Asianet Suvarna News Asianet Suvarna News

ಪ್ರತಿಭಟನೆ ಮಾಡಬೇಡಿ, ಮೋದಿಜಿ ಇಲ್ಲದೆ ನಾನಿಲ್ಲ ಇಬ್ಬರಿಗೆ ಫೋಟೋ ಟ್ಯಾಗ್ ಮಾಡಿದ ಪ್ರತಾಪ್ ಸಿಂಹ

ಪ್ರತಾಪ್ ಸಿಂಹ ಪರ ಮೈಸೂರಿನಲ್ಲಿಂದು ಸಾಲು ಸಾಲು ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಪ್ರತಾಪ್‌ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ನಡೆಸದಂತೆ ಮನವಿ ಮಾಡಿಕೊಂಡಿದ್ದಾರೆ. ಜತೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಡಾ. ರಾಧಾ ಮೋಹನ್ ದಾಸ್ ಅಗರವಾಲ್ ಅವರಿಗೆ ಟ್ಯಾಗ್‌ ಮಾಡಿದ್ದಾರೆ.

What Am I Without Modiji MP Pratap Simha reaction after rumours Mysuru Ticket To Yaduveer gow
Author
First Published Mar 13, 2024, 2:51 PM IST

ಮೈಸೂರು (ಮಾ.13): ಹಾಲಿ ಸಂಸದ ಪ್ರತಾಪ್‌ ಸಿಂಹಗೆ ಬಿಜೆಪಿ ಟಿಕೆಟ್‌ ತಪ್ಪುವುದು ಬಹುತೇಕ ಖಚಿತ ಹಿನ್ನೆಲೆಯಲ್ಲಿ  ಮೈಸೂರು ಕೊಡಗು ಕ್ಷೇತ್ರ ಜನತೆ ಪ್ರತಾಪ್ ಸಿಂಹ ಬೆಂಬಲಕ್ಕೆ ನಿಂತು ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಂದು ಸಾಲು ಸಾಲು ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಪ್ರತಾಪ್‌ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ನಡೆಸದಂತೆ ಮನವಿ ಮಾಡಿಕೊಂಡಿದ್ದಾರೆ. 

ಆತ್ಮೀಯ ಕಾರ್ಯಕರ್ತರೇ ಮತ್ತು ಹಿತೈಷಿಗಳೇ, ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಜೀ ಇಲ್ಲದೆ ನಾನು ಏನಾಗಿದ್ದೇನೆ? ಈ 2 ಫೋಟೋಗಳನ್ನು ನೋಡಿ ಮತ್ತು ಅರ್ಥಮಾಡಿಕೊಳ್ಳಿ. ನನ್ನ ರಾಜಕೀಯ ಅಸ್ತಿತ್ವಕ್ಕೆ ನಾನು ಮೋದಿಜಿಗೆ ಋಣಿಯಾಗಿದ್ದೇನೆ. ಪ್ರತಿಭಟನೆ ಮಾಡಬೇಡಿ ಎಂದು ನಿಮ್ಮೆಲ್ಲರಿಗೂ ವಿನಮ್ರವಾಗಿ ವಿನಂತಿಸುತ್ತೇನೆ. ನಾವೆಲ್ಲರೂ ಒಂದೇ ಕುಟುಂಬದವರು, ಮೋದಿಜಿಗಾಗಿ ಕೆಲಸ ಮಾಡೋಣ. ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ಕರ್ನಾಟಕ ಬಿಜೆಪಿ ಚುನಾವಣೆ ಉಸ್ತುವಾರಿ  ಡಾ. ರಾಧಾ ಮೋಹನ್ ದಾಸ್ ಅಗರವಾಲ್ ಅವರಿಗೆ ಟ್ಯಾಗ್‌ ಮಾಡಿದ್ದಾರೆ. 

ಮೈಸೂರು ಟಿಕೆಟ್‌ ಯದುವೀರ್ ಗೆ ಬಹುತೇಕ ಫಿಕ್ಸ್, ಕಾಂಗ್ರೆಸ್ ಗೆ ಲಾಭನಾ? ನಷ್ಟನಾ?

ಪ್ರತಾಪ ಸಿಂಹ ಪರ ಪೋಸ್ಟರ್ ಅಭಿಯಾನ ಆರಂಭವಾಗಿದೆ. ಸರಣಿ ಪೋಸ್ಟರ್‌ಗಳ ಮೂಲಕ ಪ್ರತಾಪ ಸಿಂಹ ಪರ ಅಭಿಮಾನಿಗಳು ಬ್ಯಾಟಿಂಗ್ ನಡೆಸಿದ್ದಾರೆ. ಬಡವರ ಮಕ್ಕಳು ಬೆಳೆಯಬಾರದಾ? ಮೈಸೂರು ಹೈವೇ ಮಾಡಿದಕ್ಕಾಗಿ ಟಿಕೆಟ್ ಇಲ್ವಾ? ಕಾಂಗ್ರೆಸ್ಸಿಗೆ ಟಕ್ಕರ್‌ ಕೊಟ್ಟಿದಕ್ಕೆ ಇಲ್ವಾ? ಟಿಪ್ಪು ರೈಲಿಗೆ ಒಡೆಯರ್ ಹೆಸರು ಇಟ್ಟಿದಕ್ಕೆ ಇಲ್ವಾ? ಅಭಿವೃದ್ಧಿ ಕೆಲಸ ಮಾಡಿದಕ್ಕೆ ಇಲ್ವಾ? ಒಕ್ಕಲಿಗ ಅನ್ನೋ ಕಾರಣಕ್ಕೆ ಟಿಕೆಟ್ ಕೊಡಲ್ವಾ? ಹಲವು ಪೋಸ್ಟರ್‌ಗಳ ಮೂಲಕ ಪ್ರತಾಪಸಿಂಹ ಪರ ಅಭಿಯಾನ ನಡೆಸಲಾಗುತ್ತಿದೆ.

 

ಮಗನಿಗೆ ಹಾವೇರಿ ಟಿಕೆಟ್‌ ಲಾಭಿ, ಶಿವಮೊಗ್ಗದಲ್ಲಿ ಬಂಡಾಯ ಸ್ಪರ್ಧೆ ಬಗ್ಗೆ ಸುಳಿವು ಕೊಟ್ಟ ಕೆಎಸ್ ಈಶ್ವರಪ್ಪ!

ಇನ್ನು ಮೈಸೂರಿನ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಸಂಸದ ಪ್ರತಾಪ್ ಸಿಂಹಗೆ ಅಭಿನಂದನಾ ಸಮಾರಂಭ ಆಯೋಜನೆ ಮಾಡಲಾಗಿತ್ತು. ಮೈಸೂರಿನ ಪತ್ರಕರ್ತರ ಭವನದಲ್ಲಿ ಆಯೋಜನೆಯಾಗಿದ್ದ ಸಮಾರಂಭದಲ್ಲಿ ಹಿರಿಯ ಪತ್ರಿಕಾ ಸಂಪಾದಕ ಕೆ ಬಿ ಗಣಪತಿ ಸೇರಿದಂತೆ ಹಿರಿಯ ಸಾಹಿತಿಗಳು, ಸಮಾಜ ಸೇವಕರು, ಕನ್ನಡ ಪರ ಹೋರಾಟಗಾರರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಪ್ರತಾಪ್ ಸಿಂಹ ಕಳೆದೊಂದು ವಾರದಿಂದ ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ. ರಾಜಕಾರಣದಲ್ಲಿ ಹಣಬಲ, ತೋಳ್ಬಲ ಉಳ್ಳವರು ಇದ್ದಾರೆ. ನಾನು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಮೊದಲ ಬಾರಿ ಪತ್ರಕರ್ತನಾಗಿ ಬಂದು ಚುನಾವಣೆಗೆ ಸ್ಪರ್ಧಿಸಿದ ನನ್ನನ್ನು ಮೋದಿಯವರ ಮುಖ ನೋಡಿಕೊಂಡು ಮೈಸೂರು ಕೊಡಗಿನ ಜನರು ಆಯ್ಕೆ ಮಾಡಿದರು‌.

ಈ ಬಾರಿ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದೆ. ನಾನು ಕಳೆದ ಹತ್ತು  ವರ್ಷಗಳ ಅವಧಿಯಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇ‌‌‌ನೆ. ಮೈಸೂರುಕೊಡಗಿನ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತಂದಿದ್ದೇನೆ. ಪಕ್ಷ ನನಗೆ ಟಿಕೆಟ್ ಕೊಡಬಹುದು, ಅಥವಾ ಕೊಡದೆಯೂ ಇರಬಹದು. ಮತ್ತೊಂದು ಅವಕಾಶ ಕೊಟ್ಟರೆ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಒಂದು ವೇಳೆ ನನಗೆ ಟಿಕೆಟ್ ನೀಡದಿದ್ದರೂ ಸಹ ಟಿಕೆಟ್ ಸಿಗುವ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ಮಹಾರಾಜರಿಗೆ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸಲು ಎಲ್ಲರೂ ಕೈಜೋಡಿಸಿ. ನಾನು ಕೂಡ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದರು.

ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇನೆ. ಕೊಡದೇ ಇದ್ದರೂ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಯಡಿಯೂರಪ್ಪ ನಮ್ಮ ಪಕ್ಷಾತೀತ ನಾಯಕ. ಅವರು ಕಟ್ಟಿದ ಪಕ್ಷದಲ್ಲಿ ಸಂಸದ ಆಗಿದ್ದೇನೆ. ಕೊಟ್ಟಿರುವ ಬಗ್ಗೆ ತೃಪ್ತಿ ಇದೆ. ಈಗಲೂ ಟಿಕೆಟ್ ತಪ್ಪಿಲ್ಲ. ಪಕ್ಷೇತರವಾಗಿ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ನಾನು ಉಸಿರಿರುವ ವರೆಗೂ ಮೋದಿ ಭಕ್ತನಾಗಿಯೆ ಇರುತ್ತೇನೆ. ಪಕ್ಷ ಬಿಟ್ಟು ಎಲ್ಲಿಗೂ ಹೋಗಲ್ಲ ಎಂದರು.

ನಾನು ಸಾಯುವವರೆಗೂ ಬಿಜೆಪಿ ಕಾರ್ಯಕರ್ತ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲ್ಲ. 1960ರಲ್ಲಿ ನಮ್ಮಪ್ಪ ಜನಸಂಘದಲ್ಲಿ ಇದ್ದರು. ಬೇರೆ ರಾಜಕಾರಣಿ ರೀತಿ ಅಲ್ಲ. ಕರ್ನಾಟಕದಲ್ಲಿ ಎಷ್ಟು ಸಂಸದರ ಪರವಾಗಿ ಹೋರಾಟ ನಡೆಯುತ್ತಿದೆ? ನನಗೆ ಟಿಕೆಟ್ ಕೊಡಬೇಕು ಅಂತ ಜನ ಕೇಳುತ್ತಿದ್ದಾರೆ. ನನಗೆ ಅಷ್ಟು ಸಾಕು. ಮೋದಿಜೀ ಗೆ ನನಗೆ ಸದಾ ಪ್ರೇರಣೆ, ಸ್ಪೂರ್ತಿ. ಮೋದಿಜಿ ಏನೇ ನಿರ್ಧಾರ ತೆಗೆದು ಕೊಂಡರು ನಾನು ಅದನ್ನು ಸ್ಚೀಕರಿಸುತ್ತೇನೆ. ಮೋದಿಗಿಂತಾ ದೊಡ್ಡದು ಯಾವುದು ಇಲ್ಲ. ಅವಕಾಶ ಮಾಡಿಕೊಟ್ಟರು ತೃಪ್ತಿ ಇದೆ. ಮಾಡದೇ ಇದ್ದರು ತೃಪ್ತಿ ಇದೆ.

ಟಿಕೆಟ್ ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ಎಳೆದು ತರಬೇಡಿ. ಯಡಿಯೂರಪ್ಪ ಅವರು ಪಕ್ಷ ಕಟ್ಟದೆ ಇದ್ದರೆ ಕರ್ನಾಟಕದಲ್ಲಿ ಬಿಜೆಪಿ ಎಲ್ಲಿ ಇರುತ್ತಿತ್ತು? ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಜೆಪಿಯನ್ನು ಯಡಿಯೂರಪ್ಪ ಅವರು ಕಟ್ಟದೆ ಇದ್ದರೆ ನಮ್ಮಂಥವರು ಸಂಸದ ಆಗೋದಿಕ್ಕೆ ಆಗುತ್ತಿತ್ತಾ? ಕರ್ನಾಟಕಕ್ಕೆ ಯಡಿಯೂರಪ್ಪ ಅವರು ಒಂಥರ ಮೋದಿ ಇದ್ದ ರೀತಿ. ಪ್ರತಾಪ್ ಸಿಂಹ ಹೆಸರು ಕೆಡಿಸಿ ಕೊಂಡಿದ್ದಕ್ಕೆ ಟಿಕೆಟ್ ತಪ್ಪುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

2018 ರಲ್ಲಿ ಹೆಸರು ಕೆಡಿಸಿಕೊಂಡಿದ್ದಕ್ಕೆ ಇಲ್ಲಿ ಸೋತು, ಬಾದಾಮಿಗೆ ಹೋದ್ರಾ? ನಂತರ ಬಾದಾಮಿಯಲ್ಲಿ ಹೆಸರು ಕೆಡಿಸಿ ಕೊಂಡಿದ್ದಕ್ಕೆ ಇಲ್ಲಿಗೆ ಬಂದ್ರಾ?  ಸಿದ್ದರಾಮಯ್ಯ. ಅವರು ಹಿರಿಯ ನಾಯಕರು ಇದ್ದಾರೆ. ಈ ರೀತಿ ಮಾತಾಡಬಾರದು. ಸಿದ್ದರಾಮಯ್ಯ ಅವರು ಎಷ್ಟು ಚುನಾವಣೆಯಲ್ಲಿ ಸೋತಿಲ್ಲ ಹೇಳಿ? ನಾನು ಜೀವ ಇರುವವರೆಗೂ ಮೋದಿ ಭಕ್ತ.  ನಾನು ಪಕ್ಷದ ಕಟ್ಟಾಳು. ಯಾರು ಏನೇ ಕೊಡ್ತಿನಿ ಅಂದರು ನಾನು ಎಲ್ಲೂ ಹೋಗಲ್ಲ. ಸಾಯೋವರೆಗೂ ನಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿದ್ದಾರೆ.

Follow Us:
Download App:
  • android
  • ios