ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ (91) ವಯೋಸಹಜ ಅಸೌಖ್ಯದಿಂದ ನಿಧನರಾದರು. 1983-85ರ ಅವಧಿಯಲ್ಲಿ ಜನತಾ ಪಕ್ಷದಿಂದ ಶಾಸಕರಾಗಿದ್ದ ಅವರು, ಕೊಲ್ಲೂರು ಮೂಕಾಂಬಿಕಾ ದೇವಳದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸರಳ ಜೀವನ ಹಾಗೂ ಜನಪರ ಕಾಳಜಿಯಿಂದ ಅವರು ಗುರುತಿಸಿಕೊಂಡಿದ್ದರು.
ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಹಿರಿಯ ರಾಜಕೀಯ-ಸಾಮಾಜಿಕ ಮುಂದಾಳು ಬಸ್ರೂರು ಅಪ್ಪಣ್ಣ ಹೆಗ್ಡೆ (91) ಅವರು ವಯೋಸಹಜ ಅಸೌಖ್ಯದಿಂದ ಸೋಮವಾರ ನಿಧನರಾದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ 1983ರಿಂದ 1985ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಈ ಸಮಯದಲ್ಲಿ ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾಗಿದ್ದರು. ಸರಳ ಜೀವನ, ನಿಷ್ಠಾವಂತ ರಾಜಕೀಯ ಹಾಗೂ ಜನಪರ ಚಿಂತನೆಗಳ ಮೂಲಕ ಅವರು ಕ್ಷೇತ್ರದ ಜನರ ವಿಶ್ವಾಸ ಗಳಿಸಿದ್ದರು. ಶಾಸಕರಾಗಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ಗ್ರಾಮೀಣ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಿದ ನಾಯಕರಾಗಿ ಗುರುತಿಸಿಕೊಂಡಿದ್ದರು.
ಕೊಲ್ಲೂರು ಮೂಕಾಂಬಿಕಾ ದೇವಳದ ಅಧ್ಯಕ್ಷರಾಗಿ ಸೇವೆ
ರಾಜಕೀಯದ ಜೊತೆಗೆ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿಯೂ ಅವರು ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು. 1960ರಿಂದ 1983ರವರೆಗೆ ತಮ್ಮ ಊರಿನಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಹಾಗೂ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ, ಸ್ಥಳೀಯ ಆಡಳಿತಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅಲ್ಲದೆ, ಬಸ್ರೂರಿನ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥರಾಗಿಯೂ, ಕೊಲ್ಲೂರು ಮೂಕಾಂಬಿಕಾ ದೇವಳದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಗೌರವ ಪಡೆದಿದ್ದರು.
ಮೂವರು ಮಕ್ಕಳು
ಸಾರ್ವಜನಿಕ ಜೀವನದಲ್ಲಿ ಶಿಸ್ತು, ಸರಳತೆ ಮತ್ತು ಸೇವಾಭಾವನೆಗಾಗಿ ಹೆಸರುವಾಸಿಯಾಗಿದ್ದ ಹೆಗ್ಡೆ ಅವರ ನಿಧನದಿಂದ ಜಿಲ್ಲೆಯು ಒಬ್ಬ ಅನುಭವೀ ನಾಯಕನನ್ನು ಕಳೆದುಕೊಂಡಂತಾಗಿದೆ. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ನೇರ-ದಿಟ್ಟ-ನಿರಂತರ ಸುದ್ದಿಗಳಿಗಾಗಿ ವೀಕ್ಷಿಸಿ ಏಷ್ಯಾನೆಟ್ ಸುವರ್ಣನ್ಯೂಸ್ ಲೈವ್ ಟೀವಿ



