Asianet Suvarna News Asianet Suvarna News

ಹೆಚ್ಚಿದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಕುತೂಹಲ..!

ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು, ರಾಜಕೀಯ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು ಮಗ್ನ

Vijayapura Municipal Corporation Elections Counting will Held October 31st grg
Author
First Published Oct 30, 2022, 11:30 AM IST

ರುದ್ರಪ್ಪ ಆಸಂಗಿ

ವಿಜಯಪುರ(ಅ.30): ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಈಗಾಗಲೇ ಮುಗಿದಿದೆ. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಈಗ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು, ರಾಜಕೀಯ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು ತಲ್ಲೀನರಾಗಿದ್ದಾರೆ. ಶುಕ್ರವಾರವಷ್ಟೇ ನಡೆದ ಚುನಾವಣೆಯಲ್ಲಿ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆದು ಮತಪೆಟ್ಟಿಗೆಯಲ್ಲಿ ಭದ್ರಪಡಿಸಿದ್ದಾರೆ. ಅ.31ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಹೀಗಾಗಿ ಅಭ್ಯರ್ಥಿಗಳು, ರಾಜಕೀಯ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು ತಮ್ಮದೆಯಾದ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಸೋಮವಾರ ವಿ.ಭ. ದರಬಾರ ಹೈಸ್ಕೂಲ್‌ನಲ್ಲಿ ಮತ ಎಣಿಕೆ ನಡೆಯಲಿದೆ. ಹಾಗಾಗಿ ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ಹಾಗೂ ಜನತೆ ಕುತೂಹಲದಿಂದ ಮತ ಎಣಿಕೆ ದಿನದತ್ತ ತಮ್ಮ ಚಿತ್ತ ನೆಟ್ಟಿದ್ದಾರೆ.

ಪಾಲಿಕೆಯ 35 ವಾರ್ಡ್‌ಗಳಲ್ಲಿ ಚುನಾವಣೆ ನಡೆದಿದ್ದು, 174 ಅಭ್ಯರ್ಥಿಗಳು ತಮ್ಮ ಅದೃಷ್ಟಪರೀಕ್ಷೆಗೆ ಚುನಾವಣೆ ಫಲಿತಾಂಶದತ್ತ ಎದುರು ನೋಡುತ್ತಿದ್ದಾರೆ. ಶುಕ್ರವಾರ ನಡೆದ ಚುನಾವಣೆಯಲ್ಲಿ ಹಲವು ವಾರ್ಡ್‌ಗಳಲ್ಲಿ ನೇರ ಹಣಾಹಣಿ, ಕೆಲವು ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ, ಇನ್ನೂ ಹಲವೆಡೆ ಪಕ್ಷೇತರರ ಪ್ರಬಲ ಪೈಪೋಟಿಯಿಂದ ಚತುಷ್ಕೋನ ಸ್ಪರ್ಧೆಯೂ ನಡೆದಿದೆ. ಹೀಗಾಗಿ ಹೈವೋಲ್ಟೇಜ್‌ ವಾರ್ಡ್‌ಗಳ ಫಲಿತಾಂಶ ಏನಾಗುವುದು ಎಂಬ ಕುತೂಹಲ ಜನತೆಯಲ್ಲಿ ಹೆಚ್ಚಿದೆ. ಅನೇಕರು ಬೆಟ್ಟಿಂಗ್‌ನಲ್ಲಿಯೂ ತೊಡಗಿದ್ದಾರೆ ಎನ್ನಲಾಗಿದೆ.

Vijayapura: ಮಹಾನಗರ ಪಾಲಿಕೆ ಮತದಾನ ಮುಕ್ತಾಯ, ಲಿಸ್ಟ್‌ನಿಂದ ಮತದಾರರ ಹೆಸ್ರು ಡಿಲೀಟ್, ಕೆಲಕಾಲ ಗೊಂದಲ!

ಅಭ್ಯರ್ಥಿಗಳ ಬೆಂಬಲಿಗರು ಸಾಹೇಬ್ರ... ಬಹುತೇಕ ಮತದಾರರು ತಮ್ಮ ಪರವಾಗಿಯೇ ಮತ ಚಲಾಯಿಸಿದ್ದಾರೆ. ನಿಮ್ಮ ಗೆಲವು ನಿಶ್ಚಿತವಾಗಿದೆ. ನಿಶ್ಚಿಂತೆಯಿಂದ ಇರಬೇಕು ಎಂದು ಸಮಾಧಾನದ ಮಾತು ಆಡುತ್ತಿದ್ದಾರೆ. ಆದರೆ ಅಭ್ಯರ್ಥಿಗಳ ಮನದಲ್ಲಿನ ತಳಮಳ ಮಾತ್ರ ಕಡಿಮೆಯಾಗಿಲ್ಲ. ಕೆಲ ಅಭ್ಯರ್ಥಿಗಳು ಟೆಂಪಲ್‌ ರನ್‌ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ತಮ್ಮ ಕುಟುಂಬ ಪರಿವಾರದೊಂದಿಗೆ ತಮ್ಮ ಮನೆ ದೇವರ ದರ್ಶನ ಪಡೆದು ಹರಕೆ ಹೊತ್ತು ಬರುತ್ತಿದ್ದಾರೆ.

ಚಹಾ ಅಂಗಡಿಗಳಲ್ಲಿ, ಹೋಟೆಲ್‌ಗಳಲ್ಲಿಯೂ ಸೇರಿದಂತೆ ಜನನಿಬಿಡ ಪ್ರದೇಶಗಲ್ಲಿ ಜನರು ಫಲಿತಾಂಶದ ಬಗ್ಗೆ ಚರ್ಚೆ ಜೋರಾಗಿ ನಡೆಸಿದ್ದಾರೆ. ಅವರು ಗೆದ್ದೇ ಗೆಲ್ಲುತ್ತಾರೆ. ಅವರಿಗೆ ಸೋಲು ಕಟ್ಟಿಟ್ಟಬುತ್ತಿ. ಛಾಲೆಂಜ್‌ ಮಾಡುತ್ತಿಯಾ? ಎಂಬುವುದು ಕೇಳಿ ಬರುತ್ತಿದೆ.

ಆ ಭಾಗದ ವೋಟ್‌ಗಳು ನಮಗೆ ಬರುತ್ತವೆ. ನಮ್ಮ ಗೆಲವು ನಿಶ್ಚಿತ ಎಂದು ಆಯಾ ಪಕ್ಷದ ಅಭ್ಯರ್ಥಿಗಳು, ಬೆಂಬಲಿಗರು, ರಾಜಕೀಯ ಧುರೀಣರು, ಕಾರ್ಯಕರ್ತರು ಚುನಾವಣೆ ಚರ್ಚೆಯಲ್ಲಿ ತೊಡಗಿದ್ದಾರೆ. ಇನ್ನೂ ಕೆಲವು ಅಭ್ಯರ್ಥಿಗಳು ಮನೆಯಲ್ಲಿಯೇ ವಿಶ್ರಾಂತಿ ಪಡೆದರೆ, ಕಾರ್ಯಕರ್ತರ ತಂಡ ಅಭ್ಯರ್ಥಿಗಳ ಮನೆಗೆ ತೆರಳಿ ಸೋಲು-ಗೆಲುವಿನ ಬಗ್ಗೆ ಚರ್ಚೆ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ನಾಳೆ ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು

ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಅ.31ರಂದು ನಗರದ ವಿ.ಬಿ.ದರಬಾರ ಹೈಸ್ಕೂಲ್‌ನಲ್ಲಿ ನಡೆಯಲಿದ್ದು, ಮತ ಎಣಿಕೆಗಾಗಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಅ.31ರಂದು ಬೆಳಗ್ಗೆ 7.30ಕ್ಕೆ ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯನ್ನು ಆಯಾ ಚುನಾವಣಾಧಿಕಾರಿಗಳು ಹಾಗೂ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟರ ಸಮ್ಮುಖದಲ್ಲಿ ತೆರೆಯಲಾಗುವುದು. ಬೆಳಗ್ಗೆ 8 ಗಂಟೆಯವರೆಗೆ ಅಂಚೆ ಮತಪತ್ರಗಳ ಎಣಿಕೆ ನಡೆಯಲಿದ್ದು, ತದನಂತರ ವಿದ್ಯುನ್ಮಾನ ಮತಯಂತ್ರದಲ್ಲಿ ದಾಖಲಾಗಿರುವ ಮತಗಳ ಎಣಿಕೆ ಪ್ರಾರಂಭಿಸಲಾಗುವುದು ಎಂದರು.

ಮತ ಎಣಿಕೆ ಕಾರ್ಯವು ಒಟ್ಟು 7 ಕೊಠಡಿಗಳಲ್ಲಿ ನಡೆಯಲಿದ್ದು, ಪ್ರತಿ ಕೊಠಡಿಯಲ್ಲಿ ಒಟ್ಟು 5 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ, 35 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ವಾರ್ಡ್‌ಗೆ ಒಂದು ಟೇಬಲ್‌ ವ್ಯವಸ್ಥೆ ಮಾಡಿದ್ದು, ಎಲ್ಲ ವಾರ್ಡ್‌ಗಳ ಮತ ಎಣಿಕೆ ಕಾರ್ಯ ಏಕಕಾಲದಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಮತ ಎಣಿಕೆ ಸುತ್ತು:

ವಾರ್ಡ್‌ ಸಂಖ್ಯೆ 15ರ ಒಂದು ವಾರ್ಡ್‌ಗೆ 03 ಸುತ್ತುಗಳು, ವಾರ್ಡ್‌ ಸಂ.26ರ ಒಂದು ವಾರ್ಡ್‌ಗೆ 05 ಸುತ್ತುಗಳು, ವಾರ್ಡ್‌ ಸಂ.4,5,6,9 ಹಾಗೂ 17ರ ಐದು ವಾರ್ಡ್‌ಗಳಿಗೆ 06 ಸುತ್ತುಗಳು, ವಾರ್ಡ್‌ ಸಂ.10, 25, 27, 33, 34 ಹಾಗೂ 35ರ ಆರು ವಾರ್ಡ್‌ಗಳಿಗೆ 07 ಸುತ್ತುಗಳು, ವಾರ್ಡ್‌ ಸಂ.01, 12, 24, 32ರ ನಾಲ್ಕು ವಾರ್ಡ್‌ಗಳಿಗೆ 08 ಸುತ್ತುಗಳು, ವಾರ್ಡ್‌ ಸಂ.19, 28, 30 ಹಾಗೂ 31 ರ ನಾಲ್ಕು ವಾರ್ಡ್‌ಗಳಿಗೆ 09 ಸುತ್ತುಗಳು, ವಾರ್ಡ್‌ ಸಂ.02, 03, 13, 16, 23 ಹಾಗೂ 29ರ ಆರು ವಾರ್ಡ್‌ಗಳಿಗೆ 10 ಸುತ್ತುಗಳು, ವಾರ್ಡ್‌ ಸಂ.14 ಹಾಗೂ 20ರ ಎರಡು ವಾರ್ಡ್‌ಗಳಿಗೆ 11 ಸುತ್ತುಗಳು, ವಾರ್ಡ್‌ ಸಂ. 7,8,11,18 ಹಾಗೂ 22ರ ಐದು ವಾರ್ಡ್‌ಗಳಿಗೆ 12 ಸುತ್ತುಗಳು ಹಾಗೂ ವಾರ್ಡ್‌ ಸಂಖ್ಯೆ. 21ರ ಒಂದು ವಾರ್ಡಿಗೆ 13 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಹೇಳಿದ್ದಾರೆ.

ಮತ ಎಣಿಕೆಗೆ 179 ಅಧಿಕಾರಿ, ಸಿಬ್ಬಂದಿ:

ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡ್‌ಗಳ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ 35 ಮತ ಎಣಿಕೆ ಮೇಲ್ವಿಚಾರಕರು, 35 ಮತ ಎಣಿಕೆ ಸಹಾಯಕರು, 07 ಮತ ಎಣಿಕೆ ಡಾಟಾ ಎಂಟ್ರಿ ಮೇಲ್ವಿಚಾರಕರು, 07 ಕಂಪ್ಯೂಟರ್‌ ಆಪರೇಟರ್‌, 35 ವಿದ್ಯುನ್ಮಾನ ಮತಯಂತ್ರಗಳನ್ನು ಸಾಗಿಸುವ ಸಿಬ್ಬಂದಿ ಹಾಗೂ ಇತರೆ ಕಾರ್ಯಗಳಿಗಾಗಿ 60 ಜನರು ಸೇರಿದಂತೆ 179 ಜನರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸ್‌ ಬಂದೋಬಸ್ತ್‌

ಮತ ಎಣಿಕೆಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. 3 ಡಿವೈಎಸ್‌ಪಿ, 8 ಸಿಪಿಐ, 32 ಪಿಎಸ್‌ಐ, 35 ಎಎಸ್‌ಐ, 76 ಹೆಡ್‌ ಕಾನ್‌ಸ್ಟೇಬಲ್‌, 128 ಪೊಲೀಸ್‌ ಕಾನ್‌ಸ್ಟೇಬಲ್‌, 17 ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌, 04 ಐಆರ್‌ಬಿ ಹಾಗೂ 06 ಡಿಎಆರ್‌ ತುಕಡಿಗಳನ್ನು ಪೊಲೀಸ್‌ ಇಲಾಖೆಯಿಂದ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ವಿಜಯಪುರ ಪಾಲಿಕೆ ಚುನಾವಣೆ: ಯೂಟ್ಯೂಬ್ ಸ್ಟಾರ್‌ನಿಂದ ಮತದಾನ ಜಾಗೃತಿ..!

ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ, ಸಿಬ್ಬಂದಿ, ರಾಜ್ಯ ಚುನಾವಣಾ ಆಯೋಗದಿಂದ ಅನುಮತಿ ಹೊಂದಿದ ವ್ಯಕ್ತಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಕೃತ ಪಾಸ್‌ ಪಡೆದ ಮಾಧ್ಯಮದವರು, ಸ್ಪರ್ಧಿಸಿದ ಅಭ್ಯರ್ಥಿ, ಅವರ ಚುನಾವಣಾ ಏಜೆಂಟರು ಮತ್ತು ಮತ ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಾರ್ಕಿಂಗ್‌ ವ್ಯವಸ್ಥೆ:

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ದಿನದಂದು ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ, ಸಿಬ್ಬಂದಿ, ಅಭ್ಯರ್ಥಿ ಹಾಗೂ ಮತ ಎಣಿಕೆ ಏಜೆಂಟರುಗಳ ವಾಹನ ನಿಲುಗಡೆಗೆ ದರಬಾರ ಶಾಲೆಯ ಪಕ್ಕದಲ್ಲಿರುವ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios