ಭ್ರಷ್ಟಾಚಾರ, ಹಗರಣದಿಂದಲೇ ಅಧಿಕಾರ ಕಳೆದುಕೊಂಡ ಕಾಂಗ್ರೆಸ್: ರಾಜೀವ್ ಚಂದ್ರಶೇಖರ್
ಕಾಂಗ್ರೆಸ್ ಹಿಂದೆ ಅಧಿಕಾರದಲ್ಲಿದ್ದಾಗ ನಡೆಸಿದ ಭಾರೀ ಭ್ರಷ್ಟಾಚಾರ, ಹಗರಣಗಳ ಸರಮಾಲೆಯಿಂದಲೇ 2014ರ ಲೋಕಸಭೆ ಚುನಾವಣೆ ಮತ್ತು 2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದು. ಇದನ್ನು ಮರೆತು ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಈಗ ಸ್ವಚ್ಛ, ಭ್ರಷ್ಟಮುಕ್ತ ಆಡಳಿತದ ಮಾತನಾಡುತ್ತಿದ್ದಾರೆ.
ಬೆಂಗಳೂರು (ಏ.24): ಕಾಂಗ್ರೆಸ್ ಹಿಂದೆ ಅಧಿಕಾರದಲ್ಲಿದ್ದಾಗ ನಡೆಸಿದ ಭಾರೀ ಭ್ರಷ್ಟಾಚಾರ, ಹಗರಣಗಳ ಸರಮಾಲೆಯಿಂದಲೇ 2014ರ ಲೋಕಸಭೆ ಚುನಾವಣೆ ಮತ್ತು 2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದು. ಇದನ್ನು ಮರೆತು ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಈಗ ಸ್ವಚ್ಛ, ಭ್ರಷ್ಟಮುಕ್ತ ಆಡಳಿತದ ಮಾತನಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿನ ಹಗರಣಗಳು, ಕಾಂಗ್ರೆಸ್ ನಾಯಕರ ಮೇಲಿನ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಇಂದಿಗೂ ನಡೆಯುತ್ತಿರುವುದನ್ನು ಜನ ಮರೆತಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ನಡೆಸಿದ 2ಜಿ ಸ್ಪೆಕ್ಟ್ರಂ ಸೇರಿದಂತೆ ಇನ್ನಿತರೆ ಹಗರಣಗಳು ಒಂದುಕಡೆ ಇರಲಿ. ಮತ್ತೆ ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ಸಿದ್ದರಾಮಯ್ಯ ಹಿಂದೆ ಅಧಿಕಾರದಲ್ಲಿದ್ದಾಗ ನಡೆಸಿದ 1763 ಎಕರೆ ಅರ್ಕಾವತಿ ಬಡಾವಣೆ ರೀಡೂ ಅಕ್ರಮ, ಮತ್ತೊಬ್ಬ ಮುಖ್ಯಮಂತ್ರಿ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಅವರ ಮೇಲಿನ ಸೋಲಾರ್ ಪ್ಲಾಂಟ್ ಹಗರಣ, ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ತನಿಖೆಯಲ್ಲಿವೆ. ಸಿಬಿಐ ತನಿಖೆ ರದ್ದು ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಸೌರ ವಿದ್ಯುತ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಅವರಿಗೆ ನೋಟಿಸ್ ನೀಡಿ ತನಿಖೆಗೆ ಸೂಚಿಸಿದೆ ಎಂದು ಹೇಳಿದರು.
ಬಿಎಸ್‌ವೈಯನ್ನು ಜೈಲಿಗೆ ಕಳಿಸಿದ್ದು ಆರೆಸ್ಸೆಸ್: ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಉಕ್ಕು ಸೇತುವೆ ನಿರ್ಮಾಣಕ್ಕೆ ಲಂಚ, ಅನ್ನ ಭಾಗ್ಯ, ಶಿಕ್ಷಕರ ನೇಮಕಾತಿ ಹಗರಣ ಅವರ ಸರ್ಕಾರದಲ್ಲೇ ನಡೆದಿತ್ತು. ಸಿದ್ದರಾಮಯ್ಯ ಉದ್ಯಮಿಯೊಬ್ಬರಿಂದ .70 ಲಕ್ಷ ಮೌಲ್ಯದ ಹ್ಯೂಬ್ಲೆಟ್ ವಾಚ್ ಪಡೆದಿದ್ದು ಹೇಗೆ? ಮಾಜಿ ಸಚಿವ ಎಚ್.ಆಂಜನೇಯ ಹಾಸ್ಟೆಲ್ ಮಕ್ಕಳ ಹಾಸಿಗೆ ದಿಂಬು ಖರೀದಿಯಲ್ಲೂ ಅಕ್ರಮ ನಡೆಸಿದರು. ಅವರ ಪತ್ನಿ .7 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಮತ್ತೊಬ್ಬ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದು ತನಿಖೆ ನಡೆಯುತ್ತಿದೆ. ಮಾಜಿ ಸಚಿವ ಎಂ.ಕೃಷ್ಣಪ್ಪ ಹಾಗೂ ಆರ್.ವಿ.ದೇವರಾಜ್ ಅವರ ವಿರುದ್ಧದ ಭೂ ಕಬಳಿಕೆ ಪ್ರಕರಣ ಆರೋಪಿಗಳಿವೆ. ಇಷ್ಟೆಲ್ಲಾ ಭ್ರಷ್ಟಾಚಾರ ಪ್ರಕರಣ ಇರುವ ಕಾಂಗ್ರೆಸ್‌ನವರಿಗೆ ಭ್ರಷ್ಟಮುಕ್ತ ಆಡಳಿತದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಮಹೇಶ್, ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಗೌಡ ಇದ್ದರು.
ಬಿಜೆಪಿಯ ಭದ್ರಕೋಟೆಗೆ ನುಗ್ಗಲು ‘ಕಾಂಗ್ರೆಸ್’, ಜೆಡಿಎಸ್ ಸಜ್ಜು
‘ಹಗರಣ ಮುಚ್ಚಿಹಾಕಲು ಲೋಕಾಯುಕ್ತ ದುರ್ಬಲ’: ಸಿದ್ದರಾಮಯ್ಯ ಅವರು ತಮ್ಮ ಹಾಗೂ ತಮ್ಮ ಸಂಪುಟದ ಸಹೋದ್ಯೋಗಿಗಳು ನಡೆಸಿದ ಅಕ್ರಮಗಳನ್ನು ಮುಚ್ಚಿಹಾಕಲು ದಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದ ಲೋಕಾಯುಕ್ತ ಸಂಸ್ಥೆಯನ್ನೇ ದುರ್ಬಲಗೊಳಿಸಿ ಎಸಿಬಿ ಸ್ಥಾಪಿಸಿದರು. ಈಗ ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ಬಿಜೆಪಿ ಸರ್ಕಾರದ ವಿರುದ್ಧ ಮಾಡುತ್ತಿರುವ 40 ಪರ್ಸೆಂಟ್ ಆರೋಪದಲ್ಲಿ ಹುರುಳಿಲ್ಲ. ದೆಹಲಿಯ ಕಾಂಗ್ರೆಸ್ ನಾಯಕರಿಗೆ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಬಿಜೆಪಿ ಬಿಡುವುದಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.