ಬೆಂಗಳೂರು (ಅ.29): ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಅವರು ಜೈಲುವಾಸ ಮುಗಿಸಿ ಬೆಂಗಳೂರಿಗೆ ಆಗಮಿಸುವ ವೇಳೆ ನಡೆದ ರಾರ‍ಯಲಿಯಲ್ಲಿ ಜೆಡಿಎಸ್‌ ಬಾವುಟ ಹಿಡಿದಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸುವ ವಿಡಿಯೋವೊಂದು ವೈರಲ್‌ ಆಗಿ ರಾಜ್ಯ ರಾಜಕೀಯದಲ್ಲಿ ಭಾರಿ ವಿವಾದ ಹುಟ್ಟುಹಾಕಿದೆ.

ಸಿದ್ದರಾಮಯ್ಯ ಅವರು ಬೆಂಗಳೂರಿನ ತಮ್ಮ ಕಾವೇರಿ ನಿವಾಸದಲ್ಲಿ ಪಿರಿಯಾಪಟ್ಟಣದ ಮಾಜಿ ಶಾಸಕ ವೆಂಕಟೇಶ್‌ ಸೇರಿದಂತೆ ನಾಲ್ಕು ಮಂದಿ ಆಪ್ತರೊಂದಿಗೆ ಖಾಸಗಿಯಾಗಿ ಚರ್ಚಿಸುತ್ತಿರುವಾಗ ಜೆಡಿಎಸ್‌ ಬಾವುಟ ಹಿಡಿದ ಶಿವಕುಮಾರ್‌ ಧೋರಣೆಗೆ ಬೇಸರ ವ್ಯಕ್ತಪಡಿಸುತ್ತಾರೆ. ಈ ವಿಡಿಯೋ ತುಣುಕು ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್‌ ಆಗಿದೆ.

ಬಿಜೆಪಿ ಬಗ್ಗೆ ಕುಮಾರಸ್ವಾಮಿಯ ಈ ಮೃದು ಧೋರಣೆ ಏಕೆ?

ಈ ವಿಡಿಯೋದಲ್ಲಿ ಸಿದ್ದರಾಮಯ್ಯ ಅವರು ಕೇವಲ ಡಿಕೆಶಿ ಧೋರಣೆಯನ್ನು ಟೀಕಿಸುವುದು ಮಾತ್ರವಲ್ಲದೆ, ‘ಲಿಂಗಾಯತರು ಯಡಿಯೂರಪ್ಪ ಅವರೊಂದಿಗೆ ಹಾಗೂ ಒಕ್ಕಲಿಗರು ಕುಮಾರಸ್ವಾಮಿ ಅವರೊಂದಿಗೆ ಮೊದಲಿನ ರೀತಿಯಲ್ಲಿ ಇರುವುದಿಲ್ಲ. ಅದರ ಸದುಪಯೋಗಪಡಿಸಿಕೊಳ್ಳಲು ನಮ್ಮವರೇ ಸಿದ್ಧರಿಲ್ಲ’ ಎನ್ನುತ್ತಾರೆ.

ಇದೇ ವೇಳೆ ‘ಡಿ.ಕೆ.ಶಿವಕುಮಾರ್‌ ಜೆಡಿಎಸ್‌ ಬಾವುಟ ಹಿಡಿದುಕೊಂಡು ಬರುತ್ತಾರೆ ಎಂದರೆ ಏನೆಂದು ಹೇಳಬೇಕು. ನಿನ್ನೆ ತಾನೇ ಗದಗದಲ್ಲಿ ಜೆಡಿಎಸ್‌ ಸಹವಾಸ ಸಾಕು ಎಂದು ಹೇಳಿದ್ದೇನೆ. ನಾನು ಅದೇ ಮಾತಿನಲ್ಲಿರುತ್ತೇನೆ. ಏನಾಗುತ್ತದೆಯೋ ಆಗಲಿ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಈ ವಿಡಿಯೋ ಬಹಿರಂಗಗೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಕೆಸರೆರಚಾಟ ಶುರುವಾಗಿದೆ. ವಿಡಿಯೋ ಕುರಿತು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಟೀಕೆ ಮಾಡಿದ್ದು, ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ.

ಕೈಯಲ್ಲಿ ಜೆಡಿಎಸ್ ಬಾವುಟ: ಸಿದ್ದು ಮಾತಿನ ಛಾಟಿಗೆ ಡಿಕೆಶಿಗೆ ಉಭಯಸಂಕಟ

ವಿಡಿಯೋ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ದೇಶ ಅಭಿವೃದ್ಧಿ ಹೊಂದುತ್ತಿರುವಾಗಲೂ ಓಲೈಕೆ ರಾಜಕಾರಣದ ಮಾಸ್ಟರ್‌ ಆಗಿರುವವರು ಜಾತಿ ಮೀರಿ ಬೆಳೆಯುವುದಿಲ್ಲವೇ ಎಂದು ಪ್ರಶ್ನಿಸಿದೆ. ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಜಾತ್ಯತೀತವಾದಿ. ನಾವು ಕೋಮುವಾದಿಗಳು ಎಂದು ಸಿದ್ದರಾಮಯ್ಯ ಅವರ ಜಾತಿ ಲೆಕ್ಕಾಚಾರದ ಮಾತುಕತೆಯನ್ನು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ನ ಕೆಲ ನಾಯಕರೂ ಸಿದ್ದರಾಮಯ್ಯ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಡಿ.ಕೆ. ಶಿವಕುಮಾರ್‌, ತಾವು ಉದ್ದೇಶಪೂರ್ವಕವಾಗಿ ಜೆಡಿಎಸ್‌ ಧ್ವಜ ಹಿಡಿದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

 

 

ಇದೆಲ್ಲಾ ಬೆಳವಣಿಗೆ ಬಳಿಕ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್‌ಗಳ ಮೂಲಕ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದ್ದು, ‘ರಾಜ್ಯದ ಮತದಾರರು ಜಾತಿ ಬಿಟ್ಟು ಯೋಚನೆ ಮಾಡುತ್ತಿದ್ದಾರೆ. ವೀರಶೈವರು ಯಡಿಯೂರಪ್ಪನಿಂದ, ಒಕ್ಕಲಿಗರು ಕುಮಾರಸ್ವಾಮಿಯಿಂದ ದೂರವಾಗುತ್ತಿದ್ದಾರೆ ಎಂದು ಹೇಳಿದ್ದು ಸತ್ಯ. ಜನ ಜಾತ್ಯತೀತರಾಗುತ್ತಿದ್ದಾರೆ ಎಂದು ಹೇಳಿದ್ದರಲ್ಲಿ ತಪ್ಪೇನಿದೆ? ಇದು ನನ್ನ ಜಾತಿ ವಿನಾಶದ ಹಾದಿ. ನಿಮ್ಮದು ಯಾವ ಹಾದಿ?’ ಎಂದು ರಾಜಕೀಯ ವಿರೋಧಿಗಳನ್ನು ಪ್ರಶ್ನೆ ಮಾಡಿದರು.

ಇದೇ ನನ್ನ ದೀಪಾವಳಿ ಸಂದೇಶ:

ಖಾಸಗಿ ವಿಡಿಯೋ ಕುರಿತ ಟೀಕೆಗೆ ಸರಣಿ ಟ್ವೀಟ್‌ಗಳ ಮೂಲಕ ಉತ್ತರ ನೀಡಿರುವ ಸಿದ್ದರಾಮಯ್ಯ, ನನ್ನ ಮನೆಯಲ್ಲಿ ನಡೆದ ಖಾಸಗಿ ಮಾತುಕತೆಯ ವಿಡಿಯೋ ತಪ್ಪು ವ್ಯಾಖ್ಯಾನ ಮಾಡಿ ಬಿಜೆಪಿ ನಾಯಕರು ವಿಕೃತ ಆನಂದ ಪಡುತ್ತಿದ್ದಾರೆ. ಸುಳ್ಳಿನ ಕತ್ತಲೆಯನ್ನು ಸತ್ಯದ ಬೆಳಕು ಅಳಿಸಿ ಹಾಕುತ್ತದೆ. ನನ್ನ ರಾಜಕೀಯ ವಿರೋಧಿಗಳಿಗೆ ಇದೇ ನನ್ನ ದೀಪಾವಳಿ ಸಂದೇಶ ಎಂದು ತಿರುಗೇಟು ನೀಡಿದರು. ನಾನು ಜಾತಿ ರಾಜಕೀಯ ಮಾಡುತ್ತಿದ್ದೇನೆ ಎಂದು ಆರೋಪಿಸುವವರು ಅವರ ಪಕ್ಷಗಳ ನೀತಿ ಮತ್ತು ಕಾರ್ಯಕ್ರಮಗಳಲ್ಲಿ ಮಹಾತ್ಮ ಗಾಂಧೀಜಿ, ಅಂಬೇಡ್ಕರ್‌, ಬಸವಣ್ಣ ಮತ್ತು ಕುವೆಂಪು ವಿಚಾರಣೆಗಳೆಷ್ಟುಇವೆ ಎಂಬುದನ್ನು ಬಹಿರಂಗಪಡಿಸಲಿ. ಇದರ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ. ಇದು ನನ್ನ ಸವಾಲು ಕೂಡ ಹೌದು ಎಂದು ಹೇಳಿದರು.

ವಿಡಿಯೋದಲ್ಲಿ ಏನಿದೆ?

ಬೆಂಗಳೂರಿನಲ್ಲಿ ಪಿರಿಯಾಪಟ್ಟಣದ ಮಾಜಿ ಶಾಸಕ ವೆಂಕಟೇಶ್‌ ಸೇರಿದಂತೆ ನಾಲ್ಕು ಮಂದಿ ಆಪ್ತರೊಂದಿಗೆ ಸಿದ್ದರಾಮಯ್ಯ ಚರ್ಚಿಸುತ್ತಿರುತ್ತಾರೆ. ಇದರಲ್ಲಿ ವೆಂಕಟೇಶ್‌ ಮಾತಿಗೆ ಪೂರಕವಾಗಿ ಮಾತನಾಡಿರುವ ಸಿದ್ದರಾಮಯ್ಯ, ‘ಲಿಂಗಾಯತರು ಯಡಿಯೂರಪ್ಪನ ಜತೆ ಮೊದಲು ಇದ್ದ ರೀತಿಯಲ್ಲಿ ಇರುವುದಿಲ್ಲ. ಒಕ್ಕಲಿಗರು ಕುಮಾರಸ್ವಾಮಿಗೆ ಮೊದಲು ಇದ್ದ ರೀತಿ ಇರಲ್ಲ’ ಎನ್ನುತ್ತಾರೆ.

ಇದಕ್ಕೆ ವೆಂಕಟೇಶ್‌, ಆದರೆ ಇದನ್ನು ಎನ್‌ಕ್ಯಾಶ್‌ ಮಾಡಿಕೊಳ್ಳುವುದಕ್ಕೆ ನಮ್ಮವರೇ ತಯಾರಿಲ್ಲ ಎನ್ನುತ್ತಾರೆ. ಈ ವೇಳೆ ಸಿದ್ದರಾಮಯ್ಯ ಹೌದು ಅದು ಸತ್ಯ ಎಂದು ಹೇಳುತ್ತಾರೆ.

ಮಾತು ಮುಂದುವರೆಸುವ ವೆಂಕಟೇಶ್‌, ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌-ಜೆಡಿಎಸ್‌ ಬಾವುಟ ಹಿಡಿದುಕೊಂಡು ಬಂದರೆ ಹೇಗೆ ಎನ್ನುತ್ತಾರೆ.

ಆಗ ತೀವ್ರ ಅಸಮಾಧಾನ ವ್ಯಕ್ತಪಡಿಸುವ ಸಿದ್ದರಾಮಯ್ಯ, ಹೌದು ಕಾಂಗ್ರೆಸ್‌-ಜೆಡಿಎಸ್‌ ಬಾವುಟ ಹಿಡಿದುಕೊಂಡು ಬರುತ್ತಾರೆ ಎಂದರೆ ಏನೆಂದು ಹೇಳಬೇಕು. ನಿನ್ನೆ ತಾನೇ ಗದಗದಲ್ಲಿ ಹೇಳಿದ್ದೇನೆ. ಇನ್ನು ಜೆಡಿಎಸ್‌ನವರ ಸಹವಾಸ ಸಾಕು ಎಂದು. ನಾನು ಅದೇ ಮಾತಿನಲ್ಲಿರುತ್ತೇನೆ. ಏನಾಗುತ್ತದೆಯೋ ಆಗಲಿ ಎಂದು ಹೇಳುತ್ತಾರೆ.

ಅಲ್ಲದೆ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿದಂತೆ ಮಾತನಾಡಿರುವ ಅವರು, ‘ಸಿದ್ದರಾಮಯ್ಯ ಅವರಿಗೆ ನನ್ನ ಮೇಲೆ ಲವ್‌ ಇದೆ. ಜತೆಗೆ ಅವರು ಹಿರಿಯರು. ಹೀಗಾಗಿ ಸಲಹೆ ನೀಡಿದ್ದಾರೆ. ಜನಸಮೂಹದ ಮಧ್ಯೆ ಕನ್ನಡ ಧ್ವಜ, ಕಾಂಗ್ರೆಸ್‌ ಧ್ವಜ ಎಲ್ಲವೂ ಇತ್ತು. ಯಾರೋ ಜೆಡಿಎಸ್‌ ಧ್ವಜ ನೀಡಿದರು ಅಷ್ಟೇ. ಉದ್ದೇಶಪೂರ್ವಕವಾಗಿ ಜೆಡಿಎಸ್‌ ಧ್ವಜ ಹಿಡಿದಿಲ್ಲ. ನಾನು ಹುಟ್ಟು ಕಾಂಗ್ರೆಸ್ಸಿಗ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ನಾನು ಜಾತಿವಾದಿ ಅಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವ ನಾನು ಅಂಬೇಡ್ಕರ್‌, ಮಹಾತ್ಮ ಗಾಂಧೀಜಿ, ಬಸವಣ್ಣ ಮತ್ತು ಕುವೆಂಪು ಅವರ ಚಿಂತನೆಯಿಂದ ಪ್ರೇರಿತನಾದ ಜಾತ್ಯತೀತ ವ್ಯಕ್ತಿ. ಅವರ ಚಿಂತನೆಗಳ ಫಲವೇ ನನ್ನ ಸರ್ಕಾರದ ಯೋಜನೆಗಳಾಗಿದ್ದವು. ಇದು ನನ್ನ ಜಾತಿವಿನಾಶದ ಹಾದಿ. ನಿಮ್ಮದು ಯಾವ ಹಾದಿ?

ರಾಜಕೀಯ ಪಕ್ಷಗಳು ನೈತಿಕವಾಗಿ ದಿವಾಳಿಯಾದಾಗ ಇಂತಹ ಅಪಸವ್ಯಗಳು ಹುಟ್ಟಿಕೊಳ್ಳುತ್ತವೆ. ವೈಯಕ್ತಿಕ ದಾಳಿಗಳು ನನ್ನ ಸಾಮಾಜಿಕ ಬದ್ಧತೆಯನ್ನು ಇನ್ನಷ್ಟುಗಟ್ಟಿಗೊಳಿಸುತ್ತವೆ. ಮತ್ತು ಜನರಿಗಾಗಿ ಹೋರಾಡುವ ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತವೆ. ಇದಕ್ಕಾಗಿ ನನ್ನ ರಾಜಕೀಯ ವಿರೋಧಿಗಳಿಗೆ ಧನ್ಯವಾದಗಳು. ಸತ್ಯಮೇವ ಜಯತೆ ಎಂದು ತಿರುಗೇಟು ನೀಡಿದರು.

KPCC ಅಧ್ಯಕ್ಷರ ಬದಲಾವಣೆ ಸಧ್ಯಕ್ಕಿಲ್ಲ

"