ದೇಶಕ್ಕಾಗಿ ಹೋರಾಟ ಮಾಡುತ್ತೇವೆ ಎಂದರೆ ಅದಕ್ಕೆ ನಮ್ಮ ಬೆಂಬಲವಿದೆ. ಅಂತಿಮವಾಗಿ ದೇಶ ರಕ್ಷಣೆಯೇ ಮುಖ್ಯವಾಗಿದೆ ಎಂದು ಖರ್ಗೆ ಸ್ಪಷ್ಪಡಿಸಿದ್ದಾರೆ.
ಬೆಂಗಳೂರು (ಏ.28): ನಮಗೆ ಮೊದಲು ದೇಶ ಮುಖ್ಯ. ಧರ್ಮ, ಜಾತಿ ಎಂದು ಹೇಳುವುದು ಸರಿಯಲ್ಲ. ದೇಶಕ್ಕಾಗಿ ಹೋರಾಟ ಮಾಡುತ್ತೇವೆ ಎಂದರೆ ಅದಕ್ಕೆ ನಮ್ಮ ಬೆಂಬಲವಿದೆ. ಅಂತಿಮವಾಗಿ ದೇಶ ರಕ್ಷಣೆಯೇ ಮುಖ್ಯವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಪಡಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಇರುತ್ತೇನೆ, ಹೋಗುತ್ತೇನೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಇರುತ್ತಾರೆ, ಹೋಗುತ್ತಾರೆ. ನಮಗೆ ದೇಶ ಮುಖ್ಯವಾಗಿದೆ. ಧರ್ಮ, ಜಾತಿ ಎಂದೆಲ್ಲ ಹೇಳುವುದು ಸರಿಯಲ್ಲ. ಅಂತಿಮವಾಗಿ ದೇಶ ರಕ್ಷಣೆಯೇ ಮುಖ್ಯವಾಗಿದೆ ಎಂದು ವಿವರಿಸಿದರು.
ದೇಶಕ್ಕಾಗಿ ಹೋರಾಟ ಮಾಡುತ್ತೇವೆಂದರೆ ಅದಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ಕೇಂದ್ರ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಬೆಂಬಲ ಕೊಡುತ್ತೇವೆ ಎಂದು ಈಗಾಗಲೇ ಹೇಳಿದ್ದೇವೆ. ಕೇಂದ್ರ ಸರ್ಕಾರ ನಮ್ಮೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು. ಈಗಾಗಲೇ ಬೇರೆ ಬೇರೆ ರೀತಿಯಲ್ಲಿ ಮಾತನಾಡುತ್ತಿದ್ದು, ಇದು ಸರಿಯಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರ ಕರೆದಿದ್ದ ಸರ್ವ ಪಕ್ಷ ಸಭೆಯಲ್ಲಿ ಏನು ನಡೆಯಿತು ಅದನ್ನು ಈಗಾಗಲೇ ಹೇಳಿದ್ದೇನೆ. ದೇಶದ ಹಿತದೃಷ್ಟಿಯಿಂದ ಏನು ಮಾತನಾಡಬೇಕೋ ಅದನ್ನು ಮಾತ್ರ ಮಾತನಾಡುತ್ತಿದ್ದೇವೆ. ಬೇರೆ ಎಲ್ಲವನ್ನೂ ಪದೇ ಪದೆ ಹೇಳಲು ಆಗುವುದಿಲ್ಲ ಎಂದು ತಿಳಿಸಿದರು.
ಕೇಂದ್ರಕ್ಕೆ ಎಲ್ಲ ಸಹಕಾರ: ಭಯೋತ್ಪಾದನೆ ಮಟ್ಟಹಾಕಲು ಪ್ರತಿಪಕ್ಷ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಈ ವಿಚಾರದಲ್ಲಿ ನಾವು ಯಾವತ್ತೂ ರಾಜಕೀಯ ಮಾಡಿಲ್ಲ. ಕೇಂದ್ರ ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆಯಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಕಾಶ್ಮೀರದಲ್ಲಿನ ಭಯೋತ್ಪಾದನೆ ದಾಳಿ ಕುರಿತು ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಹಿಂದೆ ಅಮರನಾಥ ಯಾತ್ರೆ ವೇಳೆಯೂ ಇಂಥ ದಾಳಿ ನಡೆದಿತ್ತು. ಹೀಗಾಗಿ ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಮುಂಜಾಗ್ರತಾ ಕ್ರಮ ಕೈಗೊಂಡು ಪ್ರವಾಸಿಗರಿಗೆ ಹೆಚ್ಚಿನ ಭದ್ರತೆ ಒದಗಿಸಿಕೊಡಬೇಕಿದೆ.
ಈಗ ಏನ್ಮಾಡಿದರೂ 26 ಜೀವ ವಾಪಸ್ ತರಲಾದೀತೆ?: ಸಿದ್ದರಾಮಯ್ಯ
ಹೀಗಾಗಿ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಎಲ್ಲರ ಸಲಹೆ-ಅಭಿಪ್ರಾಯ ಪಡೆಯಬೇಕು. ನಮ್ಮ ನಾಗರಿಕರನ್ನು ಭಯೋತ್ಪಾದಕರು ಹತ್ಯೆ ಮಾಡುವಾಗ ರಾಜಕೀಯ ಮಾಡುವುದಿಲ್ಲ. ವಿರೋಧ ಪಕ್ಷಗಳ ಉತ್ತಮ ಸಲಹೆಗಳನ್ನು ಸ್ವೀಕರಿಸಲಿ, ಸಾಧ್ಯವಾಗದ್ದನ್ನು ತಿರಸ್ಕರಿಸಬಹುದು. ಸರ್ವಪಕ್ಷ ಸಭೆ ಮಾಡಿದಾಗ ಎಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ. ಇದಕ್ಕೆ ಅಗತ್ಯ ಸಹಕಾರ ನಾವು ನೀಡುತ್ತೇವೆ ಎಂದರು. ಘಟನೆ ಬೆನ್ನಲ್ಲೇ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹಾಗೂ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಿ ಅನೇಕ ಮಾಹಿತಿ ಪಡೆದಿದ್ದೇನೆ. ಈ ಕೃತ್ಯದ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ ಎಂದರು.
