ಸಿಎಂ ಸಿದ್ದರಾಮಯ್ಯರವರ ಪುತ್ರ ಯತೀಂದ್ರ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಶಿವಗಂಗಾ ಬಸವರಾಜ, ಅಧಿಕಾರ ಹಂಚಿಕೆ ಒಪ್ಪಂದ ಸತ್ಯವೆಂದು ಪ್ರತಿಪಾದಿಸಿದ್ದಾರೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ತಾವು ಸಂಕಲ್ಪ ಮಾಡಿರುವುದಾಗಿ ಬಹಿರಂಗಪಡಿಸುವಂತೆ ಆಗ್ರಹಿಸಿದ್ದಾರೆ.

ದಾವಣಗೆರೆ:(ಫೆ.7) ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಸಿಎಂ ಕುರ್ಚಿ ಸಂಘರ್ಷ ಈಗ ಮತ್ತೊಂದು ಮಜಲಿಗೆ ತಲುಪಿದೆ. ವಿಧಾನ ಪರಿಷತ್ ಸದಸ್ಯ, ಸಿಎಂ ಸಿದ್ದರಾಮಯ್ಯರವರ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತ ವಲಯದ ಶಾಸಕ ಶಿವಗಂಗಾ ಬಸವರಾಜ ಟಾಂಗ್ ನೀಡಿದ್ದಾರೆ. 'ಸಿಎಂ ಆಯ್ಕೆ ಮಾಡಲು ಶಾಸಕನಾಗಿ ನನಗೂ ಒಂದು ವೋಟ್ ಇದೆ, ಆದರೆ ಯತೀಂದ್ರ ಅವರಿಗೆ ಒಂದು ವೋಟೂ ಇಲ್ಲ' ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆಯ ಕಿಚ್ಚನ್ನು ದಾವಣಗೆರೆಯಲ್ಲಿ ಸ್ಫೋಟಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ನಮ್ಮ ಹೈಕಮಾಂಡ್ ದೆಹಲಿಯಲ್ಲಿದೆ': ಯತೀಂದ್ರಗೆ ನೇರ ತಿರುಗೇಟು

ಯತೀಂದ್ರ ಸಿದ್ದರಾಮಯ್ಯ ಅವರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಸವರಾಜ, ಡಿಕೆ ಶಿವಕುಮಾರ್ ಅವರಿಗೆ ಯತೀಂದ್ರ ಅವರೇ ಹೈಕಮಾಂಡ್ ಇರಬಹುದು, ಆದರೆ ನಮಗೆ ಹೈಕಮಾಂಡ್ ಇರುವುದು ದೆಹಲಿಯಲ್ಲಿ. ಹೈಕಮಾಂಡ್ ಈ ಕೂಡಲೇ ಮಧ್ಯಪ್ರವೇಶಿಸಿ ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಸ್ಪಷ್ಟನೆ ನೀಡಬೇಕು. ಯತೀಂದ್ರ ಅವರು ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಇದನ್ನು ಪಕ್ಷದ ವರಿಷ್ಠರು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಕಿಡಿಕಾರಿದ್ದಾರೆ.

'ಒಪ್ಪಂದ ಆಗಿರೋದು ನಿಜ' ಸಿದ್ಧರಾಮಯ್ಯ ನೀಡಿದ ಮಾತಿನ ನೆನಪು

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದ ನಡೆದಿರುವುದು ನೂರಕ್ಕೆ ನೂರರಷ್ಟು ಸತ್ಯ ಎಂದಿರುವ ಶಿವಗಂಗಾ ಬಸವರಾಜ, ಸಿದ್ದರಾಮಯ್ಯ ಅವರು ಮಾತು ಕೊಟ್ಟಿರುವ ಬಗ್ಗೆ ನಮಗೆ ಮಾಹಿತಿಯಿದೆ. ಬೇಕಿದ್ದರೆ 224 ಕ್ಷೇತ್ರಗಳಲ್ಲೂ ಜನಾಭಿಪ್ರಾಯ ಸಂಗ್ರಹಿಸಿ ನೋಡಿ. ಒಪ್ಪಂದದ ಬಗ್ಗೆ ಹೈಕಮಾಂಡ್ ಒಮ್ಮೆ ಬಾಯಿ ಬಿಟ್ಟರೆ ಈ ಗೊಂದಲಗಳಿಗೆಲ್ಲ ತೆರೆ ಬೀಳುತ್ತದೆ ಎಂದು ಅವರು ಸವಾಲು ಎಸೆದಿದ್ದಾರೆ.

ಡಿಕೆಶಿ ಸಿಎಂ ಆಗಲು ಶಾಸಕನ ಸಂಕಲ್ಪ: ಕೊರಳಲ್ಲಿದೆ ಅರಿಶಿನ ದಾರ!

ಇದೇ ವೇಳೆ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲೇಬೇಕು ಎಂದು ತಾವು ದೊಡ್ಡ ಸಂಕಲ್ಪ ಮಾಡಿರುವುದಾಗಿ ಶಿವಗಂಗಾ ಬಸವರಾಜ ಬಹಿರಂಗಪಡಿಸಿದ್ದಾರೆ. ತಮ್ಮ ಕೊರಳಲ್ಲಿದ್ದ ಅರಿಶಿನ ದಾರವನ್ನು ಮಾಧ್ಯಮಗಳಿಗೆ ತೋರಿಸಿದ ಅವರು, 'ನನ್ನ ನಾಯಕ ಸಿಎಂ ಆಗಲಿ ಎಂದು ನಾನು ವ್ರತ ಮಾಡುತ್ತಿದ್ದೇನೆ. ನನ್ನ ಪ್ರಯತ್ನವೂ ವಿಫಲವಾಗಲ್ಲ, ನನ್ನ ಪ್ರಾರ್ಥನೆಯೂ ವ್ಯರ್ಥವಾಗಲ್ಲ. ಡಿಕೆಶಿ ಸಿಎಂ ಆಗುವ ಕಾಲ ಹತ್ತಿರದಲ್ಲಿದೆ' ಎಂದು ಭಾವನಾತ್ಮಕವಾಗಿ ನುಡಿದರು.