Asianet Suvarna News Asianet Suvarna News

ಮೇಲ್ಮನೆಯಲ್ಲಿ ಮಾಣಿಪ್ಪಾಡಿ ವರದಿ ಮಂಡನೆ: ಸದನದಲ್ಲಿ ಕೋಲಾಹಲ, ಕಲಾಪ ಮುಂದಕ್ಕೆ

ರಾಜ್ಯ ವಕ್ಫ್ ಬೋರ್ಡ್‌ನ ಸುಮಾರು 2.5 ಲಕ್ಷ ಕೋಟಿ ರು. ಮೌಲ್ಯದ ಆಸ್ತಿ ಕಬಳಿಕೆ ಅವ್ಯವಹಾರ ಕುರಿತ ಅನ್ವರ್‌ ಮಾಣಿಪ್ಪಾಡಿ ಆಯೋಗದ ಪೂರ್ಣ ವರದಿಯನ್ನು ಸರ್ಕಾರ ಮಂಡಿಸಿದೆ. 
 

Waqf property encroachment issue Anwar Manippadys report presented in the Legislative Council gvd
Author
First Published Sep 23, 2022, 2:15 AM IST

ವಿಧಾನ ಪರಿಷತ್ತು (ಸೆ.23): ರಾಜ್ಯ ವಕ್ಫ್ ಬೋರ್ಡ್‌ನ ಸುಮಾರು 2.5 ಲಕ್ಷ ಕೋಟಿ ರು. ಮೌಲ್ಯದ ಆಸ್ತಿ ಕಬಳಿಕೆ ಅವ್ಯವಹಾರ ಕುರಿತ ಅನ್ವರ್‌ ಮಾಣಿಪ್ಪಾಡಿ ಆಯೋಗದ ಪೂರ್ಣ ವರದಿಯನ್ನು ಸರ್ಕಾರ ಮಂಡಿಸಿದೆ. ವಕ್ಫ್ಬೋರ್ಡ್‌ ಆಸ್ತಿ ಕಬಳಿಕೆ ವರದಿಯಲ್ಲಿ ವಿಪಕ್ಷಗಳ ಘಟಾನುಘಟಿ ರಾಜಕೀಯ ನಾಯಕರ ಹೆಸರುಗಳು ಕೇಳಿಬಂದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗುರುವಾರ ಸದನದಲ್ಲಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ವರದಿ ಮಂಡಿಸಿದರು. ಕೂಡಲೇ ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಸದನ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಆಯಿತು. ರಾಜ್ಯ ವಕ್ಫ್ ಮಂಡಳಿಯ ಬೆಂಗಳೂರು ಮತ್ತು ಬೀದರ್‌ ಜಿಲ್ಲೆಯ ವಕ್ಫ್ ಅಧಿಕಾರಿಗಳು ಕಾನೂನುಬಾಹಿರವಾಗಿ ಜಮೀನು ಅತಿಕ್ರಮಣ, ಕಾನೂನುಬಾಹಿರ ಅನುಭೋಗ ಹಾಗೂ ಕಾನೂನುಬಾಹಿರ ವಿಲೇವಾರಿ ಮಾಡಿದ್ದರು ಎನ್ನಲಾಗಿತ್ತು. ಇದರ ಪತ್ತೆಗಾಗಿ ಅನ್ವರ್‌ ಮಾಣಿಪ್ಪಾಡಿ ಆಯೋಗ ರಚಿಸಲಾಗಿತ್ತು.

ವರದಿಯಲ್ಲಿ ಏನಿದೆ?: ‘ಒಟ್ಟಾರೆ 410 ಲಕ್ಷ ಕೋಟಿ ರು. ಮೌಲ್ಯದ ವಕ್ಫ್ ಆಸ್ತಿಗಳ ಪೈಕಿ 2 ಲಕ್ಷ ಕೋಟಿ ರು. ಮೌಲ್ಯದ ವಕ್ಫ್ ಆಸ್ತಿಯನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಅತಿಕ್ರಮಣ ಮಾಡಿದ್ದಾರೆ. ಈ ಅತಿಕ್ರಮಣದಲ್ಲಿ ಬಹಳಷ್ಟು ಅಲ್ಪಸಂಖ್ಯಾತ ಸಮುದಾಯದ ನೇತಾರರು ಭಾಗಿಯಾಗಿದ್ದಾರೆ’ ಎಂದು ಮಾಣಿಪ್ಪಾಡಿ ವರದಿಯಲ್ಲಿ ಆರೋಪಿಸಲಾಗಿದೆ. ವಿಪಕ್ಷ ನಾಯಕರ ಹೆಸರು ಉಲ್ಲೇಖ!: ಬೀದರ್‌ ತಾಲೂಕಿನ ಅಲಿಯಾಬಾದ್‌ ಗ್ರಾಮದ ವಕ್ಫ್ ಬೋರ್ಡ್‌ ಆಸ್ತಿ ಕಬಳಿಕೆಯಲ್ಲಿ ಮಾಜಿ ಸಂಸದ ನರಸಿಂಗ್‌ರಾವ್‌, ಮುತಾವಲಿಯ, ಸೈಯಿದಾ ಕಾತೂನ್‌, ಕಲಬುರಗಿಯ ಬಡೇಪುರ, ವಕ್ಕಲಗೇರ ದರ್ಗಾದಲ್ಲಿ ಖಮರುಲ್‌ ಇಸ್ಲಾಂ, ಬ್ರಹ್ಮಪುರ ಗ್ರಾಮದಲ್ಲಿ ಇಕ್ಬಾಲ್‌ ಅಹಮದ್‌ ಸರಡಗಿ, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್‌ ಅವರು ವಕ್ಫ್ ಬೋರ್ಡ್‌ ಕಬಳಿಕೆಗೆ ಕಾರಣಕರ್ತರಾಗಿದ್ದಾರೆ. 

BS Yediyurappaಗೆ ಸಿದ್ದು, ಎಚ್‌ಡಿಕೆ ಮುಖಾಮುಖಿ: ಏನು ಸರ್.. ಹೇಗಿದ್ದೀರಿ..? ಎಂದ ಕುಮಾರಸ್ವಾಮಿ

ಹಾಗೆಯೇ ಬೆಂಗಳೂರಿನ ಅಣ್ಣೇಪುರ ಗ್ರಾಮದಲ್ಲಿ ಮಾಜಿ ಮಂತ್ರಿ ಕೆ.ಎಂ. ಇಬ್ರಾಹಿಂ, ಕುಂಬಾರಪೇಟೆಯಲ್ಲಿ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ, ಮಕಾನ್‌ರಸ್ತೆಯಲ್ಲಿ ಮಹಮದ್‌ಗೌಸ್‌, ಬಡೇಪುರ ಗ್ರಾಮದಲ್ಲಿ ಶಾಸಕ ಎನ್‌.ಎ.ಹ್ಯಾರಿಸ್‌ ಅವರ ತಾಯಿ, ಹೆಂಡತಿ ಮತ್ತು ಆಪ್ತ ಸಹಾಯಕರು, ಬಿಳೇಕಹಳ್ಳಿಯಲ್ಲಿ ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್‌ ಷರೀಫ್‌, ಅರ್ಮಸ್ಟ್ರಾಂಗ್‌ನಲ್ಲಿ ಮಾಜಿ ಸಚಿವ ರೋಷನ್‌ಬೇಗ್‌, ಕೊಪ್ಪಳದ ಗಂಗಾವತಿಯಲ್ಲಿ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರು ಸೇರಿದಂತೆ ವಕ್ಫ್ ಬೋರ್ಡ್‌ ಮಂಡಳಿ ಅಧ್ಯಕ್ಷ, ಸದಸ್ಯರು ಸೇರಿದಂತೆ ವಕ್ಫ್ ಬೋರ್ಡ್‌ ಆಸ್ತಿ ಅತಿಕ್ರಮಣ ಮತ್ತು ದುರ್ಬಳಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮಾಣಿಪ್ಪಾಡಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ವಕ್ಫ್ ಬೋರ್ಡ್‌ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಕಲಬುರಗಿ-7, ಬೀದರ್‌-7, ಬೆಂಗಳೂರು-15, ಬೆಂಗಳೂರು ಗ್ರಾಮಾಂತರ-2, ಮಂಡ್ಯ-1, ಮೈಸೂರು-1, ಕೊಪ್ಪಳ-3, ದಾವಣಗೆರೆ-1, ವಿಜಯಪುರ-2, ಬಳ್ಳಾರಿ-1, ರಾಮನಗರ-1, ಕೋಲಾರ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಒಂದು ದೂರುಗಳು ದಾಖಲಾಗಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದುಬಂದಿದೆ.

ಕಾಂಗ್ರೆಸ್‌-ಬಿಜೆಪಿ ಚಕಮಕಿ: ಈ ನಡುವೆ, ವರದಿ ಮಂಡನೆಗೆ ಆಕ್ಷೇಪಿಸಿದ ಕಾಂಗ್ರೆಸ್ಸಿನ ನಸೀರ್‌ ಅಹಮದ್‌ ಅವರು, ‘ಮಾಣಿಪ್ಪಾಡಿ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿ ವರ್ಷಗಳೇ ಕಳೆದಿದ್ದರೂ ಈವರೆಗೆ ಯಾಕೆ ಅದನ್ನು ಮಂಡಿಸಿರಲಿಲ್ಲ? ನಿಮ್ಮದೇ ಸರ್ಕಾರವಿದ್ದು ಈ ಬಗ್ಗೆ ಯಾಕೆ ತನಿಖೆ ನಡೆಸಿಲ್ಲ?’ ಎಂದು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಎನ್‌.ರವಿಕುಮಾರ್‌ ಅವರು ‘ವರದಿ ಬಹಿರಂಗಗೊಂಡರೆ 12 ಮಂದಿ ಮುಖಂಡರ ಬಂಡವಾಳ ಬಹಿರಂಗವಾಗುತ್ತದೆ. ಲಕ್ಷಾಂತರ ಕೋಟಿ ರು. ವಕ್ಫ್ ಆಸ್ತಿಯನ್ನು ಈ ಮುಖಂಡರು ಕಬಳಿಸಿದ್ದಾರೆ. 

ಸದನದಲ್ಲಿ ದೊಡ್ಡ ಹಗರಣ ಬಯಲು ಮಾಡುವೆ: ಎಚ್‌.ಡಿ.ಕುಮಾರಸ್ವಾಮಿ

ವರದಿಯಲ್ಲಿ ಜಮೀರ್‌ ಅಹಮದ್‌, ನಜೀರ್‌ ಅಹಮದ್‌, ಖಮರುಲ್‌ ಇಸ್ಲಾಂ ಸೇರಿದಂತೆ ಹಲವರ ಹೆಸರುಗಳಿವೆ’ ಎಂದು ಆರೋಪಿಸಿದರು. ಈ ವೇಳೆ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ಮಾತನಾಡಿ, ‘ಮಾಣಿಪ್ಪಾಡಿ ವರದಿ ಮಂಡನೆಯಾಗಿದ್ದರೆ, ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು. ಚರ್ಚೆಯಾಗದೆ ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು’ ಎಂದು ಆಗ್ರಹಿಸಿದರು. ಇದಕ್ಕೆ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ ಏರ್ಪಟ್ಟಿದ್ದರಿಂದ ಸಭಾಪತಿ ರಘುನಾಥ್‌ರಾವ್‌ ಮಲ್ಕಾಪುರೆ ಅವರು ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.

Follow Us:
Download App:
  • android
  • ios