ನಾವು ಅಧಿಕಾರ ಕಳೆದುಕೊಂಡಿದ್ದೇವೆ, ಜನರ ವಿಶ್ವಾಸ ಕಳೆದುಕೊಂಡಿಲ್ಲ. ಯಾರಿಗೆ ಅನ್ಯಾಯವಾದರೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಿಮ್ಮ ಜೊತೆಗೆ ನಾನಿರುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಪಕ್ಷದ ಕಾರ್ಯಕರ್ತರಿಗೆ ಅಭಯ ನೀಡಿದರು. 

ಚಿಕ್ಕಮಗಳೂರು (ಜು.18): ನಾವು ಅಧಿಕಾರ ಕಳೆದು ಕೊಂಡಿದ್ದೇವೆ, ಜನರ ವಿಶ್ವಾಸ ಕಳೆದುಕೊಂಡಿಲ್ಲ. ಯಾರಿಗೆ ಅನ್ಯಾಯವಾದರೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಿಮ್ಮ ಜೊತೆಗೆ ನಾನಿರುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಪಕ್ಷದ ಕಾರ್ಯಕರ್ತರಿಗೆ ಅಭಯ ನೀಡಿದರು. ಸೋಮವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು. ಅನ್ಯಾಯದ ವಿರುದ್ಧ ಹೋರಾಟ ಮಾಡೋಣ. ಅಧಿಕಾರ ಇದ್ದಾಗ ನಾವು ಜೋರಾಗಿ ಮಾತಾಡುತ್ತಿರಲಿಲ್ಲ. 

ಹಾಗೆ ಮಾಡಿದರೆ ದುರಂಹಕಾರ ಎನ್ನುತ್ತಿದ್ದರು. ಈಗ ಅಧಿಕಾರ ವಿಲ್ಲದಿರುವಾಗ ಮೆಲ್ಲನೆ ಧ್ವನಿಯಲ್ಲಿ ಮಾತನಾಡಿದರೆ ಹೆದರಿದ್ದಾನೆ ಎಂದು ಕೊಳ್ಳುತ್ತಾರೆ ಎಂದರು. ಹಿಂದೆ ನಮ್ಮ ಬಿಜೆಪಿ ಸರ್ಕಾರದಲ್ಲಿ ಚಿಕ್ಕಮಗಳೂರಿಗೆ ಘೋಷಣೆ ಮಾಡಿದ ಯಾವ ಯೋಜನೆಗಳು ಕಾಂಗ್ರೆಸ್‌ ಸರ್ಕಾರದ ಬಜೆಟ್‌ನಲ್ಲಿ ಇಲ್ಲ. ಜಿಲ್ಲೆಯ 5 ಜನ ಶಾಸಕರು ಸ್ವಾಭಿಮಾನಿ ಗಳಾಗಿದ್ದರೆ, ಚಿಕ್ಕಮಗಳೂರು ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದಿದ್ದರೆ, ಜಿಲ್ಲೆ ಪರವಾಗಿ ಹೋರಾಟ ಮಾಡಬೇಕಿತ್ತು. ಅದನ್ನು ಮಾಡದಿರುವ ಅವರು ಇದ್ದರೆಷ್ಟು, ಬಿಟ್ಟರೆಷ್ಟುಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಬಲ್‌ ಗೇಮ್‌ ಆಡಿದವರನ್ನು ಹತ್ತಿರ ಇಟ್ಟುಕೊಳ್ಳಲ್ಲ: ಶಾಸಕ ದೇಶಪಾಂಡೆ

ಸಂತೆಯಲ್ಲಿ ಹರಾಜು ಕೂಗುವ ರೀತಿ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ. ಈ ಕಾರಣಕ್ಕೆ ಒಳ್ಳೆ ಅಧಿಕಾರಿಗಳು ಉಳಿಯುತ್ತಿಲ್ಲ. ಕಡೂರು- ಚಿಕ್ಕಮಗಳೂರು ರಸ್ತೆ, ಮಿನಿ ವಿಧಾನಸೌಧ, ಅವರು ಕುಳಿತು ರಾಜಕಾರಣ ಮಾಡುವ ಪ್ರವಾಸಿ ಮಂದಿರದಿಂದ ಹಿಡಿದು ಆಸ್ಪತ್ರೆ, ಮೆಡಿಕಲ್‌ ಕಾಲೇಜು, ಊರೂರಿಗೆ ರಸ್ತೆಗಳು, ಚೆಕ್‌ಡ್ಯಾಂಗಳು, ನೀರಾವರಿ, ಅಂಬೇಡ್ಕರ್‌ ಭವನ ಗಳು, ವಿವಿಧ ಜಾತಿ, ಸಮುದಾಯಗಳ ಭವನಗಳನ್ನೂ ಮಾಡಿಸಿದ್ದೇನೆ. ಹಲವು ಯೋಜನೆಗಳಿಗೆ ಅನುದಾನ ಮಂಜೂರು ಮಾಡಿಸಿದ್ದೇನೆ. ಈಗಿನ ಶಾಸಕರು ಚೆಕ್‌ ಕೊಟ್ಟು ಫೋಟೋ ತೆಗೆಸಿ ಕೊಳ್ಳುತ್ತಿದ್ದಾರೆ ಅಷ್ಟೆ. ಲೋಕಸಭೆ ಚುನಾವಣೆವರೆಗೆ ಮೂಗಿಗೆ, ಮೊಣಕೈಗೆ ತುಪ್ಪ. ಚುನಾವಣೆ ನಂತರ ಈ ಸರ್ಕಾರದಿಂದ ಕೈಗೆ ಚಿಪ್ಪಷ್ಟೇ ಇದನ್ನು ಬರೆದಿಟ್ಟುಕೊಳ್ಳಿ ಎಂದರು.

ಬೇರೆ ಬೇರೆ ರಾಜ್ಯಗಳಿಂದ ಮೋದಿ ವಿರೋಧಿಗಳು ಬೆಂಗಳೂರಿಗೆ ಬರುತ್ತಿದ್ದಾರೆ. ಏನಾದರೂ ಮಾಡಿ ಮೋದಿ ಸೋಲಿಸಬೇಕು. ಜಗತ್ತಿನ ಬೇರೆ ಬೇರೆ ದೇಶಗಳ ನಾಯಕರು ಮೋದಿ ಅವರನ್ನು ಹೊಗಳುತ್ತಿದ್ದಾರೆ. 14 ದೇಶಗಳು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ಮೋದಿ ಅವರಿಗೆ ಕೊಟ್ಟಿದ್ದಾರೆ. ಮೋದಿ ಈಸ್‌ ದಿ ಬಾಸ್‌ ಎಂದು ಆಸ್ಪ್ರೇಲಿಯಾ ಪ್ರಧಾನಿ ಹೇಳುತ್ತಾರೆ. ಅಮೇರಿಕಾ ಅಧ್ಯಕ್ಷರು ಮೋದಿ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಬಯಸುತ್ತಾರೆ. ಪಾಕಿಸ್ಥಾನದವರು ಮೋದಿ ಅವರಂತಹ ನಾಯಕರು ಬೇಕು ಎನ್ನುತ್ತಿದ್ದಾರೆ. ಬಡವರು, ದಲಿತರಿಗೆ ಮೋದಿ ಬೇಕು, ಕುಟುಂಬ ರಾಜಕಾರಣ ಮಾಡುವವರು ಭ್ರಷ್ಟರಿಗೆ ಮೋದಿ ಬೇಕಾಗಿಲ್ಲ ಎಂದು ಟೀಕಿಸಿದರು.

ರಾಜ್ಯದ ಅಭಿವೃದ್ಧಿಗೆ ಒಕ್ಕಲಿಗ ಸಮಾಜದ ಕೊಡುಗೆ ಅಪಾರ: ಎಚ್‌.ವಿಶ್ವನಾಥ್‌

ಲೋಕಸಭೆ ಚುನಾವಣೆ ದೇಶವನ್ನು ಗೆಲ್ಲಿಸುವ ಚುನಾವಣೆ, ಬಿಜೆಪಿ ಗೆದ್ದರೆ ಮಾತ್ರ ದೇಶದ ಗೆಲುವಿನ ಓಟ ಮುಂದುವರಿಯುತ್ತದೆ. ಈ ಕಾರಣಕ್ಕೆ ನಾವೆಲ್ಲರೂ ಗೆಲುವಿನಲ್ಲಿ ಸಕ್ರಿಯ ಪಾತ್ರ ವಹಿಸೋಣ ಎಂದರು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ.ಕಲ್ಮರುಡಪ್ಪ, ಪ್ರಧಾನ ಕಾರ್ಯದರ್ಶಿ ದೇವರಾಜ ಶೆಟ್ಟಿ, ವಕ್ತಾರ ಟಿ.ರಾಜಶೇಖರ್‌, ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಳ್ಳಿ ಮಹೇಶ್‌, ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್‌, ಮುಖಂಡರುಗಳಾದ ಕೆ.ಪಿ.ವೆಂಕಟೇಶ್‌, ಬಿ.ರಾಜಪ್ಪ ಇದ್ದರು.