ಎಸ್ಸಿ-ಎಸ್ಟಿ ಮೀಸಲು ಕಣ್ಣೊರೆಸೋ ತಂತ್ರವೇ?: ಸಿದ್ದರಾಮಯ್ಯ
ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲಿ ಚುನಾವಣೆಗಾಗಿ ಕಣ್ಣೊರೆಸುವ ತಂತ್ರವಾಗಬಾರದು. ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ರಾಜ್ಯ ಸರ್ಕಾರವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಿಧಾನಸಭೆ (ಡಿ.27): ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲಿ ಚುನಾವಣೆಗಾಗಿ ಕಣ್ಣೊರೆಸುವ ತಂತ್ರವಾಗಬಾರದು. ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ರಾಜ್ಯ ಸರ್ಕಾರವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸೋಮವಾರ ಸದನದಲ್ಲಿ ಎಸ್‌ಸಿ/ಎಸ್‌ಟಿ ವರ್ಗದ ಮೀಸಲಾತಿ ಹೆಚ್ಚಳ ಸಂಬಂಧ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಮೀಸಲಾತಿಯನ್ನು ಶೇ.50ಗಿಂತ ಹೆಚ್ಚು ಮಾಡುವ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂದು ತಿಳಿಸಿದೆ. ಕೇಂದ್ರದ ಹೇಳಿಕೆಯನ್ನು ಗಮನಿಸಿದರೆ ರಾಜ್ಯ ಸರ್ಕಾರವು ಈವರೆಗೂ ಮೀಸಲಾತಿ ವಿಧೇಯಕವನ್ನು ಕಳುಹಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಸರ್ಕಾರವು ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂಬ ಅನುಮಾನ ಮೂಡಿದೆ ಎಂದು ಟೀಕಾಪ್ರಹಾರ ನಡೆಸಿದರು.
ಧರಂಸಿಂಗ್ ಬಡವರ ಪರ ಬದ್ಧತೆ ಇದ್ದಂತಹ ರಾಜಕಾರಣಿ: ಸಿದ್ದರಾಮಯ್ಯ
‘ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹಾಕಿ ಮೀಸಲಾತಿ ಜಾರಿ ಮತ್ತು ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಬಗ್ಗೆ ಒತ್ತಾಯ ಮಾಡಿಲ್ಲ. ರಾಜ್ಯದಿಂದ ಯಾವುದೇ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪ ಮಾಡಲಾಗಿದೆಯಾ? ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲ ಇದೆ. ಸರ್ಕಾರವು ಸರ್ವಪಕ್ಷ ಕರೆದು ನಿಯೋಗವನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋಗುವುದಾದರೆ ಸರ್ಕಾರದ ಜತೆ ನಾವಿರುತ್ತೇವೆ. ಸರ್ಕಾರವು ಮೀಸಲಾತಿ ಹೆಚ್ಚಳವನ್ನು ಶೆಡ್ಯೂಲ್-9ಕ್ಕೆ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹೇರಿದರೆ ಮಾತ್ರ ಶೀಘ್ರದಲ್ಲಿಯೇ ಕೆಲಸವಾಗಲಿದೆ. ಇಲ್ಲದಿದ್ದರೆ ಮೀಸಲಾತಿ ವಿಚಾರವು ಕೇವಲ ಕಾಗದ ಮೇಲೆ ಇರಲಿದೆ’ ಎಂದು ವಾಗ್ದಾಳಿ ನಡೆಸಿದರು.
‘ದೇಶದಲ್ಲಿ ಶೇ.49.5ರಷ್ಟು ಮೀಸಲಾತಿ ಇದೆ. ಇದರಲ್ಲಿ ಶೇ.22.5ರಷ್ಟುಪರಿಶಿಷ್ಟಜಾತಿ ಮತ್ತು ವರ್ಗದವರು ಇದ್ದಾರೆ. ಶೇ.27ರಷ್ಟುಹಿಂದುಳಿದ ಜಾತಿಗಳಿಗೆ ಮೀಸಲಾತಿ ಇದೆ. 2019ರಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಕ್ಕೆ ಶೇ.10ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಇದನ್ನು ಕೇಂದ್ರ ಸರ್ಕಾರವು ಬಹಳ ತರಾತುರಿಯಲ್ಲಿ ಮಾಡಿದೆ. ಇದಕ್ಕೆ ಯಾವ ಯಾವ ಜಾತಿಗಳು ಸೇರುತ್ತವೆ ಎಂಬುದರ ಬಗ್ಗೆ ನೋಟಿಫಿಕೇಷನ್ ಬಂದಿಲ್ಲ. ಈ ಮೀಸಲಾತಿ ಸಂವಿಧಾನದ ಪರಿಚ್ಛೇದ 15(4), 16(4)ಕ್ಕೆ ವಿರುದ್ಧವಾಗಿದೆ. ಇದು ಯಾರು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರು ಇರುತ್ತಾರೋ, ಅವರಿಗೆ ಮೀಸಲಾತಿ ನೀಡಬೇಕು ಎಂದು ಹೇಳಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂದು ಹೇಳಿಲ್ಲ. ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಕ್ಕೆ ಶೇ.10ರಷ್ಟುಮೀಸಲಾತಿ ನೀಡಿದಂತೆ ಎಸ್‌ಸಿ/ಎಸ್‌ಟಿ ಮಿಸಲಾತಿ ಹೆಚ್ಚಳ ವಿಚಾರದಲ್ಲಿಯೂ ನೀಡಬೇಕು’ ಎಂದು ಒತ್ತಾಯಿಸಿದರು.
ಜ.9ಕ್ಕೆ ಮತ್ತೆ ಕೋಲಾರಕ್ಕೆ ಸಿದ್ದರಾಮಯ್ಯ ಭೇಟಿ: ಸ್ಪರ್ಧೆ ಬಗ್ಗೆ ಘೋಷಣೆ?
‘ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿಲ್ಲ. ಬಿಜೆಪಿ ಯಾವಾಗಲಾದರೂ ಮೀಸಲಾತಿ ಬೇಕು ಎಂದು ಹೋರಾಟ ಮಾಡಿದೆಯೇ? ಮಂಡಲ್ ಕಮಿಷನ್ ವರದಿಯನ್ನು ವಿರೋಧ ಮಾಡಿದವರು ಯಾರು? ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿಯನ್ನು ತಂದು ಹಿಂದುಳಿದವರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೀಸಲಾತಿ ನೀಡಿದಾಗ ಅದನ್ನು ವಿರೋಧ ಮಾಡಿದವರು ಯಾರು? ಇದನ್ನು ಪ್ರಶ್ನಿಸಿ ಬಿಜೆಪಿಯ ಉಪಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯರೂ ಆಗಿದ್ದ ರಾಮಾಜೋಯಿಸ್ ಅವರು ನ್ಯಾಯಾಲಯಕ್ಕೆ ಹೋಗಿದ್ದರು. ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಅರ್ಜುನ್ ಸಿಂಗ್ ನೀಡಿದಾಗಲೂ ವಿರೋಧ ವ್ಯಕ್ತಪಡಿಸಿದ್ದರು’ ಎಂದು ಕಿಡಿಕಾರಿದರು.