BS Yediyurappaಗೆ ಸಿದ್ದು, ಎಚ್‌ಡಿಕೆ ಮುಖಾಮುಖಿ: ಏನು ಸರ್.. ಹೇಗಿದ್ದೀರಿ..? ಎಂದ ಕುಮಾರಸ್ವಾಮಿ
ಮಳೆಗಾಲದ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳನಾಯಕರು, ಶಾಸಕರು ಒಂದೆಡೆ ಮುಗಿಬೀಳುತ್ತಿದ್ದರೆ, ಇನ್ನೊಂದೆಡೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಮಾತನಾಡಿಸಿ ಅವರ ಆರೋಗ್ಯ ವಿಚಾರಿಸಿದ್ದು, ಉಭಯ ಕುಶಲೋಪರಿ ಮಾತನಾಡಿದ್ದಾರೆ.
ಇತ್ತೀಚೆಗೆ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಬಿಜೆಪಿ, ಕಾಂಗ್ರೆಸ್ ಪಕ್ಷದ ಹಲವು ನಾಯಕರು ಭೇಟಿಯಾಗಿದ್ದರು. ನಿನ್ನೆಯಷ್ಟೇ ಸಿಎಂ ಬೊಮ್ಮಾಯಿ ಸೇರಿ ಅವರ ಸಂಪುಟದ ಸಚಿವರು ಕೂಡ ದೇವೇಗೌಡರ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಈಗ ಅದೇ ರೀತಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಇತರೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮುಖಾಮುಖಿಯಾಗಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದ ನಡುವೆ ಮಾಜಿ ಸಿಎಂಗಳ ಈ ಮಾತುಕತೆ ನಡೆದಿದೆ. ಮಳೆಗಾಲದ ಅಧಿವೇಶನದ ನಡುವೆ ಸ್ಪೀಕರ್ ಕರೆದಿದ್ದ ಸಭೆ ಬಳಿಕ ಕಾರಿಡಾರ್‌ನಲ್ಲಿ ಬಿಜೆಪಿ ಸಂಸದೀಯ ಮಂಡಳಿ ನಾಯಕ ಯಡಿಯೂರಪ್ಪ ನಡೆದುಕೊಂಡು ಹೋಗುತ್ತಿದ್ದಾಗ ಮಾಜಿ ಸಿಎಂ ಅವರ ಕೈಹಿಡಿದುಕೊಂಡ ಕುಮಾರಸ್ವಾಮಿ ಬಿಎಸ್‌ವೈ ಅವರನ್ನು ಮಾತನಾಡಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ನಿಲ್ಲಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ‘’ಏನ್ ಸರ್ ಚೆನ್ನಾಗಿದ್ದೀರಾ’’ ಎಂದು ಬಿ.ಎಸ್. ಯಡಿಯೂರಪ್ಪ ಅವರನ್ನು ಮಾತನಾಡಿಸಿದ್ದಾರೆ. ಇದಕ್ಕೆ ಉತ್ತರಿಸಿದ ಬಿಎಸ್‌ವೈ, ‘’ನಾನು ಚೆನ್ನಾಗಿದ್ದೇನೆ, ನಿನ್ನೆ ಅಪ್ಪಾಜಿಯವರನ್ನ ನೋಡೋಕೆ ಹೋಗಿದ್ದೆ’’ ಎಂದು ಹೇಳಿದ್ದಾರೆ. ಬಳಿಕ
ದೇವೇಗೌಡರ ಆರೋಗ್ಯದ ಬಗ್ಗೆ ಬಿಎಸ್‌ವೈ - ಎಚ್‌ಡಿಕೆ ಪರಸ್ಪರ ಮಾತನ್ನಾಡಿದ್ದಾರೆ. ಆದರೆ, ಪಕ್ಕದಲ್ಲೇ ಮತ್ತೊಬ್ಬರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಂತಿದ್ದರೂ, ಅವರನ್ನು ತಿರುಗಿಯೂ ನೋಡದೆ ಕುಮಾರಸ್ವಾಮಿ ಹಾಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಆರೋಗ್ಯ ವಿಚಾರಿಸಲು ಬಂದ ಸಿಎಂ & ಟೀಮ್‌ಗೆ ದೇವೇಗೌಡ್ರ ಭರ್ಜರಿ ಆತಿಥ್ಯ
ಅದೇ ರೀತಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸಹ ಬಿ.ಎಸ್. ಯಡಿಯೂರಪ್ಪ ಅವರನ್ನು ನೋಡಿ ಕೆಲ ಕಾಲ ನಗು ನಗುತ್ತಾ ಮಾತನ್ನಾಡಿದ್ದು, ಉಭಯ ಕುಶಲೋಪರಿ ವಿಚಾರಿಸಿದ್ದಾರೆ ಎನ್ನಲಾಗಿದೆ.
ದೇವೇಗೌಡರನ್ನು ಭೇಟಿ ಮಾಡಿದ್ದ ಬೊಮ್ಮಾಯಿ ಸಂಪುಟ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟ ಸಹುದ್ಯೋಗಿಗಳು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದ ಮಾಜಿ ಪ್ರಧಾನಮಂತ್ರಿ ನಿವಾಸಕ್ಕೆ ಬುಧವಾರ ಭೇಟಿ ನೀಡಿ ದೇವೇಗೌಡರ ಆರೋಗ್ಯ ವಿಚಾರಿಸಿದರು. ಈ ವೇಳೆ ಬೊಮ್ಮಾಯಿ ಮತ್ತು ಅವರ ಟೀಮ್‌ಗೆ ಭರ್ಜರಿ ಆತಿಥ್ಯವೂ ದೊರೆತಿತ್ತು.
ಇನ್ನು, ಅದಕ್ಕೂ ಮುನ್ನ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಸಿದ್ದರಾಮಯ್ಯ ಅವರಿಗಿಂತ ಮೊದಲು ಸಚಿವ ಅಶೋಕ್ ಸಹ ದೇವೇಗೌಡರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸುವುದರ ಜತೆಗೆ ಪ್ರಸಕ್ತ ರಾಜಕೀಯ ವಿದ್ಯಮಾನವನ್ನೂ ವಿಚಾರಿಸಿದ್ದರು.
ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
ಈಗ ಅದೇ ರೀತಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಮಾತನಾಡಿಸಿದ್ದು, ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಆ ವೇಳೆಯಲ್ಲಿ ಸಹ ಸಿಎಂ ಬೊಮ್ಮಾಯಿ ದೂರವಾಣಿಯಲ್ಲಿ ದೇವೇಗೌಡರ ಜತೆಯಲ್ಲಿ ಮಾತನಾಡಿದ್ದರು.