ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ನಡುವಿನ ವಾಕ್ಸಮರ ಮುಂದುವರೆದಿದೆ.

ತುಮಕೂರು, (ಫೆ.13): ಪಂಚಮಸಾಲಿ 2A ಮೀಸಲಾತಿ ಪಾದಯಾತ್ರೆ ಮಧ್ಯೆ ರಾಜಕಾರಣಿಗಳು ಆರೋಪ-ಪ್ರತ್ಯಾರೋಪಗಳು ಸಹ ಜೋರಾಗಿವೆ.

Add Asianetnews Kannada as a Preferred SourcegooglePreferred

ಅದರಲ್ಲೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ಬಾರಿನಲ್ಲಿ ಕುಳಿತು ಗಲಾಟೆ ಮಾಡಿಕೊಂಡನಲ್ಲ ಅವನಾ? ಎಂಬ ಸಿಎಂ ಪುತ್ರ ವಿಜಯೇಂದ್ರ ಹೇಳಿಕೆಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ತಿರುಗೇಟು ಕೊಟ್ಟಿದ್ದಾರೆ. 

ಕಾಶಪ್ಪನವರ್ ಅಂದ್ರೆ ಬಾರ್‌ನಲ್ಲಿ ಗಲಾಟೆ ಮಾಡಿದ್ರಲ್ಲಾ ಅವರಾ? ವಿಜಯೇಂದ್ರ ಟಾಂಗ್

ವೈಯಕ್ತಿಕ ವಿಚಾರಕ್ಕೆ ವ್ಯಂಗ್ಯವಾಗಿ ಮಾತಾಡಿ ದೊಡ್ಡವರಾಗಲ್ಲ. ಮುಖ್ಯಮಂತ್ರಿ ಮಗ ಬಿ.ವೈ.ವಿಜಯೇಂದ್ರ ಶಾಸಕರೂ ಆಗಿಲ್ಲ, ಇನ್ನೂ ಏನು ಆಗಿಲ್ಲ. ನನಗಾದರೂ ಸ್ಥಾನಮಾನ ವಿದೆ. ಇವರಿಗೆ ಏನಿದೆ ಯೋಗ್ಯತೆ? ಎಂದು ಖಾರವಾಗಿ ಪ್ರಶ್ನಿಸಿದರು.

ನಾನೂ ಹಗುರವಾಗಿ ಮಾತನಾಡಬಹುದು ಎಂದ ಕಾಶಪ್ಪನವರ್​​ ನನಗೂ ಇವರು ಎಲ್ಲಿ ಮಲಗುತ್ತಾರೆ. ಎಲ್ಲಿ ಕುಡಿಯುತ್ತಾರೆ. ಯಾರ ಮನೆಯಲ್ಲಿ ಇರುತ್ತಾರೆ ಎಂದು ಗೊತ್ತು. ಆದರೆ, ನಾನು ಅವರಷ್ಟು ಕೆಳಮಟ್ಟಕ್ಕೆ ಇಳಿದು ಮಾತಾಡುವವನಲ್ಲ ಎಂದು ಹೇಳಿದರು.

ಈ ರಾಜ್ಯದಲ್ಲಿ ಅವರಿಗೆಷ್ಟು ಗೌರವವಿದೆ. ಅದಕ್ಕಿಂತ ಹೆಚ್ಚು ನಮ್ಮ ಮನೆತನಕ್ಕಿದೆ. ಸಿಎಂಗೆ ನಾವು ಬೆಲೆ ಕೊಡುತ್ತೇವೆ. ನಮ್ಮ ಸಮುದಾಯದಿಂದ 15 ಶಾಸಕರು ಇದ್ದಾರೆ. ಯಡಿಯೂರಪ್ಪ ದೊಡ್ಡ ನಾಯಕರು, ಅವರ ಬಗ್ಗೆ ಗೌರವವಿದೆ. ನಾಳೆ ಬೆಳೆಯುವಂತ ನಾಯಕ ಈ ರೀತಿ ವ್ಯಂಗ್ಯವಾಗಿ ಹೇಳಿಕೆ ನೀಡಬಾರದು. ಈ ರಾಜ್ಯದಲ್ಲಿ ಕಾಶಪನವರ್ ಅಂದರೆ ಯಾರು ಅಂತಾ ಜನರನ್ನು ಕೇಳಿ ಹೇಳ್ತಾರೆ ವಿಜಯೇಂದ್ರವರೇ ಎಂದು ತಿರುಗೇಟು ಕೊಟ್ಟರು.

ಹಗುರವಾಗಿ ಮಾತನಾಡಿದ ತಕ್ಷಣ ಯಾರೂ ದೊಡ್ಡವರು ಆಗಲ್ಲ. ಹಗುರತನ ಮಾತಾಡಿ ನಿಮ್ಮ ಗೌರವ ಕಳೆದುಕೊಳ್ಳಬೇಡಿ. ನನಗೂ ನಿಮ್ಮ ವೈಯಕ್ತಿಕ ವಿಚಾರಗಳು ಬಹಳಷ್ಟು ಗೊತ್ತಿವೆ. ಆದರೆ, ನಾನು ಚಿಲ್ಲರೆಗಿರಿ ಮಾಡೋಕೆ ಹೋಗಲ್ಲ. ಸಮಯ ಬಂದಾಗ ಬಾಯಿಬಿಟ್ಟರೇ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದರು.