ಸಿಬಿಐ ಬಿಜೆಪಿಯ ಮುಂಚೂಣಿ ಘಟಕ: ಹರಿಪ್ರಸಾದ್ ಕಿಡಿ
ಚುನಾವಣೆ ಸಂದರ್ಭದಲ್ಲಿ ಇಡಿ (ಎಲೆಕ್ಷನ್ ಡಿಪಾರ್ಟ್‌ಮೆಂಟ್) ಮತ್ತು ಐಟಿ (ಇಂಟೆಲಿಜೆನ್ಸ್ ಡಿಪಾರ್ಟ್‌ಮೆಂಟ್) ಎಂಬ ಘಟಕಗಳು ಚಿಲುಮೆ ಸಂಸ್ಥೆ ಮಾಡಿದಂತೆ ಬಿಜೆಪಿಯ ಅಣತಿಯಂತೆ ಕೆಲಸ ಮಾಡುತ್ತಿವೆ: ಹರಿಪ್ರಸಾದ್
ಸುವರ್ಣಸೌಧ(ಡಿ.21): ಕೇಂದ್ರೀಯ ತನಿಖಾ ಸಂಸ್ಥೆಯು (ಸಿಬಿಐ) ಭಾರತೀಯ ಜನತಾ ಪಕ್ಷದ ಮುಂಚೂಣಿ ಘಟಕದಂತಾಗಿದ್ದು, ಬಿಜೆಪಿ ವಿರೋಧಿಗಳ ವಿರುದ್ಧ ದೊಡ್ಡ ಅಸ್ತ್ರ ಇಟ್ಟುಕೊಂಡು ಭಯಬೀಳಿಸಲು ಪ್ರಯತ್ನ ಮಾಡುತ್ತಿವೆ. ಆದರೆ, ಇಂತಹ ಪ್ರಯತ್ನಕ್ಕೆಲ್ಲ ಹೆದರುವ ಜನ ನಾವಲ್ಲ ಎಂದು ವಿಧಾನ ಪರಿಷತ್ತು ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಇಡಿ (ಎಲೆಕ್ಷನ್ ಡಿಪಾರ್ಟ್‌ಮೆಂಟ್) ಮತ್ತು ಐಟಿ (ಇಂಟೆಲಿಜೆನ್ಸ್ ಡಿಪಾರ್ಟ್‌ಮೆಂಟ್) ಎಂಬ ಘಟಕಗಳು ಚಿಲುಮೆ ಸಂಸ್ಥೆ ಮಾಡಿದಂತೆ ಬಿಜೆಪಿಯ ಅಣತಿಯಂತೆ ಕೆಲಸ ಮಾಡುತ್ತಿವೆ. ಅಂತೆಯೇ ಸಿಬಿಐ ಮುಂಚೂಣಿ ಘಟಕವಾಗಿದ್ದು ಬಿಜೆಪಿ ವಿರೋಧಿಗಳ ವಿರುದ್ಧ ಅಸ್ತ್ರವಾಗಿ ಬಿಜೆಪಿ ಬಳಸಿಕೊಳ್ಳುತ್ತಿದ್ದು, ಅದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದು ತಿಳಿಸಿದರು.
ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುವ ಸಲಹೆ ನೀಡಿ: ಸಿಎಂ ಬೊಮ್ಮಾಯಿ
ವಿಧಾನಸಭೆಯಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಿರುವುದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಸರಿಯಾಗಿಯೇ ಇದೆ. ಅವರ ಮಧ್ಯೆ ಹುಳಿ ಹಿಂಡುವ ಕಾರ್ಯ ಆಗಬಾರದು. ಸರ್ಕಾರ ಯಾವುದಾದರೂ ತೀರ್ಮಾನ ತೆಗೆದುಕೊಂಡಾಗ ಅದಕ್ಕೆ ನಾವು ಬದ್ಧವಾಗಿರಬೇಕಾಗುತ್ತದೆ. ಕತ್ತಿನಪಟ್ಟಿ ಹಿಡಿದುಕೊಳ್ಳಲು ಆಗುವುದಿಲ್ಲ ಎಂದರು.
ಸಾವರ್ಕರ್ ಕೊಲೆ ಮಾಡಿ ಜೈಲಿಗೆ ಹೋಗಿದ್ದವನೇ ವಿನಃ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋದವರಲ್ಲ. ಆರು ಬಾರಿ ಕ್ಷಮಾಪಣೆ ಪತ್ರವನ್ನು ಬ್ರಿಟಿಷರಿಗೆ ಬರೆದು ಬ್ರಿಟಿಷರ ತಟ್ಟೆಕಾಸಿನಲ್ಲಿ ಜೀವನ ಮಾಡಿದಂತಹ ಸಾವರ್ಕರ್ ಫೋಟೋ ಹಾಕಿರುವುದು ಇಡೀ ಕರ್ನಾಟಕದ ಜನರಿಗೆ ಮಾಡಿದ ಅಪಮಾನ. ಅದರಲ್ಲೂ ಸಹ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಇರುವಾಗ ಆ ಪ್ರದೇಶದ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದ ವಿರುದ್ಧ ಇಂತಹ ವ್ಯಕ್ತಿಯ ಫೋಟೋವನ್ನು ವಿಧಾನಸಭೆಯಲ್ಲಿ ಹಾಕಿರುವುದನ್ನು ನೋಡಿದಾಗ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಬೆಳಗಾವಿ ಎಂದೆಂದಿಗೂ ನಮ್ಮದೇ: ಸಿದ್ದರಾಮಯ್ಯ
ಪಂಡಿತ್ ಜವಾಹರ ಲಾಲ್ ನೆಹರು ಈ ದೇಶದ ಮೊದಲ ಪ್ರಧಾನಮಂತ್ರಿಯಾಗಿದ್ದವರು. ವಿಧಾನಸೌಧ ನಿರ್ಮಾಣಕ್ಕೆ ಶಂಕು ಸ್ಥಾಪನೆ ಹಾಕಿದವರು. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಕಾರಣೀಭೂತರಾಗಿದ್ದವರು. ಅವರ ಫೋಟೋ ಹಾಕದಿರುವುದನ್ನು ನೋಡಿದಾಗ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಬುಡಮೇಲು ಮಾಡಲು ಬಿಜೆಪಿ ಹೊರಟಿರುವುದು ಗೊತ್ತಾಗುತ್ತದೆ ಎಂದು ಹೇಳಿದರು.
ಕೆ.ಎಸ್.ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊಡಬೇಕೇ, ಬೇಡವೇ ಎಂಬುದು ಬಿಜೆಪಿಯ ಆಂತರಿಕ ವಿಚಾರ. ಕೇವಲ ಈಶ್ವರಪ್ಪ ಮತ್ತು ಜಾರಕಿಹೊಳಿ ಮಾತ್ರವಲ್ಲ, ಆ ಪಕ್ಷದ ಇತರ ಸದಸ್ಯರು ಕೂಡ ಸಚಿವ ಸ್ಥಾನಕ್ಕಾಗಿ ಸರ್ಕಾರಕ್ಕೆ ಬೆದರಿಕೆವೊಡುತ್ತಿದ್ದಾರೆ ಎಂದರು.