ಮೈಸೂರು/ಮಂಡ್ಯ [ನ.28]:  ಉಪ ಚುನಾವಣೆ ಬಳಿಕ ರಾಜ್ಯ ಬಿಜೆಪಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದರೆ ಬೆಂಬಲ ನೀಡುವ ವಿಚಾರದಲ್ಲಿ ದಿನಕ್ಕೊಂದು ಗೊಂದಲದ ಹೇಳಿಕೆ ನೀಡುತ್ತಿರುವ ಜೆಡಿಎಸ್‌ನ ಮುಂಚೂಣಿಯ ನಾಯಕರು ಇದೀಗ ಮತ್ತಷ್ಟುಗೂಗ್ಲಿ ಎಸೆದಿದ್ದಾರೆ.

‘ಉಪ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಏನು ತೀರ್ಮಾನಿಸುತ್ತಾರೋ ನೋಡೋಣ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದರೆ, ‘ಸರ್ಕಾರ ಸ್ಥಿರ ಎಂದಷ್ಟೇ ಹೇಳಿದ್ದೇನೆ. ನಾನೇನು ಬಿಜೆಪಿಗೆ ಬೆಂಬಲ ಕೊಡುತ್ತೇನೆಂದು ಎಲ್ಲೂ ಹೇಳಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಮೈಸೂರಿಗೆ ಆಗಮಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲೂ ಬದಲಾವಣೆ ಆಗುವ ಸುಳಿವು ನೀಡಿದರು. ‘ಸದ್ಯದ ಸ್ಥಿತಿಯಲ್ಲಿ ದೇಶದ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದಾಗಿದ್ದು, ಕರ್ನಾಟಕದ ರಾಜಕೀಯಕ್ಕೂ ಇದು ಅನ್ವಯವಾಗಲಿದೆ. ಮಹಾರಾಷ್ಟ್ರದಲ್ಲಿ ದಿಢೀರ್‌ ರಾಜಕೀಯ ಬೆಳವಣಿಗೆ ಆಗಿದೆ. ಉಪಚುನಾವಣೆ ಫಲಿತಾಂಶದ ನಂತರ ಕರ್ನಾಟಕದಲ್ಲೂ ಏನೇನು ಬದಲಾವಣೆ ಆಗುತ್ತೋ? ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾದು ನೋಡೋಣ ಎಂದು ಸೂಚ್ಯವಾಗಿ ತಿಳಿಸಿದರು.

ಉಪಚುನಾವಣೆ ಬಿಸಿ: ಸಿಎಂ ಬಿಎಸ್‌ವೈ ಸೇರಿ ಐವರ ಮೇಲೆ ದೂರು ದಾಖಲು...

ಏತನ್ಮಧ್ಯೆ, ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯ ಕಿಕ್ಕೇರಿಯ ಸಂತೇಮಾಳದಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಕುಮಾರಸ್ವಾಮಿ ರಾಜ್ಯದಲ್ಲಿ ಡಿ.9ರ ನಂತರ ರಾಜಕೀಯ ಧ್ರುವೀಕರಣ, ಶುದ್ಧೀಕರಣ ಆಗಲಿದೆ ಎಂದರು. ಇದೇ ವೇಳೆ ಉಪ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುವ ಹೇಳಿಕೆ ನೀಡಿದ್ದನ್ನು ಅಲ್ಲಗಳೆದ ಅವರು,‘ನಾವು ಬಿಜೆಪಿ ಸರ್ಕಾರ ಸ್ಥಿರವಾಗಿರುತ್ತದೆ ಎಂದು ಎಲ್ಲೂ ಹೇಳಿಲ್ಲ. ಸರ್ಕಾರ ಸ್ಥಿರವಾಗಿರುತ್ತದೆ ಎಂದಷ್ಟೇ ಹೇಳಿದ್ದೇವೆ. ಆದರೆ ಅದು ಯಾವ ಸರ್ಕಾರ ಎಂಬುದನ್ನು ಡಿ.9ರ ನಂತರ ಅಂದರೆ ಉಪ ಚುನಾವಣೆ ನಂತರ ಗೊತ್ತಾಗಲಿದೆ ಎಂದರು.