ಕಾಂಗ್ರೆಸ್ ಪಕ್ಷ ರ್‍ಯಾಲಿ ನಡೆಸಿದೆ. ನಮ್ಮ ಕಾರ್ಯಕರ್ತರು ಮತ್ತು ನಾಯಕರಲ್ಲಿ ಅಪಾರ ಉತ್ಸಾಹವಿದೆ. ನಮ್ಮ ಧ್ವನಿಯನ್ನು ಯಾರಿಂದಲೂ ಅಡಗಿಸಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನವದೆಹಲಿ/ಬೆಂಗಳೂರು (ಡಿ.15): ‘ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವ ಸಲುವಾಗಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ರ್‍ಯಾಲಿ ನಡೆಸಿದೆ. ನಮ್ಮ ಕಾರ್ಯಕರ್ತರು ಮತ್ತು ನಾಯಕರಲ್ಲಿ ಅಪಾರ ಉತ್ಸಾಹವಿದೆ. ನಮ್ಮ ಧ್ವನಿಯನ್ನು ಯಾರಿಂದಲೂ ಅಡಗಿಸಲು ಸಾಧ್ಯವಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವೋಟ್ ಚೋರಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಆಗಮಿಸಿದ್ದ ಅವರು, ದೆಹಲಿಯ ಕರ್ನಾಟಕ ಭವನದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದರು. ‘ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಲ್ಲಿ ಅಪರಿಮಿತ ಉತ್ಸಾಹವಿದೆ. ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಉಳಿಸುವುದಕ್ಕಾಗಿ ಅವರೆಲ್ಲ ಬದ್ಧರಾಗಿದ್ದಾರೆ. ಪ್ರಜೆಗಳ ಮತ ಚಲಾಯಿಸುವ ಹಕ್ಕನ್ನು ರಕ್ಷಿಸಲು ನಾವೆಲ್ಲ ಬದ್ಧರಾಗಿದ್ದೇವೆ. ದೆಹಲಿಗೆ ಬರುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ವಾಹನಗಳನ್ನು ಬಿಜೆಪಿ ಮತ್ತು ಕೇಂದ್ರ ಸರ್ಕಾರ ತಡೆಯುತ್ತಿದೆ ಎಂಬ ಮಾಹಿತಿ ಬಂದಿದೆ. ಅವರು ಯಾಕಿಷ್ಟು ಚಿಂತಿತರಾಗಿದ್ದಾರೋ ಗೊತ್ತಿಲ್ಲ. ಆದರೆ, ಯಾರೂ ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ’ ಎಂದರು.
ಸೋಲು-ಗೆಲುವಿನ ಬಗ್ಗೆ ಚಿಂತಿಸಲ್ಲ: ಚುನಾವಣಾ ಸೋಲಿನ ಹತಾಶೆಯಿಂದ ಕಾಂಗ್ರೆಸ್ ರ್‍ಯಾಲಿ ಆಯೋಜಿಸಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಬಿಜೆಪಿಗರು ತಮ್ಮ ಸಂತೋಷಕ್ಕಾಗಿ ಏನನ್ನು ಬೇಕಾದರೂ ಹೇಳಿಕೊಳ್ಳಲಿ. ನಾವು ಕಾಂಗ್ರೆಸ್ಸಿಗರು, ಚುನಾವಣಾ ಗೆಲುವು ಮತ್ತು ಸೋಲುಗಳ ಬಗ್ಗೆ ಯೋಚಿಸುವುದಿಲ್ಲ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಮ್ಮ ಹಿರಿಯರು ದೇಶಕ್ಕೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನೀಡಲು ಮಾಡಿದ ತ್ಯಾಗದ ಬಗ್ಗೆ ನಾವು ಯೋಚಿಸುತ್ತೇವೆ.
ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರಂತಹ ಅರ್ಥಶಾಸ್ತ್ರಜ್ಞರಿಗೆ ಹುದ್ದೆ ನೀಡಿದರು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿ ಈ ದೇಶಕ್ಕಾಗಿ ಜೈಲಿಗೆ ಹೋದರು. ನೂರು ವರ್ಷಗಳ ಹಿಂದೆ, ಗಾಂಧಿ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡರು; ಇಂದು ಈ ಕಷ್ಟದ ಸಮಯದಲ್ಲಿ, ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ’ ಎಂದರು.
ಕರ್ನಾಟಕದಿಂದ ರ್‍ಯಾಲಿಗೆ 4,000 ಮಂದಿ
‘ರ್‍ಯಾಲಿಗಾಗಿ ಕರ್ನಾಟಕದಿಂದ ಸುಮಾರು 3,500-4,000 ಕಾರ್ಯಕರ್ತರು ಬಂದಿದ್ದಾರೆ. ನಾವು (ರಾಜ್ಯ ಕಾಂಗ್ರೆಸ್) 1,500 ಜನರಿಗೆ ವಸತಿ ವ್ಯವಸ್ಥೆ ಮಾಡಿದ್ದೇವೆ, 2,000ಕ್ಕೂ ಹೆಚ್ಚು ಜನರು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಅವರು ವಿಮಾನ ಮತ್ತು ರೈಲಿನ ಮೂಲಕ ಬಂದಿದ್ದಾರೆ. ರಾಜ್ಯದಿಂದ ಸುಮಾರು 1.42 ಕೋಟಿ ಸಹಿಗಳನ್ನು ಸಂಗ್ರಹಿಸಲಾಗಿದೆ’ ಎಂದರು.


