ಈ ಕಿರು ಹೊತ್ತಿಗೆ ಕಾಂಗ್ರೆಸ್ ನಾಯಕರ ಸುಳ್ಳು ಆರೋಪಗಳ, ಸುಳ್ಳು ಹೇಳಿಕೆಗಳ ಮೇಲೆ ಬೆಳಕು ಚೆಲ್ಲಲಿದೆ. ಕೆಲ ತಿಂಗಳಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸುಳ್ಳು ಹೇಳಿಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಈ ಕಿರು ಪುಸ್ತಕ ಈ ಸುಳ್ಳುಗಳನ್ನು ಬಯಲು ಮಾಡಿ ಸತ್ಯವನ್ನು ಹೊರಗೆಡವಿದೆ: ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್
ಬೆಂಗಳೂರು(ಏ.27): ಕಾಂಗ್ರೆಸ್ ನಾಯಕರು ರಾಜಕೀಯಕ್ಕಾಗಿ ಸುಳ್ಳು ಹೇಳಿ ಮತದಾರರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಬಾರಿ ಮತದಾರರು ಚುನಾವಣೆಯಲ್ಲಿ ಡಬಲ್ ಇಂಜಿನ್ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ‘ಅಸತೋಮ ಸದ್ಗಮಯ’ ಎಂಬ ಕಿರು ಹೊತ್ತಿಗೆ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಿರು ಹೊತ್ತಿಗೆ ಕಾಂಗ್ರೆಸ್ ನಾಯಕರ ಸುಳ್ಳು ಆರೋಪಗಳ, ಸುಳ್ಳು ಹೇಳಿಕೆಗಳ ಮೇಲೆ ಬೆಳಕು ಚೆಲ್ಲಲಿದೆ. ಕೆಲ ತಿಂಗಳಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸುಳ್ಳು ಹೇಳಿಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಈ ಕಿರು ಪುಸ್ತಕ ಈ ಸುಳ್ಳುಗಳನ್ನು ಬಯಲು ಮಾಡಿ ಸತ್ಯವನ್ನು ಹೊರಗೆಡವಿದೆ ಎಂದರು.
ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯ ಅವಮಾನ: ರಾಜೀವ್ ಚಂದ್ರಶೇಖರ್
ರಾಹುಲ್ ಗಾಂಧಿ ಅವರು ಕೆಲ ತಿಂಗಳ ಹಿಂದೆ ಎಚ್‌ಎಎಲ್ ಕಾರ್ಖಾನೆ ಬಗ್ಗೆ ಸುಳ್ಳು ಪ್ರಚಾರ ಮಾಡಿದ್ದರು. ವಾಸ್ತವದಲ್ಲಿ ಎಚ್‌ಎಎಲ್ ಕಾರ್ಖಾನೆ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಇತ್ತೀಚೆಗೆ ನಂದಿನಿ ಬ್ರ್ಯಾಂಡ್ ಬಗ್ಗೆ ಸುಳ್ಳು ಹೇಳಿದ್ದರು. ಬೆಳಗಾವಿಗೆ ಬಂದಿದ್ದಾಗ ಬ್ಯಾಂಕ್‌ಗಳು ಶ್ರೀಮಂತರಿಗೆ ಸಾಲ ನೀಡುತ್ತಿವೆ ಸುಳ್ಳು ಹೇಳಿದ್ದರು. ವಾಸ್ತವದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ 9 ಗ್ರೂಪ್‌ಗಳಿಗೆ ಶೇ.97ರಷ್ಟುಸಾಲ ನೀಡಿದ್ದರು. ಆದರೆ, ರಾಹುಲ್ ಗಾಂಧಿ ಅವರು ರಾಜಕೀಯಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಸ್ಲಿಂ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿಕೆ ಬಿಟ್ಟು ಸುರ್ಜೆವಾಲಾ ಸುಳ್ಳು ಟ್ವೀಟ್ ಮಾಡಿದ್ದರು. ಸುಳ್ಳುಗಳ ಮೂಲಕ ಮತದಾರರ ದಾರಿ ತಪ್ಪಿಸುವ ಕಾಂಗ್ರೆಸ್ ನಾಯಕರ ಪ್ರಯತ್ನದ ಬಗ್ಗೆ ಈ ಕಿರು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಮತದಾರರಿಗೆ ತಲುಪಿಸಿ ಕಾಂಗ್ರೆಸ್ ಸುಳ್ಳುಗಳನ್ನು ಬಯಲು ಮಾಡುತ್ತೇವೆ ಎಂದರು.
ಎಲ್ಲ ಧರ್ಮದವರೂ ಫಲಾನುಭವಿಗಳು:
ನಮ್ಮ ಸರ್ಕಾರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ ತತ್ವದಡಿ ಕೆಲಸ ಮಾಡುತ್ತಿದೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮದ ಜನರು ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಬಿಜೆಪಿ ಮುಸ್ಲಿಮರಿಗೆ ಅನ್ಯಾಯ ಮಾಡಿದೆ ಎಂಬುದು ಸುಳ್ಳು ಆರೋಪ. ಕಳೆದ 60 ವರ್ಷಗಳಿಂದ ಬಿಜೆಪಿಯನ್ನು ಮುಸ್ಲಿಮರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಆ ರೀತಿ ಹೇಳುವುದು ವಿರೋಧ ಪಕ್ಷಗಳ ಕಾರ್ಯತಂತ್ರ. ಆದರೆ, ನಮ್ಮ ಸರ್ಕಾರ ಯಾವುದೇ ಒಂದು ಧರ್ಮ ಆಧಾರಿತವಾಗಿ ಯೋಜನೆ ತಂದಿದ್ದರೆ ಹೇಳಿ, ನಾನು ರಾಜಕೀಯ ಬಿಡುತ್ತೇನೆ ಎಂದು ರಾಜೀವ್ ಚಂದ್ರಶೇಖರ್ ಸವಾಲು ಹಾಕಿದರು.
ಭ್ರಷ್ಟಾಚಾರ, ಹಗರಣದಿಂದಲೇ ಅಧಿಕಾರ ಕಳೆದುಕೊಂಡ ಕಾಂಗ್ರೆಸ್: ರಾಜೀವ್ ಚಂದ್ರಶೇಖರ್
ಚುನಾವಣಾ ಸಮೀಕ್ಷೆಗಳ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮೇ 13ರಂದು ಅಸಲಿ ಫಲಿತಾಂಶ ಬರಲಿದೆ. ಅದರಲ್ಲಿ ನಾವೇ ಗೆದ್ದಿರುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಸುಳ್ಳು ಭರವಸೆಗಳು:
ಕಾಂಗ್ರೆಸ್ ಪಕ್ಷ ಈ ಹಿಂದೆ ಹಲವು ಭರವಸೆಗಳನ್ನು ನೀಡಿ ಈವರೆಗೂ ಈಡೇರಿಸಿಲ್ಲ. ಛತ್ತೀಸ್‌ಗಢದಲ್ಲಿ ನಿರುದ್ಯೋಗಿಗಳಿಗೆ 2,500 ರು. ನಿರುದ್ಯೋಗ ಭತ್ಯೆ ನೀಡುವುದಾಗಿ ಹೇಳಿತ್ತು. ವಿದ್ಯುತ್ ಶುಲ್ಕ ಇಳಿಕೆ ಮಾಡುವುದಾಗಿ ಹೇಳಿತ್ತು. ರಾಜಸ್ಥಾನದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ, ಹಿಮಾಚಲಪ್ರದೇಶದಲ್ಲಿ ಇಂಧನ ದರ ಇಳಿಕೆ ಮಾಡುವುದಾಗಿ ಭರವಸೆ ನೀಡಿತ್ತು. ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಈ ಸುಳ್ಳು ಭರವಸೆಗಳ ಬಗ್ಗೆಯೂ ಈ ಕಿರು ಪುಸ್ತಕದಲ್ಲಿ ದಾಖಲಿಸಲಾಗಿದೆ ಎಂದರು.
ದೇಶದ ಅರ್ಥಿಕತೆ ಬಲಿಷ್ಠವಾಗಿದೆ. ಕೋವಿಡ್ ಸಂದರ್ಭದಲ್ಲಿ ಜಗತ್ತಿನ ಹಲವು ರಾಷ್ಟ್ರಗಳ ಆರ್ಥಿಕತೆ ಕುಸಿದಿತ್ತು. ಆದರೆ, ಭಾರತದ ಆರ್ಥಿಕತೆ ಸ್ಥಿರವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ ಆರ್ಥಿಕತೆ ಸದೃಢವಾಗಿದೆ. ಕರ್ನಾಟಕದ ಆರ್ಥಿಕತೆಯೂ ಉತ್ತಮವಾಗಿದೆ. ಕಾಂಗ್ರೆಸ್‌ನವರು ಕೇವಲ ರಾಜಕೀಯಕ್ಕಾಗಿ ಸುಳ್ಳು ಹೇಳಿಕೊಂಡು ಮತದಾರರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಮತದಾರರು ಈ ಬಾರಿ ಡಬಲ್ ಇಂಜಿನ್ ಸರ್ಕಾರವನ್ನು ಬೆಂಬಲಿಸಲಿದ್ದಾರೆ ಎಂದರು. ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲ್ ಅಗರ್ವಾಲ್ ಮತ್ತು ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ಡಾ.ಸಮೀರ್ ಕಾಗಲ್ಕರ್ ಉಪಸ್ಥಿತರಿದ್ದರು.
