆಗಳು, ಚಿಲುಮೆ ಮತದಾರರ ಮಾಹಿತಿ ಕಳವು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಬೇಕು. ಇನ್ನೂ ಒಂದು ವಾರ ಸದನ ಮುಂದುವರೆಸಬೇಕು. ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದರು.

Follow Us:
Download App:
  • android
  • ios