Asianet Suvarna News Asianet Suvarna News

ರಾಹುಲ್‌ ಗಾಂಧಿಗೆ ಜೈಲು ಶಿಕ್ಷೆ, ಅನರ್ಹ: ಇವೆಲ್ಲದಕ್ಕೂ ಕಾರಣ ಮುಳಬಾಗಿಲು ಸಾಕ್ಷಿ ರಘುನಾಥ್‌

ಮೋದಿ ಎಂಬ ಉಪನಾಮ ಇಟ್ಟುಕೊಂಡಿರುವವರೆಲ್ಲ ಏಕೆ ವಂಚಕರೇ ಆಗಿರುತ್ತಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾಗಲು ಪ್ರಮುಖ ಕಾರಣ ಕೋಲಾರದ ಬಿಜೆಪಿ ಮುಖಂಡ ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ. 

the reason behind rahul gandhi defamation case pm raghunath gvd
Author
First Published Mar 25, 2023, 6:02 AM IST

ಕೋಲಾರ (ಮಾ.25): ಮೋದಿ ಎಂಬ ಉಪನಾಮ ಇಟ್ಟುಕೊಂಡಿರುವವರೆಲ್ಲ ಏಕೆ ವಂಚಕರೇ ಆಗಿರುತ್ತಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾಗಲು ಪ್ರಮುಖ ಕಾರಣ ಕೋಲಾರದ ಬಿಜೆಪಿ ಮುಖಂಡ ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ. 2019ರ ಏ.17ರಂದು ಕೋಲಾರದಲ್ಲಿ ಕಾಂಗ್ರೆಸ್‌ ಪಕ್ಷದ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್‌ ಆಡಿದ ಮಾತು ಭಾರೀ ಪ್ರಚಾರ ಪಡೆದಿತ್ತು. 

ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಗಾಣಿಗ ಸಮುದಾಯದ ಅಖಿಲ ಭಾರತ ತೈಲಿಕ್‌ ಸಾಹು ಮಹಾಸಭಾ ಅಧ್ಯಕ್ಷ, ಕೋಲಾರ ಜಿಲ್ಲೆಯ ಮುಳಬಾಗಿಲು ಬಿಜೆಪಿ ಮುಖಂಡ ಪಿ.ಎಂ.ರಘುನಾಥ್‌, ಇದು ತಮ್ಮ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಕಾನೂನು ಹೋರಾಟಕ್ಕೆ ಮುಂದಾದರು. ಮೊದಲಿಗೆ ಅವರು ಕರ್ನಾಟಕದ ಬಿಜೆಪಿ ಮುಖಂಡರ ಗಮನ ಸೆಳೆದರು. ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ ತಮ್ಮ ಗುಜರಾತಿನ ಸಂಘ ಪರಿವಾರದ ಸಹಪಾಠಿ ಮತ್ತು ಶಾಸಕ ಪೂರ್ಣೇಶ್‌ ಮೋದಿ ಗಮನ ಸೆಳೆದರು. ಸೂರತ್‌ ಜಿಲ್ಲಾ ನ್ಯಾಯಾಲಯದಲ್ಲಿ ಪೂರ್ಣೇಶ್‌ ಮೋದಿ ಜಾತಿ ನಿಂದನೆ ದೂರು ದಾಖಲಿಸಿದರು. ತಮ್ಮ ಆರೋಪಕ್ಕೆ ಪ್ರಮುಖ ಸಾಕ್ಷಿಯಾಗಿ ಪಿ.ಎಂ.ರಘುನಾಥ್‌ ಮತ್ತು ಕೋಲಾರ ಜಿಲ್ಲಾ ಚುನಾವಣಾ ಅಧಿಕಾರಿಯನ್ನು ಹೆಸರಿಸಿದ್ದರು. 

ಸಿಎಂ ಬೊಮ್ಮಾಯಿ ಮೀಸಲಾತಿ ಕ್ರಾಂತಿ: 4% ಮುಸ್ಲಿಂ ಮೀಸಲು ರದ್ದುಗೊಳಿಸಿ ಹಂಚಿಕೆ

ಪ್ರಮುಖ ಸಾಕ್ಷಿಯಾಗಿದ್ದ ರಘುನಾಥ್‌ ವಿಚಾರಣೆ ವೇಳೆ 4-5 ಬಾರಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು. ರಘುನಾಥ್‌ ಅವರು ಚುನಾವಣಾ ಭಾಷಣದ ದಾಖಲೆಗಳನ್ನು ಜಿಲ್ಲಾ ಚುನಾವಣಾಧಿಕಾರಿಯಿಂದ ಅಧಿಕೃತವಾಗಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಕಾರಣ ಕೋಲಾರದ ಚುನಾವಣಾ ಅಧಿಕಾರಿಯೂ ಒಂದೆರಡು ಬಾರಿ ನ್ಯಾಯಾಲಯಕ್ಕೆ ಹಾಜರಾಗಿ ಭಾಷಣದ ದಾಖಲೆಗಳನ್ನು ದೃಢೀಕರಿಸಿದ್ದರು. ನಾಲ್ಕು ವರ್ಷ ವಿಚಾರಣೆ ನಡೆಸಿದ ಸೂರತ್‌ ನ್ಯಾಯಾಲಯ, ಗುರುವಾರ ತೀರ್ಪು ನೀಡಿ ರಾಹುಲ್‌ಗಾಂಧಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಗುರುತಿಸಿ ಎರಡು ವರ್ಷಗಳ ಶಿಕ್ಷೆ ವಿಧಿಸಿದೆ.

ಯಾರೀ ಪಿ.ಎಂ.ರಘುನಾಥ್‌: ಕರ್ನಾಟಕದ ಬಿಜೆಪಿ ಪಡಸಾಲೆಯಲ್ಲಿ ರಘು ಎಂದೇ ಗುರುತಿಸಲ್ಪಡುವ ಪಿ.ಎಂ.ರಘುನಾಥ್‌, ಮುಳಬಾಗಿಲಿನಲ್ಲಿ 80ರ ದಶಕದಲ್ಲಿ ಸಂಘ ಪರಿವಾರದ ಸಂಘಟನೆಗೆ ಶ್ರಮಿಸಿದವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೂ ಆಗಿದ್ದ ರಘುನಾಥ್‌, ಕೆಲ ಕಾಲ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದರು. ಜನಸಂಘದಿಂದ ಬಂದಿದ್ದ ಇವರು ಅಟಲ್‌ ಬಿಹಾರಿ ವಾಜಪೇಯಿ, ಆಡ್ವಾಣಿ ಜತೆಗೂ ಸಂಪರ್ಕ ಹೊಂದಿದ್ದರು. ರಾಮ ಜನ್ಮಭೂಮಿ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು.

ಕೋಲಾರ, ವರುಣಾ ಎರಡೂ ಕಡೆ ಸ್ಪರ್ಧೆಗೆ ಸಿದ್ದರಾಮಯ್ಯ ಸಿದ್ಧತೆ: ಹೈಕಮಾಂಡ್‌ನಿಂದಲೂ ಒಪ್ಪಿಗೆ ಸಾಧ್ಯತೆ

ರಾಹುಲ್‌ ಗಾಂಧಿ ತಮ್ಮ ಭಾಷಣದಲ್ಲಿ ಮೋದಿ ಮತ್ತು ನಮ್ಮ ಸಮುದಾಯವನ್ನು ಕಳ್ಳರು ಎಂದು ಉಲ್ಲೇಖಿಸಿದ್ದು ನನಗೆ ನೋವು ತಂದಿತ್ತು. ತಮ್ಮ ರಾಜಕಾರಣಕ್ಕಾಗಿ ನಮ್ಮ ಸಮುದಾಯದ ಅವಹೇಳನ ಮಾಡಿರುವ ರಾಹುಲ್‌ಗೆ ಪಾಠ ಕಲಿಸಬೇಕು ಎಂಬ ಉದ್ದೇಶ ಈಗ ಈಡೇರಿದೆ.
- ಪಿ.ಎಂ.ರಘುನಾಥ್‌, ಮುಳಬಾಗಿಲು ಬಿಜೆಪಿ ಮುಖಂಡ

Follow Us:
Download App:
  • android
  • ios