ತಮಿಳುನಾಡಿನ ಕೃಷ್ಣಗಿರಿಯಿಂದ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಚುನಾವಣಾ ಕಣಕ್ಕೆ
ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿಗೆ ರಾಜೀನಾಮೆ ನೀಡಿರುವ ಡಕಾಯಿತ, ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಕೃಷ್ಣಗಿರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಶನಿವಾರ ಘೋಷಿಸಿದ್ದಾರೆ.
ಬೆಂಗಳೂರು (ಮಾ.24): ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿಗೆ ರಾಜೀನಾಮೆ ನೀಡಿರುವ ಡಕಾಯಿತ, ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಕೃಷ್ಣಗಿರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಶನಿವಾರ ಘೋಷಿಸಿದ್ದಾರೆ.
ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಪಕ್ಷದಿಂದ ಟಿಕೆಟ್ ಲಭಿಸಿದ್ದು, ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ವಿದ್ಯಾ ರಾಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತನ್ನ ತಂದೆ ಜನರ ಸೇವೆ ಮಾಡಲು ಬಯಸಿದ್ದರು ಆದರೆ ಅವರು ಸೇವೆ ಮಾಡಲು ಆರಿಸಿಕೊಂಡ ರೀತಿ ನ್ಯಾಯಯುತವಾಗಿಲ್ಲ. ಜನರ ಸೇವೆಗಾಗಿ ತಾನು ರಾಜಕೀಯಕ್ಕೆ ಸೇರಿದ್ದೇನೆ ಎಂದು ಹೇಳಿದರು.
ಟಿಕೆಟ್ ಅತೃಪ್ತಿ ಶಮನಕ್ಕೆ ಅಪ್ಸರೆಯರನ್ನು ಕರೆಸಲು ಪಕ್ಷದ ಕಾರ್ಯಕರ್ತರ ...
ವೃತ್ತಿಯಲ್ಲಿ ವಕೀಲರಾದ ವಿದ್ಯಾರಾಣಿ ಅವರು ಜುಲೈ 2020 ರಲ್ಲಿ ಬಿಜೆಪಿಗೆ ಸೇರಿದರು ಮತ್ತು ಅದರ ಬಿಜೆಪಿ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡರು ಆದರೆ ಇತ್ತೀಚೆಗೆ ಕೇಸರಿ ಪಕ್ಷವನ್ನು ತೊರೆದು ನಟ-ನಿರ್ದೇಶಕ ಸೀಮಾನ್ ನೇತೃತ್ವದ ಎನ್‌ಟಿಕೆಗೆ ಸೇರಿದ್ದಾರೆ. ಅವರು ಕಾರ್ಯಕರ್ತೆಯೂ ಆಗಿದ್ದು, ಆದಿವಾಸಿಗಳು ಮತ್ತು ದಲಿತರ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಸೀಮಾನ್ ನೇತೃತ್ವದ ಎನ್‌ಟಿಕೆ ಪಕ್ಷದಿಂದ ತಮಿಳುನಾಡು ಮತ್ತು ಪದುಚೇರಿಯಲ್ಲಿ ಒಟ್ಟು 40 ಅಭ್ಯರ್ಥಿಗಳು ಈ ಬಾರಿ ಚುನಾವಣೆಗೆ ನಿಂತಿದ್ದಾರೆ. ಎನ್‌ಟಿಕೆಯಿಂದ ಕಣಕ್ಕಿಳಿದ 40 ಅಭ್ಯರ್ಥಿಗಳಲ್ಲಿ ಅರ್ಧದಷ್ಟು ಮಹಿಳೆಯರಾಗಿದ್ದಾರೆ. ಎನ್‌ಟಿಕೆ ಪಕ್ಷವು ಹತ್ಯೆಯಾದ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಸಿದ್ದಾಂತವನ್ನು ಅನುಸರಿಸುತ್ತದೆ.
ಕೇವಲ 5 ದಿನದಲ್ಲಿ ಸಾಲಗಾರ ಅನಿಲ್ ಅಂಬಾನಿ ಕಂಪನಿಯ ಷೇರುಗಳು ಶೇ.13ಕ್ಕಿಂತ ಹೆಚ್ಚು ಏರಿಕೆ!
ವೃತ್ತಿಯಲ್ಲಿ ವಕೀಲರಾದ ವಿದ್ಯಾ ರಾಣಿ ಅವರು ಕೃಷ್ಣಗಿರಿಯಲ್ಲಿ ಮಕ್ಕಳ ಶಾಲೆಯನ್ನು ನಡೆಸುತ್ತಿದ್ದಾರೆ ಮತ್ತು ಬೆಂಗಳೂರಿನಲ್ಲಿ ಐದು ವರ್ಷಗಳ ಕಾನೂನು ಅಧ್ಯಯನ ಮಾಡಿರುವುದರಿಂದ ಬೆಂಗಳೂರಿನೊಂದಿಗೆ ಆಳವಾದ ನಂಟು ಹೊಂದಿದ್ದಾರೆ. ಇಲ್ಲಿ ವಿದ್ಯಾರಾಣಿಗೆ ಅನೇಕ ಸ್ನೇಹಿತರಿದ್ದಾರೆ.
ಆಕೆ ತನ್ನ ತಂದೆ ವೀರಪ್ಪನ್ ನನ್ನು ಒಂದೇ ಬಾರಿ ಭೇಟಿಯಾಗಿದ್ದರೂ, ವಕೀಲೆ-ರಾಜಕಾರಣಿ ವಿದ್ಯಾ ತನ್ನ ಜೀವನಕ್ಕೆ ತಂದೆ ನಿರ್ದೇಶನವನ್ನು ನೀಡಿದ್ದಾನೆ ಎಂದು ನಂಬುತ್ತಾರೆ ಈ ಬಗ್ಗೆ ಅವರು ಹಿಂದೊಮ್ಮೆ ಹೇಳಿಕೊಂಡಿದ್ದರು. ವಿದ್ಯಾರಾಣಿ ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಗೋಪಿನಾಥಂನಲ್ಲಿರುವ ಅಜ್ಜನ ಮನೆಯಲ್ಲಿ ತಂದೆಯನ್ನು ಭೇಟಿಯಾಗಿದ್ದರು.
ಅಂದು ನಾನು ಅವರನ್ನು ಭೇಟಿಯಾಗಿದ್ದು ಮೊದಲು ಮತ್ತು ಕೊನೆಯ ಬಾರಿ. 30 ನಿಮಿಷಗಳ ಕಾಲ ಮಾತನಾಡಿದ್ದೇನೆ. ಅಂದು ಅವರೊಂದಿನ ಸಂಭಾಷಣೆಯು ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಚಾಗಿ ಉಳಿಸಿದೆ. ಅವರು ನನ್ನನ್ನು ಬಿಗಿದಪ್ಪಿ ವೈದ್ಯಕೀಯ ಕ್ಷೇತ್ರದ ಮೂಲಕ ಜನರಿಗೆ ಸೇವೆ ಸಲ್ಲಿಸುವಂತೆ ಕೇಳಿಕೊಂಡರು. ಆ ಸಂಭಾಷಣೆಯು ನಾನು ಇಂದು ಈ ಸ್ಥಾನಕ್ಕೆ ಬರಲು ಸಹಾಯವಾಗಿದೆ ಎಂದು ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಸೀಮಾನ್ ಅವರ ಪಕ್ಷದ ಸಿದ್ದಾಂತ ಕೆಲವೊಮ್ಮೆ ಅಸಂಬದ್ಧವೆಂದು ತೋರಿದರೂ ಜನರಲ್ಲಿ NTK ಯ ಬಗ್ಗೆ ಒಲವು ಹೆಚ್ಚುತ್ತಿದೆ. 2016 ರಲ್ಲಿ ತನ್ನ ಚೊಚ್ಚಲ ಚುನಾವಣೆಯಲ್ಲಿ ಕೇವಲ 1.1 ಶೇಕಡಾ ಮತ ಹಂಚಿಕೆ ಆಗಿತ್ತು. ಆದರೆ ಪಕ್ಷವು 2019 ರ ಲೋಕಸಭೆ ಚುನಾವಣೆಯಲ್ಲಿ ಸುಮಾರು ಶೇಕಡಾ 4ರಷ್ಟು ಮತಗಳನ್ನು ಪಡೆಯುವ ಮಟ್ಟಕ್ಕೆ ಬೆಳೆಯಿತು. 2021 ರ ವಿಧಾನಸಭಾ ಚುನಾವಣೆಯಲ್ಲಿ ಅದನ್ನು ಶೇಕಡಾ 6.7 ಕ್ಕೆ ಹೆಚ್ಚಿಸಿತು, ಮತ ಹಂಚಿಕೆಯ ವಿಷಯದಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇನ್ನು ವಿದ್ಯಾರಾಣಿ ಅವರ ತಾಯಿ, ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಅವರು ಶಾಸಕ ಟಿ ವೇಲ್ಮುರುಗನ್ ನಡೆಸುತ್ತಿರುವ ರಾಜಕೀಯ ಸಂಘಟನೆಯ ಭಾಗವಾಗಿದ್ದಾರೆ.
ವೀರಪ್ಪನ್ 2004 ರಲ್ಲಿ ತಮಿಳುನಾಡು ಪೊಲೀಸರ ವಿಶೇಷ ಕಾರ್ಯಪಡೆಯ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ. ವೀರಪ್ಪನ್, ಆನೆಗಳನ್ನು ಬೇಟೆಯಾಡುವುದು, ಶ್ರೀಗಂಧದ ಮರವನ್ನು ಕಳ್ಳಸಾಗಣೆ ಮಾಡುವುದು, ಕನ್ನಡದ ಮೇರು ನಟ ರಾಜ್ ಕುಮಾರ್ ಮತ್ತು ಮಾಜಿ ಸಚಿವ ನಾಗಪ್ಪ ಅವರಂತಹ ಹೈ-ಪ್ರೊಫೈಲ್ ಜನರನ್ನು ಅಪಹರಿಸುವ ಮೂಲಕ ಕುಖ್ಯಾತಿ ಗಳಿಸಿದ್ದ. ತಮಿಳುನಾಡಿನ ಈರೋಡ್ ಮತ್ತು ಕರ್ನಾಟಕದ ಮೈಸೂರು ಜಿಲ್ಲೆಗಳಲ್ಲಿ ಕ್ರಮವಾಗಿ ಸತ್ಯಮಂಗಲಂ ಕಾಡುಗಳ ಉದ್ದಕ್ಕೂ ಕಾಡುಗಳೊಳಗೆ ತನ್ನ ಹಿಡಿತ ಹೊಂದಿದ್ದ.